ಸಿದ್ಧಾಂತಗಳು ಸತ್ತಂತೆ ಕಾಣುವ ನಮ್ಮ ಕಾಲದಲ್ಲಿ

ಅಪ್ವರ್ಡ್‌ಗೆ ನಾನು ಲಯನಲ್‌ ಟ್ರಿಲ್ಲಿಂಗ್‌ನನ್ನು ಓದಿಸಿದೆ. ರೇಮಂಡ್‌ ವಿಲಿಯಮ್ಸ್‌ನನ್ನು ಅವನು ಓದಿ ಮೆಚ್ಚಿಕೊಂಡಿದ್ದ. ನನ್ನ `ಘಟಶ್ರಾದ್ಧ' ಕಥೆ ವಿ.ಕೆ. ನಟರಾಜರ ಭಾಷಾಂತರದಲ್ಲಿ ಪ್ರಕಟವಾಗಿತ್ತು. ಅದನ್ನು ಓದಿ ಬ್ರಾಡ್‌ ಬರಿಯಂತೆಯೇ ಅಪ್ವರ್ಡ್‌ನೂ ಇಷ್ಟಪಟ್ಟಿದ್ದ. ಬಿಬಿಸಿಯಲ್ಲಿ ಅದನ್ನು ಬಿತ್ತರಿಸಲೂ ಬ್ರಾಡ್‌ಬರಿ ಪ್ರಯತ್ನಿಸಿದ್ದ. ಆದರೆ ನನ್ನ ಕಥೆಯ ಬಾಲಕನ ಧಾರ್ಮಿಕ ಸಂಪತ್ತಿನ ಭಾಷೆ ಇಂಗ್ಲಿಷ್‌ ಹುಡುಗನ ಓದಿನಲ್ಲಿ ಕೃತಕವೆನ್ನಿಸುವುದರಿಂದ ಅದನ್ನು ಕೈಬಿಡಲಾಯಿತು. ಮುಗ್ಧತೆಯಲ್ಲಿ ನನ್ನ ಕಥೆಯ ನಾಣಿ ಸೃಷ್ಟಿಸುವ ಅಲೌಕಿಕದ ಪ್ರಪಂಚ ಬ್ಲೇಕ್‌ ಕಾಲದ ಬಾಲಕನಿಗೆ ಸಾಧ್ಯವೋ ಏನೊ! ಈಗ ನನ್ನ ಮೊಮ್ಮಕ್ಕಳಿಗೂ ಅದು ಅಪರಿಚಿತ. ಇವೆಲ್ಲವನ್ನೂ ನಾನು ಅಪ್ವರ್ಡ್‌ ಜೊತೆ ಚರ್ಚಿಸುತ್ತ ಇದ್ದೆ. 

ಅಪ್ವರ್ಡ್‌ ತನ್ನ ಮಾರ್ಕ್ಸಿಸ್ಟ್‌ ಧೋರಣೆಗಳನ್ನು ಬಿಲ್‌ಕುಲ್‌ ಬಿಡದವ. ನಾನು `ಮಾನವ ಸ್ವಭಾವದಲ್ಲಿ ಸಾರ್ವಕಾಲಿಕ' ಎನ್ನುವುದನ್ನು ಅವನು `ಹೌದು. ಆದರೆ ಈ ಸಾರ್ವಕಾಲಿಕವಾದ್ದು ಮೃಗೀಯ ಲೋಕದಲ್ಲೂ ಕಾಣುವಂತಹುದು. ಲೇಖಕನಾಗಿ ನನಗೆ ಮುಖ್ಯವಾದ್ದು ನನ್ನ ಕಾಲಕ್ಕೆ ವಿಶೇಷವಾದು'್ದ ಎಂದು ಒಂದು ಕಾಗದದಲ್ಲಿ ಬರೆದಿದ್ದಾನೆ. ಸದ್ಯಕ್ಕೆ ಮಾತ್ರ ಸ್ಪಂದಿಸುವುದರಿಂದ, ಕೇವಲ ರಾಜಕೀಯವಾಗಿ ಯೋಚಿಸುವುದರಿಂದ ನೀನು ನಿನ್ನ ಜೀನಿಯಸ್‌ಗೇ ಹೊರಗಿನವನಾಗಿಬಿಟ್ಟಿ ಎಂದು ನಾನು ವಾದಿಸುವುದನ್ನು ಒಪ್ಪುತ್ತಿದ್ದ ಅಪ್ವರ್ಡ್‌, ಪಾಲಿಟಿಕ್ಸ್‌ ಬದ್ಧತೆ ಸಾಹಿತ್ಯವನ್ನು ನಾಶ ಮಾಡುವಂತೆ, ಅನುಭಾವ- ಮಿಸ್ಟಿಸಿಸಂ- ಕೂಡ ಕಾವ್ಯವನ್ನು ಸಪ್ಪೆಗೊಳಿಸಿ ಚರ್ವಿತಚರ್ವಣಗೊಳಿಸು ತ್ತದೆ ಎಂದು ವಾದಿಸುತ್ತಿದ್ದ. ಅರವಿಂದರಿಂದ ಸತ್ಯವನ್ನು ಕಡಪಡೆದು ಬರೆಯುವ ಕನ್ನಡದ ಲೇಖಕರ ವಿರುದ್ಧ ದಂಗೆಯೆದ್ದ ನವ್ಯ ಪಂಥದ ನನಗಂತೂ ಇದು ನಿಜವೆನ್ನಿಸಿತ್ತು.

ನೀನು ಹಿಟ್ಲರ್‌ವಾದಿಯಾಗಿ ಒಂದು ವಿಶೇಷ ಜಾಣ್ಮೆಯ ಪದ್ಯ ಬರೆದರೂ ಅದು ಒಳ್ಳೆಯ ಪದ್ಯವಾಗಲಾರದು;  ಆದರೆ ನೀನು ಮಾರ್ಕ್ಸನನ್ನು ಒಪ್ಪದಿದ್ದರೂ ಜೀವನಕ್ಕೆ ನೈಜವಾಗಿದ್ದು ಬರೆದರೆ ಬಾಲ್ಸಾಕ್‌ನಂತೆ ದೊಡ್ಡ ಕೃತಿಗಳನ್ನು ಬರೆಯುವುದು ಸಾಧ್ಯ ಎನ್ನುವಷ್ಟರ ಮಟ್ಟಿಗೆ ಅಪ್ವರ್ಡ್‌ ಬದಲಾಗಿದ್ದ. ನಾನು ಭಾರತಕ್ಕೆ ಮರಳಿದ ಮೇಲೆ, ನನ್ನ ಕನ್ನಡ ವಾದದಿಂದಾಗಿ ಯೂನಿವರ್ಸಿಟಿಯ ಇಂಗ್ಲಿಷ್‌ ಇಲಾಖೆಯಿಂದ ದೂರ ಉಳಿಯಬೇಕಾಯಿತು. ಅಪ್ವರ್ಡ್‌ ನನ್ನ ಹಿತಚಿಂತಕನಾಗಿ, ರಾಜಕೀಯ ಜಂಜಾಟಗಳಲ್ಲಿ ನಿನ್ನ ಬರವಣಿಗೆ ಬಿಡಬೇಡ, ನಾನು ಮಾಡಿದ ತಪ್ಪು ಮಾಡಬೇಡವೆಂದು ಬರೆದ ಕಾಗದಗಳು ನನ್ನ ಬಳಿ ಇವೆ. ಅಪ್ವರ್ಡ್‌ ಬರೆದು ಮುಗಿಸಿದ ತ್ರಿವಳಿ ಕಾದಂಬರಿಗಳನ್ನು ನನಗೆ ಕಳುಹಿಸಿದ್ದಾನೆ. ನನ್ನ ಥೀಸಿಸ್‌ನನ್ನು ಇಶರ್ವುಡ್‌ಗೆ ಕಳುಹಿಸಿ, ಅದನ್ನು ಅಮೆರಿಕಾದಲ್ಲಿ ಪ್ರಕಟಿಸಲು ಪ್ರಯತ್ನಿಸಿದ್ದಾನೆ. ಆದರೆ ನಾನದನ್ನು ಒಂದು ಪುಸ್ತಕದ ರೂಪದಲ್ಲಿ  ತಿದ್ದುವುದು ಅಗತ್ಯವಾಗಿತ್ತು. ನನಗೆ ಅದರಲ್ಲಿ ಉಮೇದೇ ಹುಟ್ಟಲಿಲ್ಲ.

ನನ್ನಿಂದ ತಾನು ಉಪಕೃತನೆಂದು ಅಪ್ವರ್ಡ್‌ ಅವನಿಗಿಂತ ಕಿರಿಯನಾದ ನನ್ನನ್ನು ಬೆಳೆಸುವ ಪ್ರೀತಿಯಲ್ಲಿ ಹೇಳಿರಬಹುದು. ನಾನಂತೂ ಅವನ ಸಹವಾಸದಿಂದ ನನ್ನ ಒಳಬಾಳನ್ನು ಬೆಳೆಸಿಕೊಂಡಿದ್ದೇನೆ. ಅವನ ಜೊತೆ ಸಂಪರ್ಕ ತಪ್ಪಿ ಅದೆಷ್ಟು ವರ್ಷಗಳೇ ಆಗಿಹೋದವೊ! ಆದರೆ ಕೆಲವು ವರ್ಷಗಳ ಹಿಂದೆ ನಡೆದ ಒಂದು ಘಟನೆಯಿಂದ ಈ ಸ್ಮೃತಿ ಸರಣಿಯನ್ನು ಕೊನೆ ಮಾಡುತ್ತೇನೆ.

ಅಪ್ವರ್ಡ್‌ನ ಅಭಿಮಾನಿ ಮತ್ತು ಮುವ್ವತ್ತರ ದಶಕ ಸೃಷ್ಟಿಸಿದ ಚಿಂತನಾಪರ ಲೇಖಕ (ಎನ್‌ಕೌಂಟರ್‌ ಸಂಪಾದಕ) ಸ್ಟೀಫನ್‌ ಸ್ಪೆಂಡರ್‌ ಕೆಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ನಾನು ಅವರನ್ನು ನೋಡಿ ನನ್ನ ಹೆಸರು ಹೇಳಿಕೊಂಡು ನಮಸ್ಕರಿಸಿದೆ. ಸ್ಪೆಂಡರ್‌ ನಯವಾಗಿ ಅಪ್ಪಟ ಬ್ರಿಟಿಷ್‌ ಸೌಜನ್ಯದ ಮಾತಾಡಿ ಕೈಕುಲುಕಿದರು. ನಾನು ಆಮೇಲೆ ಜಾಗ ಹುಡುಕಿ ಹಿಂದಿನ ಸೀಟಲ್ಲಿ ಕುಳಿತುಕೊಂಡೆ. ಸಭೆ ಸ್ಪೆಂಡರ್‌ನನ್ನು ನೋಡಲೆಂದು ತುಂಬಿತ್ತು. ರಾಮಕೃಷ್ಣ ಹೆಗಡೆ ಸಭೆಗೆ ಬಂದರು. ಸ್ಪೆಂಡರ್‌  ಅವರೊಡನೆ ಮಾತಾಡುತ್ತಿದ್ದವರು ಎದ್ದು ನಿಂತರು. ಹೆಗಡೆಯೂ ನಿಂತು ಹುಡುಕಿ ನನ್ನನ್ನು ಗುರುತಿಸಿ ಅವನಿಗೆ ತೋರಿಸಿದರು. ಅವನ ಸಮಕಾಲೀನ ಲೇಖಕರಲ್ಲಿ ಪ್ರಾಯಶಃ ಎಲ್ಲರಿಗಿಂತ ಎತ್ತರದ ಆಳಾದ ಸ್ಪೆಂಡರ್‌ ನಾನು ಕೂತಿದ್ದ ಜಾಗಕ್ಕೆ ನಡೆದು ಬಂದ. ಕೈಕುಲುಕಿ ಹೇಳಿದ: `ನಾನು ನೋಡಬೇಕೆಂದು ಇದ್ದ ಅನಂತಮೂರ್ತಿ ನೀನೇ ಇರಬಹುದೆಂದು ನೀನು ನನ್ನನ್ನು ಮಾತಾಡಿಸಿದಾಗ ಹೊಳೆಯಲೇ ಇಲ್ಲ, ಸಾರಿ. ನಿನ್ನನ್ನು ನಾನು ಓದಿದ್ದೇನೆ. ನಿನ್ನನ್ನು ನೋಡಲು ಬಯಸಿದ್ದೆ. ಥ್ಯಾಂಕ್ಸ್‌  ಫಾರ್‌ ಕಮಿಂಗ್‌.'

ಈ ಸ್ಪೆಂಡರ್‌ ಬೇರೆಯ ಮನುಷ್ಯನೇ ಆಗಿದ್ದ. ಬ್ರಿಟಿಷ್‌ ಸೌಜನ್ಯದ ಮಾತಾಡಲಿಲ್ಲ. ಅಪ್ವರ್ಡ್‌ ಬಗ್ಗೆ ಹಳೆಯ ಸ್ನೇಹಿತನಂತೆ ಮಾತಾಡಿದ. ನಾನು ಗುರುತಿಸಿಕೊಂಡಾಗ ಸೌಜನ್ಯದ ಸ್ಪೆಂಡರ್‌ ನನಗೆ ಕಂಡಿದ್ದ. ಆದರೆ ಒಳಗಿನಿಂದ ಗುರುತಿಸಿಕೊಂಡಿದ್ದಾಗಲೇ ನಾವು ಒಬ್ಬರನ್ನೊಬ್ಬರು ನಿಜವಾಗಿ ಕಾಣುವುದು ಅಲ್ಲವೆ? ನಾನು ಕಂಡ ಅಪ್ವರ್ಡ್‌ ಅವನ ಯೌವನದ ಗೆಳೆಯ ಸ್ಪೆಂಡರಿಗೆ ನನ್ನನ್ನು ಕಾಣಿಸಿದ್ದ.

***

ಅತಿದುಷ್ಟವಾದ ಕಾಲದಲ್ಲಿ ಬರೆಯುವುದು ಸಾಧ್ಯವೆ? ಅಥವಾ ಸಾಧುವೆ? ಎಂಬ ಪ್ರಶ್ನೆಯಿಂದ ಈ ಲೇಖನ ಮಾಲೆಯನ್ನು ಪ್ರಾರಂಭಿಸಿದ್ದೆ. ಯಹೂದ್ಯರನ್ನು ಹಿಂಸೆ ಮಾಡಿ ಬೇಯಿಸಿ ಸುಟ್ಟ ಆಶ್‌ವಿಟ್ಜ್‌ (Aushwitz) ಕ್ರೌರ್ಯವನ್ನು ಕಂಡ ನಂತರ ಕಾವ್ಯ ಸಾಧ್ಯವೆ ಎಂದು ಕಂಗಾಲಾಗಿ ಹೇಳಿದವರು ಇದ್ದಾರೆ. ಈ ದಿನಗಳಲ್ಲಿ, ಭಾರತ ಬಲವಾಗುತ್ತಿರುವಂತೆ ಕಾಣುವ ದಿನಗಳಲ್ಲಿ ಎಲ್ಲೆಲ್ಲೂ ಕೋಮುಹಿಂಸೆ, ಭಯೋತ್ಪಾದನೆ ತಲೆಯೆತ್ತುತ್ತಿರುವಾಗ ಒಂದು ಪ್ರೇಮ ಕಥೆಯನ್ನು ಬರೆಯುವುದು ಸಾಧ್ಯವೆ ಎಂದು ಕೇಳಬಹುದೇನೊ?

ಬ್ರೆಕ್ಟ್‌ ಬರೆದೊಂದು ಪದ್ಯ ನೆನಪಾಗುತ್ತದೆ. ನೆನಪಾದಷ್ಟನ್ನು ಮಾತ್ರ ಹೇಳುತ್ತೇನೆ.

ಮಗಳು ಕೇಳುತ್ತಾಳೆ: `ಅಪ್ಪ, ನಾನು ಫ್ರೆಂಚ್‌ ಕಲಿಯಲೆ?'

ಅಪ್ಪನಿಗೆ ಹೇಳಬೇಕೆನ್ನಿಸುತ್ತದೆ: `ಕಿರುಚಿದಷ್ಟು ಮಾತ್ರ ಕೇಳಿಸುವ ಈ ಜಂಜಡದಲ್ಲಿ ಫ್ರೆಂಚಿನ ಸೂಕ್ಷ್ಮಗಳಿಂದ ಏನು ಪ್ರಯೋಜನ ಮಗಳೆ?'

ಮಗಳು ಕೇಳುತ್ತಾಳೆ: `ಗಣಿತ ಕಲಿಯಲೇ ಅಪ್ಪ?'

ಅಪ್ಪನಿಗೆ ಹೇಳಬೇಕೆನ್ನಿಸುತ್ತದೆ: `ಎರಡು ಚೂರು ರೊಟ್ಟಿಯ ಜೊತೆ ಇನ್ನೆರಡು ಚೂರನ್ನು ಮಾತ್ರ ಬಯಸುವ ಈ ಕಾಲದಲ್ಲಿ ಗಣಿತ ಕಲಿತೇನು ಪ್ರಯೋಜನ ಮಗಳೆ?'

ಮಗಳು ಕೇಳುತ್ತಾಳೆ: `ಚರಿತ್ರೆ ಯನ್ನು ಓದಲೇ ಅಪ್ಪ?'

ಅಪ್ಪನಿಗೆ ಹೇಳಬೇಕೆನ್ನಿಸುತ್ತದೆ: `ಬಲಿಷ್ಠರು ಬಡವರನ್ನು ಕೊಲ್ಲುತ್ತಾರೆ ಎನ್ನುವಷ್ಟು ಮಾತ್ರ ನಿಜವೆನ್ನಿಸುವ ಈ ಕಾಲದಲ್ಲಿ ಚರಿತ್ರೆಯನ್ನೋದಿ ಏನು ಪ್ರಯೋಜನ ಮಗಳೆ?'

ಆದರೆ ಈ ಪದ್ಯ ಹುಟ್ಟಿಸುವ ಬೆರಗು ಅಪ್ಪ ಕೊಡುವ ಉತ್ತರದಲ್ಲಿದೆ: `ಹೀಗೆಲ್ಲ ನನಗೆ ಅನ್ನಿಸಿದರೂ ಮಗಳೆ, ಹೇಳುವೆ ಕೇಳು- ನೀನು ಫ್ರೆಂಚ್‌ ಕಲಿಯಬೇಕು, ಗಣಿತ ಕಲಿಯಬೇಕು, ಚರಿತ್ರೆ ಓದಬೇಕು.'

ಈ ದಿನಗಳಲ್ಲಿ ಮನುಷ್ಯ ಯಾವ ಕೃತಕತೆಯೂ ಇಲ್ಲದಂತೆ ನಿಸ್ವಾರ್ಥಿಯಾಗಿ, ಅದರಲ್ಲೇ ಖುಷಿ ಕಾಣುವವನಾಗಿ ಇರುವುದು ಸಾಧ್ಯವೆ? ಸಾಧ್ಯವೆಂದು ಯಾವ ಸೈದ್ಧಾಂತಿಕ ವಾದದ ಆಶ್ರಯವನ್ನೂ ಪಡೆಯದೆ ಹೇಳುವ ಕಥೆಯೊಂದನ್ನು ಈಚೆಗೆ ಓದಿ ಸಂತೋಷಪಟ್ಟಿದ್ದೇನೆ. ಅದು ಜಯಂತ ಕಾಯ್ಕಿಣಿ ಬರೆದ ಒಂದು ಕಥೆ: `ಚಾರ್ಮಿನಾರ್‌'(ದೇಶ ಕಾಲ-7).

***

ಮನುಷ್ಯನ ಒಳಬಾಳಿನ ಸುಳಿ ಸುತ್ತುಗಳನ್ನು, ಸುಖ ದುಃಖಗಳನ್ನು, ಕಪಟವನ್ನು, ದೈವಿಕತೆಯನ್ನು, ಆಗು ಹೋಗುಗಳನ್ನು, ಹಾಗೆಯೇ ಹೊರ ಪ್ರಕೃತಿಯ ಏಕಕಾಲಕ್ಕೆ ಶಾಶ್ವತವೂ ಚಂಚಲವೂ ಆದ ಮಾಯಾ ಜಗತ್ತನ್ನು ಸೃಷ್ಟಿಸುವುದರಲ್ಲಿ ಸಾಹಿತ್ಯ ಲೋಕಕ್ಕೆ ಮಾದರಿಗಳಾಗಿ ಪೂರ್ವ ಸೂರಿಗಳೂ ಇದ್ದಾರೆ; ಆಧುನಿಕರೂ ಇದ್ದಾರೆ. ಆದರೆ ರಾಜಕೀಯವೆಂದರೆ ಸಂಗೀತ ಕಛೇರಿಯಲ್ಲಿ ಗುಂಡಿನ ಶಬ್ದ ಕೇಳಿಸಿದಂತೆ ಎಂಬ ಐರೋಪ್ಯ ಲೇಕಕನೊಬ್ಬನ ಮಾತಿದೆ. ಕೇಳಿಸಿಕೊಳ್ಳದೆ ಇರುವಂತಿಲ್ಲ; ಕೇಳಿಸಿದ್ದನ್ನು ಹೇಗೆ ನಿಭಾಯಿಸಬೇಕು ತಿಳಿಯುವುದಿಲ್ಲ. ರಾಜಕೀಯವನ್ನೆ ವಸ್ತುವಾಗಿ ಪಡೆದ, ಆದರೆ ಜೀವನದ ನಿತ್ಯದ ಸಂಗೀತವನ್ನು ಕಡೆಗಣಿಸಲಾರದ ಲೇಖಕನೊಬ್ಬ ಹೇಗೆ ತಾನು ಕಾಣುವ ವಿರೋಧದ ಸತ್ಯಗಳನ್ನು ಒಟ್ಟಾರೆಯಾಗಿ ನಿಭಾಯಿಸುತ್ತಾನೆ- ಇದು ಸವಾಲು. ವೇದವ್ಯಾಸರು ಸ್ವೀಕರಿಸುವ ಸವಾಲು. ಟಾಲ್‌ ಸ್ಟಾಯ್‌ ನಿಭಾಯಿಸುವ ಸವಾಲು.

ಒಂದೇ ಕಾಣ್ಕೆಯಲ್ಲಿ ನೆಪೋಲಿಯನ್‌ ಶೀತದಿಂದ ವಿಚಲಿತವಾಗುವುದನ್ನೂ, ಒಬ್ಬಳು ತಾನು ಪಡೆದ ನಸ್ಯದ ಘಾಟು ರುಚಿಸದೆ ಕಿರಿಕಿರಿಗೊಳ್ಳುವುದನ್ನೂ, ಹೋರಾಟದಲ್ಲಿ ತೊಡಗಿದವ ರಾತ್ರಿ ಆಕಾಶ ನೋಡುತ್ತ ಮಲಗಿ ಶೂನ್ಯದ ದರ್ಶನ ಪಡೆಯುವುದನ್ನೂ ಟಾಲ್‌ ಸ್ಟಾಯ್‌ ಒಟ್ಟಾಗಿ ಕಂಡು ಬರೆಯಬಲ್ಲ. ಮುವ್ವತ್ತರ ದಶಕದ ಲೇಖಕರಿಗೆ ಇದು ಸಾಧ್ಯವಾಗಲಿಲ್ಲ. ರಾಷ್ಟ್ರೀಯತೆಯ ಅರ್ಥಹೀನ ದುರಾಸೆಯಿಂದ ನಡೆದ ಮೊದಲನೆಯ ಮೂರ್ಖ ಯುದ್ಧದಲ್ಲಿ ಜರ್ಮನಿ ಸೋತದ್ದು ಮಾತ್ರವಲ್ಲ; ದರಿದ್ರ ದೇಶವಾಯಿತು. ಇದರ ಫಲವಾಗಿ ಹಿಟ್ಲರ್‌ ಹುಟ್ಟಿಕೊಂಡ. ಪ್ರಾರಂಭದಲ್ಲಿ ಇಂಗ್ಲೆಂಡೂ ಅವನನ್ನು ತಾಳಿಕೊಂಡಿತು. ಸ್ಟಾಲಿನ್‌ ಅವನ ಜೊತೆ ಒಪ್ಪಂದವನ್ನೇ ಮಾಡಿಕೊಂಡು ಪ್ರಪಂಚದ ಕಮ್ಯುನಿಸ್ಟರನ್ನು ಕಂಗಾಲುಗೊಳಿಸಿದ. ಆಮೇಲೆ ಎರಡನೇ ಮಹಾಯುದ್ಧದಲ್ಲಿ ಸೋವಿಯತ್‌ ಸೈನಿಕರು ತಮ್ಮ ಅಸಾಮಾನ್ಯ ಶೌರ್ಯದಲ್ಲೂ ತ್ಯಾಗದಲ್ಲೂ ಯೂರೋಪಿ ನಲ್ಲಿ ಹಿಟ್ಲರನನ್ನು ಸೋಲಿಸಿದರು. ಆಗಲೇ ಸೋತ ಜಪಾನಿನ ಮೇಲೆ-ಯೂರೋಪಿನ ಮೇಲೆ ಅಲ್ಲ- ಸೋತರೂ ಸೋಲದ ಜಪಾನಿನ ಸೊಕ್ಕನ್ನು ಅಡಗಿಸಲಿಕ್ಕೂ, ಇನ್ನೂ  ಕ್ರೂರವೆಂದರೆ,  ತಮ್ಮ ಹೊಸ ಅಸ್ತ್ರವನ್ನು ಪ್ರಯೋಗಮಾಡಿ ಅದರ ಶಕ್ತಿಯನ್ನು ಕಣ್ಣಾರೆ ತಿಳಿಯಲಿಕ್ಕೂ ಅಮೆರಿಕನ್ನರು ಆಟಂಬಾಂಬನ್ನು ಬಳಸಿದರು.

ಹಿಟ್ಲರ್‌ ಯಹೂದ್ಯರನ್ನು ಕೊಂದರೆ, ಅಮೆರಿಕಾ ಬಡಪಾಯಿಗಳಾದ ಹಿರೋಷಿಮಾ, ನಾಗಸಾಕಿಯ ಮುಗ್ಧರನ್ನು ಸುಟ್ಟು ಎಲ್ಲರನ್ನೂ ನಿಧಾನವಾಗಿ ಕೊಲ್ಲುವ ಬೂದಿಯನ್ನೂ ಸೃಷ್ಟಿಸಿ ಮೊಸಳೆ ಕಣ್ಣೀರಿಟ್ಟಿತು.
ಯುದ್ಧಾನಂತರ ಸೋವಿಯತ್ತರು ಪೂರ್ವ ಯೂರೋಪಿನ ಹಲವು ದೇಶಗಳನ್ನು ಗುಲಾಮರನ್ನಾಗಿಯೂ ನಿರಭಿಮಾನರನ್ನಾಗಿಯೂ ಮಾಡಿ ತಮ್ಮ ಪಕ್ಷದ ಹಿಡಿತದಿಂದ ಆಳಿದರು. ಸೋವಿಯತ್‌ ಒಕ್ಕೂಟದ ನೆವದಲ್ಲಿ ರಷ್ಯದ ರಾಷ್ಟ್ರೀಯತೆಗೆ ತನ್ನೊಳಗಿನ ಹಲವು ದೇಶಗಳನ್ನು ಅಡಿಯಾಳಾಗಿ ಮಾಡಿದರು. ಝಾರ್‌ ದೊರೆಗಳು ಮಾಡಲಾರದ್ದನ್ನು ಸಿದ್ಧಾಂತದ ನೆವದಲ್ಲಿ ಸೋವಿಯತ್ತರು ಮಾಡಿದರು.

ಇವೆಲ್ಲವನ್ನೂ ಒಟ್ಟಾಗಿ ಗ್ರಹಿಸಲು ಕೆಲವರು ಫ್ರಾಯ್ಡ್‌ನನ್ನು ಬಳಸಿದರು; ಇನ್ನು ಕೆಲವರು ಮಾರ್ಕ್ಸ್‌ನನ್ನು ಬಳಸಿದರು. ಆದರೆ ತಮ್ಮ ಆಂತರ್ಯದಿಂದ ಹೊರಗನ್ನೂ ಒಳಗನ್ನೂ ಒಟ್ಟಾಗಿ ನೋಡಲಾರದೆ ಹೋದರು.
ಈಗ ಯಾವ ಸಿದ್ಧಾಂತವೂ ಇಲ್ಲದ ವಿಶ್ವ ಮಾರುಕಟ್ಟೆಯ ರಾಜಕೀಯ ಎಲ್ಲೆಲ್ಲೂ, ಗಾಂಧಿ-ಬುದ್ಧರು ಹುಟ್ಟಿದ ಭಾರತದಲ್ಲೂ, ಮಾವೋ ಮೆರೆದ ಚೀನಾದಲ್ಲೂ, ಮಾರ್ಕ್ಸ್‌ನಿಗೆ ಆಶ್ರಯ ಕೊಟ್ಟಿದ್ದ ಇಂಗ್ಲೆಂಡಿನಲ್ಲೂ ಬುಷ್‌ನನ್ನು ಎರಡು ಸಾರಿ ಗೆಲ್ಲಿಸಿದ ಅಮೆರಿಕಾಕ್ಕೆ ಅಡಿಯಾಳಾಗಿ ನಡೆದಿದೆ.

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
Image CAPTCHA
Copy the characters (respecting upper/lower case) from the image.