ನಮ್ಮ ಆಧ್ಯಾತ್ಮಿಕ ಜಗತ್ತನ್ನು ರೂಪಿಸಿರುವ ಕೆಲವು ಮಹಾಗುರುಗಳಿದ್ದಾರೆ. ಇವರಿಗೆ ಯಾವಾಗಲೂ ಪ್ರಪಂಚ ಒಂದು ವಿಸ್ಮಯವಾಗಿ ಕಾಡುತ್ತಿತ್ತು. ಈ ವಿಸ್ಮಯದ ಹಿಂದೆ ಒಂದು ಕಾರಣಶಕ್ತಿ ಇರಬಹುದು ಎಂದು ಅದನ್ನು ಹುಡುಕುತಿದ್ದರು. ಕೆಲವರಿಗೆ ಈ ಕಾರಣ ಶಕ್ತಿ ಒಂದು ಮಹಾಪುರುಷನಾಗಿ ಇನ್ನು ಕೆಲವರಿಗೆ ಮಹಾ ಸ್ತ್ರೀಯಾಗಿ ಮತ್ತೆ ಕೆಲವರಿಗೆ ಅದೊಂದು ವ್ಯಕ್ತಿಗತ ರೂಪವಲ್ಲದ ಮಹಾಶಕ್ತಿಯಾಗಿ ಕಾಣುತ್ತಿತ್ತು.
ಅಂಥವವರಲ್ಲಿ ಏಸು ಕ್ರಿಸ್ತನೂ ಒಬ್ಬ. ಏಸು ಕ್ರಿಸ್ತನಿಗೆ ದೇವರು ಬಹಳ ವೈಯಕ್ತಿಕವಾದವನು-ದೇವರನ್ನು ತಂದೆಯಾಗಿ ಭಾವಿಸಿ ಅವನು ಸ್ಪಂದಿಸಿದ. ಈ ಸ್ಪಂದನೆ ಇದೆಯೆಲ್ಲಾ, ಅದು ಪ್ರಪಂಚದ ರಹಸ್ಯಕ್ಕೆ ಮಾಡುವ ಸ್ಪಂದನೆ. ಈ ರೀತಿ ರಹಸ್ಯಕ್ಕೆ ಸ್ಪಂದಿಸುವವರಿಗೆ ಒಂದು ಜವಾಬ್ದಾರಿ ಇರುತ್ತೆ. ಏಕೆಂದರೆ ಅವರು ಮನುಷ್ಯರನ್ನೂ ಪ್ರೀತಿಸುವುದರಿಂದ ಅವರು ರಾಜ್ಯ ವ್ಯವಸ್ಥೆ ಹೇಗಿರಬೇಕು ಅಂತಲೂ ಯೋಚನೆ ಮಾಡಲು ಆರಂಭಿಸುತ್ತಾರೆ. ಎಲ್ಲ ಧರ್ಮಗಳಲ್ಲೂ ಈ ಎರಡು ಅಂಶಗಳು ಇದ್ದೇ ಇರುತ್ತವೆ. ಅಂದರೆ ಒಂದು ಪ್ರಪಂಚ ರಹಸ್ಯಕ್ಕೆ ಸ್ಪಂದಿಸುವುದು. ಮತ್ತೊಂದು ವ್ಯವಸ್ಥೆ ಹೇಗಿರಬೇಕು ಎಂಬುದನ್ನು ಚಿಂತಿಸುವುದು.
ಪ್ರಪಂಚ ರಹಸ್ಯಕ್ಕೆ ಸ್ಪಂದಿಸುವುದು ಕಾಲಾತೀತವಾದದ್ದು, ದೇಶಾತೀತವಾದದ್ದು. ಆದರೆ ವ್ಯವಸ್ಥೆ ಹೇಗಿರಬೇಕು ಎಂಬ ಆಲೋಚನೆ ಆಯಾ ಕಾಲದ ಚರಿತ್ರೆಯ ನಿಯಮಗಳಿಗೆ ಒಳಪಟ್ಟಿರುತ್ತದೆ. ಏಸು ಕ್ರಿಸ್ತ ರಹಸ್ಯಕ್ಕೆ ಸ್ಪಂದಿಸುತ್ತಿದ್ದಾಗಲೇ ಯಾವ ರೀತಿ ವ್ಯವಸ್ಥೆಯನ್ನು ತಾನು ಉಳಿದವರಿಗೆ ಬೋಧಿಸಬೇಕು ಎಂಬ ಪ್ರಶ್ನೆಯೂ ಅವನ ಮುಂದಿತ್ತು. ಒಂದು ಸಾರಿ ಒಬ್ಬ ಒಂದು ನಾಣ್ಯ ತೆಗೆದುಕೊಂಡು ಏಸುಕ್ರಿಸ್ತನ ಬಳಿಗೆ ಬರುತ್ತಾನೆ. ಅದನ್ನು ತೋರಿಸಿ ಆತ `ನಾನು ಸೀಸರನಿಗೆ ತೆರಿಗೆ ಕಟ್ಟಬೇಕೆ?' ಎಂಬ ಪ್ರಶ್ನೆಯನ್ನು ಕ್ರಿಸ್ತನ ಮುಂದಿಡುತ್ತಾನೆ. ಈ ಪ್ರಶ್ನೆ ಕೇಳಿದವನು ಯಹೂದ್ಯ. ಯಹೂದ್ಯರೆಲ್ಲಾ ತಮ್ಮದೇ ಆದ ಒಂದು ರಾಜ್ಯಕ್ಕೆ ಕಾಯುತ್ತಿದ್ದ ಕಾಲ ಅದು. ಆದ್ದರಿಂದ ಏಸು ಕ್ರಿಸ್ತ `ತೆರಿಗೆ ಕೊಡಬೇಕು' ಎಂದು ಹೇಳಿದರೆ ಕ್ರಿಸ್ತ ಯಹೂದ್ಯರನ್ನು ಇನ್ನೊಬ್ಬರ ಆಳ್ವಿಕೆಯಿಂದ ಮುಕ್ತಗೊಳಿಸುವ ವಿಮೋಚಕನ ಅವತಾರವಾಗುವುದಿಲ್ಲ. ತೆರಿಗೆ ಕೊಡಬಾರದು ಎಂದು ಹೇಳಿದರೆ ಕ್ರಿಸ್ತ ರೋಮನ್ ಚಕ್ರಾದಿಪತ್ಯದ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತಿತ್ತು.
ಈ ಸಂದಿಗ್ಧ ಪರಿಸ್ಥಿತಿಯನ್ನು ಏಸುಕ್ರಿಸ್ತ ಬಹಳ ಸುಲಭವಾಗಿ ನಿವಾರಿಸಿಕೊಂಡ. ಅವನ ಉತ್ತರ ಬಹಳ ಸರಳವಾಗಿತ್ತು- `ದೇವರಿಗೆ ಕೊಡಬೇಕಾದುದನ್ನು ದೇವರಿಗೆ ಕೊಡು, ಸೀಸರನಿಗೆ ಕೊಡಬೇಕಾದುದನ್ನು ಸೀಸರನಿಗೆ ಕೊಡು!' ನಮ್ಮ ಮೊದಲನೆಯ ಸೆಕ್ಯುಲರ್ ಆಲೋಚನೆ ಇರುವುದು ಈ ಮಾತಿನಲ್ಲಿ-give unto Caesar what is due to caesar, give unto god what is due to god- ಆಗ ರೋಮನ್ನರು ಕ್ರಿಸ್ತನನ್ನು ಅಪರಾಧಿ ಎಂದು ಭಾವಿಸುವಂತಿಲ್ಲ. ಯಹೂದ್ಯರು ಕ್ರಿಸ್ತನನ್ನು ವಿಮೋಚಕ ಎಂದು ನಂಬಲಿಲ್ಲವಾದರೂ ಆತ ತಮ್ಮ ವಿಮೋಚಕನಲ್ಲವೇನೋ ಎಂದು ಅನುಮಾನಿಸಿದರು.
ಹೀಗೇ ರಹಸ್ಯಕ್ಕೆ ಸ್ಪಂದಿಸಿದ ಮತ್ತೊಬ್ಬ ವ್ಯಕ್ತಿ ಮಹಮ್ಮದ್ ಪೈಗಂಬರ್. ದೇವದೂತನ ಮಾತುಗಳನ್ನು ಮಹಮ್ಮದ್ ಪೈಗಂಬರ್ ಕೇಳಿಸಿಕೊಂಡದ್ದಕ್ಕೆ ನಾವೇನೂ ಆಶ್ಚರ್ಯಪಡಬೇಕಿಲ್ಲ. ಹತ್ತೊಂಬತ್ತನೇ ಶತಮಾನದ ಬ್ಲೇಕ್ ಕೂಡಾ ಅದನ್ನೇ ಹೇಳುತ್ತಿದ್ದ-`ನನಗೆ ಇನ್ನೆಲ್ಲಿಂದಲೋ ಒಂದು ವಾಣಿ ಬಂದಂತಾಗುತ್ತಿದೆ!'. ನಮ್ಮ ಬೇಂದ್ರೆಗೂ ಹಾಗನ್ನಿಸುತ್ತಿತ್ತು. ಇನ್ನೆಲ್ಲಿಂದಲೋ ಬಂದ ವಾಣಿಯನ್ನು ಬರೆದಿಡುತ್ತಿದ್ದೇನೆ ಎಂದು ಅವರೂ ಭಾವಿಸಿದ್ದರು. ಟ್ಯಾಗೋರ್ ಕೂಡಾ ಇದನ್ನೇ ಹೇಳಿದ್ದರು-`ನೀನು ಉಸಿರು ನಾನು ಕೊಳಲು' ಅಂತ. ಹೀಗೇ ಮಹಮ್ಮದ್ ಪೈಗಂಬರ್ ಸ್ಪಂದನೆ ಕೂಡಾ ರಹಸ್ಯವನ್ನು ಗುರಿಯಾಗಿಟ್ಟುಕೊಂಡಿತ್ತು. ಇದರ ಜತೆಗೇ ವ್ಯವಸ್ಥೆ ಹೇಗಿರಬೇಕು ಎಂಬ ಆಲೋಚನೆಯೂ ಪೈಗಂಬರ್ ಮನಸ್ಸಿನಲ್ಲಿ ಮೊಳೆತಿತ್ತು.
ನಾವು ಧರ್ಮದ ಬಗ್ಗೆ ಆಲೋಚನೆ ಮಾಡುವಾಗ ಏಸುಕ್ರಿಸ್ತ, ಮಹಮ್ಮದ್ ಪೈಗಂಬರ್, ಕೃಷ್ಣ ಮತ್ತು ವೇದದ ಋಷಿಗಳೆಲ್ಲಾ ವ್ಯವಸ್ಥೆ ಹೇಗಿರಬೇಕು ಎಂದು ಹೇಳಿದ್ದಕ್ಕೂ ಅವರು ರಹಸ್ಯಕ್ಕೆ ಸ್ಪಂದಿಸಿದ ರೀತಿಗೂ ವ್ಯತ್ಯಾಸ ಇದೆ ಎಂಬುದನ್ನು ಗಮನಿಸುವುದು ನಮ್ಮ ಆಲೋಚನಾ ಕ್ರಮದಲ್ಲಿ ಒಂದು ರೀತಿಯ ಆರೋಗ್ಯವನ್ನು ತರುತ್ತದೆ. ರಹಸ್ಯಕ್ಕೆ ಸ್ಪಂದಿಸಿದವನೂ ಕೂಡಾ ಚರಿತ್ರೆಗೆ ಒಳಪಟ್ಟವನು. ಆಯಾ ಕಾಲದ ಮಿತಿಗಳಿಗೆ ಒಳಪಟ್ಟವನು. ಆದ್ದರಿಂದ ಇವರೆಲ್ಲಾ ವ್ಯವಸ್ಥೆ ಹೇಗಿರಬೇಕು ಎಂದು ಹೇಳಿದ್ದು ಚರಿತ್ರೆಗೆ ಬದ್ಧವಾದದ್ದು ಮತ್ತು ಕಾಲಕಾಲಕ್ಕೆ ಬದಲಾಗುವಂಥದ್ದು. ಆದರೆ ರಹಸ್ಯದ ಜತೆಗೆ ಅವರು ನಡೆಸಿದ ಅನುಸಂಧಾನ ಅದು ಪ್ರಾಯಶಃ ಎಲ್ಲಾ ಕಾಲಕ್ಕೂ ಸಲ್ಲುವಂಥದ್ದು. ಇದನ್ನು ಹಲವರು ಒಪ್ಪಿಕೊಳ್ಳುವುದಿಲ್ಲ. ಆದರೆ ನಾನು ಇದನ್ನು ಒಪ್ಪಿಕೊಳ್ಳುತ್ತೇನೆ. ಆದ್ದರಿಂದ ಧರ್ಮದ ಒಳಗಿದ್ದೇ ತುಂಬಾ ವಿಚಾರಾತ್ಮಕವಾಗಿ ಆಲೋಚಿಸಿ, ಟೀಕಿಸಿ ಅದರ ಮೂಲಭೂತವಾದ ತಿರುಳನ್ನು ಗೌರವಿಸಬಹುದು ಎಂಬುದು ನನ್ನ ನಂಬಿಕೆ.
ಇದನ್ನು ತಿಳಿದುಕೊಂಡ ನಂತರ ನಾವು ಮತೀಯತೆ, ಜಾತೀಯತೆಗೆ ಸ್ಪಂದಿಸುವ ರೀತಿಯೇ ಬದಲಾಗುತ್ತೆ ಅನ್ನಿಸುತ್ತೆ. ಈಗ ಇರುವ ಸ್ಪಂದನೆ ಹೇಗಿದೆಯೆಂದರೆ ಕೆಲವರು ಮತದಲ್ಲಿ ಇರುವುದೆಲ್ಲಾ ಸತ್ಯ ಎನ್ನುತ್ತಾ ಮೂಲಭೂತವಾದಿಗಳಾಗುತ್ತಿದ್ದಾರೆ. ಇನ್ನು ಕೆಲವರು ಅದರಲ್ಲಿ ಯಾವ ಸತ್ಯವೂ ಇಲ್ಲ, ಅದರಿಂದ ಯಾವ ಪ್ರಯೋಜನವೂ ಇಲ್ಲ, ಅದನ್ನು ನಂಬುವವರೆಲ್ಲಾ ಮೂಢರು, ಮುಠ್ಠಾಳರು ಎಂದು ಸೆಕ್ಯುಲರಿಸ್ಟ್‌ಗಳಾಗುತ್ತಿದ್ದಾರೆ. ಹೀಗೆ ಸೆಕ್ಯುಲರಿಸ್ಟ್‌ಗಳಾದವರೂ ರಾಕ್ಷಸರಾಗಬಹುದು. ಹಿಟ್ಲರ್ ರಾಕ್ಷಸ, ಸ್ಟಾಲಿನ್ ಕೂಡಾ ರಾಕ್ಷಸನೇ. ಯಾವಾಗಲೂ ಈ ಬಗೆಯ ತೊಡಕು ಇರುವುದರ ಬಗ್ಗೆ ಎಚ್ಚರದಿಂದ ಇರಬೇಕು.
***
ಈಗ ಇದನ್ನೆಲ್ಲಾ ಹೇಳುತ್ತಿರುವುದಕ್ಕೆ ಒಂದು ಕಾರಣವಿದೆ. ಈಗ ಬಹಳ ಮುಖ್ಯವಾದ ಸಂದರ್ಭ ಬಂದಿದೆ-ಬಾಹುಬಲಿಗೆ ಮಹಾಮಸ್ತಕಾಭಿಷೇಕ. ಭಕ್ತರು, ಸರಕಾರ ಎಲ್ಲಾ ಸೇರಿ ಇದನ್ನು ಮಾಡುತ್ತಿದ್ದಾರೆ. ಇದರ ಜತೆಯಲ್ಲಿಯೇ ಸರಕಾರ ವಿಂಧ್ಯಗಿರಿಗೆ ಒಂದು ರೋಪ್‌ವೇ ಹಾಕಲು ಹೊರಟಿದೆ. ಇದರ ಬಗ್ಗೆ ವೈಜ್ಞಾನಿಕವಾಗಿ ಮಾತನಾಡಬೇಕು ಎಂದು ನನಗನ್ನಿಸುತ್ತಾ ಇಲ್ಲ. ಆ ಬಂಡೆಗೆ ಒಂದು ತೂತು ಕೊರೆದು ರೋಪ್ ವೇ ಹಾಕಿದರೆ ಆ ಬಂಡೆ ಸೀಳಿ ಹೋಗಬಹುದು ಅಂತ ಒಬ್ಬ ವಿಜ್ಞಾನಿ ವಾದ ಮುಂದಿಡಬಹುದು. ಮತ್ಯಾರೋ ಒಬ್ಬ ವಿಜ್ಞಾನಿ ಬಂದು ಅದು ಹಾಗಾಗುವುದಿಲ್ಲ, ಭದ್ರವಾಗಿದೆ ಎಂದು ವಾದಿಸಬಹುದು. ನಾನು ಮಾತ್ರ ಈ ರೋಪ್‌ವೇ ಹಾಕಬಾರದು ಎಂದೇ ಹೇಳುತ್ತೇನೆ.
ಯಾಕೆಂದರೆ ಇಂಥ ಸ್ಥಳಗಳಲ್ಲಿ ರಹಸ್ಯದ ಜತೆಗೆ ಅನುಸಂಧಾನ ಮಾಡಿದ ಅನೇಕ ನೆನಪುಗಳಿವೆ. ಇದು ಕಾಶಿಯಲ್ಲಿರಬಹುದು, ಮೆಕ್ಕಾದಲ್ಲಿರಬಹುದು, ಅಥವಾ ಪ್ರಪಂಚದ ಯಾವುದೇ ಭಾಗದಲ್ಲಿರಬಹುದು. ನಮ್ಮ ಶ್ರವಣಬೆಳಗೊಳದಲ್ಲೂ ಇಂಥ ಅನುಸಂಧಾನದ ನೆನಪುಗಳಿವೆ. ಅಂಥ ಜಾಗಕ್ಕೆ ಹೋಗುವವರು ಸ್ವಲ್ಪ ಕಷ್ಟಪಟ್ಟೇ ಹೋಗಬೇಕು.
ಎಲ್ಲ ಪುಣ್ಯಸ್ಥಳಗಳೂ ಕೂಡ ಸುಲಭವಾಗಿ ತಲುಪುವಂಥ ಜಾಗಗಳಲ್ಲ. ಆದ್ದರಿಂದಲೇ ಅವುಗಳನ್ನು ತಲುಪುವ ಪ್ರಕ್ರಿಯೆಯಲ್ಲೇ ಮನುಷ್ಯ ರಹಸ್ಯದ ಜತೆ ಅನುಸಂಧಾನ ನಡೆಸುತ್ತಾನೆ. ಅದರಿಂದಲೇ ನನಗೆ ಅಯೋಧ್ಯೆಯಲ್ಲಿ ಒಂದು ದೇವಸ್ಥಾನ ಕಟ್ಟೋದು ಒಂದು ಪವಿತ್ರವಾದ ಕಾರ್ಯ ಅಂತ ಅನ್ನಿಸಲೇ ಇಲ್ಲ. ಏಕೆಂದರೆ ಅಯೋಧ್ಯೆ ಅನ್ನೋದು ಇವತ್ತು ವಿಮಾನದಲ್ಲಿ, ರೈಲಿನಲ್ಲಿ ಹೀಗೆ ಎಲ್ಲದರಲ್ಲೂ ಹೋಗಿ ತಲುಪಬಹುದಾದ ಜಾಗ, ಅಲ್ಲಿ ಮಾಡುವುದು ಬರೇ ರಾಜಕೀಯ. ಆದರೆ ಶ್ರವಣಬೆಳಗೊಳದ ಗೊಮ್ಮಟನ ಕ್ಷೇತ್ರ ಈ ರೀತಿಯದ್ದಲ್ಲ. ಆದರೆ ಈಗ ನಾವು ಅದನ್ನು ಟೂರಿಸಂ ಗಾಗಿ ಸುಲಭ ಗಮ್ಯವನ್ನಾಗಿ ಮಾಡುತ್ತಿದ್ದೇವೆ. ಈ ಪವಿತ್ರ ಸ್ಥಳಗಳನ್ನು ಟೂರಿಸ್ಟ್ ಸೆಂಟರ್‌ಗಳನ್ನಾಗಿ ಮಾಡುವುದಿದೆಯಲ್ಲಾ-ಅದು ಪರ್ಯಾಯವೇ ಆಗಲಿ, ಬಾಹುಬಲಿಯೇ ಆಗಲಿ-ಅದರ ಹಿಂದೆ ಒಂದು ಅಧಾರ್ಮಿಕ ಮನಸ್ಸು ಕೆಲಸ ಮಾಡುತ್ತಿರುತ್ತದೆ.
ನಾನು ಸೆಕ್ಯುಲರ್‌ವಾದಿಯಾಗಿ ಈ ಮಾತುಗಳನ್ನು ಹೇಳುತ್ತಿಲ್ಲ. ಯಾಕೆಂದರೆ ನನ್ನ ಮಟ್ಟಿಗೆ ಎಲ್ಲಾ ಧರ್ಮಗಳಲ್ಲೂ ಜೀವನ ಮತ್ತು ಪ್ರಪಂಚದ ರಹಸ್ಯಕ್ಕೆ ಸ್ಪಂದಿಸಿದ ಒಂದು ಚೇತನ ಇದೆ. ಈ ರಹಸ್ಯಕ್ಕೆ ಸ್ಪಂದಿಸುವ ಕ್ರಿಯೆಯೇ ಮುಖ್ಯ ಎಂದುಕೊಂಡವರು ಇಸ್ಲಾಮನ್ನೂ ಹಿಂದೂ ಧರ್ಮವನ್ನೂ ಒಟ್ಟು ಸೇರಿಸಿ ಸೂಫಿಗಳಾಗಿಬಿಡುತ್ತಾರೆ. ಕ್ರೈಸ್ತ ಧರ್ಮವನ್ನೂ ಹಿಂದೂ ಧರ್ಮವನ್ನೂ ಒಂದುಗೂಡಿಸಿ ಗಾಂಧಿಯಂಥವರಾಗುತ್ತಾರೆ. ಅಂದರೆ ಧಾರ್ಮಿಕ ಲೋಕದ ಎಲ್ಲಾ ಮುಖ್ಯ ಹೊಸ ಚಿಂತಕರೂ ಕೂಡಾ ಮತ್ತೆ ರಹಸ್ಯಕ್ಕೆ ಸ್ಪಂದಿಸಿದ್ದಾರೆ. ಅಥವಾ ಎಲ್ಲಾ ಧರ್ಮಗಳನ್ನೂ ನಿರಾಕರಿಸುತ್ತಲೇ ಜಿಡ್ಡು ಕೃಷ್ಣಮೂರ್ತಿಯಂಥವರು ರಹಸ್ಯಕ್ಕೆ ಸ್ಪಂದಿಸುತ್ತಾರೆ.
ಆದರೆ ನಮ್ಮಲ್ಲಿ ಅನೇಕರು ಧರ್ಮ ರಹಸ್ಯಡೆದೆಗೆ ಸ್ಪಂದಿಸಿದ್ದನ್ನು ಮರೆತು ಬಿಡುತ್ತಾರೆ. ಅದು ಕಟ್ಟಿದ ವ್ಯವಸ್ಥೆಯನ್ನೇ ಬಹಳ ಮುಖ್ಯ ಎಂದುಕೊಳ್ಳುತ್ತಾರೆ. ಲೋಹಿಯಾ ಈ ಬಗ್ಗೆ ಒಂದು ಕಡೆ ಬಹಳ ಅರ್ಥಪೂರ್ಣವಾಗಿ ಹೇಳಿದ್ದಾರೆ. ಒಂದು ಧರ್ಮಕ್ಕೆ ನಾಲ್ಕು ಉಪಯೋಗಗಳಿದ್ದಾವಂತೆ. ಮೊದಲನೆಯದ್ದು ದೇಶ ಕಷ್ಟದಲ್ಲಿರುವಾಗ ಅದನ್ನು ರಕ್ಷಿಸುವ ಉಪಾಯ. ಸ್ಟಾಲಿನ್ ಕೂಡಾ ಹಿಟ್ಲರ್ ದಾಳಿ ಮಾಡಿದಾಗ ರಷ್ಯನ್ ಚರ್ಚ್ ಬಳಸಿಕೊಂಡು ಜನರನ್ನು ಒಟ್ಟು ಮಾಡಿ ವೈರಿಯನ್ನು ವಿರೋಧಿಸಿದ. ಎರಡನೆಯದ್ದು ಆಸ್ತಿಯನ್ನು ಉಳಿಸಿಕೊಳ್ಳುವ ಉಪಾಯ. ಬಡವರು ತಮ್ಮ ಮೇಲೆ ದಂಗೆ ಏಳದಂತೆ ನೋಡಿಕೊಳ್ಳಲು ಅವರ ಮೇಲೆ ಆಸ್ತಿವಂತರು ಎರಚುವ ಮಂಕುಬೂದಿಯಾಗಿ ಇದು ಕೆಲಸ ಮಾಡುತ್ತೆ. ಮೂರನೆಯದ್ದು ನಮ್ಮ ಮಕ್ಕಳಿಗೆ ಕೆಲವು ಒಳ್ಳೆಯ ಮೌಲ್ಯಗಳನ್ನು, ನೈತಿಕ ಮೌಲ್ಯಗಳನ್ನು ದಾಟಿಸುವ ವಿಧಾನ. ಇದು ಎಲ್ಲಾ ಧರ್ಮಗಳಲ್ಲಿಯೂ ಇದೆ. ನಾಲ್ಕನೆಯದ್ದು ಯಾವುದು ಅಂದರೆ ಧರ್ಮ ಒಂದು ಧ್ಯಾನದ ಶಿಸ್ತು. ಇದೂ ಅಷ್ಟೆ. ಎಲ್ಲಾ ಧರ್ಮಗಳಲ್ಲಿಯೂ ಇದೆ.
ಧರ್ಮದ ಉಪಯೋಗಗಳಲ್ಲಿ ಮೊದಲನೆಯ ಎರಡನ್ನು ಬಹಳ ವಿಮರ್ಶಾತ್ಮವಾಗಿ ನೋಡಬೇಕು. ಆದರೆ ಇವುಗಳನ್ನು ಟೀಕಿಸುವ ಬರದಲ್ಲಿ ಕೊನೆಯ ಎರಡನ್ನು ನಿರ್ಲಕ್ಷಿಸಬಾರದು. ಜೈನರಿಗೆ ಆ ಮನೋಧರ್ಮ ಇದ್ದರೆ ರೋಪ್‌ವೇ ಹಾಕುವುದನ್ನು ವಿರೋಧಿಸಬೇಕು.
ನಾನು ವಾರ್ತಾ ಚಿತ್ರವೊಂದರಲ್ಲಿ ಶ್ರವಣಬೆಳಗೊಳಕ್ಕೆ ಆಗಮಿಸುತ್ತಿರುವ ದಿಗಂಬರರನ್ನು ನೋಡಿದೆ. ಅವರನ್ನು ನೋಡಿ ನನಗೆ ಅದ್ಭುತ ಅನ್ನಿಸಿತು. ಅವರಾರಿಗೂ ತಾವು ಬೆತ್ತಲೆ ಇದ್ದೇವೆ ಎನ್ನುವ ಪ್ರಜ್ಞೆಯೇ ಇಲ್ಲ. ಪರಿಣಾಮವಾಗಿ ನಮಗೆ ಕೂಡಾ ಆ ನಗ್ನತೆ ಸಹಜವಾದ ಒಂದು ಸ್ಥಿತಿಯಂತೆ ಕಾಣಿಸುತ್ತದೆ. ಈ ಮೂಲಕ ಅವರು ಜೀವದ ಬಗೆಗಿನ ಯಾವುದೋ ಒಂದು ರಹಸ್ಯವನ್ನು ಅವರು ನಮಗೆ ಕಮ್ಯುನಿಕೇಟ್ ಮಾಡುತ್ತಿದ್ದಾರೆ. ಇದಕ್ಕೆ ತೆರೆದ ಮನಸ್ಸುಗಳಿದ್ದರೆ ವ್ಯಾಪಾರೀಕರಣವನ್ನು ಅದು ಒಪ್ಪುವುದಿಲ್ಲ. ಇವತ್ತಿನ ಪ್ರಪಂಚ ವ್ಯಾಪಾರೀಕರಣದ ಪ್ರಕ್ರಿಯೆಯಲ್ಲಿ ಧರ್ಮದ ಮೊದಲನೇ ಎರಡು ಕೆಲಸಗಳನ್ನು ಅತಿಯಾಗಿ ಮಾಡಿ ಧರ್ಮವನ್ನು ಹಿಂಸೆಯ ಸಾಧನವನ್ನಾಗಿ ಮಾಡುತ್ತಿದೆ.
ನಮಗೆ ಬೇಕಾಗಿರುವುದು ಧರ್ಮ ತೋರಿಸಿಕೊಟ್ಟಿರುವ ನೈತಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಹರಿಸುವ ದಾರಿ ಮತ್ತು ಅದು ಬೋಧಿಸುವ ಧ್ಯಾನದ ಶಿಸ್ತನ್ನು ಅರ್ಥಮಾಡಿಕೊಳ್ಳುವ ಮನಸ್ಸು.



Post new comment