ಕನಿಷ್ಠದಲ್ಲಿ ಗರಿಷ್ಠವನ್ನು ಹೊಳೆಸಬಲ್ಲ ಕಲೆ

ಬೋಳು ತಲೆಯ ಪ್ರೇಮಿ

ಪೂರ್ಣಗೊಂಡ ಸ್ಕ್ರಿಪ್ಟ್ ನಿಂದ ನಾನು ಪ್ರಾರಂಭಿಸುವುದೇ ಇಲ್ಲ. ನನ್ನ ಮನಸ್ಸಿನಲ್ಲಿ ಒಂದು ಪಾತ್ರ ಹುಟ್ಚಿಕೊಂಡಿರುತ್ತದೆ. ಆ ಪಾತ್ರದಂಥವನೊಬ್ಬ ಅಥವಾ ಒಬ್ಬಳು ನನಗೆ ನಿಜ ಜೀವನದಲ್ಲಿ ಪ್ರತ್ಯಕ್ಷವಾಗುವ ತನಕ ನಾನು ಟಿಪ್ಪಣಿಗಳನ್ನೂ ಮಾಡಿಕೊಳ್ಳಲೂ ಹೋಗುವುದಿಲ್ಲ. ಅಂಥವರೊಬ್ಬರು ಸಿಕ್ಕ ಮೇಲೆ ನನಗವರು ಆಪ್ತರಾಗುವಷ್ಟು ಅವರ ಜತೆ ಕಾಲ ಕಳೆಯುತ್ತೇನೆ. ಹೀಗಾಗಿ ನಾನು ಮಾಡುವ ಟಿಪ್ಪಣಿಗಳು ನನ್ನ ಮನಸ್ಸಿನಲ್ಲಿರುವ ಪಾತ್ರದ ಬಗ್ಗೆಯಾಗಿರದೆ ನಿಜ ಜೀವನದಲ್ಲಿ ನಾನು ಕಂಡವರ ಬಗ್ಗೆ ಆಗಿರುತ್ತದೆ ಇದೊಂದು ದೀರ್ಘ ಪ್ರಕ್ರಿಯೆ; ಐದಾರು ತಿಂಗಳುಗಳಾದರೂ ಹಿಡಿಯುವ ಪ್ರಕ್ರಿಯೆ. ಹೀಗಾದಾಗ ನಾನು ಕೆಲವು ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತೇನೆಯೇ ಹೊರತು ಅವರ ಸಂಭಾಷಣೆಗಳನ್ನು ಬರೆದಿಟ್ಟುಕೊಳ್ಳುವುದಿಲ್ಲ. ಇಡೀ ಸಂಭಾಷಣೆಗಳನ್ನು ಬರೆಯುವುದೇ ಇಲ್ಲ. ಆದುದರಿಂದ ಚಿತ್ರೀಕರಣ ಪ್ರಾರಂಭ ಮಾಡಿದಾಗ ರಿಹರ್ಸಲ್ ಮಾಡುವ ಪ್ರಮೇಯವೇ ಬರುವುದಿಲ್ಲ. ನನಗೇ ಅವರು ಹತ್ತಿರವಾಗುವುದರ ಬದಲು ಅವರಿಗೇ ನಾನು ಹತ್ತಿರವಾಗುತ್ತಾ ಹೋಗುತ್ತೇನೆ. ನಾನು ಅವರಿಗೆ ಕೊಡುವುದು ಇಲ್ಲವೆಂದಲ್ಲ. ಆದರೆ ಅವರಿಂದ ನಾನು ಹೆಚ್ಚು ಪಡೆದುಕೊಳ್ಳುತ್ತೇನೆ.

-ಅಬ್ಬಾಸ್ ಕಿರೋಸ್ತಾಮಿ
ಈ ಕಾರಿನ ಪ್ರಯಾಣದಲ್ಲಿ ನಮಗೆ ಮರೆಯಲಾರದ ಘಟನೆ ಎಂದರೆ ಕಾರಿನ ಚಾಲಕಿ ಕಾರನ್ನು ಕತ್ತಲಿನಲ್ಲಿ ನಿಲ್ಲಿಸಿದಾಗ ಹತ್ತಿಕೊಳ್ಳುವ ಒಬ್ಬ ಸೂಳೆ. ಇವಳ ಮುಖವನ್ನು ನಾವು ಕಾಣುವುದೇ ಇಲ್ಲ. ಮಾತುಗಳನ್ನು ಮಾತ್ರ ಕೇಳುತ್ತೇವೆ. ಇವಳು ಹತ್ತಿಕೊಳ್ಳಲು ಕಾರಣ ಕಾರಿನಲ್ಲಿರುವುದು ಒಬ್ಬ ಗಂಡಸು ಎಂಬ ಭ್ರಮೆಯಲ್ಲಿ. ನಮ್ಮ ಚಾಲಕಿ ಅವಳನ್ನು ಇಳಿಯಲು ಬಿಡುವುದಿಲ್ಲ. ಸೂಳೆಯ ನಿತ್ಯ ಜೀವನದ ಸತ್ಯಗಳನ್ನು ತಿಳಿಯಲು ಈಕೆ ಪರಮ ಕುತೂಹಲಿಯಾಗುತ್ತಾಳೆ. ದಾರಿಯುದ್ದಕ್ಕೂ ಸೂಳೆ ವಿಚಿತ್ರವಾಗಿ ಬಿಕ್ಕಿ ಬಿಕ್ಕಿ ನಗುತ್ತಲೇ ತನ್ನ ಕಥೆಯನ್ನು ಯಾವ ಆತ್ಮ ಮರುಕವೂ ಇಲ್ಲದೆ ಬಡಬಡಿಸುವ ಹಿಗ್ಗಿನಲ್ಲಿ ಹೇಳಿಕೊಳ್ಳುತ್ತಾಳೆ.
ಇದೊಂದು ಅಪೂರ್ವ ಸನ್ನಿವೇಶ ಈ ಚಿತ್ರದಲ್ಲಿ. ನಮಗೆ ಕಾಣದ ಸೂಳೆಯ ಕೀರಲು ಹಿಗ್ಗಿನ ಸವಾಲಿನ ಧ್ವನಿಯ ಹಿನ್ನೆಲೆಯಲ್ಲಿನಾವು ಕಾಣುವ ಮತ್ತೆ ಮದುವೆಯಾದ ಅಮೀನಿನ ಈ ತಾ ಯಾರು? ಚಾಣಾಕ್ಷಳಾದ ಜಾಣ ಸಂಸಾರಿಯೆ? ಒಳಗುದಿತೀರದೆ ಇನ್ನೂ ತುಡಿಯುವ ಪ್ರೇಯಸಿಯೆ? ಮಗನ ಜೊತೆ ಪ್ರಾರಂಭವಾದ, ಆದರೆ ಸ್ವಗತವಾಗಿಯೇ ಉಳಿದ ಅವಳ ಬಯಕೆಗಳು ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತವೆ, ಸೂಳೆಯ ಮಾತುಗಳ ಹಿನ್ನೆಲೆಯಲ್ಲಿ ನಾವು ಈವರೆಗೆ ಕೇಳಿ ಕಂಡದ್ದೆಲ್ಲವನ್ನೂ ಪುನರಾಲೋಕಿಸುತ್ತೇವೆ. ನೈತಿಕ ಜೀವನ, ಸುಖ ಮತ್ತು ಪ್ರೀತಿಯ ಹುಡುಕಾಟ, ಸಭ್ಯ ಸಮಾಜದ ಕಟ್ಟುಪಾಡುಗಳು- ಎಲ್ಲವೂ ಸಮಸ್ಯಾತ್ಮಕವಾಗುತ್ತವೆ.
ಈ ಚಿತ್ರ ನೋಡಿದ ವಿಮರ್ಶಕರೆಲ್ಲರೂ ಉಲ್ಲೇಖಿಸುವ ಒಂದು ಮಾತು ಅಲ್ಲಿ ಬರುತ್ತದೆ. ಹಿಗ್ಗಿನ ಪರಾಕಾಷ್ಠೆಯಲ್ಲಿ ಸೂಳೆ ಹೇಳುತ್ತಾಳೆ; ಮರ್ಯಾದಸ್ಥ ಸಂಸಾರಿಗಳಾದ ನೀವು ಹೆಂಗಸರು ಹೋಲ್ ಸೇಲ್ ವ್ಯಾಪಾರಿಗಳು. ನಾವು ರೀಟೇಲ್ ವ್ಯಾಪಾರಿಗಳು. ಮತ್ತೇನಿದೆ ಹೆಣ್ಣುಗಂಡಿನ ಸಂಬಂಧದಲ್ಲಿ?. sex, sex, sex. ನಿಮ್ಮ ಗಂಡಂದಿರೆಲ್ಲರೂ ಆರಾಮಿನ ಸುಖಕ್ಕೆ ಬರುವುದು ನನ್ನಂಥವಳ ಬಳಿಯೇ.
ಇಲ್ಲೊಂದು ಸತ್ಯ ಥಟ್ಟನೇ ಅನಾವರಣಗೊಳ್ಳುತ್ತದೆ-- ಎಪಿಫನಿಯಂತೆ(epiphany)*, ಆದರೆ ವಿರೋಧಾಭಾಸದಲ್ಲಿ. ಗಂಡಸರೆಲ್ಲರೂ ಹೆಣ್ಣಿನಿಂದ ಏನು ಅಪೇಕ್ಷಿಸುತ್ತಾರೋ ಅದೇ ಸತ್ಯದಲ್ಲಿ ಆಗಿಬಿಟ್ಟವಳು ಈ ಸೂಳೆ. ಗಂಡಸಿಗೆ ಲೈಂಗಿಕ ಸುಖವನ್ನು ಕೊಡುವ ಉದ್ಯಮದಲ್ಲೇ ತನ್ನ ಎಲ್ಲ ಸುಖವನ್ನೂ ಸಾರ್ಥಕತೆಯನ್ನೂ ಕಾಣುವುದಷ್ಟೇ ಅಲ್ಲದೆ ಅದನ್ನು ಅಟ್ಟಿ ಹುಡುಕುವ ಪ್ರಾಣಿಯೂ ಅವಳಾಗಿ ಹೋಗಿದ್ದಾಳೆ. ಗಂಡು ಬಯಸುವುದೇ ತಾನೂ ಆಗಿ ಬಿಟ್ಟು ಅವಳು ಬಿಡುಗಡೆ ಪಡೆದಿದ್ದಾಳೆ. ಅಥವಾ ಹಾಗೆನ್ನಿಸುವ ಶಾಕನ್ನು ನಮಗೆ ಕೊಡಬಲ್ಲವಳಾಗಿದ್ದಾಳೆ.
ಜನಸಂದಣಿ ಇದ್ದಲ್ಲೆಲ್ಲಾ ಕಾರನ್ನು ನಿಲ್ಲಿಸು ನಿಲ್ಲಿಸು ಎಂದು ಸೂಳೆ ಕಾಡುತ್ತಾಳೆ. ಆದರೆ ಅವಳಾಡುವ ಮಾತನ್ನು ಕೇಳಿಸಿಕೊಳ್ಳುವ ಆಸೆ ನಮ್ಮ ತಾ ಪ್ಲಸ್ ಪ್ರಣುಯಾದ ಚಾಲಕಿಗೆ. ಸಂಭಾವಿತೆಯಾಗಿ ತಾನು ಆಗದ್ದನ್ನು ಆಡಲಾರದ್ದನ್ನು ಯತೇಚ್ಛ ಕೇಳಿಸಿಕೊಂಡು ಕಾರನ್ನು ನಿಲ್ಲಿಸುತ್ತಾಳೆ. ಅವಸರದಲ್ಲಿ ಸೂಳೆ ಇಳಿದು ಹೋಗಿ ಇನ್ನೊಂದು ಕಾರನ್ನು ಹತ್ತಿಕೊಳ್ಳುವುದನ್ನು ನಾವು ನೋಡುತ್ತೇವೆ.
ಇನ್ನೊಂದು ಮರೆಯಲಾರದ ಭೇಟಿಯೆಂದರೆ ಕೋಲು ಮುಖದ ಚಿಂತಾಕ್ರಾಂತ ಭಾವದ ಹೆಣ್ಣೊಬ್ಬಳ ಜತೆಗಿನದು. ಸೂಳೆಗೆ ವಿರುದ್ಧದ ಸತ್ಯ ಇವಳಭಾವಲೋಕದ್ದು. ಪ್ರಾಯಶಃ ಇವಳು ಶೀತಳೆ- ರತ್ಯುತ್ಸಾಹಿಯಲ್ಲ. ಇವಳು ತನ್ನ ಪ್ರಿಯಕರನನ್ನು ಒಲಿಸಿಕೊಳ್ಳಲಾಗದೆ ಸೋತಿದ್ದಾಳೆ. ತಲೆಯ ಮೇಲಿನ ಹೊದಿಕೆಯನ್ನು ಬಿಗಿಯಾಗಿ ಮಡಿವಂತಳಂತೆ ಕಟ್ಟಿಕೊಂಡಿದ್ದಾಳೆ. ಅವಳ ಪಾಲಿಗೆ ದೇವರನ್ನು ಪ್ರಾರ್ಥಿಸುವುದೆಂದರೆ ದೇವರ ಮೇಲೂ ಜುಲುಮೆ ಮಾಡಿದಂತೆ. ಜುಲುಮೆಂದ ಪ್ರೀತಿ ಸಿಗುವುದಿಲ್ಲ ಎಂಬುದನ್ನು ತಿಳಿದಿರುವ ಹೆಂಗಸು ಇವಳು.
ಘನತೆಕಳೆದುಕೊಳ್ಳದ ವ್ಯಾಕುಲಿಯಾದ ಈ ಸಂಗಾತಿಯನ್ನು ನಮ್ಮ ಚಾಲಕಿ ಸಂತೈಸುತ್ತಾಳೆ. 'ದುಪಟ್ಟಾವನ್ನು ಅಷ್ಟು ಬಿಗಿಯಾಗಿ ಕಟ್ಟಿಕೊಳ್ಳಬೇಡ. ಅದು ಸಡಿಲವಾಗಿದ್ದರೆ ನೀನು ಸುಂದರವಾಗಿ ಕಾಣುತ್ತೀ' ಎಂದು ಒಂದು ಹೆಣ್ಣು ಇನ್ನೊಂದು ಹೆಣ್ಣಿಗೆ ಆಪ್ತತೆಯಲ್ಲಿ ಹೇಳಿಕೊಳ್ಳುವಂತೆ ಹೇಳಿದಾಗ ಸಂಗಾತಿ ನಸುನಕ್ಕು ದುಪಟ್ಟಾ ಸಡಿಲಿಸುತ್ತಾಳೆ. ಥಟ್ಟನೇ ಅವಳು ಬೋಳಿಸಿಕೊಂಡ ತಲೆ ನಮಗೆ ಕಾಣುತ್ತದೆ. ಸಂಗದ ವೈಯಾರದಲ್ಲಿ ಸೂಳೆ ಬಿಡುಗಡೆ ಕಂಡರೆ, ಬೋಳಿಸಿದ ತಲೆ ಸೂಚಿಸುವ ನಿಸ್ಸಂಗದಲ್ಲಿ ಇವಳಿಗೆ ಬಿಡುಗಡೆಯ ಅನುಭವವಾಗಿರಬಹುದೆ?
ಬೋಳಾದ ತಲೆಯ ಅವಳ ಸೌಮ್ಯ ಭಾವದ ಮುಖ ನಮಗೂ ಒಂದು ಕ್ಷಣ ತುಂಬ ಸುಂದರವೆನ್ನಿಸುತ್ತದೆ. ಕನಿಷ್ಠದಲ್ಲಿ ಗರಿಷ್ಠವನ್ನು ಹೊಳೆಸಬಲ್ಲ ಕಲೆಲ್ಲಿದೆ. ಜಪಾನೀ ಹಾಯ್ಕು ಕವನವೊಂದನ್ನು ಓದಿದ ಅನುಭವವಿದು. ಭಗ್ನ ಪ್ರಣು, ದೈವಭಕ್ತೆ, ಸೂಳೆ, ವಿಶಾದಯೊಗದಲ್ಲಿರುವ ಈ ಸಾಧ್ವಿ- ಒಂದರನಂತರ ಇನ್ನೊಂದು ಅಲೆ. ನದಿಯಂತೆ ಹರಿಯುವ ಈ ಕಾರಿನ ಯಾತ್ರೆಯಲ್ಲಿ. ಮತ್ತೆ ಬಂಡಾಯಗಾರನಾದ ಮಗ ಕಾರನ್ನು ಹತ್ತಿಕೊಳ್ಳುತ್ತಾನೆ. ಈಗ ಮಗನ ಮಲ ತಾಯ ಬಗ್ಗೆ ಚಾಲಕಿ ಸ್ವಲ್ಪ ವಿನೋದದಲ್ಲಿಯೇ ಪ್ರಶ್ನಿಸುತ್ತಾಳೆ. ಎಷ್ಟು ಕುತೂಹಲದಲ್ಲೋ ಅಷ್ಟೇ ಕೊಂಕಿನಲ್ಲಿ. 'ನಿನ್ನ ಮಲತಾಯಿ ಗಂಡ ಹೇಳಿದಂತೆ ಕೇಳಿ ನಡೆದುಕೊಳ್ಳುವ ಗೃಹಿಣಿ ಇರಬೇಕಲ್ಲವೇ? ಪ್ರತಿನಿತ್ಯ ಹೊಸ ಹೊಸ ಅಡುಗೆಗಳನ್ನು ಮಾಡಿ ಗಂಡನಿಗೆ ಉಣಿಸಿ ಜಠರ ಮುಖೇನ ನಿನ್ನ ಅಪ್ಪನನ್ನು ಗೆದ್ದಿದ್ದಾಳಲ್ಲವೆ? ತನ್ನದೇ ಜೀವನವೊಂದು ಬೇಕೆಂಬ ನನ್ನಲ್ಲಿರುವ ಸ್ವಾರ್ಥ ಅವಳಲ್ಲಿ ಇಲ್ಲವೇ ಇಲ್ಲ ಅಲ್ಲವೇ?'
ತನ್ನ ಮಲತಾಯನ್ನು ಪೆದ್ದಳೆಂದು ಕಾಣುವ ಈ ವಿನೋದದ ಮಾತುಕತೆಯಲ್ಲಿ ಆರಾಮಾಗಿ ಮಗನೂ ಪಾಲ್ಗೊಳ್ಳುತ್ತಾನೆ. ಫ್ರಿಜ್ ನಲ್ಲಿರುವ ತಂಗಳನ್ನ ತಾನೀಗ ತಿನ್ನ ಬೇಕಾಗಿಲ್ಲ. ಅಷ್ಟೇ ಸಾಕು. ಹೀಗೆ ಹೇಳುತ್ತಲೇ ತಾ ಕಾರನ್ನು ಚಲಿಸುವ ಮಾರ್ಗವನ್ನು ಅವನು ಬದಲಿಸಲು ಒತ್ತಾಸುತ್ತಾ, ಇನ್ನೂ ಹತ್ತಿರದ ದಾರಿಗಳನ್ನು ವಿವರಿಸುತ್ತ ತನ್ನ ಟೆನ್ ಚಿತ್ರದ ಮುಖ್ಯ ಪಾತ್ರಯಜಮಾನಿಕೆಯನ್ನು ತಾಯಮೇಲೆ ಹೇರಲು ವ್ಯರ್ಥ ಪ್ರಯತ್ನ ಮಾಡುತ್ತಾನೆ. ಅಪ್ಪನಿಗೆ ಸರಿಯಾದ ಮಗ. ಎಲ್ಲ ಗಂಡುಗಳಂತೆ ಇನ್ನೊಂದು ಗಂಡು. ಆದರೆ ತನಗೆ ಪ್ರಿಯನಾದ ತನ್ನ ಕೂಸು.
ಕತೆಯೇನೋ ಕೊನೆಯಾಗುವುದೇ ಇಲ್ಲ. ಇದು ಶಿಖರವಿಲ್ಲದ ಕಟ್ಟಡ. ಆಗುವದಕ್ಕೆಲ್ಲಾ ಅನುವಾಗುವುದೇ ಇಲ್ಲಿ ನಿರ್ದೇಶಕನಲ್ಲದ ನಿರ್ದೇಶಕನ ಕಲೆ. ಇಷ್ಟೇ ಬಿಚ್ಚುತ್ತಾ ಹೆಚ್ಚುತ್ತಾ ಹೊಂದುತ್ತಾ ಹೋಗುವುದೇ ಇಲ್ಲಿಯ ಕಥನ. ತಮ್ಮೊಳಗೆ ತಾವಿರುವ ಹೆಣ್ಣಿನ ಒಳ ಮನಸ್ಸನ್ನು ನಾವು ಇಣುಕಿ ನೋಡುತ್ತೇವೆ. ಓರೆ ನೋಟಗಳಿಗಷ್ಟೇ ಅವಕಾಶವಿರುವ ಕಥನದಲ್ಲಿ ಅಲಂಕಾರವಿಲ್ಲ. ನಿಯಂತ್ರಣಗಳಿಲ್ಲ. ಒತ್ತಾಯಗಳಿಲ್ಲ. ನಾವು ಕಥನದ ಭಾವೋದ್ವೇಗಗಳಿಗೆ ಹೀಗೇ ಸ್ಪಂದಿಸಬೇಕೆಂದು ಜುಲುಮೆ ಮಾಡುವ ಹಿನ್ನೆಲೆಯ ಸಂಗೀತ ಕೂಡ ಇಲ್ಲ. ಕಾರು ಚಲಿಸುವಾಗ ಒಂದು ಹಂಪ್ ಅನ್ನು ಅದು ಹತ್ತಿ ಇಳಿದಾಗ ಆಗುವ ಶಬ್ದವೇ ಭಾವ ಪಲ್ಲಟಗಳನ್ನು ಸೂಚಿಸುವಂತೆ ಇರುತ್ತದೆ. ಹೀಗೆ ನಾವು ಕಾಣುತ್ತಾ ಹೋಗುವುದು ತನ್ನಲ್ಲೇ ಕಾಣ್ಕೆಯಾಗಿಬಿಡುವುದು ಈ ಚಿತ್ರದ ಒಂದು ಸೋಜಿಗ.
ಈ ಚಿತ್ರವನ್ನು ನೋಡುವುದಕ್ಕಿಂತ ಒಂದು ದಿನ ಮುಂಚೆ ನಾನು ಡಾ. ಆಶಾದೇವಿ ಬರೆದ 'ಸ್ತ್ರೀಮತವನ್ನುತ್ತರಿಸಲಾಗದೆ..' ಎನ್ನುವ ಪುಸ್ತಕವನ್ನು ಬಿಡುಗಡೆ ಮಾಡುತ್ತಾ ಸ್ತ್ರೀ ಲೋಕದ ಪ್ರಜ್ಞೆಗೆ ಸ್ಪಂದಿಸಲು ಪ್ರಯತ್ನಿಸಿದ್ದೆ. ಈ ಪುಸ್ತಕದ ಮೂರು ಒಳ್ಳೆಯ ಲೇಖನಗಳು ನನ್ನನ್ನು ಬಹುವಾಗಿ ಕಾಡಿದ್ದವು. ಈ ಮೂರರಲ್ಲಿ ನನಗೆ ತುಂಬ ಇಷ್ಟವಾದದ್ದು ಡಾ.ಆಶಾದೇವಿಯವರು ವೈದೇಹಿಯವರ ಮೇಲೆ ಬರೆದದ್ದು. ವೈದೇಹಿಯವರ ಆರ್ದ್ರ ಗರ್ವದ ಬರೆವಣಿಗೆ, ಸವಿತಾ ನಾಗಭೂಷಣರ ಆಗುವುದಕ್ಕೆಲ್ಲಾ ಅನುವಾಗುವ 'ಸ್ತ್ರೀಲೋಕ'ದ ಬರೆವಣಿಗೆ, ಪ್ರತಿಭಾ ನಂದಕುಮಾರರ ಅನನ್ಯವಾದ ತುಂಟುಬಿಡುಗಡೆಯ ಧಾಟಿ ನನ್ನ ಮನಸ್ಸಿನಲ್ಲಿ ಈ ಸಿನಿಮಾವನ್ನು ನೋಡುವಾಗ ಇತ್ತು. ಹೀಗಾಗಿ ಅಬ್ಬಾಸ್ ಕಿರೋಸ್ತಾವಿಯೂ ನನ್ನ ಮನಸ್ಸಿನಲ್ಲಿ ಬೆಳೆದ; ನಮ್ಮ ಲೇಖಕಿಯರೂ ಅಬ್ಬಾಸ ಕಿರೋಸ್ತಾವಿಯ ಜತೆ ನನ್ನ ಮನಸ್ಸಿನಲ್ಲಿ ಬೆಳೆಯುತ್ತಾ ಹೋದರು. ಈ ಅನುಭವದಲ್ಲಿ ಗಿರೀಶ್ ಕಾಸರವಳ್ಳಿಯೂ ಅಡೂರ್ ಗೋಪಾಲಕೃಷ್ಣನ್‌ರೂ ಹೋಲಿಕೊಂಡೂ ಭಿನ್ನರಾಗಿಯೂ ಇದ್ದರು.
ಇಂಥ ಅನುಭವದ ನಂತರ ಜೋಹರ್ ನ ತನ್ನ ಶೀರ್ಷಿಕೆಯಲ್ಲೂ ಅತ ಿಉದ್ದವಾದ ಬಾಲಿವುಡ್ ಸಿನಿಮಾ ನಮ್ಮ ಮನಸ್ಸಿನ ಸೂಕ್ಷ್ಮಗಳನ್ನು ಜಡ್ಡುಗೊಳಿಸುವ ಕಮರ್ಷಿಯಲ್ ಹುನ್ನಾರ ಎನಿಸಿತು. ಅಬ್ಬಾಸ್ ಕಿರೋಸ್ತಾಮಿಯ ಈ ಅಪೂರ್ವ ಕಲಾಕೃತಿಯಲ್ಲೂ ಸಮಸ್ಯೆಗಳಿಲ್ಲವೆಂದಲ್ಲ. ಹೊಳೆಯದೇ ಹೋದರೆ ಸಪ್ಪೆಯಾಗಬಹುದಾದ ಅತಿಸಂಕುಚಿತ ವಿವರಗಳೂ, ಪುನರಾವರ್ತನೆಯೆನ್ನಿಸಬಹುದಾದ ಸ್ಥಿರ ಡಿಜಿಟಲ್ ಕ್ಯಾಮರಾ ಹಿಡಿಯುತ್ತಾ ಹೋಗುವ ವಿಸ್ತಾರಗಳೂ ಇಂತಹ ಕಲಾಕೃತಿಗಳು ಎದುರಿಸುವ ಅಪಾಯಗಳು. ಆಗುವುದಕ್ಕೆ ಅನುವಾಗುವ ಇಂತಹ ಕಲೆಯಲ್ಲಿ ಕಣ್ಣಿಗೆ ಕಂಡದ್ದು ಅದೃಷ್ಟವಶಾತ್ ಕಾಣ್ಕೆಯಾಗುತ್ತದೆ. ಆದರೆ ಅತಿನಿರ್ಮಿತವೂ ನಿಯೋಜಿತವೂ ಭಾವೋದ್ವೇಗಗಳನ್ನು ಹೊಂಚಿ ಸಾಧಿಸುವಂಥದೂ ಆದ ಆಕ್ರಮಣಶಾಲಿಯಾದ ಕೃತಕ ಸಿನಿಮಾಗಳಲ್ಲಿ ಪ್ರೇಕ್ಷಕನೂ ಬಳಸಿ ಬಿಸಾಕಿದ ಇನ್ನೊಂದು ಪದಾರ್ಥವಾಗಿರುತ್ತಾನೆ.
*epiphany= a usually sudden manifestation or perception of the essential nature or meaning of something , an intuitive grasp of reality through something (as an event) usually simple and striking, an illuminating discovery, realization, or disclosure, a revealing scene or moment

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
Image CAPTCHA
Copy the characters (respecting upper/lower case) from the image.