ಇಷರ್ವುಡ್‌, ಆರ್ವೆಲ್‌, ಕಾಡ್ವೆಲ್‌, ಥಾಮ್ಸನ್‌ ಮತ್ತು ಅಪ್ವರ್ಡ್‌

ಎಲ್ಲೋ ಮೂಲೆ ಸೇರಿ ತನ್ನ ಬದಲಾಗುತ್ತಿರುವ, ಬದಲಾಗಬೇಕಾದ ಅರಿವಿಗೆ ತಕ್ಕ ಶೈಲಿಯೇನೆಂಬುದನ್ನು ಹುಡುಕುತ್ತ ಮೌನಿಯಾಗಿ ಬಿಟ್ಟ ಅಪ್ವರ್ಡ್‌ನಲ್ಲಿ ನಂಬಿಕೆ ಇಟ್ಟುಕೊಂಡಿದ್ದವನು ಇಷರ್ವುಡ್‌ ಮಾತ್ರ. ಸ್ನೇಹಿತನ ಅಜ್ಞಾತವಾಸವನ್ನು ಗೌರವಿಸಿ,ತನ್ನ ಕಾಲದ ಅತ್ಯುತ್ತಮ ಕೃತಿಗಳನ್ನು ಈ ಗೆಳೆಯ ಬರೆದೇ ಬರೆಯುತ್ತಾನೆಂದು ಸಾಯುವವರೆಗೂ ಸತತವಾಗಿ ಇಷರ್ವುಡ್‌ ನಂಬಿದ್ದ.

Christopher-Isherwood

-2-
(ಕಳೆದ ಸಂಚಿಕೆಯಿಂದ)
ಅಪ್ವರ್ಡ್‌ ಈ ಕಲ್ಪನಾ ಲೋಕದಿಂದ ಹೊರ ಬಂದು ತನ್ನ ಮಧ್ಯಮವರ್ಗದ ಸೋಗಲಾಡಿತನ ವನ್ನು ಕಳೆದುಕೊಂಡು, ಜೊತೆಗೇ ಕಲ್ಪನಾಶೀಲವಾದ ಅಡಾಲಸೆಂಟಿನ ಲಂಪಟತನವನ್ನೂ ಕಳೆದುಕೊಂಡು ಕಾಲದ ನಿಜಗಳಿಗೆ ಹತ್ತಿರವಾಗಲು ಬಯಸುತ್ತಾನೆ. ಕೂಲಿಕಾರ್ಮಿಕರಿಗೆ ಹತ್ತಿರವಾಗಲೆಂದು, ತನ್ನ ಅರಿ ಯುವ ಕ್ರಮವನ್ನೇ ಬದಲಾಯಿಸಿಕೊಳ್ಳಬೇಕೆಂದು ಕಮ್ಯುನಿಸ್ಟ್‌ ಪಕ್ಷ ಸೇರಿ ಕಾರ್ಮಿಕರಿಗಾಗಿ ತನ್ನ ಕಾಯಕ ಪ್ರಾರಂಭಿಸುತ್ತಾನೆ. ಇದೇ ಕಾಲದಲ್ಲಿ ಆರ್ವೆಲ್ಲನೂ ತನ್ನ ಮಧ್ಯಮ ವರ್ಗೀಯ ಗುಣ ಗಳನ್ನು ಕಳೆದುಕೊಳ್ಳಲೆಂದು ಬರ್ಮದಲ್ಲಿ ಪೊಲೀಸ್‌ ಆಫೀಸರಾಗಿದ್ದವನು ಹಿಂದೆ ಬಂದು ಲಂಡನ್‌ ಮತ್ತು ಪ್ಯಾರೀಸ್‌ಗಳಲ್ಲಿ ಭಿಕ್ಷುಕನಾಗಿ ಅಲೆಯುತ್ತಾನೆ. ಆಡೆನ್‌, ಸ್ಪೆಂಡರರು ಸ್ಪೈನ್‌ ನಲ್ಲಿ ಸರ್ವಾಕಾರದ ವಿರುದ್ಧ ಹೋರಾಡಲು ಆರ್ವೆಲ್‌ನಂತೆಯೇ ರಿಪಬ್ಲಿಕನ್‌ ಬಣ ಸೇರಿ ಹೋರಾಡಲು ಹೋಗು ತ್ತಾರೆ. `ಕಾವ್ಯದಲ್ಲಿ ಏಳು ಬಗೆಗಳ ಸಂದಿಗ್ಧತೆಗಳು' ಎನ್ನುವ (ಈ ಪುಸ್ತಕವೇ ಎಂಟನೇ ಬಗೆಯ ಸಂದಿಗ್ಧತೆ ಎನ್ನಿಸುವಂತಿರುವ), ನನಗೆ ಗೆಳೆಯ ರಾಜೀವ ತಾರಾನಾಥರ ಅರವತ್ತರ ದಶಕದ ಪ್ರಾರಂಭದ ಬರವಣಿಗೆಯನ್ನು ನೆನಪು ಮಾಡಿಸುತ್ತಿದ್ದ ವಿಲಿಯಮ್‌ ಎಂಪ್ಸನ್‌ನಂತಹ (ಮುಂದೆ ನಮ್ಮ ಡಿ.ಎಸ್‌. ಶಂಕರರ ಗೈಡ್‌ ಆದವ) ನವ್ಯಾತಿನವ್ಯ ಲೇಖಕನೇ ಮುವ್ವತ್ತರ ದಶಕದ ಆತ್ಮ ಪ್ರತ್ಯಯದ ಈ ಕ್ರೈಸಿಸ್‌ನಲ್ಲಿ ಜನಸಂದಣಿಯ ಪ್ರದೇಶಗಳಲ್ಲಿ ನೋಟ್‌ ಬುಕ್‌ ಹಿಡಿದು ನಿಂತು ಬಡಜನರ ದೈನಿಕ ಚಟುವಟಿಕೆಗಳನ್ನು ಕಂಡಿದ್ದನ್ನು ಕಂಡಂತೆ ದಾಖಲಿಸಲು ತೊಡಗಿದ್ದ. ತನ್ನ ಅರಿಯುವ ಬಗೆಯನ್ನೇ ಬದಲಿಸಿಕೊಳ್ಳಲೆಂದು, ಮಧ್ಯಮ ವರ್ಗದ ಲೇಖಕರಲ್ಲಿ ಬದುಕನ್ನು ಗ್ರಹಿಸುವ ತಮ್ಮ ಇಂಗಿತ ಜ್ಞಾನದ ಬಗ್ಗೆಯೇ ಅನುಮಾನ ಹುಟ್ಟಿದ್ದ ಕಾಲ ಅದು.
ಇಷರ್‌ವುಡ್‌ ನ ಒಂದು ಫೇಮಸ್‌ ಮಾತಿದೆ: ಐ ಞ ್ಚಞಛ್ಟಿ. ಇರುವುದನ್ನು ಇದ್ದಂತೆ ಗ್ರಹಿಸುವ ಕ್ಯಾಮರಾ ಕಣ್ಣು ನನ್ನದು. ನನ್ನದೆಂದು ಹೇಳುವುದು ಏನೂ ಇಲ್ಲ. ಆದರೆ ಕ್ಯಾಮರಾದ ಗ್ರಹಿಕೆಗೂ ಆಯ್ದ ಕೋನವೊಂದು ಇರುವು ದಿಲ್ಲವೆ? ಆರ್ವೆಲ್‌ ಹಾಗೇ ಬರೆಯುತ್ತ ಹೋದ. ಸೋಷಲಿಸ್ಟ್‌ ರಿಯಲಿಸ್ಟರು ಇದನ್ನು ಒಪ್ಪಲಿಲ್ಲ. ಹಾಗೆ ಬರೆಯಬಲ್ಲ ಅತಿ ಸಾಧಾರಣ ಶಕ್ತಿಯ ಹುಂಬ ಬರವಣಿಗೆಯ ಬಗ್ಗೆ ಕ್ರಿಸ್ಟೋಫರ್‌ ಕಾಡ್ವೆಲ್‌ನಂತಹ ಸೂಕ್ಷ್ಮಜ್ಞ ಮಾರ್ಕ್ಸ್‌ವಾದಿಗಳು ಉತ್ಸಾಹಿಗಳಾಗ ದಾದರು. ಆರ್ವೆಲ್‌ ಕಮ್ಯುನಿಸ್ಟರ ಕಪಟ ನಾಟಕಗಳಿಂದ ಪ್ರಕ್ಷುಬ್ಧನಾಗಿ ಬರೆದ.
ಈ ಸಾಹಿತ್ಯಕ ಲೋಕದ ಜಂಜಡಗಳಲ್ಲಿ ಅತ್ಯಂತ ಪ್ರತಿಭಾಶಾಲಿಯಾದ ಕ್ರಿಸ್ಟೋಫರ್‌ ಕಾಡ್ವೆಲ್‌ ಅಜ್ಞಾತನಾಗಿದ್ದು, ಕೆಲವು ಪುಸ್ತಕಗಳನ್ನು ಜ್ವರದ ಅವಸರದಲ್ಲಿ ಎಂಬಂತೆ ಬರೆದು, ಬರೆದದ್ದನ್ನು ಪ್ರಕಟಿಸಹೋಗದೆ, ತನ್ನ ಮುವ್ವತ್ತನೇ ವಯಸ್ಸಿನಲ್ಲಿ ಸ್ಪೇನ್‌ನಲ್ಲಿ ಸರ್ವಾಕಾರದ ವಿರುದ್ಧ ಹೋರಾಡಿ ಸಾಯುತ್ತಾನೆ.
ನನ್ನ ವಾರಿಗೆಯವರಲ್ಲಿ ಕಾಡ್ವೆಲ್‌ನನ್ನು ಓದದವರು ಕಡಿಮೆ. ತನ್ನ ಮುವ್ವತ್ತನೇ ವಯಸ್ಸಿನಲ್ಲೇ ಸ್ಪೈನ್‌ ಯುದ್ಧದಲ್ಲಿ ಸತ್ತ ಇವನು ಫಿಸಿಕ್ಸ್‌ನಲ್ಲಿ ಕ್ರೈಸಿಸ್‌ ಎಂಬ ಪುಸ್ತಕವಲ್ಲದೆ ಕಲೆ, ಸಾಹಿತ್ಯ, ಸಿನಿಮಾಗಳ ಮೇಲೂ ಬರೆದಿದ್ದಾನೆ. ಒಂದೆರಡು ವರ್ಷಗಳ ಅಜ್ಞಾತ ವಾಸದಲ್ಲಿ ಬರೆದ ಪುಸ್ತಕಗಳು ಇವು. ಅವನು ಸತ್ತ ಮೇಲೆ ಬರ್ಮಿಂಗಂನಲ್ಲಿ ಗ್ರೀಕ್‌ ಪ್ರೊಫೆಸರ್‌ ಆಗಿದ್ದ ಜಾರ್ಜ್‌ ಥಾಮ್‌ಸನ್‌ ಎಂಬ ಪರಮಾಚಾರ್ಯ ಮಾರ್ಕ್ಸಿಸ್ಟ್‌ ಚಿಂತಕ, ಬ್ರಿಟಿಷ್‌ ಕಮ್ಯುನಿಸ್ಟ್‌ ಪಕ್ಷಕ್ಕೆ ಬೇಡವಾದವನೇ, ಧೈರ್ಯ ಮಾಡಿ ಕಾಡ್ವೆಲ್‌ನ ಪುಸ್ತಕವನ್ನು ಪ್ರಕಟಿಸಿದವ. ತನ್ನ ಹೆಸರನ್ನು ಬಹಿರಂಗಗೊಳಿಸದೆ ಕಾಡ್ವೆಲ್‌ ಮಾರ್ಕ್ಸ್‌ವಾದಕ್ಕೆ ಹೊಸದನ್ನು ಸೇರಿಸಿದವನೆಂದು ಹೇಳಿ ಮತೀಯ ಪಕ್ಷದ ನಿಷ್ಠುರಕ್ಕೆ ಥಾಮ್‌ಸನ್‌ ಒಳಗಾದ. ಮಾರ್ಕ್ಸ್‌ವಾದಕ್ಕೆ ಲೆನಿನ್‌, ಸ್ಟಾಲಿನ್‌ ಅಲ್ಲದೆ ಬೇರೆ ಯಾರಾದರೂ ಹೊಸದನ್ನು ಸೇರಿಸಲು ಸಾಧ್ಯವೆ? ಸಾಧುವೆ?

Christopher Caudwell
ಇದು ರಿವಿಷಿನಿಸಂ ಅಥವಾ ಟ್ರಾಟ್ಸ್‌ಕಿಸಂ! ಬಲಪಂಥೀಯರ ಬಳಿ ಕಲ್ಲುಗಳ ಚೀಲವಿರುವಂತೆ ಎಡಪಂಥೀಯರ ಬಳಿ ಬೈಗುಳದ ಚೀಲವಿರುತ್ತದೆ, ಆ ಕಾಲದಲ್ಲೂ; ಈ ಕಾಲದಲ್ಲೂ.
ಸ್ಟಾಲಿನ್ನನ ಬಾಲಬಡುಕನಾದ ಸಡನೋವ್‌ ಎಂಬುವವನ ಸೋಷಲಿಸ್ಟ್‌ ರಿಯಲಿಸಂ ಇವರ ಬೈಬಲ್‌. ಕಾಡ್ವೆಲ್‌ರಂಥವರು ಇವರ ಪಾಲಿಗೆ ಬೂರ್ಜ್‌ವಾ ಆದರ್ಶವಾದಿಗಳು. ಇಂತಹ ವಾದಕ್ಕೆ ಎದುರಾದವನು ಗ್ರೀಕ್‌ ಪ್ರೊಫೆಸರ್‌ ಜಾರ್ಜ್‌ ಥಾಮ್‌ಸನ್‌. ಯೂನಿವರ್ಸಿಟಿಗೆ ಸೈಕಲ್‌ ಮೇಲೆ ಬರುತ್ತಿದ್ದ, ಕಾರನ್ನು ಡ್ರೈವ್‌ ಮಾಡಲೂ ಬಾರದ, ಕಾರ್ಮಿಕರ ಸಂಘಟನೆಗಳಲ್ಲಿ ಶೇಕ್ಸ್‌ಪಿಯರ್‌ನನ್ನು ಓದುತ್ತಿದ್ದ, ಮಾವೋನನ್ನು ಮೆಚ್ಚುತ್ತ ಹೋದ, ಬದುಕಿನಲ್ಲಿ ಒಬ್ಬ ಸರಳ ಋಷಿಯಂತೆ ನನಗೆ ಕಾಣುತ್ತಿದ್ದ ಈ ಥಾಮ್‌ಸನ್‌ನಲ್ಲೂ ಗುಪ್ತವಾಗಿದ್ದ ಸ್ಟಾಲಿನ್‌ ಮೆಚ್ಚುಗೆ ಆಗೀಗ ಹೊರಬೀಳುತ್ತಿತ್ತು. ಈ ಥಾಮ್‌ಸನ್‌ ಬಗ್ಗೆ ಇನ್ನಷ್ಟು ಹೇಳಬೇಕು.
ಈ ಕಾಲದ ತಮಿಳು ಚಿಂತಕರಲ್ಲಿ ಒಬ್ಬನಾದ ಶ್ರೀಲಂಕಾದ ನನ್ನ ಗೆಳೆಯ ಕೈಲಾಸಪತಿಗೆ ಈ ಥಾಮ್‌ಸನ್‌ ಗೈಡು. ಥಾಮ್‌ಸನ್‌ ಐರಿಷ್‌ ಭಾಷೆಯ ಪುನರುಜ್ಜೀವನಕ್ಕಾಗಿ ಮಹತ್ವದ ಕೆಲಸ ಮಾಡಿದವರು. ಕೈಲಾಸಂ ಅವರನ್ನು ನನಗೆ ಹತ್ತಿರದವರನ್ನಾಗಿ ಮಾಡಿದ, ಎ.ಕೆ. ರಾಮಾನುಜನ್‌ರಿಗೆ ಮಹತ್ವದ ಚಿಂತಕನಾಗಿ ಕಂಡಿದ್ದ ಈ ಕೈಲಾಸಂ ತನ್ನ ಯೌವನದಲ್ಲೇ ಕ್ಯಾನ್ಸರ್‌ ಆಗಿ ಥಟ್ಟನೇ ಕಣ್ಮರೆಯಾಗಿಬಿಟ್ಟನು. ನಾನು ಇಂಗ್ಲೆಂಡಿನಲ್ಲಿ ಬರೆದ `ಸಂಸ್ಕಾರ', ನನ್ನ ಕನ್ನಡದಮೇಲಿನ ಬರವಣಿಗೆಗಳು- ಇವೆಲ್ಲರ ಹಿಂದೆ ಥಾಮ್‌ಸನ್‌ ಮತ್ತು ಕೈಲಾಸಂ ಜೊತೆಗಿನ ನನ್ನ ಸಂವಾದಗಳು ಕೆಲಸ ಮಾಡಿವೆ. ಹಾಗೆಯೇ ನಾನು ಕಂಡುಕೊಂಡ ಅಪ್ವರ್ಡ್‌ನ ಜೊತೆಗಿನ ನನ್ನ ಮಾತು ಕತೆಗಳು.
ಇದನ್ನೆಲ್ಲ ಬರೆಯುತ್ತಿರುವ ನಾನು ಇನ್ನೊಂದು ವಿಷಯ ಹೇಳದೇ ಹೋದರೆ ತಪ್ಪಾಗುತ್ತದೆ. ನಾವು ಈಗ ಬಹಳ ಇಷ್ಟಪಡುವ ಯೇಟ್ಸ್‌, ಎಲಿಯಟ್‌ ಮತ್ತು ಪೌಂಡರೂ ಇನ್ನೊಂದು ವಿರುದ್ಧ ದಿಕ್ಕಿನಲ್ಲಿ ಸ್ಪಂದಿಸಿದ ವರು. ಇಟಲಿಯಲ್ಲಿ ಮುಸ್ಸೋಲಿನಿಯೂ, ಜರ್ಮನಿ ಯಲ್ಲಿ ಹಿಟ್ಲರನೂ ತಮ್ಮ ಕಾಲದ ನೈತಿಕ ಅಧಃಪತನವನ್ನು ವೀರ್ಯವತ್ತಾಗಿ ಎದುರಿಸಬಲ್ಲರೆಂಬ ಭ್ರಾಂತಿ ಇವರಿ ಗಿತ್ತು. ಕೆಲವರು ಬೇಗ ಹಿಟ್ಲರ್‌, ಮುಸ್ಸೋಲಿನಿಯ ರಿಂದ ಭ್ರಮನಿರಸನರಾದರೆ ಪೌಂಡ್‌ ಮಾತ್ರ ಇಟಲಿಗೇ ಹೋಗಿ ಕೆಲಸ ಮಾಡಿದ. ಆರ್ವೆಲ್‌ ಕೊನೆ ತನಕ ತಾನು ಸೋಷಲಿಸ್ಟ್‌ ಎಂದೇ ಗುರುತಿಸಿಕೊಂಡು ತನ್ನ ದೇಶದ ಶ್ರೀಮಂತರ ವಿಚಾರಗಳಿಗೂ ಸೋವಿಯತ್‌ ದೇಶದ ಸ್ಟಾಲಿನ್‌ಗೂ ಏಕರೀತಿಯಲ್ಲಿ ವಿರೋಧ ತೋರಿಸುತ್ತ ತಾನು ನಂಬಿದ್ದನ್ನು, ಕಂಡದ್ದನ್ನು ನಿರ್ವಂಚನೆಯಿಂದ ಬರೆದ. ನಿಜವಾಗಿ ಇಪ್ಪತ್ತರ ದಶಕದ ಲೇಖಕ ಹೀರೋ ಎಂದರೆ ಆರ್ವೆಲ್ಲನೇ.
ಆರ್ವೆಲ್‌ ಸಿದ್ಧಾಂತಗಳನ್ನು ನಂಬುವವನಲ್ಲ; ಕಂಡದ್ದನ್ನು ಕಂಡ ಹಾಗೆ ಬರೆಯುವ ನಿಷ್ಠುರವಾದಿ. ಕಾಡ್ವೆಲ್‌ ಸಿದ್ಧಾಂತಿ; ಕಾಣುವುದಕ್ಕೇ ಸಿದ್ಧಾಂತದ ನಿರ್ದೇಶನ ಬೇಕು, ಎರಡೂ ಅನ್ಯೋನ್ಯ ಎಂದು ತಿಳಿದವನು. ಆರ್ವೆಲ್‌ನನ್ನು ಮೆಚ್ಚಿ ನೆಚ್ಚಿ ಆಮೇಲೆ ಅನುಮಾನಿಸಬೇಕಾಗುತ್ತದೆ; ಕಾಡ್ವೆಲ್‌ನನ್ನು ಅನುಮಾನಿಸುತ್ತಲೇ ನೆಚ್ಚಬೇಕಾಗುತ್ತದೆ. ಈ ಕಷ್ಟ ಗೊತ್ತಿರುವವರು ಆಧುನಿಕ ಮಾರ್ಕ್ಸ್‌ವಾದಿಗಳಾದ ರೇಮಂಡ್‌ ವಿಲಿಯಮ್ಸ್‌ ಮತ್ತು ನಮ್ಮವರೇ ಆದ ರಾಜಶೇಖರರಂಥವರು.
ತಾನು ಬರೆಯುತ್ತಿದ್ದ ರೀತಿಯಲ್ಲಿ ಬರೆಯುವುದೇ ಒಂದು ಅಪರಾಧವಾಗಿ ಅಪ್ವರ್ಡ್‌ಗೆ ಕಾಣಿಸಿದ್ದರಿಂದ ಅವನು ಬರೆಯುವುದನ್ನೇ ನಿಲ್ಲಿಸಿದ. ಅವನು ನಿರಾಕರಿಸಿದ ಅವನ ಒಂದು ಕಿರು ಕಾದಂಬರಿ ಮತ್ತು ಕೆಲವು ಕಥೆಗಳು ಅವನನ್ನು ಮೆಚ್ಚಿದ, ಅವನಿಂದ ಪ್ರಭಾವಿತರಾದ ಆಡೆನ್‌ರಂತಹವರಿಗೆ ಸಮಸ್ಯಾತ್ಮಕವಾ ದವು. ಎಲ್ಲೋ ಒಂದು ಶಾಲೆಯಲ್ಲಿ ಕೆಲಸ ಮಾಡುತ್ತ, ಸಂಜೆ ಪಕ್ಷ ಹೇಳಿದ ಕಾಯಕ ಮಾಡುತ್ತ ಅಪ್ವರ್ಡ್‌ ತನ್ನ ಕಾಲವನ್ನು ಅಜ್ಞಾತನಾಗಿ ಕಳೆದ. ಅವನು ಇದ್ದಾನೊ ಇಲ್ಲವೋ, ಎಲ್ಲಿದ್ದಾನೆ ಎಂಬುದು ಇಂಗ್ಲೆಂಡಿನ ಬರಹ ಗಾರರ ಲೋಕಕ್ಕೆ ಗೊತ್ತೇ ಇರಲಿಲ್ಲ. ಪರಮಹಂಸರ ಅನುಯಾಯಿಯಾಗಿ, ಅವಸಾನದ ಕಾಲದಲ್ಲಿ ಬರ್ಲಿನ್‌ನಲ್ಲಿ ಬದುಕಿ ಆ ಬಗ್ಗೆ ಅದ್ಭುತವಾದ ಕಥೆಗಳನ್ನು ಬರೆದ ಇಷರ್ವುಡ್‌ ಮಾತ್ರ ಖ್ಯಾತನಾದ. ಅವನೂ ಆಡೆನ್ನನೂ ಇಂಗ್ಲೆಂಡಿನ ಬಿಗುಮಾನದ ನೈತಿಕತೆಯಿಂದ ಹೇಸಿ ಇಂಗ್ಲೆಂಡನ್ನು ತೊರೆದು ಅಮೆರಿಕನ್ನರಾದರು. ಎಲಿಯಟ್‌ ಇದಕ್ಕೆ ವಿರುದ್ಧವಾದದ್ದನ್ನು ಮಾಡಿದ. ಹೆನ್ರಿ ಜೇಮ್ಸ್‌ನಂತೆ ಎಲಿಯಟ್‌ನೂ ಚರ್ಯೆಯಿಲ್ಲದ ಜನಸಮೂಹವಾಗಿ ಬಿಟ್ಟ ಅಮೆರಿಕಾವನ್ನು ತೊರೆದು ಬ್ರಿಟಿಷ್‌ ಪ್ರಜೆಗಳಾಗಿದ್ದರು.

George Orwell
ಎಲ್ಲೋ ಮೂಲೆ ಸೇರಿ ತನ್ನ ಬದಲಾಗುತ್ತಿರುವ, ಬದಲಾಗಬೇಕಾದ ಅರಿವಿಗೆ ತಕ್ಕ ಶೈಲಿಯೇನೆಂಬುದನ್ನು ಹುಡುಕುತ್ತ ಮೌನಿಯಾಗಿ ಬಿಟ್ಟ ಅಪ್ವರ್ಡ್‌ನಲ್ಲಿ ನಂಬಿಕೆ ಇಟ್ಟುಕೊಂಡಿದ್ದವನು ಇಷರ್ವುಡ್‌ ಮಾತ್ರ. ಸ್ನೇಹಿತನ ಅಜ್ಞಾತವಾಸವನ್ನು ಗೌರವಿಸಿ,ತನ್ನ ಕಾಲದ ಅತ್ಯುತ್ತಮ ಕೃತಿಗಳನ್ನು ಈ ತನ್ನ ಯೌವನದ ದಿನಗಳ ಗೆಳೆಯ ಬರೆದೇ ಬರೆಯುತ್ತಾನೆಂದು ಸಾಯುವವರೆಗೂ ಸತತವಾಗಿ ಇಷರ್ವುಡ್‌ ನಂಬಿದ್ದ.
ಈ ಅಪ್ವರ್ಡ್‌ ನನಗೆ ಹೇಗೆ ಪರಿಚಿತನಾದ? ಅದೊಂದು ಕಥೆಯೇ.
(ಮುಂದುವರಿಯುವುದು)

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
Image CAPTCHA
Copy the characters (respecting upper/lower case) from the image.