ಅಯ್ಯಪ್ಪ ಪಣಿಕ್ಕರ್ ಮತ್ತು 'ಸೇಕಡಾ ಏಳರ ಖಳರು' ಲೇಖನದ ಮುಂದುವರಿದ ಭಾಗ
ಕೇರಳದಲ್ಲಿ ಕಮ್ಯುನಿಸ್ಟರ ಸ್ಲೋಗನ್ನುಗಳನ್ನು ಜತೆಗೇ ಕಾಂಗ್ರೆಸ್ಸಿಗರ ಬಹುಜನ ಪೂಸಿಯ (ಪಾಪ್ಯುಲಿಸ್ಟ್) ಪೊಳ್ಳು ಆಶ್ವಾಸನೆಗಳನ್ನೂ ಏಕಕಾಲದಲ್ಲಿ ಟೀಕಿಸುವ ಒಂದು ಲೇಖಕರ ಗುಂಪು ಈ ಕಾಲದಲ್ಲಿಯೇ ಹುಟ್ಟಿಕೊಂಡಿತು. ಇವರೆಲ್ಲರನ್ನೂ ನವ್ಯರೆಂದು ಕರೆಯುವುದು ರೂಢಿಯಾಯಿತು. ಇವರ ಕೇಂದ್ರದಲ್ಲಿ ಇದ್ದುದು ಎಂ. ಗೋವಿಂದನ್ ಎಂಬ ಒಬ್ಬ ವಿಲಕ್ಷಣ ಪ್ರತಿಭೆಯ ಮನುಷ್ಯ. ಈತ ಎಷ್ಟು ತೀವ್ರವಾದ ಎಂ. ಎನ್. ರಾಯ್ ವಾದಿಯೆಂದರೆ ಅವರ ಒಬ್ಬನೇ ಮಗನಿಗೆ ಅವರು ಇಟ್ಟ ಹೆಸರು ಮಾನವೇಂದ್ರನಾಥ.
ಮದ್ರಾಸಿನಲ್ಲಿ ಮಹಡಿಯೊಂದರ ಮೇಲೆ ಇವರ ವಾಸ. ಅಲ್ಲೇ ಸ್ಲಂನಲ್ಲಿ ವಾಸ ಮಾಡುವ ಬಡವರಿಗೆ ಮದ್ದು ಕೊಡುವ ಅವರ ಹೆಂಡತಿಯ ಮೆಡಿಕಲ್ ಪ್ರಾಕ್ಟೀಸ್. ಅವರ ಹೆಂಡತಿಯ ಕೋಣೆಯ ಪಕ್ಕದಲ್ಲಿ ನಾವೆಲ್ಲರೂ ಕೂತು ಶೇಕಡಾ ಏಳರ ಖಳರ ಕೆಲಸವನ್ನು ಮಾಡುವುದು. ಕೇರಳದ ಅತ್ಯಂತ ದೊಡ್ಡ ಪ್ರತಿಭೆಗಳನ್ನೆಲ್ಲಾ ನಾನು ಭೇಟಿಯಾದದ್ದು ಹರಕು ಮುರುಕು ಖುರ್ಚಿಗಳ, ಸುಸ್ತಾದರೆ ಅಡ್ಡಾಗಲು ಒಂದು ಬೆಂಚ್ ಇದ್ದ ಈ ಅಸ್ತವ್ಯಸ್ತ ಹಜಾರದಲ್ಲಿ.
ವಿಚಿತ್ರವಾದ ಸಿನಿಮಾಗಳನ್ನು ತೆಗೆದ ಅರವಿಂದನ್‌ರನ್ನು ನಾನು ನೋಡಿದ್ದು ಅಲ್ಲೇ. ತಾನು ತೆಗೆಯಬೇಕೆಂದಿದ್ದ ಚಿತ್ರಗಳ ಕನಸುಗಳನ್ನು ಕಾಣುತ್ತಿದ್ದ ಅರವಿಂದನ್ ಪ್ರತಿಭೆಯನ್ನು ಅವರ ಎಳೆಯ ವಯಸ್ಸಿನಲ್ಲೇ ಗೋವಿಂದನ್ ಗುರುತಿಸಿ ಬೆಳೆಸುತ್ತಿದ್ದರು. ಯಾರ ಬಳಿಯೂ ಆ ದಿನದ ಊಟಕ್ಕೆ ಬೇಕಾದಕ್ಕಿಂತ ಹೆಚ್ಚು ಕಾಸು ಇರದ ಕಾಲ ಅದು. ಆದರೆ ಯಥೇಚ್ಛವಾಗಿ ಹೊಸ ವಿಚಾರಗಳು ನಮ್ಮನ್ನು ಹುರಿದುಂಬಿಸಿದ್ದವು. ಅಡೂರ್ ಗೋಪಾಲಕೃಷ್ಣನ್‌ರನ್ನು ನಾನು ನೋಡಿದ್ದೂ ಅಲ್ಲೇ. ಅಯ್ಯಪ್ಪ ಪಣಿಕ್ಕರ್, ಓ. ವಿ. ವಿಜಯನ್, ಆನಂದ್ ಈ ಎಲ್ಲರನ್ನೂ ಕನ್ನಡದಲ್ಲಿ, ತಮಿಳಿನಲ್ಲಿ, ಹಿಂದಿಯಲ್ಲಿ ಮುಖ್ಯರಾದ ಎಲ್ಲರಿಗೂ ಪರಿಚಯಿಸುತ್ತಿದ್ದ ವರು ಗೋವಿಂದನ್. ನಮಗೊಬ್ಬ ಎಜ್ರಾ ಪೌಂಡ್‌ನಂತೆ ಇದ್ದವರು ಈ ಗೋವಿಂದನ್.
ಗೋವಿಂದನ್ ಸತತವಾಗಿ ಕಮ್ಯುನಿಸ್ಟರನ್ನೂ ಕಾಂಗ್ರೆಸಿಗರನ್ನೂ ಟೀಕಿಸುತ್ತಲೇ ಬದುಕಿದರು. ಯಾವತ್ತೂ ರಾಜಿ ಮಾಡಿಕೊಂಡ ಮನುಷ್ಯ ಅವರಲ್ಲ (ಅವರು ಎಷ್ಟು ನಿಷ್ಠುರರೆಂದರೆ ಅವರು ನೆಹರೂ ಫೆಲೋಶಿಪ್ಪನ್ನು ಒಪ್ಪಿಕೊಂಡರೆಂಬುದೇ ಅವರ ವೈರಿಗಳಿಗೆ ಗ್ರಾಸ ಮಾತು). ವಿಚಾರದಲ್ಲಿ ಅವರು ರಾಯ್ ಮತ್ತು ಮಾರ್ಕ್ಸ್‌ರನ್ನು ನಂಬಿದ ವರು. ತಮಿಳುನಾಡಿನ ಪೆರಿಯಾರ್‌ರನ್ನು ಮೆಚ್ಚಿಕೊಂಡವರು. ಇವರ ಲೋಕಕ್ಕೆ ಒಂದಿಷ್ಟು ಲೋಹಿಯಾರನ್ನೂ ತಂದವರಲ್ಲಿ ನಾನೂ ಒಬ್ಬ.
ಅಯ್ಯಪ್ಪ ಪಣಿಕ್ಕರ್‌ರನ್ನು ಭಾವೋತ್ಕಟತೆಯಲ್ಲಿ ಹಾಡುವಂತೆ ಬರೆಯಲಾರದ ಕವಿಯೆಂದು ಜನಪ್ರಿಯ ಮಲೆಯಾಳೀ ಲೇಖಕರು ನಗಣ್ಯ ಮಾಡಿದಾಗ ಪಣಿಕ್ಕರ್‌ರ ಹೊಸ ಲಯವನ್ನು ಗುರುತಿಸಿದ ಗೋವಿಂದನ್ ಕ್ಲಿಷ್ಟವೆನಿಸುವುದನ್ನು ಧಾರಣೆ ಮಾಡಬಲ್ಲ ಚಿಂತನಶೀಲ ಓದನ್ನು ಎಲ್ಲರಿಗೂ ಕಲಿಸಿದರು. ಅದೆಂತಹ ಕಾಲವೆಂದರೆ ನಾವು ಬರೆದದ್ದು ಎಲ್ಲರಿಗೂ ಇಷ್ಟವಾಯಿತೆಂದರೆ ನಮಗೆ ಅನುಮಾನವೇ. ಗೋವಿಂದನ್ ಮೆಚ್ಚಿದರೆ ಮಲೆಯಾಳಿಗಳಿಗೆ, ಅಡಿಗರು ಮೆಚ್ಚಿದರೆ ನಮಗೆ ಅಷ್ಟೇ ಸಾಕೆನ್ನಿಸುತ್ತಿದ್ದ ಕಾಲ ಅದು. ಸಣ್ಣ ಪುಟ್ಟ ಪತ್ರಿಕೆಗಳು ಆಗ ನಮಗೆ ನೋಹಾನ ನೌಕೆಯಾದವು.
ಅಯ್ಯಪ್ಪ ಪಣಿಕ್ಕರ್ ಆಗತಾನೆ ಬರೆದು ಮುಗಿಸಿದ ಅವರ ಕುಟುಂಬ ಪುರಾಣಂ ಎಂಬ ಪದ್ಯವನ್ನು ಓದಿದ್ದು ನೆನಪಾಗುತ್ತದೆ. ಈ ಪದ್ಯದಲ್ಲಿ ಕುಟುಂಬದ ಸದಸ್ಯರೆಲ್ಲರ ವರ್ಣನೆ ಬರುತ್ತದೆ. ಈ ನೆಂಟರಿಷ್ಟರೆಲ್ಲರೂ ಬಹುಪಾಲು ಅವರ ತಾಯಿಯ ಕಡೆಯವರು. ಇಡೀ ಪದ್ಯದಲ್ಲಿ ತಂದೆ ಕಾಣಿಸಿಕೊಳ್ಳುವುದೇ ಇಲ್ಲ. ಯಾಕೆಂದರೆ ತನ್ನ ತಾಯಿಯ ಜತೆ ಸಂಬಂಧ ಮಾಡಿಕೊಂಡಿದ್ದ ಈ ಬ್ರಾಹ್ಮಣ ರಾತ್ರಿ ತಂಗಲು ಮಾತ್ರ ಮನೆಗೆ ಬರುತ್ತಾ ಇದ್ದುದು. ಅವರು ಮಕ್ಕಳ ಜತೆ ಊಟ ಮಾಡಿದವರಲ್ಲ. ಮಡಿಯಿಂದಾಗಿ ಮಕ್ಕಳನ್ನು ಎತ್ತಿ ಮುದ್ದಾಡಿ ಬೆಳೆಸಿದವರಲ್ಲ. ಆದರೆ ಈ ಪದ್ಯವನ್ನು ಬರೆಯುವ ಕಾಲಕ್ಕೆ ನಾಯರ್ ಸಮಾಜ ಎಷ್ಟು ಬದಲಾಗಿತ್ತೆಂದರೆ ಈ ಬಗೆಯ ಸಂಬಂಧಗಳನ್ನು ಮಾಡಿಕೊಳ್ಳುವುದು ಕಡಿಮೆಯಾಗಿತ್ತು. ಅದರಿಂದ ಅಯ್ಯಪ್ಪ ಪಣಿಕ್ಕರ್ ಯಾವ ಸಂಕೋಚವೂ ಇಲ್ಲದೆ ಈ ಬಗ್ಗೆ ಮಾತಾಡಬಲ್ಲವರಾಗಿದ್ದರು.
ಅಯ್ಯಪ್ಪ ಪಣಿಕ್ಕರ್ ಬಗೆಯ ಲೋಕಕ್ಕೆ ಹೊಸ ದನಿಯೊಂದು ಬಂದು ಸೇರಿಕೊಂಡು ಎಲ್ಲರೂ ಬೆರಗಾದರು. ಕೆದರಿದ ಕೂದಲಿನ ಗಟ್ಟಿಯಾದ ಗಂಟಲಿನ ಕಾಡು ಮನುಷ್ಯನಂತೆ ಕಾಣುವ ಕಡಮ್ಮನಿಟ್ಟ ರಾಮಕೃಷ್ಣನ್ ತಮ್ಮ ಪದ್ಯವನ್ನು ಅಪೂರ್ವವಾದ ಶೋಭೆಯಲ್ಲಿ ್ಚ್ಞಠಿ ಮಾಡಿದ್ದನ್ನು ನಾನು ಎಂದೂ ಮರೆಯಲಾರೆ. ಅವರ ಕವನವೊಂದರ ಕೋಳಿಗಳು ಅಂಗಳದ ತುಂಬಾ ಕಿವಿಗೂ ಕಣ್ಣಿಗೂ ಕಟ್ಟುವಂತೆ ಓಡಾಡುತ್ತಿದ್ದವು. ಪಣಿಕ್ಕರ್‌ರ ಕ್ಲಿಷ್ಟತೆ ಈ ಕವನಗಳಲ್ಲಿ ಇರಲಿಲ್ಲ. ಕಾವ್ಯ ಎಲ್ಲ ಸಂಕೋಚಗಳಿಂದಲೂ ಬಿಡುಗಡೆ ಗೊಂಡಿತ್ತು. ನಾಗರಿಕತೆಗೆ ಅತೀತವಾದ ಆದಿಮ ಮಾನವನ ಪ್ರಾಣ ಶಕ್ತಿ ಅದರಲ್ಲಿತ್ತು. ಇದಕ್ಕೆ ತದ್ವಿರುದ್ಧವಾಗಿ ಬರೆಯುವವರು ಪಣಿಕ್ಕರ್. ಅಯ್ಯಪ್ಪ ಪಣಿಕ್ಕರ್‌ರನ್ನು ನಮಗೆ ಪರಿಚಯಿಸಿದ್ದ ಗೋವಿಂದನ್‌ರವರೇ ಕಡಮ್ಮನಿಟ್ಟ ರನ್ನು ನಮಗೆಲ್ಲರಿಗೂ ಹೊಸ ಪ್ರತಿಭೆಯೆಂದು ಪರಿಚಯಿಸಿಕೊಟ್ಟರು. ಕಡಮ್ಮನಿಟ್ಟ ಕೈಯಲ್ಲಿ ಪುಸ್ತಕ ಹಿಡಿದು ಎಂದೂ ಓದಿದವರಲ್ಲ. ನೆನಪಿನಿಂದಲೇ ತಮ್ಮ ಪದ್ಯಗಳನ್ನು ಉದ್ಘೋಷವೆಂಬಂತೆ ವಾಚಿಸುತ್ತಿದ್ದವರು.
ಕಡಮ್ಮನಿಟ್ಟರ ಹೆಸರನ್ನು ಎತ್ತುತ್ತಿರುವಂತೆಯೇ ಹಲವು ನೆನಪುಗಳಾಗುತ್ತವೆ. ತಿರುವನಂತಪುರದಲ್ಲಿ ಅದೊಂದು ರಾತ್ರಿ. ಕಳ್ಳಿನಂಗಡಿಯಿಂದ ಕಡಮ್ಮನಿಟ್ಟರೂ ಮತ್ತು ಸುಶೀಲರಂತೆ ಕಾಣುವ ಅವರ ಸ್ನೇಹಿತರೂ ನಡು ರಾತ್ರೆ ಹೊರಬಂದಿದ್ದಾರೆ. ಅವರಿಬ್ಬರ ನಡುವೆ ತೀವ್ರವಾದ ವಾಗ್ವಾದ ನಡೆದಿದೆ. ಪರಿಣಾಮವಾಗಿ ಕಡಮ್ಮನಿಟ್ಟ ತನ್ನ ಗೆಳೆಯನನ್ನು ಚೂರಿಯಲ್ಲಿ ಇರಿಯಲು ಹೋಗಿ ಕೊಂಚ ಗಾಯವಾಗಿದೆ. ಅದರ ರಕ್ತವನ್ನು ಮಲಗಿದ್ದ ನನ್ನನ್ನು ಎಬ್ಬಿಸಿ ತೋರಿಸಿದ ಗೆಳೆಯ ಅನಂತರ ಕಡಮ್ಮನಿಟ್ಟರ ಜತೆಗೇ ಅಯ್ಯಪ್ಪ ಪಣಿಕ್ಕರ್ ಮನೆಗೆ ಹೋಗಿದ್ದಾರೆ. ಅವರ ಬಾಗಿಲನ್ನು ಬಡಿದು ನಿದ್ದೆಯಲ್ಲಿದ್ದವರನ್ನು ಎಬ್ಬಿಸಿ ತನ್ನ ಗಾಯವನ್ನು ಸುಶೀಲ ಗೆಳೆಯ ತೋರಿ ದ್ದಾನೆ. ಕಡಮ್ಮನಿಟ್ಟ ಯಾವ ಪಶ್ಚಾತ್ತಾಪವೂ ಇಲ್ಲದೆ ಪಣಿಕ್ಕರ್ ಎದುರು ಈ ಗೆಳೆಯನಿಗಿದ್ದ ಕಾವ್ಯದ ಬಗೆಗಿನ ತಪ್ಪುಕಲ್ಪನೆಗಳನ್ನು ಮತ್ತೆ ನಿಂದಿಸಲು ಶುರು ಮಾಡಿದ್ದಾರೆ. ಅಯ್ಯಪ್ಪ ಪಣಿಕ್ಕರ್ ಇಬ್ಬರಿಗೂ ಗುರುಗಳಲ್ಲವೇ...? ಇಬ್ಬರನ್ನೂ ಸಮಾಧಾನ ಮಾಡಿ, ಅಮಲು ಇಳಿಯಲು ಮಜ್ಜಿಗೆ ಕುಡಿಸಿ ಹಿಂದಕ್ಕೆ ಕಳುಹಿಸಿದ್ದಾರೆ.
ಇನ್ನೊಂದು ನೆನಪು: ನಾನು ಮಾನಸಗಂಗೋತ್ರಿಯ ಇಂಗ್ಲಿಷ್ ವಿಭಾಗದಲ್ಲಿ ಪಾಠ ಮಾಡುತ್ತಿದ್ದೇನೆ. ಥಟ್ಟನೆ ಬಾಗಿಲಲ್ಲಿ ಕೆದರಿದ ಕೂದಲಿನ ಭರ್ಜರಿ ಮೀಸೆಯ ಮುಂಡುಟ್ಟ ವ್ಯಕ್ತಿಯೊಂದು ತೂರಾಡುತ್ತ ನಿಂತಿರುವು ದನ್ನು ವಿದ್ಯಾರ್ಥಿಗಳೆಲ್ಲರೂ ಬೆರಗಿನಿಂದ ನೋಡುತ್ತಾರೆ. ಕಡಮ್ಮನಿಟ್ಟರು ಕಂಠಪೂರ್ತಿ ಕುಡಿದಿರುವುದು ನನಗೆ ಗೊತ್ತಾಗಿ ಹೊರಬಂದು ಅವರ ಕೈಹಿಡಿದು ಕುರ್ಚಿ ಮೇಲೆ ಕೂರಿಸಿ, ವಿದ್ಯಾರ್ಥಿಗಳಿಗೆ ಈತ ಕೇರಳದ ಡಿಲಾನ್ ಥಾಮಸ್‌ನಂತಹ ಕವಿಯೆಂದು ಪರಿಚಯ ಮಾಡುತ್ತೇನೆ. ಕಡಮ್ಮನಿಟ್ಟರು ಖುಷಿಯಾಗಿ ಹೌದೆನ್ನುವಂತೆ ತಲೆ ಹಾಕಿ, ತನ್ನಷ್ಟಕ್ಕೇ ನಗುತ್ತಾರೆ. ನನಗೊಂದು ಉಪಾಯ ಹೊಳೆಯುತ್ತದೆ. `ಎಲ್ಲರೂ ಗಾಂಧಿ ಭವನದ ಮೈದಾನದಲ್ಲಿ ಸೇರಿ. ಕಡಮ್ಮನಿಟ್ಟರು ತಮ್ಮ ಪದ್ಯಗಳನ್ನು ನಿಮಗೆ ಓದಲಿದ್ದಾರೆ' ಎಂದೆ.
ಕಡಮ್ಮನಿಟ್ಟರನ್ನು ನನ್ನ ಕೋಣೆಗೆ ಕರೆದುಕೊಂಡು ಹೋಗಿ ಬಲಾತ್ಕಾರ ವಾಗಿ ಟೀ ಕುಡಿಸಿ, ಕೈ ಹಿಡಿದು ಗಾಂಧಿ ಭವನಕ್ಕೆ ನಡೆಸಿಕೊಂಡು ಹೋದೆ. ಅವರ ಪ್ರಸಿದ್ಧ ಪದ್ಯಗಳನ್ನು -ಕೋಳಿ, ಕುರತಿ ಇತ್ಯಾದಿ, ಈಗ ಶೀರ್ಷಿಕೆ ಮರೆತಿದ್ದೇನೆ- ಗಟ್ಟಿಯಾಗಿ ಬಯಲಿನಲ್ಲಿ ಹಾಡುವಂತೆ ಕೇಳಿದೆ. ಕಡಮ್ಮನಿಟ್ಟ ಒಂದು ಕ್ಷಣದಲ್ಲಿ ಬದಲಾದರು. ಒಬ್ಬ ಕಾಡು ಕವಿಯಾದರು. ಅರ್ಥವಾಗ ದಿದ್ದರೂ ಪದ್ಯದ ಲಯಕ್ಕೆ ನನ್ನ ವಿದ್ಯಾರ್ಥಿಗಳು ಬೆರಗಾದರು. ಕಡಮ್ಮನಿಟ್ಟ ಬೆವರುವಷ್ಟು ಕಾಲ ಅವರಿಂದ ಕಾವ್ಯೋದ್ಘೋಷ ಮಾಡಿಸಿ ನನ್ನ ಸ್ಕೂಟರ್ ಮೇಲೆ ಕೂರಿಸಿ `ಎಲ್ಲಿಗೆ ಹೋಗಬೇಕು?' ಎಂದು ಕೇಳಿದೆ. ಕಡಮ್ಮನಿಟ್ಟ ತಾನು ಯಾವ ಹೊಟೇಲಿನಿಂದ ತನ್ನ ಸ್ನೇಹಿತರನ್ನು ಬಿಟ್ಟು ಬಂದದ್ದು ಎಂಬುದನ್ನು ಮರೆತಿದ್ದರು. ಸದ್ಯದಲ್ಲೇ ಕಾರಿನಲ್ಲಿ ಬಂದ ಅವರ ಗೆಳೆಯರು ಇನ್ನೊಂದು ಊರಿಗೆ ಹೋಗುವರಿದ್ದರು.
ಸ್ಕೂಟರ್ ಮೇಲೆ ಕೂತು ಶುರು ಮಾಡಿದೆ ನನ್ನ ಸಾಹಸವನ್ನು. ಅಕಾರದಿಂದ ಶುರು ಮಾಡಿ ನನಗೆ ಗೊತ್ತಿರುವ ಹೋಟೆಲುಗಳ ಹೆಸರು ಗಳನ್ನೆಲ್ಲ ಹೇಳುತ್ತ ಹೋದೆ. ನನ್ನ ಹಿಂದೆ ಕೂತ ಕಡಮ್ಮನಿಟ್ಟ `ಮ' ಎಂದಿದ್ದೆ `ಯೆಸ್!' ಅಂದರು. ಮಹಾರಾಜ ಕಾಲೇಜಿನ ಎದುರಿನ ಹೋಟೆಲಿಗೆ ಬಂದದ್ದೇ ಸ್ನೇಹಿತರು ಇನ್ನೇನು ಹೊರಡಲು ಕಾದಿರುವುದನ್ನು ಕಂಡು ಕಡಮ್ಮನಿಟ್ಟ ಸ್ಕೂಟರಿನಿಂದ ಇಳಿದರು.
ಕಡಮ್ಮನಿಟ್ಟ ಕೇರಳದ ಕವಿತೆಯ ದಿಕ್ಕನ್ನು ಅದರ ಆದಿಮ ಜಾನಪದ ಮೂಲಕ್ಕೆ ಒಯ್ದು ಬದಲಿಸಿದರು; ಅಯ್ಯಪ್ಪ ಕಾವ್ಯಕ್ಕೆ ಹೊರತಾದ್ದನ್ನು, ಅಕಾವ್ಯವೆಂದು ನಿರ್ಲಕ್ಷಿಸಿದ ಸತ್ಯಗಳನ್ನು, ಒಳತಂದು ಸೃಷ್ಟಿಸಿದರು; ಕಡಮ್ಮನಿಟ್ಟರ ಹಿಂದೆಯೂ ಅಯ್ಯಪ್ಪ ಇದ್ದರು. ಅಯ್ಯಪ್ಪ ಹಾಗೇ ಅನುಮಾನಿಯಾದ ಕವಿಯಾಗಿ ಐರಾನಿಕ್ ಆಗಿ ಉಳಿದರು. ಆದರೆ ಕಡಮ್ಮನಿಟ್ಟ ಬಹುಜನಪ್ರಿಯರಾಗಿ, ಕಮ್ಯುನಿಸ್ಟ್ ಪಕ್ಷದಿಂದ ಎಂಎಲ್‌ಎ ಆಗಿ ಒಂದು ಪಾರ್ಕಿಗೆ ತನ್ನ ಹೆಸರನ್ನೂ ಕೊಟ್ಟರು. ಈಗೇನು ಮಾಡುತ್ತಿದ್ದಾರೆ ಎಂದು ಗೆಳೆಯರನ್ನು ಕೇಳಿದರೆ ತಣ್ಣಗಿದ್ದಾರೆ ಎನ್ನುತ್ತಾರೆ. ಅಯ್ಯಪ್ಪ ಪಣಿಕ್ಕರ್ ಅಷ್ಟು ಏರಲೂ ಇಲ್ಲ, ಇಳಿಯಲೂ ಇಲ್ಲ. ಅವರ ಹಾದಿಯಲ್ಲಿ ಈಗ ಸಚ್ಚಿದಾನಂದನ್ ಹಲವು ಬಗೆಗಳಲ್ಲಿ ಬರೆಯುವ ಕವಿಯಾಗಿದ್ದಾರೆ. ನಮ್ಮದೇ ಆಗುತ್ತಿರುವ ಆಧುನಿಕ ಪಶ್ಚಿಮಕ್ಕೂ ಕೇರಳಕ್ಕೂ ಏಕಕಾಲದಲ್ಲಿ ಒದಗಬಲ್ಲ ಅಯ್ಯಪ್ಪ ದಾರಿಯಲ್ಲಿ ತಮ್ಮದೇ ಛಾಪನ್ನು ಒತ್ತಿದ್ದಾರೆ.
ಗೋವಿಂದನ್ ಮನೆಯಲ್ಲಿ ಎಲ್ಲ ಕಡೆ ನಡೆಯುವ ಎಲ್ಲ ಸುದ್ದಿಗಳೂ ಒದಗುತ್ತಿದ್ದವು. ಅವರ ಮನೆಯೊಂದು ನಮಗೆ ಅಕಾಡೆಮಿಯಂತೆ ಇತ್ತು. ಕಿವಿಯಿಂದ ಕಿವಿಗೆ ದಾಟುವ (ಇಂಗ್ಲಿಷ್‌ನಲ್ಲಿ ಗ್ರೇಪ್ ವೈನ್ ಎನ್ನುವ) ಅಂದರೆ ಬಳ್ಳಿಯಂತೆ ಹೊಸಕುಡಿಗಳು ಒಡೆಯುತ್ತ ಹಬ್ಬುತ್ತ ಹೋಗುವ ಆತ್ಮೀಯವಾದ ಈ ಬಗೆಯ ಪ್ರತಿಭಾ ಪರಿಚಯದಲ್ಲಿ ಅಡಿಗರು ಮತ್ತು ಅಯ್ಯಪ್ಪ ಪಣಿಕ್ಕರ್ ಭಾರತದ ಕವಿಗಳಾದರು. ವಿಜಯನ್ ದಾರ್ಶನಿಕ ಲೇಖಕರಾದರು. ಅರವಿಂದನ್, ಅಡೂರ್ ಇವತ್ತು ಇಡೀ ಜಗತ್ತೇ ಮೆಚ್ಚುವ ಸಿನಿಮಾ ನಿರ್ದೇಶಕರಾದರು. ಇಲ್ಲಿ ಯಾರೂ ಯಾರನ್ನೂ ಹೊಗಳಬೇಕಾಗಿರಲಿಲ್ಲ. ಮೆಚ್ಚಿಸಬೇಕಾಗಿರಲಿಲ್ಲ. ಸತತವಾಗಿ ಕಾದಿರುವ ಬಡಜನರಿಗೆ ಮದ್ದನ್ನು ಕೊಡುತ್ತಿರುವಾಗಲೇ ಆಗ ಈಗ ಒಳಗೆ ಬಂದು ಗೋವಿಂದನ್ ಹೆಂಡತಿ ನಮಗೆಲ್ಲರಿಗೂ ಟೀಯನ್ನು ಮಾಡಿಕೊಡು ತ್ತಲೂ ಇದ್ದರು. ಈ ಗೋವಿಂದನ್ ಇಷ್ಟೆಲ್ಲಾ ಸೃಷ್ಟಿಗೆ ಕಾರಣವಾದರು ನಿಜ. ಆದರೆ ಅವರೇ ಸ್ವತಃ ಬರೆದದ್ದು ಕಡಿಮೆ. ಆದರೆ ಅವರು ಬರೆದ ದ್ದಷ್ಟು ಇವತ್ತಿಗೂ ಮಲೆಯಾಳಂ ಮುಂದೆ ಮಾಡಬಹುದಾದುದನ್ನು ಸೂಚಿಸುವಂತಿದೆ ಎಂದು ತಿಳಿದವರು ಹೇಳುತ್ತಾರೆ.
ಅಯ್ಯಪ್ಪ ಪಣಿಕ್ಕರ್ ನನ್ನಂತೆ, ಗೋವಿಂದನ್‌ರಂತೆ ಅಥವಾ ಅಡಿಗರಂತೆ ರಾಜಕೀಯದ ಬಗ್ಗೆ ಹೆಚ್ಚು ಮಾತಾಡುತ್ತಿರಲಿಲ್ಲ. ಆದರೆ ಎಮರ್ಜನ್ಸಿ ಬಗ್ಗೆ ಆ ಕಾಲದಲ್ಲೇ ಅದನ್ನು ಕಟುವಾಗಿ ಹಾಸ್ಯಮಾಡಬಲ್ಲ, ಕಿವಿಯಿಂದ ಕಿವಿಗೆ ಹರಡಬಲ್ಲ ಕವಿತೆಗಳನ್ನು ಬರೆದವರು. ಜನತಾ ಪರಿವಾರವನ್ನು ನಂಬಿ ನನ್ನಂಥವರು, ಜನಸಂಘವನ್ನು ನೆಚ್ಚಿ ಅಡಿಗರಂಥ ವರು, ಸ್ಟಾಲಿನ್ನನ್ನು ನೆಚ್ಚಿ ಭಿಷಮ್ ಸಹಾನಿಯಂಥವರು, (ಮೊದಲ ದಿನಗಳಲ್ಲಿ ಓ. ವಿ. ವಿಜಯನ್, ನಿರ್ಮಲ ವರ್ಮರಂಥವರು ಕೂಡ) ಮಾಡಿದ ತಪ್ಪನ್ನು ಮಾಡುವ ಅಗತ್ಯ ಬೀಳದ ಸಮಾಧಾನಿ ಅಯ್ಯಪ್ಪ ಪಣಿಕ್ಕರ್.
ಮೇಲಿನ ಮಾತನ್ನು ಅಯ್ಯಪ್ಪ, ಗೋವಿಂದನ್, ಓ. ವಿ. ವಿಜಯನ್ ಬಳಗಕ್ಕೇ ಸೇರಿದ ಈ ಕಾಲದ ಮಹತ್ವದ ಕಥೆಗಾರರೊಬ್ಬರು ಒಪ್ಪುವರೋ ಇಲ್ಲವೋ ಎನ್ನುವ ಅನುಮಾನ ನನಗಿದೆ. ಅಸಾಧಾರಣ ಪ್ರತಿಭೆಯ ಈ ಬರಹಗಾರ ಮೈಸೂರಿನ ಫಿಲೋಮಿನಾ ಕಾಲೇಜಲ್ಲಿ ಅಡಿಗರ ಶಿಷ್ಯರಾಗಿ ಬೆಳೆದವರು. ಅವರ ಮೊದಲ ಕಥಾ ಸಂಕಲನ ಅರ್ಪಿತವಾದ್ದು ಅವರನ್ನು ಗುರುತಿಸಿ ಬೆಳೆಸಿದ ಅಡಿಗರಿಗೆ. ಕನ್ನಡ ಮಾತು ಬಲ್ಲವರಾದ ಇವರು ರಬ್ಬರ್ ಬೆಳೆಯುವ ಕ್ರೈಸ್ತ ವೈಶ್ಯ ಲೋಕ ದಿಂದ ಹುಟ್ಟಿ ಬಂದವರು. ಮುಸ್ಲಿಮ್ ಸಮುದಾಯದ ವಿಶಿಷ್ಟವಾದ ಹಾಸ್ಯ ಪ್ರಜ್ಞೆಯನ್ನೂ, ಭಾಷಾ ಪ್ರಯೋಗವನ್ನೂ ಪಡೆದಿದ್ದ ಭಾರತದ ಮಹತ್ವದ ಕಾದಂಬರಿಕಾರರಲ್ಲಿ ಒಬ್ಬರಾದ ವೈಕಂ ಮಹಮದ್ ಬಶೀರರಂತೆ ಈತ ಯಾಕೆ ಬೆಳೆಯಬಾರದು ಎಂದು ನಾನು ಹಲವು ಸಾರಿ ಅಂದುಕೊಂಡಿದ್ದೇನೆ. ಆದರೆ ಈ ಲೇಖಕ ವಿಪರೀತಗಳ ಬೆನ್ನು ಹತ್ತಿದ ಜಗಳಗಂಟಿಯಾದ ಸೆಕ್ಯುಲರಿಸ್ಟ್. ಫಂಡಮೆಂಟಲಿಸ್ಟ್ ಎನ್ನಿಸು ವಷ್ಟು ಸೆಕ್ಯುಲರಿಸ್ಟ್. ವಿಜಯನ್ನರ ಆಧ್ಯಾತ್ಮಿಕ ಒಲವನ್ನೂ ಅವರಿಗೆ ಬಹು ಪ್ರೀತಿಯವರಾದ ಇವರು ಸಂಶಯದಿಂದ ನೋಡುತ್ತಾರೆ. ಕೇರಳದಲ್ಲಿ ಉದಾತ್ತವಾದ ಮಾತುಗಳನ್ನು ಆಡುವ ಪರಮೇಶ್ವರನ್ ಎಂಬ ಸಂಘ ಪರಿವಾರದ ನಯವಂತರಾದ ಧೀಮಂತರಿದ್ದಾರೆ. ಅವರ ಮಾತಿನ ಮೋಡಿಗೆ ಅಯ್ಯಪ್ಪ ಪಣಿಕ್ಕರ್ ಕೆಲವೊಮ್ಮೆ ಒಳಗಾಗಿದ್ದಾರೆ ಎಂಬ ಸಂಶಯವನ್ನು ಈ ಲೇಖಕ ವ್ಯಕ್ತಪಡಿಸಿದ್ದುಂಟು. ಪಾಲ್ ಝಕಾರಿಯಾ ಈ ಲೇಖಕನ ಹೆಸರು. ಅಯ್ಯಪ್ಪ, ಗೋವಿಂದನ್, ವಿಜಯನ್, ಅರವಿಂದನ್, ಅಡೂರ್- ಈ ಬಳಗಕ್ಕೇ ಸೇರಿದ ಲೇಖಕ ಇವರು.
ನಂಬೂದರಿ ಪಾಡರು ಬದುಕಿದ್ದರೆ ಇವರೆಲ್ಲರ ಜೊತೆ ಜಗಳ ಮಾಡುವ ಧೀಮಂತಿಕೆ ಅವರಿಗೆ ಇತ್ತು. ಕೇರಳವೇ ಇನ್ನೊಂದು ಪ್ರಪಂಚ.



Post new comment