ಕನ್ನಡ ಚಿತ್ರರಂಗದ ಮೊದಲ ಕ್ರಾಂತಿ ಪುರುಷ*

ಪಟ್ಟಾಭಿ ವಿಲಕ್ಷಣ ಪ್ರತಿಭೆಯ ಕಲಾವಿದ. ಅವರು ಕಲಿತದ್ದು ಟ್ಯಾಗೋರರ ಶಾಂತಿನಿಕೇತನದಲ್ಲಿ. ಟ್ಯಾಗೋರರ ಕಾವ್ಯದಿಂದ ಅವರು ಪ್ರಭಾವಿತರಾಗಿದ್ದರು. ಹಾಗೆಯೇ ತಮ್ಮ ಕಾಲದ ಇತರ ಎಲ್ಲಾ ಲೇಖಕರಿಗಿಂತ ಮೊದಲು ಆ ಪ್ರಭಾವದಿಂದ ಪಾರಾದವರೂ ಪಟ್ಟಾಭಿಯೇ.

ಅವರ `ಪಿಟೀಲ್‌ ಡಝನ್‌' ಕಾವ್ಯ ಸಂಗ್ರಹದ ಕವನಗಳ ತೀವ್ರವಾದ ನವ್ಯತೆ ಕನ್ನಡದಲ್ಲಿ ಕಾಣಿಸಿಕೊಂಡದ್ದು ಪಟ್ಟಾಭಿ ತೆಲುಗಿನಲ್ಲಿ ಬರೆದಾದ ಎರಡು ಮೂರು ದಶಕಗಳ ನಂತರ. ತೆಲುಗು ಕಾವ್ಯದ ಇತಿಹಾಸವನ್ನೇ ಅವರು ಬದಲು ಮಾಡಿದರು. ಪಟ್ಟಾಭಿಯಂಥ ಕ್ರಾಂತಿಕಾರಿಯಾದ ಮನಸ್ಸಿಗೆ ಅದೆಷ್ಟು ಹಿಂದೆ ತೆಲುಗಿನಂಥಾ ನಾದಮಯ ಭಾವಾತಿಕರೇಕದ ಭಾಷೆ ಹೇಗೆ ಅವಕಾಶ ಮಾಡಿಕೊಟ್ಟಿತ್ತು ಎಂದು ಆಶ್ಚರ್ಯವಾಗುತ್ತದೆ.

ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ಪಟ್ಟಾಭಿ ಸ್ನೇಹಲತಾಳನ್ನು ಮದುವೆಯಾಗಿ ತನ್ನ ಇಡೀ ಕುಲಬಾಂಧವರಿಂದ ದೂರವಾಗಿ ಸ್ಪೈನ್‌ಗೆ ಹೊರಟು ಹೋದರು. ನಾನು ನೋಡಿದ ಅತ್ಯಂತ ಸುಂದರಿಯಲ್ಲಿ ಒಬ್ಬಳಾದ ಸ್ನೇಹಾ ಅಲ್ಲಿ ನರ್ತನವನ್ನು ಕಲಿತರು. ಹಿಂದಕ್ಕೆ ಬಂದು ಮದ್ರಾಸ್‌ನಲ್ಲಿ ಇದ್ದಾಗ ಆ ಕುಟಂಬವೇ ಒಂದು ಹವ್ಯಾಸಿ ನಾಟಕ ತಂಡವನ್ನು ಹುಟ್ಟಿ ಹಾಕಿತು.

ಪಟ್ಟಾಭಿ ಬಹಳ ಮೌನವಾದ ಲೇಖಕ. ಹತ್ತಾರು ಜನ ತನ್ನ ಸುತ್ತ ಕುಳಿತುಕೊಂಡು ಮಾತನಾಡುತ್ತಿದ್ದಾಗ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಆರಾಮಾಗಿ ಇರುತ್ತಿದ್ದ ವ್ಯಕ್ತಿ. ಇವರಷ್ಟು ಆರಾಮಿನ ಇನ್ನೊಬ್ಬ ವ್ಯಕ್ತಿಯನ್ನು ನಾನು ನೋಡಿಲ್ಲ. ನಿಜವಾಗಿ ಈತ ಸ್ಥಿತಪ್ರಜ್ಞನೇ ಸರಿ.

ಇವರ ಮನೆ ಯಾವತ್ತೂ ಯಾವ ಹೊತ್ತಿನಲ್ಲಾದರೂ ಸ್ನೇಹಿತರಿಗೆ ತೆರೆದಿರುತ್ತಿತ್ತು. ಬೆಂಗಳೂರಿನಲ್ಲಿ ಅವರು ನೆಲೆಸಿದಾಗ ರಾಜಕಾರಣದಲ್ಲಿ, ಚಿತ್ರಕಲೆಯಲ್ಲಿ, ಸಾಹಿತ್ಯದಲ್ಲಿ ಇರುವ ಯಾವುದೇ ಅತ್ಯುತ್ತಮ ವ್ಯಕ್ತಿಯನ್ನಾದರೂ ಅವರ ಮನೆಯಲ್ಲಿ ಸುಮ್ಮನೆ ಹೀಗೆ ಕಾಣುವುದು ಸಾಧ್ಯವಿತ್ತು. ಅಲ್ಲಿ ಬಂದವರು ಊಟ ಮಾಡದೇ, ಹರಟದೇ ಹೋದದ್ದಿಲ್ಲ. ಯಾವತ್ತೂ ಮಾತನಾಡದ ಪಟ್ಟಾಭಿ ಆಡಿದ ನಾಲ್ಕಾರು ಮಾತುಗಳು ನನ್ನ ಜೀವನದಲ್ಲಿ ಇವತ್ತಿಗೂ ಅತ್ಯಂತ ಮೌಲಿಕವಾದ ಮಾತುಗಳಾಗಿವೆ.

ಪಟ್ಟಾಭಿಯ ಆಸಕ್ತಿಗಳಲ್ಲಿ ಗಣಿತಶಾಸ್ತ್ರವೂ ಒಂದು ಎಂದು ಅವರ ಎಲ್ಲ ಸ್ನೇಹಿತರೂ ಬಲ್ಲರು. ಪಟ್ಟಾಭಿ ಸುಮ್ಮನೇ ಕೂತಿದ್ದಾಗ ಅವರು ಯಾವುದೋ ಒಂದು ಗಣಿತದ ಸಮಸ್ಯೆಯನ್ನು ಬಗೆಹರಿಸುತ್ತಿರಬೇಕು ಎಂಬ ಅನುಮಾನ ನಮ್ಮೆಲ್ಲರಲ್ಲೂ ಇರುತ್ತಿತ್ತು. ನಿಜವಾದ ಸಮಾಜವಾದಿ ಕುಟುಂಬ ಅವರದ್ದು. ಬಹಳ ದೊಡ್ಡ ಆಸ್ತಿಯ ಭೂಮಾಲಿಕರಾಗಿದ್ದ ಪಟ್ಟಾಭಿಯವರು ಅದು ಯಾವುದೂ ತನ್ನದಲ್ಲವೆಂಬಂತೆ ತನ್ನ ಮಿತ್ರರಿಗಾಗಿ ಖರ್ಚು ಮಾಡುತ್ತಾ ತನ್ನ ಮನೆಯನ್ನು ಬಹಳ ಔದಾರ್ಯದಲ್ಲಿ ನಡೆಸಿದರು. ಅವರ ಹಿರಿತನ ಅವರ ಮನೆಯಲ್ಲಿ ಅವರ ಮಕ್ಕಳಿಗಾಗಲೀ, ಬಂಧುಗಳಿಗಾಗಲೀ ಒಂದು ಹೊರೆ ಎಂದು ಅನ್ನಿಸಿದ್ದೇ ಇಲ್ಲ.

ಅಷ್ಟೊಂದು ದೊಡ್ಡ ಎತ್ತರದ ಆಕರ್ಷಕವಾದ ಕಣ್ಣುಗಳ ಪಟ್ಟಾಭಿ ಮೈಚೆಲ್ಲಿ ಸುತ್ತಲಿನ ಎಲ್ಲವನ್ನೂ ಆಲಿಸುತ್ತಾ ಸ್ತಬ್ಧರಾಗಿ ಕೂತಿರುತ್ತಿದ್ದುದನ್ನು ನಾನು ಮರೆಯಲಾರೆ.

ಎಲ್ಲ ರೀತಿಯಲ್ಲೂ ಶ್ರೀಮಂತನಾದ ಈ ಮನುಷ್ಯ ಉಡುತ್ತಿದ್ದುದು ಒಂದು ಸಾದಾ ಪಂಚೆ ಮತ್ತೆ ತೊಡುತ್ತಿದ್ದುದು ಒಂದು ಜುಬ್ಬ. ನನ್ನ ಕಾದಂಬರಿ `ಸಂಸ್ಕಾರ'ವನ್ನು ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಜನರನ್ನು ಕೂಡಿಸಿಕೊಂಡು ತಯಾರಿಸಿದ ಈ ಮನುಷ್ಯ ಕನ್ನಡ ಚಿತ್ರರಂಗದಲ್ಲಿ ಮೊದಲನೇ ಕ್ರಾಂತಿ ಪುರುಷನಾದ. ಇವರ ಸಹನೆ, ಸಜ್ಜನಿಕೆ ಮತ್ತು ಸರಳತೆ ಎಂಥದ್ದೆಂದರೆ ಒಂದು ಮಂಚ ಕೂಡಾ ಇಲ್ಲದ ನಮ್ಮ ಹಳ್ಳಿಯ ಮನೆಯೊಂದರಲ್ಲಿ ಇವರು ಮೂರ್ನಾಲ್ಕು ದಿನಗಳಿದ್ದು ನನ್ನ ತಾಯಿ ಬಡಿಸಿದ ಹಳ್ಳಿಯ ಊಟವನ್ನು ಮಾಡುತ್ತಾ ಹಳ್ಳಿಯ ಎಲ್ಲರಿಗೂ ಪ್ರಿಯವಾಗಿದದ್ದದ್ದು ನೆನಪಾಗುತ್ತದೆ.

ಕೊನೆಯ ತನಕವೂ ಇದ್ದದ್ದು ಒಬ್ಬ ಕವಿಯಾಗಿಯೇ. ಆತ ಕಾವ್ಯದಲ್ಲಿ ಎಷ್ಟು ಹೊಸದನ್ನು ಮಾಡಿದರೋ ಅಷ್ಟೇ ಹೊಸದನ್ನು ತನ್ನ ಸಾವಿತ್ರಿ ನಾಟಕದಲ್ಲೂ ಮತ್ತು ಇನ್ನುಳಿದ ಕೆಲವು ಸಿನಿಮಾಗಳಲ್ಲೂ ಮಾಡಿದರು. ಇವರ ಪತ್ನಿ ಸ್ನೇಹಲತಾರ ಕ್ರಿಯಾಶೀಲತೆಯನ್ನು ಅವರ ಮಗಳು ನಂದನಾರಲ್ಲಿ ನಾವು ಕಾಣುತ್ತೇವೆ. ಆದರೆ ಹಾಗೆಯೇ ಪಟ್ಟಾಭಿಯ ನಿರಾಳತೆ, ಮೌನ ಮತ್ತು ವಿಲಕ್ಷಣವಾದ ಕಲಾ ಸಂಯೋಜಕ ಶಕ್ತಿ ಅವರ ಮಗ ಕೋಣಾರ್ಕ್‌ನಲ್ಲಿ ನಾವು ಕಾಣಬಹುದು. ನಾನು ನನ್ನ ಆಪ್ತರಾದ ಹಿರಿಯರೊಬ್ಬರನ್ನು ಕಳೆದುಕೊಂಡಿದ್ದೇನೆ.

*ಪಟ್ಟಾಭಿರಾಮ ರೆಡ್ಡಿ ನಿಧನರಾದಾಗ (6-ಮೇ-2006) ಮಾಧ್ಯಮಗಳಿಗೆ ನೀಡಿದ ಸಂತಾಪ ಸೂಚಕ ಸಂದೇಶ

Post new comment

The content of this field is kept private and will not be shown publicly.