ರಾಜಕೀಯದ ಪತನ

ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎನ್ನುತ್ತಾರೆ. ಈಗಿನ ರಾಜಕಾರಣ ಹೊಲಸಾಗಿದೆ ಎಂದು ಹೇಳಲು ಹೊರಟಿದ್ದೇ ನನಗೆ ಈ ಗಾದೆ -ನಾನು ಈಗ ಮಾತನ್ನಾಡುತ್ತಿರುವುದರ ಬಗ್ಗೆ ಕೂಡ- ಸತ್ಯವೆನ್ನಿಸಿತು. ಸದ್ಯ ಆಗುತ್ತಿರುವುದಕ್ಕೆ ನಾವೆಲ್ಲರೂ ಒಂದಲ್ಲ ಒಂದು ಬಗೆಯಲ್ಲಿ ಪಾಲುದಾರರು ಎಂದು ತಿಳಿದು ಮಾತನ್ನಾಡಲು ಪ್ರಯತ್ನಿಸುವುದು ಸಾಧ್ಯವೆ ನೋಡುವೆ.

ಹೆಚ್ಚು ಕಮ್ಮಿ ಎಲ್ಲ ರಾಜಕೀಯ ಪಕ್ಷಗಳೂ ಭ್ರಷ್ಟವಾಗಿವೆ,; ಚುನಾವಣೆಗಳನ್ನು ಸಾರಾಯಿ ಕುಡಿಸಿಯೇ ಗೆಲ್ಲಬೇಕಾಗುತ್ತದೆ,; ವಿದೇಶಗಳಲ್ಲೋ, ಜಾತಿಯ ಮಠಗಳಲ್ಲೋ ಕಪ್ಪು ಹಣ ಬಚ್ಚಿಟ್ಟು ಅಗತ್ಯವಾದಾಗ ಬಳಸಬೇಕಾಗುತ್ತದೆ; ಮಿಲಿಟರಿಗೆ ಬೇಕಾದ ಗನ್ನುಗಳಿಂದ, ಶವದ ಪೆಟ್ಟಗೆಗಳಿಂದ ಲಂಚ ಪಡೆಯಬೇಕಾಗುತ್ತದೆ; ಹೆಂಡದ ದೊರೆಗಳ ನೆರವಿಲ್ಲದೆ ರಾಜಕೀಯ ಮಾಡುವಂತೆಯೇ ಇಲ್ಲ; ನಮ್ಮ ವಿರೋಧಿ ಪಕ್ಷ ಮಾಡುವುದಾದರೂ ಏನು?- ಹೀಗೆ ವಿವರಿಸಿಕೊಳ್ಳುವುದರಲ್ಲಿ ರಾಜಕಾರಣಿಗಳು ಸಮಾಧಾನ ತಂದುಕೊಳ್ಳುತ್ತಾರೆ.

ಎಲ್ಲ ಪ್ರಜಾತಂತ್ರದಲ್ಲೂ ಇದು ನೆಸಸರಿ ಈವಿಲ್ ಎಂದು ಉದಾಹರಣೆಗೆ ಅಮೇರಿಕಾ ನೋಡಿ, ಇಂಗ್ಲೆಂಡ್ ನೋಡಿ ಎಂದು ಕೊಂಚ ನಾಚಿಕೆ ಉಳ್ಳವರು ಸಮರ್ಥಿಸಿಕೊಳ್ಳುತ್ತಾರೆ. ಈ ಬಗೆಯ ಅವ್ಯವಹಾರವನ್ನು ಟೀಕಿಸುವ ನಾವು ನಮ್ಮ ಕರ್ತವ್ಯವನ್ನು ಮಾಡಿಯಾಯಿತೆಂದು ಸಮಾಧಾನ ಪಡುತ್ತೇವೆ; ನಮ್ಮ ಟೀಕೆ ಉಗ್ರವಾಗುತ್ತ ಹೋದಂತೆ ಮಾತುಗಾರಿಕೆಯಲ್ಲಿರುವ ಖುಷಿಯೂ ನಮಗೆ ಸಿಗಲು ಶುರುವಾಗುತ್ತದೆ. ಹಿಂದೆ ರಾಜರಿಗೆ ಅವರನ್ನು ತರಹೇವಾರಿ ಜರಿಯಬಲ್ಲ ಆಸ್ಥಾನ ವಿದೂಷಕರು ಇರುತ್ತಿದ್ದರು- ನಾವೂ ನಮಗೇ ತಿಳಿಯದಂತೆ ಹಾಗಾಗಿರುತ್ತೀವಿ.

ದಿನಕ್ಕೆ ಇಪ್ಪತ್ತನಾಲ್ಕು ಗಂಟೆ ಸರಕುಗಳನ್ನು ಜಾಹೀರು ಮಾಡುವುದಕ್ಕಾಗಿ ಹುಟ್ಟಿಕೊಂಡ ಟೆಲಿವಿಷನ್ ಚಾನಲ್ಲುಗಳಿಗೆ ಖಾಲಿ ಜಾಗಗಳನ್ನು ತುಂಬಬಲ್ಲ 'ಜಾಣ ಕುಳ' ಗಳಾಗುವ ಸೌಭಾಗ್ಯವೂ ನಮಗೆ ದೊರೆಯುತ್ತದೆ. ಪ್ರಮೋದ್ ಮಹಾಜನ್‌ನ ಭೀಕರ ಕೊಲೆ, ಅವನ ಶವ ಸಂಸ್ಕಾರ, ಅದಕ್ಕೆ ಬಂದು ಹೋದವರು, ಆನಂತರ ಮಗನ ಹೆರೋಯಿನ್ ಸೇವನೆ, ಮಹಾಜನ್ ಆಪ್ತನ ಸಾವು- ಎಲ್ಲವೂ ಜಾಹಿರಾತಿನ ರೆವಿನ್ಯೂ ಹೆಚ್ಚಿಸುವಂತೆ ಕುತೂಹಲ ಕೆರಳಿಸುವ ವಿದ್ಯಮಾನಗಳಾಗುತ್ತವೆ. ಇಂತಹ ವಿಶೇಷಗಳಿಗಾಗಿಯೇ ಹೊಂಚುವ ಛಾನಲ್‌ಗಳು ಆಕಾಶದಿಂದ ಎರಗುವ ಹದ್ದುಗಳ ಹಾಗೆ. ಯಾವುದು ಮೊದಲು ಎರಗುತ್ತದೆ ಎನ್ನುವುದೇ ಇಂದಿನ ಸತ್ಯಾನ್ವೇಷಣೆಯ ಜರೂರು. ಈ ಜರೂರನ್ನು ಪೂರೈಸುವವರೇ ನಮ್ಮ ಹೀರೋಗಳು.

ಇನ್ನು ನಮ್ಮ ಟಾಬ್ಲಾಯಿಡ್‌ಗಳೋ? ಛಾನಲ್‌ಗಳಷ್ಟು ಪುಣ್ಯಪಡೆದ ಮಾಧ್ಯಮಗಳಲ್ಲ. ಆದರೂ ಭ್ರಷ್ಟಾಚಾರದ ಬಗ್ಗೆ ರಂಜಕವಾಗಿ ಮಾತನ್ನು ಆಡಿ ಆಡಿ, ಓದುಗರು ಅದೇ ಅದೇ ವಿಶೇಷಣಗಳಿಂದ ದಣಿಯದಂತೆ ಹೊಸ ಹೊಸ ಮಾತುಗಳಲ್ಲಿ ಬೈಯುತ್ತಾ ಭ್ರಷ್ಟಾಚಾರದ ಪ್ರಮಾಣಕ್ಕೆ ಅನುಗುಣವಾಗಿ ಅದರ ಸಂಪಾದಕರಿಗೆ ಲಾಭ ತರುವ ಪತ್ರಿಕೆಗಳಾಗುತ್ತವೆ. ಅತಿಶಯಗಳ ಅಬ್ಬರ ಹೆಚ್ಚಾದಂತೆ ಇನ್ನೂ ಹೆಚ್ಚಿನ ಅಬ್ಬರಕ್ಕಾಗಿ ನಾವು ಹಸಿಯುತ್ತ ನರಸತ್ತವರಾಗುತ್ತೇವೆ. ಹೀಗೆಲ್ಲ ಮಾತುಗಳನ್ನು ಆಡಬಲ್ಲ ನಮ್ಮಂಥವರ ಬದುಕನ್ನೇ ನೋಡೋಣ. ದಟ್ಟ ದಾರಿದ್ರ್ಯವೂ ದೈನ್ಯವೂ ಎಲ್ಲಡೆ ನಮಗೆ ಎದುರಾದಾಗ ನಾವು ಪಡೆದಿರುವ ಸೌಲಭ್ಯಗಳೆಲ್ಲವೂ ಪಾಪಪೂರಿತವೆನ್ನಿಸಬೇಕು; ಆದರೆ ಹಾಗೆನ್ನಿಸದಂತೆ ಬದುಕಬಲ್ಲ ನೆಮ್ಮದಿಕೊಡುವ ಉಪಾಯಗಳನ್ನು ನಾವು ಹುಡುಕಿಕೊಳ್ಳುತ್ತೇವೆ.

ನಾನಿರುವ ಮನೆಯ ನಿವೇಶನ ನನ್ನ ಹಕ್ಕಿನದು ನಿಜ. ಆದರೆ ಮಾರುಕಟ್ಟೆಯ ಬೆಲೆಗಿಂತ ತುಂಬ ತುಂಬ ಕಮ್ಮಿಯ ಬೆಲೆಯಲ್ಲಿ ಈ ನಿವೇಶನವನ್ನು ನಾನು ಪಡೆದಿರುತ್ತೇನೆ. ಒಂದೆರಡು ವರ್ಷಗಳಲ್ಲಿ ನಾನು ಖರ್ಚು ಮಾಡಿದ್ದಕ್ಕಿಂತ ಎರಡು ಪಟ್ಟಾದರೂ ಹೆಚ್ಚು ಬೆಲೆಯ ಮನೆಯ ಮಾಲೀಕ ನಾನಾಗಿರುತ್ತೇನೆ. ನಮ್ಮ ಮನೆಗೆಲಸದವಳಿಗೆ ಹಿಂದಿನದಕ್ಕಿಂತ ಎರಡರಷ್ಟು ಸಂಬಳ ಸಿಗುವುದಿಲ್ಲ. ಅಕ್ಕಿ ರಾಗಿ ಬೆಳೆಯುವವನಿಗೆ ವರ್ಷ ವರ್ಷ ಹೆಚ್ಚು ಉತ್ಪತ್ತಿಯಾಗುವ ಖಾತ್ರಿಯಿಲ್ಲ. ಸರ್ಕಾರಗಳ ಉದಾರ ನೀತಿಯಿಂದಾಗಿ ನಾವು ಪಡೆಯುವ ನಮಗೇ ಲಾಭದಾಯಕವಾದ ನಿವೇಶನ ಇತ್ಯಾದಿ ಸೌಲಭ್ಯಗಳನ್ನು ಪಡೆಯಲು ಲಂಚ ಕೊಡಬೇಕಾಗಿ ಬಂದರೂ ನಮ್ಮ ಲಾಭ ಕೊಂಚ ಕಡಿಮೆಯಾಯಿತೆಂದು ನಾವು ಗೊಣಗಿಕೊಂಡಾಗ ತನ್ನ ಶೇರನ್ನು ಪಡೆದ ಭ್ರಷ್ಟ ಅಧಿಕಾರಿ ಪಾಪ ಪ್ರಜ್ಞೆಯಿಂದ ನರಳುವುದಿಲ್ಲ. ನೂರಾರು ಜನರನ್ನು ಕಡೆಗಣಿಸಿ ನನಗೆ ಏನೋ ದೊರೆಯುವಂತೆ ಮಾಡುವಾಗ ನಾನೂ ಕೊಂಚ ಕಕ್ಕಲಿ ಎಂದು ಅವನು ತನ್ನ ಹಕ್ಕೆಂಬಂತೆ ತನ್ನ ಕೈ ಬಿಸಿಯಾಗುವುದನ್ನು ನಿರೀಕ್ಷಿಸುತ್ತಾನೆ.

ಹತ್ತೊಂಬತ್ತನೇ ಶತಮಾನದಲ್ಲಿ ಶುರುವಾದ ಆಧುನಿಕ ಯುಗಕ್ಕೆ ನಾವು ತಯಾರಾಗಲು, ಅಂದರೆ ಬ್ರಿಟಿಷರ ಎಕಾನಮಿಗೆ ಅಗತ್ಯವಾದ ಬಾಬುಗಳಾಗಲು, ನಾವು ಕಲಿಯತೊಡಗಿದ ಆಂಗ್ಲವಿದ್ಯಾಭ್ಯಾಸ ಪಡೆದ ಯುವಕರು ಎದುರಾದಾಗ ರಾಮಕೃಷ್ಣ ಪರಮಹಂಸರು ಉಪಯೋಗಿಸುತ್ತಿದ್ದ ಶಬ್ದವೊಂದು ನೆನಪಾಗುತ್ತದೆ. ಈ ಶಬ್ದ ಪರಮಹಂಸರಪಾಲಿಗೆ ಹೊಸಯುಗದ ಸಂಕೇತವೇ ಆಗಿಬಿಟ್ಟಿತು. ಇಂಗ್ಲಿಷ್ ಕಲಿತ ಯುವಕರ ಪರಮಾರ್ಥವೇನು? ಅವರು ಪಡುವ ಆತಂಕ ತವಕ ತಲ್ಲಣಗಳು ಯಾವುದರ ಬಗ್ಗೆ? ಪರಮಹಂಸರು ಉಪಯೋಗಿಸುತ್ತಿದ್ದ ಶಬ್ದ 'ನೌಕರಿ'. ಅದು ಇಲ್ಲದೆ ಇನ್ನೇನೂ ಇಲ್ಲ; ಅದು ಬಿಟ್ಟು ಈ ಯುವಕರ ಪಾಲಿಗೆ ಇನ್ನೇನೂ ಇಲ್ಲ. ನೌಕರಿ ಜೊತೆ ನಾವೀಗ ಇನ್ನೆರಡು ತವಕ ತಲ್ಲಣಗಳನ್ನು ಅನುಭವಿಸುತ್ತೀವಿ. ನಮ್ಮ ಹಾಗೆ ಭಾಗ್ಯವಂತರಾದವರ ಬಗ್ಗೆ ನಾನಿದನ್ನು ಹೇಳುತ್ತಿದ್ದೀನಿ. ಈ ಎರಡು ಯಾವುವು ಎಂದರೆ: ಸೀಟು ಮತ್ತು ಸೈಟು. ಆಧುನಿಕ ಜಾಗತಿಕ ರಾಜಕಾರಣದ ಪರಮ ಪುರುಷಾರ್ಥವಿರುವುದು ಬಯಸಿದ್ದನ್ನು ಕೊಡಬಲ್ಲ ಕಲ್ಪವೃಕ್ಷವಾದ ಮಾರುಕಟ್ಟೆಯ ನಿರ್ಮಾಣದಲ್ಲಿ.

ಈ ಮಾರುಕಟ್ಟೆಯಲ್ಲಿ ಸಲ್ಲಲು ಅಗತ್ಯವಾದ್ದು ಮ್ಯಾನೇಜ್ ಮೆಂಟ್ ಇನ್ಸ್‌ಟಿಟ್ಯೂಟ್‌ನಲ್ಲಿ ಒಂದು ಸೀಟು; ಸೌಂದರ್‍ಯ ವರ್ಧಕ ಅಥವಾ ಕಾಮವರ್ಧಕ ವಸ್ತುಗಳನ್ನು ತಯ್ಯಾರು ಮಾಡುವ ಮಲ್ಟಿನ್ಯಾಷನಲ್ ಸಂಸ್ಥೆಯಲ್ಲೊಂದು ವೈಸ್ ಪ್ರೆಸಿಡೆಂಟ್ ಜಬರದಸ್ತಿನ ನೌಕರಿ, ಭಾರತದ ದೊಡ್ಡ ಕಾಸ್ಮೊಪೊಲೈಟ್ ನಗರದಲ್ಲಿ ಒಂದು ಸೈಟು. ಅಭಿವೃದ್ಧಿ ರಾಜಕಾರಣದಲ್ಲಿ ನಿರತ ರಾಷ್ಟ್ರಗಳಾದ ಚೀನಾ ಭಾರತಗಳ ರಾಜಕಾರಣದ ಭ್ರಷ್ಟಾಚಾರದ ಮೂಲ ಸೆಲೆಯಿರುವುದು ಇದನ್ನು ಗಳಿಸಿ ಅಮೆರಿಕಾಕ್ಕೆ ಸಲ್ಲುವಂತೆ ಬದುಕಬೇಕೆಂಬುದರಲ್ಲಿ. ಈ ನಡುವೆ ಒಂದು ದುಸ್ವಪ್ನದಂತೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರು, ಪರೀಕ್ಷೆಯಲ್ಲಿ ಅಂಕಗಳಿಸಲಾರದೆ ನೇಣುಹಾಕಿಕೊಳ್ಳುವ ಬಾಲ ಬಾಲೆಯರು, ನಾರುವ ಸ್ಲಮ್ ಗಳಲ್ಲಿ ಬಾಳುವ ನರಜೀವಿಗಳು ಆಗೀಗ ಕಾಡುವುದುಂಟು.

ದೇಶಕ್ಕೆ ಆದಾಯ ತರುವ ನೆವದಲ್ಲಿ ಐಟಿ ಬಿಟಿಗಳಂತೂ ರಾಜಾರೋಷವಾಗಿ ತಮ್ಮ ಹಕ್ಕಾಗಿ ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ಪಡೆಯುತ್ತವೆ. ಅಮೇರಿಕಾಕ್ಕೆ ಸೇರೆಗಾರಿಕೆ ಮಾಡುವ ಅವರ ಉದ್ಯಮ ನಷ್ಟಕ್ಕೊಳಗಾದರೂ ಅವರು ಸೋಲುವುದಿಲ್ಲ. ನಾವು ಕೂಲಿ ಮಾಡುವ ರಾತ್ರೆ ಅಮೆರಿಕಾದ ಹಗಲಾದ್ದರಿಂದ ಈ ಸೇರೇಗಾರರು ಅಷ್ಟು ಬೇಗ ಸೋಲುವುದಿಲ್ಲ. ಅಲ್ಲದೆ ಅವರಿಗೆ ಅಪಾರವಾದ ಲ್ಯಾಂಡ್ ಬ್ಯಾಂಕ್ ಇರುತ್ತದೆ. ಇವನ್ನೆಲ್ಲ ಆಗು ಮಾಡುವ ರಾಜಕಾರಣಿಗಳಿಗೆ ಆಶ್ರಯ ಸಿಕ್ಕಂತಾಗುತ್ತದೆ. ಅವರ ಚುನಾವಣೆಗಳಿಗೆ, ಚುನಾವಣೆಗಳಿಗಿಂತ ಮುಂಚೆ ಆಕಾಶ ಕಾಣದಂತೆ ರಸ್ತೆಯ ಎರಡು ಬದಿಗಳಲ್ಲೂ ಕಣ್ಣು ಕುಕ್ಕುವ ಅವರ ಪ್ಲಸ್ ಅವರ ಬೆಂಬಲಿಗರ ಕಟೌಟ್‌ಗಳಿಗೆ ಇನ್ನೆಲ್ಲಿಂದ ಹಣ ಬರಬೇಕು.? ದೇಶದ ಅಭಿವೃದ್ಧಿಯಾಗದೆ ಅವರು ಉಳಿಯುವುದು ಹೇಗೆ? ನಾನು ಹೀಗೆ ಬರೆಯಬೇಕಾಗಿ ಬಂದುದರ ಬಗ್ಗೆ ಹೇಸುತ್ತಲೇ ಮೇಲಿನದನ್ನೆಲ್ಲ ಬರೆದು ಬಿಟ್ಟಿದ್ದೇನೆ. ಮೇಧಾ ಪಾಟ್ಕರ್ ಮತ್ತು ಅವರ ಜೊತೆ ಹೋರಾಡುತ್ತಿರುವವರು ಮಾತ್ರ ಹೇಸಬೇಕಾಗಿಲ್ಲ; ಈಗಿರುವ ಸ್ಟೇಟ್ ಪವರನ್ನು ಮೀರಿಸಿದ ಪವರ್ ಪಡೆಯಲು ಹೊರಟ ನಕ್ಸಲೀಯರಿಗೂ ತಮ್ಮ ಗುರುಗಳಾದ ಸ್ಟಾಲಿನ್ ಮತ್ತು ಮಾವೋ ಮಾಡಿದ್ದನ್ನು ಕಂಡು ಹೇಸಿಗೆಯಾಗಬೇಕು.

ಪ್ರಜಾತಂತ್ರದ ಪತನದಿಂದ ಕೊಳೆತದ್ದರಲ್ಲಿ ಬೆಳೆಯುವ ಅಣಬೆಯಂತೆ ಅವರು. ಹಣವಂತರ ರಾಜಕೀಯವನ್ನು ವಿರೋಧಿಸಬೇಕೆಂದು ಈಚೆಗೆ ರಾಜ್ಯಸಭಾ ಚುನಾವಣೆಗೆ ನಾನು ನಿಂತೆ. ಗೆಲ್ಲುವುದು ಸಾಧ್ಯವಿಲ್ಲವೆಂದು ಗೊತ್ತಿದ್ದೂ ನಾನು ನಿಂತೆ. ಬರವಣಿಗೆಯ ನನ್ನ ಲೋಕಕ್ಕೆ ಸೇರಿದ ನಾಲ್ಕು ಜನ ನನಗೆ ಓಟುಮಾಡಬಾರದೆಂದು ಹೇಳಿಕೆಯಿತ್ತರು. ನನ್ನಂತೆಯೇ ನಿಂತ ನಾಲ್ಕನೇ ಅಭ್ಯರ್ಥಿಯೊಬ್ಬರನ್ನು (ಸಾಹುಕಾರರೊಬ್ಬರನ್ನು ) ಬೆಂಬಲಿಸುವುದು ಅವರ ಹಕ್ಕೆಂಬುದು ನಿಜ, ಅವರಲ್ಲಿ ನಾನು ಗೌರವಿಸುವ ಇಬ್ಬರು ಯಾಕೆ ಇದ್ದರೆಂದು ನಾನು ಅಚ್ಚರಿಪಟ್ಟೆ. ಅದಕ್ಕೆ ವಿವರಣೆಯನ್ನು ಕೊಟ್ಟ ನನ್ನ ಕೆಲವು ಹಿತೈಷಿಗಳ ಮಾತನ್ನು ಒಪ್ಪುವುದೂ ನನಗೆ ಅಸಹ್ಯವೆನ್ನಿಸಿತು. ಅಪರೂಪಕ್ಕೆ ಪತ್ರಿಕಾ ಹೇಳಿಕೆ ಕೊಡುವ ಇವರಲ್ಲಿ ಇಬ್ಬರನ್ನು ಬಿಡಿ. ಎಮರ್ಜನ್ಸಿಯಲ್ಲಿ ನನ್ನ ಹೀರೋ ಆಗಿದ್ದ ಒಬ್ಬರು ನಾನು ಎಷ್ಟುಬಾರಿ ಕರೆದರೂ ಫೋನ್ ಎತ್ತಲಿಲ್ಲ. ಅವರು ಹೇಳಿದ್ದರೆ ನನಗೆ ಸಿಗಬಹುದಾಗಿದ್ದ ಐದು ಓಟುಗಳು ನನಗೆ ಸಿಗಲಿಲ್ಲ. ಅವು ಸಿಕ್ಕಿದ್ದರೂ ನಾನು ಸೋಲುತ್ತಿದ್ದೆ. ಆದರೆ ಅದೆಷ್ಟೋ ವರ್ಷಗಳ ಕಾಲ ನಾನು ಪ್ರೀತಿಸುತ್ತಿದ್ದ ಒಬ್ಬ ರಾಜಕಾರಣಿಯ ಬಗ್ಗೆ ನನ್ನ ಗೌರವ ಉಳಿದಿರುತ್ತಿತ್ತು. ಹಿಂದೆ ಯಾವ ತ್ಯಾಗಕ್ಕಾದರೂ ಸಿದ್ಧನಿದ್ದ ಈ ಧೀರನ ಬಗ್ಗೆ ನನಗೆ ಕನಿಕರವೆನ್ನಿಸಿತು.

ರಾಜಕಾರಣದ ಪತನವೆಂದರೆ ಇದು. ಒಳ್ಳ್ಳೆಯವರು ಅನಾಥರಾಗಿ ಕೋಮುವಾದಿಗಳ ದಾಸರಾಗುವುದು. ಹಿಂದೆ ಜಾತಿ ರಾಜಕಾರಣವಿತ್ತು. ಅದನ್ನು ನಾವೆಲ್ಲರೂ ನಿಂದಿಸುತ್ತದ್ದೆವು. ಜಾತಿಯ ವ್ಯಾಮೋಹದಲ್ಲಿ ಸರಿ ತಪ್ಪಿನ ಪ್ರಜ್ಞೆ ಮಾಯವಾಗುತ್ತದೆ ಎಂದು. ಆದರೆ ಈ ಜಾತಿ ರಾಜಕಾರಣದಲ್ಲಿ ವಿಸ್ತೃತವಾದೊಂದು ಕೌಟುಂಬಿಕ ಪ್ರಜ್ಞೆ ಕೆಲಸ ಮಾಡುತ್ತಿತ್ತು. ಹಿಂದುಳಿದ ಜಾತಿಗಳಿಂದ ಹಲವು ನಾಯಕರು ಹುಟ್ಟಿಕೊಂಡು ನಮ್ಮ ಪ್ರಜಾತಂತ್ರದ ವಿಸ್ತಾರಕ್ಕೆ ಕಾರಣವಾಯಿತು. ಆದರೆ ಜಾತಿಯನ್ನು ಮೀರಬೇಕು, ಮೀರಬಹುದು ಎನ್ನಿಸುವಷ್ಟರಲ್ಲೇ ಈಗ ಧನಬಲದ ರಾಜಕೀಯ ಪ್ರಾರಂಭವಾಗಿದೆ. ಜಾತಿ ರಾಜಕಾರಣದಲ್ಲಿ ಕೆಲಸಮಾಡಿದಂತೆ ಈ ಹಣದ ವ್ಯಾಮೋಹದ ರಾಜಕಾರಣದಲ್ಲಿ ಯಾವ ಬಗೆಯ ಜನ ಪ್ರೀತಿಯೂ ಕೆಲಸ ಮಾಡುವದಿಲ್ಲ. ಇದು ಸೈತಾನ ರಾಜಕಾರಣ; ಇಲ್ಲಿ ನರಮನುಷ್ಯರಿಗೆ ಸಹಜವಾದ ವ್ಯಾಮೋಹಗಳಿಗೂ ಜಾಗವಿಲ್ಲ. ಹೊಸ ಜಾಗತಿಕ ಸ್ವರೂಪದ ಈ ಧನಮೂಲ ರಾಜಕಾರಣದಲ್ಲಿ ಜನರನ್ನು ವಂಚಿಸಲು ಜಾತಿಗಳನ್ನೂ ವೋಟ್ ಬ್ಯಾಂಕ್ ಗಳಾಗಿ ಬಳಸುತ್ತಾರೆ. ಇದು ಅಪಾಯ. ಈ ಕಾಲದ ನಾಚಿಕೆಗೆಟ್ಟ ರಾಜಕೀಯದಿಂದ ಹೇಸಬೇಕು. ಆದರೆ ಸುಮ್ಮನಿರಬಾರದು. ಈಸ ಬೇಕು; ಇದ್ದು ಜೈಸಬೇಕು.

ಯು.ಆರ್.ಅನಂತಮೂರ್ತಿ

 

ಈ ಲೇಖನ ದೇಶ-ಕಾಲದ ಈ ಸಂಚಿಕೆಯಲ್ಲಿ ಪ್ರಕಟವಾಗಿದ

Thanx for the thought provoking essay. It appears to me that your argument is born of a bitter experience but neverhteless points to a despicable contemporary phenomena. Your assertion in the end that one should overcome these is heartening. But you seem to focus excessively on one domain of politics? How about the daily politics of the commoners, of the women, of dalits, of farmers etc, which show not only vibrancy but also a great amount of endurance, inventiveness. I believe the politics of the people today is doing much more than ever before, in expanding the public domain to include more and more people and their interests.

In characterising politics we need to look at the politics of the people and the novel modalities and programmes in them. We also need to wonder though we hate it the reasons why a particular kind of political behaviour has diminished in the area of electoral politics (i mean the affairs of political parties and their activities).

The monster that you see in politics in your essay too is terribly frightened of the increasing pro-active political behaviour of the commoners who no more are total puppets. Politics is changing, sure, and not only in the evil direction.

(Sorry, I dont have the software that renders kannada script, hence, my response is in English)  

When I talked of politics, I meant the electoral and power politics of the professional politicians. Sri Kamalkar is right: there is another politics - politics of the common man -of dalits and of women. In developed countries like USA the Poor seem fatigued and dont care as much as the Indian poor. After Vietnam and the black movement the American poor have been mostly silent. Not so the Indian Poor. I should have taken this into account in my anger against the professional party politicians. I am grateful for the comment of Sri,Kamalakar

-U R Ananthamurthy

Post new comment

The content of this field is kept private and will not be shown publicly.