
ಸುಮಾರು ಮುವ್ವತ್ತು ವರ್ಷಗಳಿಗೂ ಹೆಚ್ಚು ಕಾಲದ ನನ್ನ ಮಿತ್ರ ಅಯ್ಯಪ್ಪ ಪಣಿಕ್ಕರ್ (1930-2006) ಮೊನ್ನೆ ಕಣ್ಮರೆಯಾದರು. ಕೆಲವು ದಿನಗಳ ಹಿಂದೆ, ಅವರಿಗೆ ಏನೇನೂ ಮೈಯಲ್ಲಿ ಸರಿಯಿಲ್ಲವೆಂದು ಕೇಳಿ ಫೋನ್ ಮಾಡಿದ್ದೆ. ಅವರ ಮಗಳು ಫೋನ್ ತೆಗೆದುಕೊಂಡರು. ಅಪ್ಪನಿಗೆ ಮಾತಾಡುವುದು ಕಷ್ಟವೆಂದರು; ಎಚ್ಚರವಾಗಿದ್ದಾರೆ ಎಂದರು. ನಾನು ಕರೆದೆನೆಂದು ಅವರಿಗೆ ಹೇಳಿ ಎಂದೆ.
ಅವರು ಫೋನ್ ತೆಗೆದುಕೊಂಡಿದ್ದರೆ ನಾನು ಏನು ಹೇಳಬಹುದಿತ್ತು...?
ಯಾವ ಹಿತವಾದ ಸುಳ್ಳನ್ನೂ ಪೊಳ್ಳು ಭರವಸೆಗಳನ್ನೂ ಪರಸ್ಪರ ಹೇಳಿಕೊಳ್ಳದ ಸ್ನೇಹ ನಮ್ಮದು. ಶಾಂತಿನಾಥ ದೇಸಾಯರು ಸಾಯುತ್ತಿದ್ದಾಗಲೂ ಹೀಗೇ ಆಗಿತ್ತು. ಫೋನ್ ತೆಗೆದುಕೊಂಡರು; ನನಗೆ `ಬೇಗ ಗುಣವಾಗಿ' ಇತ್ಯಾದಿ ಯಾವ ಹಿತವಾದ ಸುಳ್ಳುಗಳನ್ನು ಹೇಳಲು ಅವಕಾಶ ಕೊಡದಂತೆ ಆಕ್ಸಿಜನ್ ಸೇವನೆಯನ್ನು ಕ್ಷಣ ನಿಲ್ಲಿಸಿ ಮೃದು ಸ್ನೇಹದಲ್ಲಿ ಅಂದರು: `ಎಷ್ಟು ದಿನ ಬದುಕಿರುತ್ತೇನೆ ಎಂಬುದು ಈಗ ಮುಖ್ಯವಾಗಿ ಉಳಿದಿಲ್ಲ; ಉಳಿದ ಕಾಲದಲ್ಲಿ ಬದುಕನ್ನು ಎಷ್ಟು ಅರ್ಥಪೂರ್ಣವೆನ್ನಿಸುವಂತೆ ಬಳಸುತ್ತೇನೆ ಎಂಬುದಷ್ಟೇ ನನಗೀಗ ಉಳಿದಿರುವುದು'. ಇಂಗ್ಲಿಷಿನಲ್ಲಿ ಅವರು ಹೇಳಿದ ಈ ಮಾತು ಇನ್ನೂ ಹಗುರಾಗಿತ್ತು; ನನ್ನನ್ನೂ ಹಗುರಗೊಳಿಸುವಂತಿತ್ತು.
ಮಾತಾಡಲು ಸಾಧ್ಯವಿದ್ದಿದ್ದರೆ ಅಯ್ಯಪ್ಪ ಪಣಿಕ್ಕರ್ ಏನಾದರೂ ಜೋಕು ಮಾಡುತ್ತ ಇದ್ದರೋ ಏನೋ-ಉಸಿರಾಡಲಾರದ ತನ್ನ ಸ್ಥಿತಿಯ ಬಗ್ಗೆಯೇ. ಕಾಣಲು ಪುಟಾಣಿಯಾಗಿದ್ದ, ಆದರೆ ಆಳವಾದ ಹಿತವಾದ ಧ್ವನಿಯನ್ನು ಪಡೆದ ಅವರ ಗಂಟಲಿನಿಂದ ಬರಬಹುದಾಗಿದ್ದ ಮಾತನ್ನು ಊಹಿಸಿ ನಾನು ಸುಮ್ಮನಾದೆ.
ಕೊಟ್ಟಾಯಂನ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯದಲ್ಲಿ ಸಿಂಡಿಕೇಟಿನ ಸದಸ್ಯರಾಗಿದ್ದ ಪಣಿಕ್ಕರ್, ನನ್ನ ಕುಲಪತಿ ನಿರ್ವಹಣೆಯ ಕಾಲದ ಧರಣಿ-ಬಿಕ್ಕಟ್ಟುಗಳನ್ನು ಇವು ಕೇರಳದ ವಿಶಿಷ್ಟ ಬೀದಿನಾಟಕವೆಂದು ಕಾಣುವಂತೆ ಸಾಮಾನ್ಯಗೊಳಿಸಿ, ನಗಿಸಿ, ಹಗುರಗೊಳಿಸುತ್ತಿದ್ದರು. ನಾನು ಲೇಖಕನೆಂಬುದನ್ನು ಮರೆಯಗೊಡದಂತೆ ನೋಡಿಕೊಂಡರು. ಸಾಹಿತ್ಯ ಅಕಾಡೆಮಿಯಲ್ಲಿ ನಾನು ಅಧ್ಯಕ್ಷನಾಗಿದ್ದಾಗ ಮುತುವರ್ಜಿಯಿಟ್ಟು ಮಾಡಬೇಕಾದ ಸಂಶೋಧನಾತ್ಮಕ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ತನ್ನನ್ನು ಟೀಕಿಸುವ ಮಲೆಯಾಳಿ ಲೇಖಕರ ಬಗ್ಗೆಯೂ ನಿಷ್ಪಕ್ಷಪಾತವಾದ ಅಭಿಪ್ರಾಯವನ್ನು ಕೊಡುತ್ತಿದ್ದರು.
ಬಿಳಿಯ ಮುಂಡನ್ನು ಉಟ್ಟು, ಹಣೆಯ ಮೇಲೆ ಗಂಧದ ಬೊಟ್ಟನ್ನು ತೊಟ್ಟು ಬಿಳಿಯ ಕುರುಚುಲು ಗಡ್ಡದಲ್ಲಿ ನಾಚಿ ಯಾವತ್ತೂ ನಗುತ್ತಲೇ ಮಾತಾಡುವ, ಕಣ್ಣು ಮಿಟುಕಿಸಿ, ಏನಾದರೂ ಪನ್ ಮಾಡಿ, ಕಂಡದ್ದನ್ನು ಕೊಂಚ ತಿರುಗು ಮುರುಗು ಮಾಡಿ ನಾವು ಇನ್ನೊಂದು ಬಗೆಯಲ್ಲಿ ಅದನ್ನೇ ಕಾಣುವಂತೆ ಮಾಡುವ, ಯಾವತ್ತೂ ಇತರರ ಮೇಲೆ ತನ್ನನ್ನು ಒಡ್ಡಿಕೊಳ್ಳದ, ಹೇರಿಕೊಳ್ಳದ ಈ ಪುಟಾಣಿ ಮನುಷ್ಯ ದೇಹದಲ್ಲಿ ಎಂದೂ ತೋರವಾಗದಂತೆ ಚುರುಕಾಗಿ ಓಡಾಡಿಕೊಂಡು ಮಿತಾಹಾರಿಯಾಗಿದದ ವರು. ಅವರ ಗೆಳೆಯರೆಲ್ಲರೂ ಕುಡಿದು ಉಂಡು ದೀರ್ಘ ಚರ್ಚೆಯಲ್ಲಿ ಇಡೀ ರಾತ್ರೆಯನ್ನು ಕಳೆಯುವರಾದರೆ, ಅಯ್ಯಪ್ಪ ಅವರ ನಡುವೆ ಎಲ್ಲವನ್ನೂ ನೋಡುತ್ತ ಕೂತಿದ್ದು ಬೇಗ ಮನೆ ಸೇರುವ ಮನುಷ್ಯ. ಅವರ ಅಭಿಮಾನಿಗಳಲ್ಲಿ ಕೆಲವರು ತಮಾಷೆಗೆ ಹೇಳುವುದು: `ನಮ್ಮ ಅಯ್ಯಪ್ಪ ಕೇರಳದಲ್ಲಿ ಮಾತ್ರ ಕುಡಿಯುವುದಿಲ್ಲ!' ಇನ್ನು ಕೆಲವರು ಅವರ ಕಿವಿಗೆ ಬೀಳದಂತೆ ಹೇಳುತ್ತ ಇದ್ದುದು: `ಇಂಡಿಯಾದಲ್ಲಿ ಎಲ್ಲೂ ಕುಡಿಯುವುದಿಲ್ಲ. ಅದು ಅವರ ವ್ರತ.' ಅವರ ಜೊತೆ ಯೂರೋಪನ್ನೂ ಸುತ್ತಿದ ನನಗೆ ನಿಜ ತಿಳಿದಿತ್ತು; ಆದರೆ ಬಾಯಿಬಿಟ್ಟಿದ್ದಿಲ್ಲ. ಯಾಕೆಂದರೆ ತಾವರೆಯ ಎಲೆಯ ಮೇಲಿನ ನೀರಿನಂತೆ ಯಾವುದಕ್ಕೂ ಅಂಟಿಕೊಳ್ಳದ ಮನುಷ್ಯ ಈ ಅಯ್ಯಪ್ಪ.
ಹಣೆಯ ಮೇಲೆ ಗಂಧ ತೊಟ್ಟು ಆಗಷ್ಟೇ ಸ್ನಾನ ಮಾಡಿಬಂದವರಂತೆ ಶುಭ್ರ ಬಿಳಿಬಟ್ಟ್ಟೆಯಲ್ಲಿ ಕಾಣುತ್ತ ಇದ್ದ ಅಯ್ಯಪ್ಪ ಮತೀಯವಾದಿಯಲ್ಲ; ದೇವರ ಅಗತ್ಯವಿಲ್ಲದ ಅಧ್ಯಾತ್ಮದ ಹುಡುಕಾಟದಲ್ಲಿದ್ದ ಆಧುನಿಕ ಭಾರತೀಯರಲ್ಲಿ ಒಬ್ಬರು. ಕೇರಳದ ಅಪ್ಪಟ ಸ್ಥಳೀಯ ಊಟವನ್ನೂ ವೇಷ ಭೂಷಣಗಳನ್ನೂ ಬಿಡದಂತೆಯೇ ವೈಚಾರಿಕತೆಯಲ್ಲೂ ಕಾವ್ಯ ಸಂವೇದನೆಯಲ್ಲೂ ಆಧುನಿಕವಾಗಿ ಇದ್ದದ್ದು ಅಯ್ಯಪ್ಪ ಪಣಿಕ್ಕರ್‌ರ ಹೆಚ್ಚುಗಾರಿಕೆ.
ಬಲು ಸೂಕ್ಷ್ಮವಾದ ಕಿವಿ ಅಯ್ಯಪ್ಪ ಪಣಿಕ್ಕರ್‌ರದು. ಒಮ್ಮೆ ಮೈಸೂರಿನ ನಮ್ಮ ಮನೆಯಲ್ಲಿ ಕೂತು ಅದೂ ಇದೂ ಹರಟುತ್ತಿದ್ದಾಗ `ಈಚೆಗೇನಾದರೂ ಒಳ್ಳೆಯದೊಂದು ಪದ್ಯ ಬಂದಿದೆಯೆ?' ಎಂದು ನನ್ನನ್ನು ಕೇಳಿದರು. ಅಡಿಗರ ಎಲ್ಲ ಪದ್ಯಗಳನ್ನೂ ಭಾಷಾಂತರಿಸುತ್ತಲೇ ಅವರಿಗೆ ಓದಿದ್ದ ನಾನು ಆಗ ತಾನೇ ಪ್ರಕಟವಾಗಿದ್ದ ಅಡಿಗರ `ಮೂಲಕ ಮಹಾಶಯರು' ಎನ್ನುವ ಪದ್ಯವನ್ನು ಓದಿದೆ. ಈ ಪದ್ಯದ ಸಂದರ್ಭ ನೆನೆಯಬೇಕು. ಮುಖ್ಯಮಂತ್ರಿ ದೇವರಾಜ ಅರಸರು ಕಷ್ಟದಲ್ಲಿದ್ದ ಅಡಿಗರಿಗೆ ಮಾಸಾಶನವನ್ನು ಕೊಡುವ ನಿರ್ಧಾರ ಮಾಡಿದ್ದರು. ಅಡಿಗರು ಅದನ್ನು ಒಪ್ಪಿಕೊಂಡಿದ್ದರು. ಅಡಿಗರಿಗೆ ಅದನ್ನು ಕೊಡುವುದು ದೇವರಾಜ ಅರಸರಿಗೆ ಸುಲಭದ ಕೆಲಸವಾಗಿರಲಿಲ್ಲ. `ನಿಮ್ಮನ್ನು ಸತತವಾಗಿ ಟೀಕಿಸುವ ಅಡಿಗರಿಗೆ ಏಕೆ ಅದನ್ನು ಕೊಡುತ್ತಿದ್ದೀರಿ?' ಎಂದು ಹಿಂಬಾಲಕರು ಗೊಣಗಿದಾಗ ಅರಸರು ಹೇಳಿದರಂತೆ- `ಹೊಗಳು ಭಟ್ಟರ ನಡುವೆ ನಮ್ಮನ್ನು ಸೀರಿಯಸ್ಸಾಗಿ ಟೀಕಿಸುವ ಅಡಿಗರಂಥವರು ಇರುವುದು ದೇಶದ ಪುಣ್ಯವಲ್ಲವೆ?' ಆದರೆ ಅಡಿಗರ ಅಭಿಮಾನಿಗಳಲ್ಲಿ ಕೆಲವರು ಅಡಿಗರನ್ನು ಟೀಕಿಸಿ ಪತ್ರಿಕೆಗಳಿಗೆ ಬರೆದರು. ಎಲ್ಲ ಬಗೆಯ ಸರ್ಕಾರೀಕರಣವನ್ನು ಟೀಕಿಸುತ್ತ ಬಂದ ಅಡಿಗರು ಈ ಮಾಶಾಶನ ಪಡೆಯುವುದು ಸರಿಯೆ? ಹೀಗೆ ಟೀಕಿಸಿದವರು ಪ್ರತಿ ತಿಂಗಳು ತಪ್ಪದೆ ಸಂಬಳ ತೆಗೆದುಕೊಳ್ಳುತ್ತಿದ್ದ ಪೆನ್ಷನ್ ಗ್ಯಾರಂಟಿಯಾಗಿದ್ದ ಕ್ರಾಂತಿಕಾರರು. ಆಗ ಅಡಿಗರು ಅವರಿಗೆ ಉತ್ತರವಾಗಿ ಬರೆದ ಪದ್ಯ ಅದು.
ತನಗೆ ಮಾಡಲಾರದ್ದನ್ನು ಇನ್ನೊಬ್ಬರ ಮೂಲಕ ಮಾಡಿಸಿ ಖುಷಿ ಕಾಣುವುದರ ಬಗ್ಗೆ (ವಾಯೂರಿಸಂ/ಪೀಪಿಂಗ್ ಟಾಮ್, ಅಂದರೆ `ಮೂಲಕ ಮಹಾಶಯ'ತನದ ಬಗ್ಗೆ) ಇರುವ ಈ ಪದ್ಯ ವ್ಯಂಗ್ಯವನ್ನು ಮೀರಿ ಫಿಲಸಾಫಿಕಲ್ ಆಗುತ್ತದೆ. ಕೊನೆಯ ಭಾಗದಲ್ಲಿ ತನ್ನದೇ ರುಚಿಯ ವಿಶಿಷ್ಟತೆಯ, ಅದು ಇದಾಗಲಾರದ, ಯಾವುದೂ ಇನ್ನೊಂದು ಆಗಬಾರದ ತರಕಾರಿಗಳ, ಹಣ್ಣುಗಳ, ಇಡೀ ಸಸ್ಯ ಜಗತ್ತಿನ ಇಮೇಜುಗಳು ಬರುತ್ತವೆ. ಯಾವ ಸೊಗಸಿನ ಹೂವನ್ನೂ ರುಚಿಯ ಹಣ್ಣನ್ನೂ ಪಡೆಯದ, ಅನಾಕರ್ಷಕ ತೇಗ (ತ್ಯಾಗವೂ) ಕಾಲದ ಸಮಾಧಾನದಲ್ಲಿ ಬಲಿತು ಗಟ್ಟಿಯಾದ ಭದ್ರವಾದ ಮೇಜು ಕುರ್ಚಿಗಳಾಗುವುದನ್ನು ಕೊನೆಯ ಸಾಲುಗಳು ಹೇಳುತ್ತ್ತವೆ.
ಅಯ್ಯಪ್ಪ ಈ ಪದ್ಯವನ್ನು ಎರಡು ಬಾರಿ ವಿವರಣೆಯ ಸಹಿತ ನನ್ನಿಂದ ಕೇಳಿಸಿಕೊಂಡರು. ಕೊನೆಯ ಭಾಗದ ಸಸ್ಯ ಲೋಕದ ವೈವಿಧ್ಯದ ಇಮೇಜರಿ ಅವರಿಗೆ ಅದೆಷ್ಟು ಹಿಡಿಸಿತೆಂದರೆ ಕನ್ನಡದಲ್ಲಿ ಅವರು ಆಲಿಸಿದ್ದನ್ನೇ ಮಲೆಯಾಳಂನಲ್ಲೂ ಆಲಿಸಿಕೊಂಡವರಂತೆ ನನ್ನೆದುರೇ ಅದನ್ನು ಅನುವಾದಿಸಿ ಓದಿದರು. ಇದೊಂದು ಮನಸ್ಸಿನಿಂದ ಮನಸ್ಸಿಗೆ ಮಾತ್ರವಲ್ಲದೆ ಒಂದು ಭಾಷೆಯ ಕಿವಿಯಿಂದ ಇನ್ನೊಂದು ಭಾಷೆಯ ಕಿವಿಗೂ ಆದ ಬೆರಗಿನ ಅನುವಾದ. ತಾನು ಮೆಚ್ಚಿದ್ದನ್ನು ತಾನೇ ಬರೆದಂತೆ ಭಾವಿಸಬಲ್ಲ ಧಾರಾಳ ಅಯ್ಯಪ್ಪ ಪಣಿಕ್ಕರ್‌ಗೆ ಇತ್ತು.
***
ಅಯ್ಯಪ್ಪ ಪಣಿಕ್ಕರ್ ಬಗ್ಗೆ ಮಾತಾಡಲು ತೊಡಗಿದರೆ ಅವರ ಬಗ್ಗೆ ಮಾತ್ರ ಮಾತಾಡುವುದು ಸಾಧ್ಯವಾಗದು. ಅವರ ಸಹವಾಸವೆಂದರೆ ಒಂದು ಇಡೀ ಸಹಯೋಗದ ಕುಟುಂಬದ ಜೊತೆಗಿನ ಸಹವಾಸ. ಐವತ್ತರ ದಶಕದ ಕೊನೆಯಲ್ಲಿ ಯಾವ ಸಂಸ್ಥೆಯ ಸಹಾಯವೂ ಇಲ್ಲದೆ ಸ್ವಪ್ರೇರಿತವಾಗಿ ಹುಟ್ಟಿಕೊಂಡು ನಮ್ಮನ್ನು ಒಟ್ಟುಮಾಡಿದ ಕೆಲವು ಮಂದಿಯನ್ನು- ಗೋವಿಂದನ್, ಪಣಿಕ್ಕರ್, ವಿಜಯನ್, ಅಡಿಗ ಇಂಥವರನ್ನು- ಅಡಿಗರ ಮಾತಿನಲ್ಲಿ ನಮ್ಮ ಕಾಲದ `ಸೇಕಡಾ ಏಳರ ಖಳರು' ಎಂದು ಯಾಕೆ ಕರೆಯುತ್ತೇನೆ ಹೇಳುವೆ.
ಸೇಕಡಾ ಏಳರ ಖಳರು ಮಾತ್ರ ಅಷ್ಟಿಷ್ಟಕ್ಕೆ ಮಣಿವ ಕುಳಗಳಲ್ಲ.
ನಾಸಿಕಾಗ್ರದ ದೃಷ್ಟಿ ಬಿಡುವರಲ್ಲ
ತರ್ಜನ, ಗರ್ಜನ, ಮಿದುಳ ಮಾರ್ಜನ, ಶಿರಚ್ಛೇದನಕ್ಕೂ ತಗ್ಗಿ ನಡೆವರಲ್ಲ.
ಇಲ್ಲಿಂದ ವೈಕುಂಠಪುರಕ್ಕೆ ಹೋಗುವ ಕಾಲುದಾರಿ ಗುಟ್ಟನು ಬಲ್ಲ ಭ್ರಷ್ಟ ಜನರು.
ಅಡಿಗರ `ಗೊಂದಲಪುರ'ದಲ್ಲಿ ಬರುವ ಈ ಸಾಲುಗಳು ಐವತ್ತರ ದಶಕದ ಕೊನೆಯಲ್ಲಿ ನಮಗೆಲ್ಲರಿಗೂ ಮುಖ್ಯವೆನ್ನಿಸಿದ್ದ ಒಂದು `ರಾಜಕೀಯ ಸಾಂಸ್ಕೃತಿಕ ಘೋಷಣೆ'. ಆ ಕಾಲದ ಮಹತ್ವದ ಇತಿಹಾಸಕಾರನಾದ ಟಾಯ್ನ್‌ಬಿಯನ್ನು ನಾವೆಲ್ಲರೂ ಬಹಳ ಆಸೆಪಟ್ಟು ಓದುತ್ತಿದ್ದೆವು. ಟಾಯ್ನ್‌ಬಿಯ ಪ್ರಕಾರ ಒಂದು ನಾಗರಿಕತೆ ಅವನತಿಯ ಸ್ಥಿತಿಯನ್ನು ಮುಟ್ಟಿದಾಗ ಆ ಸಮಾಜಗಳಲ್ಲಿ ಒಂದು Internal proletariat (ಆಂತರಿಕ ಶ್ರಮಜೀವಿ ಸಮುದಾಯ) ಇರುತ್ತದೆ ಎನ್ನುತ್ತಾನೆ. ರೋಮನ್ ಚಕ್ರಾಧಿಪತ್ಯ ಅವನತಿಯಲ್ಲಿದ್ದಾಗ ಯೇಸು ಕ್ರಿಸ್ತ ಮತ್ತು ಅವನ ಸಂಗಡಿಗರು ಈ ಬಗೆಯ Internal proletariat. ಬ್ರಿಟಿಶ್ ಸಾಮ್ರಾಜ್ಯದಲ್ಲಿ ಗಾಂಧಿ ಮತ್ತು ಅವರ ಅನುಯಾಯಿಗಳು ಕ್ರಿಸ್ತ ಮಾಡಿದ್ದನ್ನೇ ಮಾಡಿದವರು. ಒಂದು ನಾಗರಿಕತೆಯನ್ನು ಉಳಿಸುವವರು ಈ ಒಳಗಿನ ದಮನಿತ ಜನ. ಬಹುಮತದ ಜತೆ ಗುರುತಿಸಿಕೊಳ್ಳದೆ ಅಲ್ಪಮತೀಯರಾಗಿ ತಮ್ಮಲ್ಲೇ ದೊಡ್ಡ ಸತ್ಯಗಳನ್ನು ಬಚ್ಚಿಟ್ಟುಕೊಂಡು ಹೊಸ ಶಕೆಯನ್ನು ಪ್ರಾರಂಭಿಸಬಲ್ಲ ಶಕ್ತರು ಇವರು. ಈ ಜನರನ್ನು Creative minority ಎಂದು ಟಾಯ್ನ್‌ಬಿ ಅಲ್ಲದೆ ಇ. ಎಂ. ಫಾರ್‌ಸ್ಟರ್‌ನಂಥ ಲೇಖಕರೂ ಭಾವಿಸುತ್ತಿದ್ದರು. ಎಲಿಯಟ್ ಕೂಡಾ. ಇದು ಕ್ರಿಯೇಟಿವ್ ಮೈನಾರಟಿ ಅಥವಾ ಇದಕ್ಕೆ ವಿರೋಧವಾಗಿ ಭಾರತದ ಜಾತಿ ಪದ್ಧತಿಯಲ್ಲಿ ಆದಂತೆ ಡಾಮಿನೆಂಟ್ ಮೈನಾರಿಟಿಯೂ, ತಾನು ಕ್ರಿಯೇಟಿವ್ ಮೈನಾರಟಿ ಎಂಬ ಸೋಗು ಹಾಕಬಹುದು. (ಇದು ಲೋಹಿಯಾರಿಂದ ನಾವು ಕೆಲವರು ಪಡೆದಿದ್ದ ಸೂಕ್ಷ್ಮ. ಈ ಸೂಕ್ಷ್ಮವನ್ನು ಕೆಲವೊಮ್ಮೆ ಎಲಿಯಟ್ ಗಮನಿಸದೆ ಮಾತಾಡುವುದೂ ಇದೆ.) ಮೊದಲನೆಯದು ಹೊಸದನ್ನು ಸೃಷ್ಟಿಸುವಂಥದು. ಎರಡನೆಯದು ಸೃಜನಶೀಲತೆಯನ್ನು ನಾಶ ಮಾಡಿ ಬಹುಜನ ಸಮುದಾಯವನ್ನು ತುಳಿಯುವ ಹುನ್ನಾರದ್ದು. ಹಾಗೆಯೇ ಬಹುಜನ ಸಮಾಜ ಕ್ರಿಯೇಟಿವ್ ಮೈನಾರಿಟಿಯ ತಪಸ್ಸಿನ ಶಕ್ತಿಯನ್ನು ಪೋಷಿಸಿ ಬೆಳೆಸಲೂ ಬಹುದು- ಗಾಂಧಿಯನ್ನು ಬೆಳೆಸಿದಂತೆ. ಹಾಗೆಯೇ ದಿಕ್ಕು ತಪ್ಪಿ ಹಿಟ್ಲರ್‌ರಂಥವರ ಮೋಡಿಗೆ ಬಲಿಯಾಗಿ ಸಮೂಹ ಸನ್ನಿಗೂ ಕಾರಣವಾಗಬಹುದು. ಸ್ಟಾಲಿನ್‌ನನ್ನು ಸಹಿಸಿಕೊಳ್ಳುವ ಭ್ರಮೆಯದೂ ಆಗಬಹುದು. ಇಂಥವರ ಜೊತೆ ಅಪ್ಪಟ ಕನಸುಗಾರರೂ ಇರಬಹುದು.
ಬೈಬಲ್‌ನ ಹಳೆ ಒಡಂಬಡಿಕೆಯಲ್ಲಿ ನೋಹಾನ ನೌಕೆಯ ಕಥೆ ಬರುತ್ತದೆ. ಪ್ರಳಯದಿಂದ ಜೀವಿಗಳನ್ನು ರಕ್ಷಿಸಲು ನೋಹಾ ಒಂದು ನೌಕೆಯಲ್ಲಿ ಎಲ್ಲ ಜೀವಿಗಳ ಗಂಡು ಹೆಣ್ಣು ಜೋಡಿಯೊಂದನ್ನು ಕಾಪಾಡಿಕೊಂಡು ಪ್ರವಾಹ ಇಳಿಯಲು ಕಾದನಂತೆ.
ಅಗತ್ಯವಾದರೆ ಅಲ್ಪಸಂಖ್ಯಾತರಾಗಿಯೇ ಉಳಿಯುತ್ತೇವೆಂಬ ವ್ರತದ ನಮಗೆ ಆ ದಿನಗಳಲ್ಲಿ ಯಾವ ಜನಪ್ರಿಯ ಲೇಖಕರ ಬಗ್ಗೆಯೂ ಗೌರವವಿರಲಿಲ್ಲ. ಅಂತೆಯೇ ಅರವಿಂದರ ಆಧ್ಯಾತ್ಮಿಕತೆಯನ್ನು ಮಾನವನ ಸತತ ವಿಕಾಸವನ್ನು ಯಾವ ಸ್ವಂತದ ಅನುಭವವೂ ಇಲ್ಲದೆ ಒಪ್ಪುವ ಲೇಖಕರೆಂದರೂ ನಮಗೆ ಅನುಮಾನ. ನೋವಿಲ್ಲದ ಹೆರಿಗೆಯಲ್ಲಿ ನಂಬುವ ಜನರಂತೆ ಇವರು ನಮಗೆ ಕಂಡರು. ಆದ್ದರಿಂದ ಈ ಸೇಕಡಾ ಏಳರ ಖಳರು ತಮ್ಮ ಭೂತ ಕಾಲದ ಅನುಕರಣೆಯಿಂದಲೂ ಸಲೀಸಾದ ಆಧ್ಯಾತ್ಮದಿಂದಲೂ ಮರುಳಾಗದ ಜನರಾಗಿ ನಮಗೆ ಆದರ್ಶವಾಗಿದ್ದರು.
ಈ ಲೇಖನದ ಮುಂದುವರಿದ ಭಾಗ: ಮಲೆಯಾಳೀ ಕವಿತೆಯ 'ಕುಟುಂಬ ಪುರಾಣಂ' ಓದಿ



ಮಣಿಪಾಲದಿಂದ ಫಣಿರಾಜ್ ಕಳುಹಿಸಿದ ಇ-ಮೇಲ್
ಬದುಕು ದೊಡ್ಡದು ಎಂದು ತೋರಿಕೆಗೆ ಎಲ್ಲರೂ ಹೇಳುತ್ತಾರೆ. ಆದರೆ ಬಹಳಷ್ಟು ಜನರಿಗೆ ತಾವು ಒಪ್ಪುವ ವಿಚಾರಗಳ ದೃಷ್ಟಾರರು, ಮಹತ್ವದ ಪ್ರತಿಪಾದಕರ ಬದುಕು ಮಾತ್ರ ಮಹತ್ವದ್ದು, ಉಳಿದಂತೆ ಎಲ್ಲರ ಬದುಕು ಸಾಮಾನ್ಯ. ಆದರೆ ಮನುಷ್ಯರ ಬದುಕನ್ನು ಆದಷ್ಟು ವಾಸ್ತವದಲ್ಲಿ ಕಾಣುವ, ಹಾಗೆ ಕಂಡು ಅದರಿಂದ ಹೊರಟ ತತ್ವ ವಿಚಾರಗಳನ್ನು ಆ ಮನುಷ್ಯರಿಗೆ ಆರೋಪಿತವಾಗಿರುವ ಘೋಷಿತ ಬಾಹ್ಯ ನಿರ್ವಚನಗಳು ನಾಚುವ ಹಾಗೆ ಕಾಣಿಸುವುದು ನಿಜಕ್ಕೂ ಅತ್ಯುತ್ತಮವಾದ ಜೀವನ ಚಿತ್ರ ಮಾತ್ರವಲ್ಲ, ಅನುಷ್ಠಾನಗೊಳ್ಳಲು ಕಾದಿರುವ ಕ್ರೀಯಾಶೀಲ ತತ್ವಶಾಸ್ತ್ರವೂ ಹೌದು.
ಈ ನಮೂನೆಯ ನಿರೂಪಣೆಯ ಮಹತ್ವ ಇರುವುದು, ಅದು ವ್ಯಕ್ತಿಯ ಜೀವನದ ಎಳೆಗಳು ಅಡ್ಡ-ಉದ್ದ ಹೆಣೆದುಕೊಂಡಿರುವುದನ್ನು ಜೀವಂತ ಘಟನಾ ನಿರೂಪಣೆಯಲ್ಲಿ ಸಾಕಾರಗೊಳಿಸುತ್ತಿರುವ ಹೊತ್ತಿನಲ್ಲೇ ದೇಶ-ಕಾಲಗಳ ಸೂಕ್ಷ್ಮವನ್ನೂ ಸಲಿಲವಾಗಿ ಪ್ರಕಟಿಸುವುದರಲ್ಲಿ.
ಇಂತಹ ಬರವಣಿಗೆ ತನ್ನ ಉತ್ತುಂಗದಲ್ಲಿ, ಸಮುದಾಯದ ಸಂಚಿತ ಶಕ್ತಿಯನ್ನು, ವೈಚಾರಿಕವಾಗಿ ನಾವು ಕಾಣಲು ಹಾತೊರೆಯುವ ಸಾಮುದಾಯಿಕ ಬಿರುಕಗಳನ್ನೂ ಏಕಮುಖವಾಗಿ ನೆಚ್ಚಿಕೊಳ್ಳದೆ, ಎರಡರ ತಿಕ್ಕಾಟದಲ್ಲಿ ಕಟ್ಟಿಕೊಳ್ಳುವ-ನಮಗೇ ಅಚ್ಚರಿಯಾಗುವಂತೆ ನಮ್ಮ ಇಚ್ಛಾಶಕ್ತಿಗೇ ಸವಾಲಾಗುವ- ಡೈಯಲೆಕ್ಟಿಕಲ್ ಉಜ್ವಲತೆಯನ್ನು ಸೂಸತೊಡಗುತ್ತದೆ. ಅಯ್ಯಪ್ಪ ಪಣಿಕ್ಕರರನ್ನು ಕುರಿತಾದ ನಿಮ್ಮ ಬರಹಕ್ಕೆ ಈ ಸೃಜನಾ ಗುಣವಿದೆ; ಕಾಲ ಕೃಷವಾಗದೆ ಮತ್ತೆ ಮತ್ತೆ ಓದಬಹುದಾದ ಬರಹವಿದು. ಓದಿ ಬಹಳ ಖುಷಿಯಾಯಿತು.
Post new comment