ಎರಡು ಬಗೆಯ ಅಮಾನುಷತೆಗಳಲ್ಲಿ ಒಂದನ್ನು ಆಯುವಂತೆ ತಮ್ಮ ನಾಗರೀಕತೆಯನ್ನು ಕಟ್ಟುತ್ತ ಹೋಗಿರುವ, ನಮಗೂ ಹಾಗೆ ಕಟ್ಟುವಂತೆ ಪ್ರೇರೇಪಿಸುತ್ತ ಇರುವ ಐರೋಪ್ಯ ಇತಿಹಾಸದ ಬಗ್ಗೆಯೇ ನಾವು ಅನುಮಾನಿಸಬೇಕಾಗಿದೆ. ಆದರೆ ನೋಡಿ: ನಾವೂ ಚೀನೀಯರೂ ಜಪಾನೀಯರೂ ಅವರ ಹಾಗೇ ನಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದೇವೆ.
-1-
ಎಡ್ವರ್ಡ್ ಅಪ್ವರ್ಡ್ ಎಂಬಾತನಿಗೆ ಈಗ ಒಂದುನೂರಾ ಮೂರು ವರ್ಷ. ಮುವ್ವತ್ತರ ದಶಕದ ಇಂಗ್ಲೆಂಡಿನ ಕಮ್ಯುನಿಸಂಗೆ ಒಲಿದ ಲೇಖಕನೊಬ್ಬ ಪಳೆಯುಳಿಕೆಯಂತೆ ಸಾಯದೇ ಉಳಿದಿದ್ದಾನೆ ಎಂದು ಅಚ್ಚರಿಪಡುತ್ತಲೇ ಹಳಿಯುವ ಅವನ ನಿಂದಕರನ್ನೂ, ರಷ್ಯಾ ಮತ್ತು ಚೀನಾದ ಕಮ್ಯುನಿಷ್ಟರು ಕ್ರಾಂತಿಪಥ ಬಿಟ್ಟರೂ ತಾನು ಬಿಡೆನೆಂದು ಲೆನಿನ್‌ಗೆ ನಿಷ್ಠನಾಗಿ ಉಳಿದ 1903ರಲ್ಲಿ ಹುಟ್ಟಿದ ಈ ಲೇಖಕನನ್ನು ಹೊಗಳುವವರನ್ನೂ ಇಂಟರ್‌ನೆಟ್ ನಲ್ಲಿ ಓದಿ, ಅರವತ್ತರ ದಶಕದಲ್ಲಿ ನನಗೆ ಪರಿಚಿತನಾಗಿ ಸ್ನೇಹಿತನೂ ಆದ, ನನ್ನ ರಿಸರ್ಚ್‌ನ ವಸ್ತುವೂ ಆದ ಎಡ್ವರ್ಡ್ ಅಪ್ವರ್ಡ್ ಬಗ್ಗೆ ಈಗ ಬರೆಯಲು ಕೂತಿದ್ದೇನೆ.
ಬಹು ಖ್ಯಾತರಾದ ಆಡೆನ್, ಇಷರ್‌ವುಡ್ ಮತ್ತು ಸ್ಟೀಫೆನ್ ಸ್ಪೆಂಡರ್‌ಗೆ ಈತ ಗುರು ಹಾಗೂ ಗೆಳೆಯ. ಅವರು ಹೆಸರು ಮಾಡಿದರು;ಆದರೆ ಈತ ಅಜ್ಞಾತನಾಗಿ ಉಳಿದ. ಫ್ಯಾಸಿಸಂ ಬೆಳೆಯುತ್ತ ಇದ್ದ ಕಾಲದಲ್ಲಿ ಈತನ ಪ್ರಭಾವದಲ್ಲಿ ಕಮ್ಯುನಿಸಂಗೆ ಈ ಲೇಖಕರು ಒಲಿದರು. ಆಮೇಲೆ ಬೇರೆ ಬೇರೆ ಮಾರ್ಗಗಳಲ್ಲಿ ಬೆಳೆದರು. ಇಷರ್‌ವುಡ್ ಪರಮಹಂಸರ ಭಕ್ತನಾದ; ಆಡೆನ್ ಕ್ರೈಸ್ತ ಧರ್ಮಕ್ಕೆ ಅಸ್ತಿತ್ವವಾದದ ನೆಲೆಯಲ್ಲಿ ಹತ್ತಿರದವನಾದ; ಸ್ಪೆಂಡರ್ ಯುದ್ಧಾನಂತರದ ಪ್ರಸಿದ್ಧ ಮಾಸ ಪತ್ರಿಕೆಯಾದ `ಎನ್‌ಕೌಂಟರ್'ನ ಸಂಪಾದಕನಾಗಿ ಪೂರ್ವ ಐರೋಪ್ಯ ಲೇಖಕರ ಸ್ವಾತಂತ್ರ್ಯಕ್ಕಾಗಿ ಕಮ್ಯುನಿಸ್ಟ್ ವ್ಯವಸ್ಥೆಗಳ ವಿರುದ್ಧ ಎಲ್ಲರೂ ಮೆಚ್ಚುವ ಸಂಗ್ರಾಮ ಹೂಡಿದ.
ಸ್ಟಾಲಿನ್-ಹಿಟ್ಲರ್ ಸಂಧಾನದ ನಂತರ ತತ್ವಕ್ಕೆ ಬದ್ಧನಾದ ಸಿದ್ಧಾಂತಿಯಾಗಿ, ಪಕ್ಷದಿಂದ ದೂರ ವಾಗತೊಡಗಿದ ಅಪ್ವರ್ಡ್, ಸೋವಿಯತ್ ಯೂನಿಯನ್ ಹಂಗೆರಿಯನ್ನು ಆಕ್ರಮಣ ಮಾಡಿದಾಗ, ಅಂತಃಕರಣದ ಪಿಸುಮಾತಿಗೆ ಕಿವಿಗೊಡುವ ಲೇಖಕನಾಗಿ ಹಲವರಂತೆ ಸೋವಿಯತ್ ಒಕ್ಕೂಟದ ವಿಕಾರಗಳನ್ನು ತಡೆದುಕೊಳ್ಳಲಾರದೆ ಪಕ್ಷವನ್ನೇ ಬಿಟ್ಟ; ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ಮಾತ್ರ ನಂಬಿಕೆ ಕಳೆದುಕೊಳ್ಳಲಿಲ್ಲ. ಆದರೆ ಸಾಹಿತಿಯಾಗಿ ಬ್ರೆಕ್ಟ್ ನಂತೆ ಅದನ್ನು ಕೃತಿಯಲ್ಲಿ ಪ್ರತ್ಯಕ್ಷಗೊಳಿಸುವ ಕ್ರಮ ಸೃಷ್ಟಿಸಿಕೊಳ್ಳ ಲಾರದೆ, ಕಾರ್ಮಿಕ ವರ್ಗಕ್ಕೂ ಹತ್ತಿರವಾಗಲಾ ರದೆ, ಕಾಲಧರ್ಮಕ್ಕೆ ಒಗ್ಗಿಕೊಳ್ಳಲಾರದೆ ಸುಮ್ಮ ನಿದ್ದುಬಿಟ್ಟ. ನಾನು ಅವನನ್ನು ಭೇಟಿಯಾದಾಗ ಸಿದ್ಧಾಂತಕ್ಕೆ ಬದ್ಧನಾಗಿದ್ದು ಪಕ್ಷವನ್ನು ಮಾತ್ರ ಬಿಟ್ಟಿದ್ದ; ತನ್ನ ತ್ರಿವಳಿ ಕಾದಂಬರಿಗೆ ಅಗತ್ಯವಾದ ಶೈಲಿಯ ಹುಡುಕಾಟದಲ್ಲಿದ್ದ.
ಸ್ಪೆಂಡರ್‌ನ ಪತ್ರಿಕೆ ನಡೆಯುವುದು ಸಿಐಐ ಗುಪ್ತದಳದ ಹಣದಿಂದ ಎಂದು ಒಂದು ದೂರಿತ್ತು. ಅದನ್ನು ಅಲ್ಲಗಳೆಯುತ್ತಿದ್ದ ಸ್ಪೆಂಡರ್ ಕೊನೆಗೆ ಅದು ನಿಜವೆಂದು ತಿಳಿದು ಸಂಪಾದಕ ಕೆಲಸಕ್ಕೆ ರಾಜಿನಾಮೆ ಕೊಟ್ಟ. ನನಗೆ ಪ್ರಿಯರಾದ ಎ.ಬಿ. ಶಾ ನಡೆಸುತ್ತಿದ್ದ ಕ್ವೆಸ್ಟ್ ಎಂಬ ಪತ್ರಿಕೆಗೂ, ಜಯಪ್ರಕಾಶ ನಾರಾಯಣರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಫಾರ್ ಕಲ್ಚರಲ್ ಫ್ರೀಡಂ ಎನ್ನುವ ಸಂಸ್ಥೆಗೂ ಸಿಐಐ ಹಣ ಬರುತ್ತಾ ಇತ್ತು ಎಂಬ ದೂರಿತ್ತು. 1957ನೆಯ ಇಸವಿ ಇರಬೇಕು. ನಾನು ಕಷ್ಟದಲ್ಲಿ ಸಾಲ ಮಾಡಿ ಎಂಎ ಓದುತ್ತ ಇದ್ದ ಸಮಯದಲ್ಲಿ ಭಾಷಾಂತರಗೊಂಡ ನನ್ನ `ಪ್ರಕೃತಿ' ಎಂಬ ಕಥೆಗೆ ಕ್ವೆಸ್ಟ್ ನಿಂದ 500 ರೂಪಾಯಿ ಗೌರವ ಧನ ಪಡೆದು ಬಹಳ ಸುಖಿಸಿದ್ದೆ; ಆಶ್ಚರ್ಯಪಟ್ಟಿದ್ದೆ. ಇದು ಸಿಐಐ ಹಣವೇ ಇರಬಹುದು. ನನಗದು ಆಗ ಹೊಳೆದೇ ಇರಲಿಲ್ಲ. ನಾನು ಆಗ ಭಾವನೆಯಲ್ಲೂ ಚಿಂತನೆಯಲ್ಲೂ ಸೋಷಲಿಸ್ಟ್. ರಷ್ಯಾ ಮತ್ತು ಅಮೆರಿಕಾ ಎರಡನ್ನೂ ಸಮದೂರದಲ್ಲಿ ಇಡಬೇಕೆಂಬ ಲೋಹಿಯಾ ತತ್ವ ನಂಬಿದವನು. ಇದೊಂದು ಐರನಿ. ಆ ಕಾಲದಲ್ಲಿ ಒಂದೋ ಸೋವಿಯತ್ ಯೂನಿಯನ್ನಿನಿಂದ ಅಥವಾ ಅಮೆರಿಕಾದಿಂದ ಹಣ ಪಡೆದು ಕೆಲವರು ತಿಳಿದೋ, ತಿಳಿಯದೆಯೋ, ತಿಳಿದಿದ್ದರೂ ತಿಳಿಯದವರಂತೆಯೋ ದೇಶಸೇವೆ ಮಾಡುತ್ತ ಇದ್ದವರೇ. ಈಗ ಹಲವರು ಜನಸೇವೆ ಮಾಡುವುದು ಅಮೆರಿಕಾದಿಂದ ಹಣ ಪಡೆದು ಅಥವಾ ಅರಬ್ ದೇಶಗಳಿಂದ ಹಣ ಪಡೆದು, ಹಿಂದೆ ಸದ್ದಾಂ ಹುಸೇನ್‌ನಿಂದ ಹಣ ಪಡೆದು ಅಥವಾ ಶಸ್ತ್ರಾಸ್ತ್ರ ಕೊಳ್ಳುವಾಗ ಕಿಕ್-ಬ್ಯಾಕ್ ಪಡೆದು, ಬೆಕ್ಕಿನಂತೆ ಕಣ್ಣುಮುಚ್ಚಿ ಹಾಲು ಕುಡಿದು, ರಾಜಾರೋಷವಾಗಿ, ನಾಚಿಕೆಯಿಲ್ಲದೆ, ಸರ್ಕಾರದ ಅನುಮತಿಯನ್ನೂ ಪಡೆದು. ಮೇಧಾ ಪಾಟ್ಕರ್ ಮಾತ್ರ ಇದಕ್ಕೆ ವಿನಾಯಿತಿಯೆಂದು ನಾನು ತಿಳಿದಿದ್ದೇನೆ.
ದುರ್ದಾನ ಹಿಡಿಯಲು ಈಗ ಯಾರೂ ಅಂಜುವುದಿಲ್ಲ. ಪ್ರಾಯಶ್ಚಿತ್ತವಾಗಿ ಮಕ್ಕಳು, ಬಡವರು, ವಿಧವೆಯರು ಎಂದು ಸೆಲ್‌ಫೋನ್ ಹಿಡಿದು ದೇಶಾದ್ಯಂತ ಸುತ್ತಾಡುತ್ತ ಇವರು ಕಣ್ಣೀರು ಸುರಿಸುವುದು ಮಾಧ್ಯಮಗಳಲ್ಲಿ ತೋರಿದರೆ ಪ್ರಾಯಶ್ಚಿತ್ತವಾದಂತೆ ಅಲ್ಲವೆ? ತಾತ್ವಿಕವಾಗಿ ಬಂಡಾಯ ಸಂಸ್ಥೆಗೆ ಸೇರಿದವನಾದರೆ ಸಾಲದೆ?
ಅಪ್ವರ್ಡ್ ವಿಷಯಕ್ಕೆ ಹಿಂದಿರುಗುವೆ. ಕಾಫ್ಕಾನನ್ನು ಓದುವ ಮುಂಚೆ ಕಾಫ್ಕಾ ತರಹದ ಸ್ವಪ್ನಶೀಲ ಕಥೆಯೊಂದನ್ನು ಇವನು ಬರೆದಿದ್ದ. ಮುವ್ವತ್ತರ ದಶಕದಲ್ಲಿ. ಅದರ ಹೆಸರು `ರೈಲ್ವೇ ಆ್ಯಕ್ಸಿಡೆಂಟ್'. ಆದರೆ ಸೋಷಲಿಸ್ಟ್ ರಿಯಲಿಸಂಗೆ ಒಲಿಯುತ್ತ ಹೋದ ಅಪ್ವರ್ಡ್ ತನ್ನೊಳಗಿನ ಸೃಜನಶೀಲತೆಯನ್ನೇ ಮಧ್ಯಮ ವರ್ಗದ ಲಂಪಟತನವೆಂದು ತಿಳಿದು ಆ ಕಾಲಕ್ಕೆ ವಿಚಿತ್ರವಾದ, ಕಾಪ್ಕ ಗೊತ್ತಾಗುವುದಕ್ಕಿಂತ ಮುಂಚೆ ಕಾಪ್ಕ ಬರವಣಿಗೆಯ ಸ್ವರೂಪದಲ್ಲಿದ್ದ ತನ್ನ ಕೃತಿಯನ್ನು ಪ್ರಕಟಿಸಲೂ ಇಚ್ಛಿಸಲಿಲ್ಲ.
ಅವನ ಆತ್ಮೀಯ ಗೆಳೆಯನಾಗಿದ್ದ ಇಷರ್‌ವುಡ್‌ನ ಜೊತೆ ಇವನು ಆಕ್ಸ್‌ಫರ್ಡ್‌ನಲ್ಲಿ ಓದಿದ್ದು. ಈ ದಿನಗಳ ಬಗ್ಗೆ ಇಷರ್‌ವುಡ್ ರೋಚಕವಾದೊಂದು ಕಟ್ಟುಕಥೆ ಬರೆದಿದ್ದಾನೆ (ಔಜಿಟ್ಞ ್ಞ ಖಟಡಿ). ಅಪ್ವರ್ಡ್ ಇದರಲ್ಲಿ ಛಾಮರ್ಸ್ ಎಂಬ ಪಾತ್ರ. ಇವನೂ ಇಷರ್‌ವುಡ್‌ನೂ ಕೂಡಿ ಮಾರ್ಟ್ ಮಿಯರ್ ಎಂಬ ಕಲ್ಪನಾ ಲೋಕವೊಂದನ್ನು ಕಟ್ಟಿಕೊಳ್ಳುತ್ತಾರೆ. ಇವರು ದ್ವೇಷಿಸುವ ವಿಐಪಿಗಳಾದ ಸಭ್ಯಸೋಗಿನ ಯಶಸ್ವಿಗಳೆಲ್ಲರೂ ಈ ಕಲ್ಪನಾ ಲೋಕದ ವಿಲನ್ ಪಾತ್ರಗಳಾಗುತ್ತಾರೆ. ಕಪಟದ ತಮ್ಮ ಯೂನಿವರ್ಸಿಟಿಯ ತೋರುಗಾಣಿಕೆಗಳನ್ನು ಈ ಇಬ್ಬರೇ ಒಂದು ಗುಪ್ತ ಲೋಕದ ಹೀರೋಗಳಾಗಿ ಅಣಕಿಸುತ್ತ ಬದುಕುತ್ತಾರೆ. ಇದು ಯಾವ ಮಟ್ಟ ಮುಟ್ಟುತ್ತದೆಂದರೆ ಇಷರ್‌ವುಡ್ ಪರೀಕ್ಷೆಯಲ್ಲಿ ಬೇಕೆಂದೇ ಅಸಂಬದ್ಧ ಉತ್ತರಗಳನ್ನು ಬರೆದು ಫೇಲಾಗುತ್ತಾನೆ. ಸುಳ್ಳಿನ ಪೋಷೋಕ್ರಸಿಯ ಮೇಲೆ ಅವನ ರಿವೆಂಜ್ ಇದು.
ಹಿಟ್ಲರ್ ಜರ್ಮನಿಯಲ್ಲಿ ಬಲವಾಗುತ್ತ ಹೋದ ಕಾಲವಿದು ಎಂಬುದನ್ನು ನೆನಪಿಟ್ಟುಕೊಂಡು ನಾನು ಮುಂದೆ ಬರೆಯುವುದನ್ನೆಲ್ಲ ಓದಬೇಕು. ಯಹೂದ್ಯರನ್ನು ಕುರಿಮಂದೆಯಂತೆ ಕ್ಯಾಂಪ್‌ಗಳಿಗೆ ಸಾಗಿಸಿ, ಹಗಲಿಡೀ ದುಡಿಸಿ, ಮಕ್ಕಳು ಮುದುಕರೆನ್ನದೆ ದುಡಿಯುವಷ್ಟು ದುಡಿಸಿ, ಗ್ಯಾಸ್ ಛೇಂಬರ್‌ಗಳಿಗೆ ಅವರನ್ನು ನೂಕಿ, ವಿಷ ವಾಯುವಿನಿಂದ ಸಾಯಿಸಿ, ಬೇಯಿಸಿ, ಅವರ ಎಲುಬುಗಳಿಂದ ಅಂಗಿ ಗುಂಡಿಗಳನ್ನೂ ಅವರ ತಲೆಬುರುಡೆಗಳಿಂದ ಆ್ಯಶ್ ಟ್ರೇಗಳನ್ನೂ ಮಾಡಿ ಜರ್ಮನ್ ಆರ್ಯರು ಬಳಸಿದ ಕಾಲವದು. ಸ್ಟಾಲಿನ್ ರಷ್ಯಾದಲ್ಲಿ ದೇಶದ ಪ್ರಗತಿಗಾಗಿ, ಬಡಜನರ ವಿಮೋಚನೆಗಾಗಿ ತನ್ನ ಸರ್ವಾಕಾರ ಒಪ್ಪದವರನ್ನು ಸೈಬೀರಿಯಾಕ್ಕೆ ಕಳಿಸಿ, ಕಾನ್ಸೆಂಟ್ರೇಶನ್ ಕ್ಯಾಂಪುಗಳಲ್ಲಿ ದುಡಿಸಿದ ಕಾಲವದು; ಅಪ್ಪಟ ಕಮ್ಯುನಿಸ್ಟರಾಗಿದ್ದ ತನ್ನ ಜೊತೆಯವರ ಮೇಲೆ ಸುಳ್ಳು ಆಪಾದನೆಗಳನ್ನು ಹೊರಿಸಿ, ಅವರೂ ಆ ಆಪಾದನೆಗಳನ್ನು ಒಪ್ಪುವಂತೆ ಮಿದುಳು ಮಾರ್ಜನಗೊಳಿಸಿ ಕೊಂದ ಕಾಲವದು. ಹಿಟ್ಲರ್‌ನಂಥ ರಾಕ್ಷಸನನ್ನು ಸದೆಬಡಿಯಲು ಸ್ಟಾಲಿನ್‌ನಂಥ ಅಪ್ಪಟ ಲೆನಿನ್‌ವಾದಿ ಉಪಾಯಗಾರ ನಾದ ದೃಢಚಿತ್ತನ ಅಗತ್ಯವಿದೆ ಎಂದು ಸಜ್ಜನರಾದ ಕಮ್ಯುನಿಸ್ಟರು- ಜಾರ್ಜ್ ಥಾಮ್ಸನ್‌ರಂಥವರು- ತಿಳಿದಿದ್ದ ಕಾಲವದು (ಜಾರ್ಜ್ ಥಾಮ್‌ಸನ್ ಬಗ್ಗೆ ಮುಂದೆ ಹೆಚ್ಚು ವಿವರಗಳಿವೆ). ತನ್ನ ನೂರಾ ಮೂರನೇ ವಯಸ್ಸಿನಲ್ಲೂ ಎಡ್ವರ್ಡ್ ಅಪ್ವರ್ಡ್, `ಹಿಟ್ಲರ್‌ನಿಗಿಂತ ಸ್ಟಾಲಿನ್ ವಾಸಿ- ಇಬ್ಬರನ್ನೂ ಒಂದೇ ಬಗೆಯಲ್ಲಿ ನೋಡಕೂಡದು' ಎನ್ನುತ್ತಾನಂತೆ.
ಎರಡು ಬಗೆಯ ಅಮಾನುಷತೆಗಳಲ್ಲಿ ಒಂದನ್ನು ಆಯುವಂತೆ ತಮ್ಮ ನಾಗರೀಕತೆಯನ್ನು ಕಟ್ಟುತ್ತ ಹೋಗಿರುವ, ನಮಗೂ ಹಾಗೆ ಕಟ್ಟುವಂತೆ ಪ್ರೇರೇಪಿಸುತ್ತ ಇರುವ ಐರೋಪ್ಯ ಇತಿಹಾಸದ ಬಗ್ಗೆಯೇ ನಾವು ಅನುಮಾನಿಸಬೇಕಾಗಿದೆ. ಆದರೆ ನೋಡಿ: ನಾವೂ ಚೀನೀಯರೂ ಜಪಾನೀಯರೂ ಅವರ ಹಾಗೇ ನಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದೇವೆ. ರಾವಿನಲ್ಲಿ, ರಾಷ್ಟ್ರೀಯತೆಯ ನೆವದಲ್ಲಿ, ಪ್ರಗತಿಯ ಹುಂಬ ಉತ್ಸಾಹದಲ್ಲಿ, ಮತೀಯತೆಯ ಹುರುಪಿನಲ್ಲಿ. ಈ ನಾಲ್ಕೂ ಬೇರೆ ಬೇರೆ ಇರಲಾರದು.
(ಮುಂದುವರಿಯುವುದು)



Post new comment