ಶಿವಮೊಗ್ಗದ ಸಮಾಜವಾದೀ ಕುಟುಂಬದಲ್ಲಿ ಕೆಲವರಿಗೆ ಅಕ್ಕನಂತೆಯೂ ನಮ್ಮಂಥ ಎಳೆಯರಿಗೆ ತಾಯಿಯಂತೆಯೂ ಇದ್ದ ಪೊನ್ನಮ್ಮಾಳ್ ನಿಧನ ನನ್ನ ಮಟ್ಟಿಗೆ ಅತೀವ ದುಃಖದ ಸಂಗತಿ.
ನಮ್ಮ ಎಲ್ಲ ಚಳವಳಿಗಳಲ್ಲೂ ಭಾಗವಹಿಸುತ್ತಿದ್ದ ಮೊದಲನೇ ಮಹಿಳೆಯೆಂದರೆ ಪೊನ್ನಮ್ಮಾಳ್. ಚಳವಳಿಗಳಲ್ಲಿ ಮಾತ್ರವಲ್ಲ ನಮ್ಮ ಗಾಢವಾದ ತಾತ್ವಿಕ ಚರ್ಚೆಯಲ್ಲೂ ಅವರು ಪಾಲುದಾರರು. ಆದರೆ ಸ್ವಂತದ್ದಾದ ಯಾವ ರಾಜಕೀಯ ಆಸೆಯೂ ಅವರಿಗಿರಲಿಲ್ಲ. ಕನ್ನಡದ ಅನೇಕ ಮಹತ್ವದ ಲೇಖಕರಂತೆಯೇ ಪೊನ್ನಮ್ಮಾಳ್ ಮನೆಯಲ್ಲಿ ಕನ್ನಡ ಮಾತನಾಡದಿದ್ದರೂ ಸಂಪೂರ್ಣ ಕನ್ನಡಿಗರೇ ಆಗಿದ್ದವರು. ನಮಗೆ ಯಾರು ಯಾವ ಜಾತಿ ಇತ್ಯಾದಿ ಕುತೂಹಲಗಳೂ ಇಲ್ಲದಿದ್ದಾಲದಲ್ಲಿ ಪೊನ್ನಮ್ಮಾಳ್ ನಮ್ಮವರಾದರು.
ಡಾ.ಲೋಹಿಯಾ ಅವರು ಶಿವಮೊಗ್ಗಕ್ಕೆ ಬಂದದ್ದೇ ಮೊದಲು ಕೇಳುತ್ತಿದ್ದುದು`ಪೊನಮ್ಮಾಳ್ ಎಲ್ಲಿ?' ಎಂಬ ಪ್ರಶ್ನೆ. ಅಷ್ಟೇ ಅಲ್ಲ ಅವರು ಪೊನ್ನಮ್ಮಾಳ್ ಮನೆಗೂ ಹೋಗಿ ಕೂತು ಹರಟೆ ಹೊಡೆದು ಬರುತ್ತಿದ್ದರು.ನನ್ನ ಮಟ್ಟಿಗೆ ಹೇಳುವುದಾದರೆ ನನ್ನ ಅಭ್ಯುದಯದಲ್ಲಿ ನನ್ನ ತಾಯಿಯಷ್ಟೇ ಖುಷಿ ಪಡುತ್ತಿದ್ದ ವ್ಯಕ್ತಿಯೆಂದರೆ ಪೊನ್ನಮ್ಮಾಳ್. ಕ್ರಮೇಣ ಅವರ ಕಿರಿದಾದ ದೇಹ ಇನ್ನಷ್ಟು ಕಿರಿದಾಗುತ್ತಾ ಅವರ ಕೂದಲೆಲ್ಲಾ ಬೆಳ್ಳಗಾಗುತ್ತಾ ಆಕೆ ಒಬ್ಬ ಸಮಾಜವಾದೀ ದೇವತೆಯಂತೆಯೇ ನನಗೆ ಕಾಣುತ್ತಿದ್ದರು.



Post new comment