ಗಾಂಧಿ ಮತ್ತು ಎಂಟನೇ ಹೆನ್ರಿ
ಡಾ.ಯು.ಆರ್.ಅನಂತಮೂರ್ತಿಯವರು ಇದೀಗ ಹೊಸ ಹುಮ್ಮಸ್ಸಿನಿಂದ ಕವಿತೆಗಳನ್ನು ಬರೆಯಲು ಆರಂಭಿಸಿದ್ದಾರೆ. ಇದು ನಮಗೂ ಖುಷಿಯ ವಿಷಯ.
ಹೊಸದಾಗಿ ಬರೆಯುವವರೂ ಬೆರಗಾಗುವಂತೆ, ಎಲ್ಲ ಬಗೆಯ ಓದುಗರೂ ಆರಾಮಕುರ್ಚಿಯಿಂದ ಬೆನ್ನು
ಸಡಿಲಿಸಿಕೊಂಡು ತಲೆಯೆತ್ತಿ ಓದುವಂತೆ ಮಾಡುತ್ತಿರುವ ಈ ಹೊಸ ಕವಿತೆಗಳು ಆಧುನಿಕ ಭಾರತದ
ಹಿರಿಯ ಬರಹಗಾರನೊಬ್ಬನ ಇಳಿ ವಯಸ್ಸಿನ ಸಂಕೋಚ, ಸಡಗರ ಹಾಗೂ ಹೆದರಿಕೆಗಳನ್ನು ಸಹಜ
ಹರಿವಿನ ಕನ್ನಡದಲ್ಲಿ ದಾಖಲಿಸುತ್ತಿವೆ.ಮೋಹನದಾಸ ಕರಮ್ ಚಂದ್ ಗಾಂಧಿ ‘ಹೇ ರಾಂ’ಎಂದು
ತೀರಿಹೋದ ಈ ದಿನದಂದು ಅನಂತಮೂರ್ತಿಯವರ ಈ ಹೊಸ ಕವಿತೆಯನ್ನು ಪ್ರಕಟಿಸುತ್ತಿದ್ದೇವೆ.
ಸಮಸ್ತ ಲೋಕವನ್ನು ಸಂಸಾರದಂತೆ ಕಂಡ ಗಾಂಧಿ ಹಾಗೂ ತನ್ನ ಸಂಸಾರ ಮಾತ್ರ ಲೋಕವಾಗಿದ್ದ ಎಂಟನೇ ಹೆನ್ರಿ - ಈ ಇಬ್ಬರು ಮನುಷ್ಯರು ಈ ದಿನದ ಕವಿತೆಯಲ್ಲಿದ್ದಾರೆ.
-ಸಂಪಾದಕ, ಕೆಂಡಸಂಪಿಗೆ
ಗಾಂಧಿ ಮತ್ತು ಎಂಟನೇ ಹೆನ್ರಿ
ಬೇಸರವಾದಾಗ ತಾಯಂದಿರು ಊಟ ಬಿಡಲ್ಲವೆ?
ಮಾತಾಡೋದು ಬಿಡಲ್ಲವೆ?
ಎಲ್ಲ ಬಿಟ್ಟಂತೆ ಕಂಡರೂ ಕಸ ಮುಸುರೆ ಅಂತ, ವ್ರತಗ್ರಿತ ಅಂತ
ಕಾಲ ಕಳೀತಾನೆ ಮನೆಮಂದಿ ಮೇಲೆ ಒಂದು ಕಣ್ಣಿಟ್ಟು ಕಾಯಲ್ಲವೆ?
ಅದೇ ಆಗ್ರಹದ ಗಾಂಧೀಗೆ
ದೇಶವೇ ಊರು ಅಂತಅನ್ನಿಸಿ
ಊರೇ ಮನೆಯಾಗಿ ಬಿಟ್ಟು
ಚರಿತ್ರೆ ಅಂದರೆ ಸಂಸಾರದ ಒಳಗಿನ ಕಳವಳ ಸಿಟ್ಟು ಸಿಡುಕು
ಕೆಲವೊಮ್ಮೆ ಕೋಲಾಹಲಗಳಂತೆಯೂ
ಕಂಡರೆ,
ಎಂಟನೇ ಹೆನ್ರಿ ಎನ್ನುವ ಬ್ರಿಟಿಷ್ ಪ್ರಭುವಿಗೆ
ತಾನೇ ದೇಶವೆನ್ನಿಸಿ
ದೇಶ ಉಳಿಯೋದೇ ತನ್ನ ಬೀಜದಿಂದ ಹುಟ್ಟುವ ಮಗನಿಂದ ಎನ್ನಿಸಿ
ಈ ಮಗರಾಯನನ್ನು ಪಡೆಯೋಕೆ ಅರ್ಹವಾದ ಯೋನಿಹುಡುಕುತ್ತ
ಸರದಿಮೇಲೆ ಮದುವೆಯಾಗಿ
ಗಂಡು ಹೆರಲಾರದ ಯೋನಿಗಳು ದೇಶದ್ರೋಹಿಗಳಾಗಿ ಕಂಡು
ಸರದಿಮೇಲೆ ಮದುವೆಯಾದವರನ್ನು ಸರದಿ ಮೇಲೆಕೊಂದು
ಆಳೋದು ಎಂಟನೇ ಹೆನ್ರಿಗೆ
ದೈವಸಂಕಲ್ಪವೇ ತನ್ನ ಮೂಲಕ ಈಡೇರಿ ಒಂಬತ್ತನೇ ಹೆನ್ರಿಯನ್ನು
ಹಡೆಯುವ ಚರಿತ್ರೆ
ಶುಕ್ರವಾರ, 30 ಜನವರಿ 2009 (ಕೆಂಡಸಂಪಿಗೆ)
- 952 reads
Comments
0 comments postedPost new comment