ಮನುಷ್ಯ ಚರಿತ್ರೆ ಬಗೆವ ಬಗೆಗಳು

ಚರಿತ್ರೆಯನ್ನು ಕುರಿತ ಮೂರು ಬಗೆಯ ಗ್ರಹಿಕೆ ಗಳನ್ನು ನಿಮ್ಮ ಇದಿರು ಇಡಲು ಬಯಸುತ್ತೇನೆ. ಮಾರ್ಕ್ಸ್‌ವಾದಿಗಳಿಗೆ ಮನುಷ್ಯನನ್ನು ಅರಿಯಲು ಅವನನ್ನು ಚರಿತ್ರೆಯಲ್ಲಿಟ್ಟು ನೋಡುವುದು ಬಹಳ ಅಗತ್ಯ. ಇದನ್ನು ಒಂದು ತತ್ವವಾಗಿ ಮಾತ್ರ ಅವರು ನಂಬುವುದಲ್ಲ; ಕ್ರಿಯಾಶೀಲರಾದ ಮಾರ್ಕ್ಸಿಸ್ಟರು ಚರಿತ್ರೆಯನ್ನು ಬದಲಾಯಿಸಬಹುದೆಂದೂ ತಿಳಿಯುತ್ತಾರೆ. ಈ ಬದಲಾವಣೆ ಸಾಧ್ಯವಾಗುವುದು ಮೊದಲನೆಯದಾಗಿ ಉತ್ಪಾದನಾ ವಿಧಾನಗಳಲ್ಲಿ ವ್ಯತ್ಯಾಸವಾಗುವುದರಿಂದ; ಎರಡನೆಯದಾಗಿ ಉತ್ಪಾದನಾ ಸಂಬಂಧಗಳಲ್ಲಿ ಬಿಕ್ಕಟ್ಟು ಉಂಟಾಗುವುದರಿಂದ; ಮೂರನೆಯದಾಗಿ, ಇದರಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ತುಳಿತಕ್ಕೊಳಗಾದವರು ಒಗ್ಗಟ್ಟಾಗಿ ಹೋರಾಡುವುದರಿಂದ. ಹೀಗೆ ಮನುಷ್ಯನನ್ನು ಅರ್ಥ ಮಾಡಿಕೊಳ್ಳಲು, ಸಮಾಜವನ್ನು ಬದಲಿಸಲು ಚರಿತ್ರೆ ಮಾರ್ಕ್ಸ್‌ವಾದಿಗಳಿಗೆ ಮುಖ್ಯವಾದ ಅರಿಯುವ ಸಾಧನವಾಗುತ್ತದೆ.

ಇದನ್ನು ಇನ್ನೂ ಸೂಕ್ಷ್ಮವಾಗಿ ಅರಿತಿದ್ದ ವಾಲ್ಟರ್‌ ಬೆಂಜಮಿನ್‌ ತನ್ನ ಕೊನೆಗಾಲದಲ್ಲಿ ಅತ್ಯಂತ ಕಷ್ಟವಾದ ದಿನಗಳನ್ನು ಕಂಡ. ಸ್ಟಾಲಿನ್‌, ಹಿಟ್ಲರ್‌ನ ಜತೆ ಒಪ್ಪಂದವನ್ನು ಮಾಡಿಕೊಂಡ-ಇದು `ರಾಷ್ಟ್ರ ರಾಜಕಾರಣ'ದ ಅಗತ್ಯವಾಯಿತು. ಬೆಂಜಮಿನ್‌ಗೆ ಒಬ್ಬ ಮಾರ್ಕ್ಸ್‌ವಾದಿಯಾಗಿ ಪ್ರಗತಿಯಲ್ಲಿ ನಂಬಿಕೆ ಇತ್ತೆಂದೇ ತಿಳಿಯಬಹುದು. ಆದರೆ ಈ ಪ್ರಗತಿ ಡಯಲೆಕ್ಟಿಕ್‌ ಆಗಿ ಮುಂದುವರಿಯುವಂಥದ್ದು. ಈ ಡಯಲೆಕ್ಟಿಕಲ್‌ ಎಂಬುದರಲ್ಲಿಯೂ ಎರಡು ವಿಧ ಗಳಿವೆ. ಒಂದು ಬಹಳ ತಾತ್ವಿಕವಾಗಿ ನೋಡುವ ಹೆಗೆಲ್‌ನ ವಿಧಾನ ಐಡಿಯಾಗಳ ನೆಲೆಯಲ್ಲಿ ನೋಡುವ ವಿಧಾನ. ಮತ್ತೊಂದು ಇದನ್ನು ಜಾರಿತ್ರಿಕವಾಗಿ ಪ್ರಪಂಚದ ವಿದ್ಯಮಾನಗಳ ಮೂಲಕವೇ, ಆರ್ಥಿಕ ವ್ಯವಸ್ಥೆಯ ಮೂಲಕವೇ, ಅರ್ಥ ಮಾಡಿಕೊಳ್ಳುವ ಮಾರ್ಕ್ಸ್‌ನ ವಿಧಾನ. ಇವೆಲ್ಲವನ್ನೂ ಮೈಗೂಡಿಸಿಕೊಂಡು ಯೋಚಿಸುತ್ತಿದ್ದ ಬೆಂಜಮಿನ್‌ ಕೊನೆಯಲ್ಲಿ ಹಿಟ್ಲರ್‌ನ ಜರ್ಮನಿಯಿಂದ ತಪ್ಪಿಸಿಕೊಳ್ಳಲಾರದೆ ಆತ್ಮಹತ್ಯೆ ಮಾಡಿ ಕೊಂಡ.

ಆತ ಸಾಯುವುದಕ್ಕೆ ಮುಂಚೆ ಥೀಸೀಸ್‌ ಆನ್‌ ಹಿಸ್ಟರಿ ಎಂಬ ಬಹಳ ಮುಖ್ಯವಾದ, ಬಹಳ ಬಿಗಿ ಯಾದ ಒಂದು ಲೇಖನ ಬರೆದಿದ್ದಾನೆ. ಅದರಲ್ಲಿ ಚರಿತ್ರೆ ಏಂಜೆಲ್‌ ಆಗಿ ಬರುತ್ತದೆ. ಈ ಏಂಜೆಲ್‌ ಭೂತ ಕಾಲಕ್ಕೆ ಮುಖ ಮಾಡಿದೆ; ಭವಿಷ್ಯಕ್ಕೆ ಬೆನ್ನು ಮಾಡಿದೆ.  ಅದರ ಎದುರು ಪಾಳು ಬಿದ್ದ ಅವಶೇಷ ಗಳು ಒಂದು ತಿಪ್ಪೆಯ ಹಾಗೆ ಎತ್ತರೆತ್ತರ ಬೆಳೆಯು ತ್ತಲೇ ಇವೆ. ಇದನ್ನು ದುರುಗುಟ್ಟಿ ನೋಡುತ್ತಿರುವ ಏಂಜಲ್‌ಗೆ (ಕ್ಲೀ ಎಂಬ ಚಿತ್ರಕಾರ ಕಲ್ಪಿಸಿದ ಏಂಜಲ್‌  ಇವನು) ಮತ್ತೆ ಕೆಲವನ್ನು ಜೀವಂತಗೊಳಿಸಬೇಕು, ಅರ್ಥಪೂರ್ಣಗೊಳಿಸಬೇಕು, ಹರಿದು ಹಂಚಿಹೋದುದನ್ನು ಒಟ್ಟು ಮಾಡಬೇಕು ಮುಂತಾದ ಆಶಯಗಳಿವೆ. ಆದರೆ ವೇಳೆಯಿಲ್ಲ. ನಿಂತಲ್ಲಿ ನಿಲ್ಲಲು ಬಾರದು. ಭೂತ ಕಾಲದ ಅವಶೇಷಗಳನ್ನು ನೋಡು ನೋಡುತ್ತಿದ್ದಂತೆಯೇ ದೊಡ್ಡ ಬಿರುಗಾಳಿ ಬೀಸುತ್ತಿದೆ. ಆ ಬಿರುಗಾಳಿ ಏಂಜೆಲ್‌ನ ರೆಕ್ಕೆಗಳೊಳಗೆ ತುಂಬಿ ಅವನನ್ನು ವಿರುದ್ಧವಾದ ದಿಕ್ಕಿಗೇ ಸೆಳೆದೊಯ್ಯುತ್ತಿದೆ. ಕಣ್ಣು ಮಾತ್ರ ಭೂತವನ್ನು ನೋಡು ತ್ತಿದೆ. ಏಂಜೆಲ್‌ನ ಶರೀರ ಭವಿಷ್ಯದ ಕಡೆ ಚಲಿಸುತ್ತಿದೆ. ಚಲಿಸುತ್ತಿದ್ದಂತೆಯೇ ಕಣ್ಣೆದುರಿನ ಭೂತದ ತಿಪ್ಪೆ ಬೆಳೆಯುತ್ತಲೇ ಇದೆ. ಅಂದರೆ ಹೀಗೇ ಚರಿತ್ರೆಯನ್ನು ಊಹಿಸುವಾಗ ವಾಲ್ಟರ್‌ ಬೆಂಜಮಿನ್‌, ಹೆಗಲ್‌ಲಿಂದ ಪ್ರಾರಂಭವಾದ `ಸತತವಾದ ಪ್ರಗತಿ' ಎನ್ನುವ ಆಶಾವಾದವನ್ನು ಕಳೆದುಕೊಂಡನೇ ಎಂಬುದು ಮುಖ್ಯ ಪ್ರಶ್ನೆ.

ಈ ಆಶಾವಾದವೆಂದರೆ ಚರಿತ್ರೆ ತನ್ನ ಡಯಲೆಕ್ಟಿಕ್‌ ನಲ್ಲಿ ಮೇಲ್ಮುಖವಾಗಿ ಚಲಿಸುತ್ತಲೇ ಇರುತ್ತದೆ. ಮನುಷ್ಯನಿಗೆ ಹೆಚ್ಚು ಹೆಚ್ಚು ಒಳ್ಳೆಯದನ್ನು ಸಾಧಿಸಲು ಸಾಧ್ಯವಾಗುತ್ತದೆ. ಮಾರ್ಕ್ಸ್‌ವಾದದ ಪ್ರಕಾರ ಉತ್ಪಾ ದನಾ ಸಂಬಂಧಗಳಲ್ಲಿ, ಉತ್ಪಾದನಾ ವಿಧಾನಗಳಲ್ಲಿ ಹಲವು ವ್ಯತ್ಯಾಸಗಳಾಗಿ ಮುಂದೊಂದು ದಿನ ಮನುಷ್ಯ ಯಾವ ಕಿತ್ತಾಟವೂ ಇಲ್ಲದೆ ನದಿ ದಂಡೆಯ ಮೇಲೆ ಕುಳಿತು ಮೀನು ಹಿಡಿಯುತ್ತಾನೆ ಅಥವಾ ಒಬ್ಬ ಕವಿಯಾಗುತ್ತಾನೆ. ಇಂಥ ಒಂದು ಕನಸು ಕೂಡಾ ಮಾರ್ಕ್ಸ್‌ಗೆ ಇತ್ತು. ಈ ಕನಸನ್ನು ಕಾಣಲಾರದವನಂತೆ ಬೆಂಜಮಿನ್‌ ಬರೆಯುತ್ತಾನೆ. ಏಕೆಂದರೆ ಬಿರುಗಾಳಿ ಯಾಗಿ ಭವಿಷ್ಯದೆಡೆಗೆ ಚರಿತ್ರೆ ತನ್ನನ್ನು ತಳ್ಳುತ್ತಿದೆ. ಆದರೆ ಕಣ್ಣೆದುರು ಕಾಣುವುದು ಮಾತ್ರ ತಿಪ್ಪೆ.

***

ಬೇಂದ್ರೆಯ ಮೊದಲಗಿತ್ತಿ ಪದ್ಯವನ್ನು ಓದಿದಾಗ ಮತ್ತೆ ಬೆಂಜಮಿನ್‌ನ ನೆನಪಾಯಿತು. ಈ ಮೊದಲಗಿತ್ತಿಯಲ್ಲಿ ಬರುವುದು ಮೊದಲಗಿತ್ತಿಯಾದ ಭೂಮಿ, ಭೂಮಿಯೇ ಪ್ರಕೃತಿ ದೇವಿ. ಇಲ್ಲಿಯೂ ಚರಿತ್ರೆಯಿದೆ. ಆ ಚರಿತ್ರೆಯನ್ನು ಆಗುವ ಹಾಗೆ ಮಾಡುತ್ತಿರುವುದು ಈ ಭೂಮಿ. ಬೆಂಜಮಿನ್‌ ಕಲ್ಪಿಸಿದ ಚರಿತ್ರೆಯೇ ಏಂಜಲ್‌ ಆದರೆ, ಇಲ್ಲಿ ದೇವಿಯಾಗಿ ಬರುವವಳು ಭೂಮಿ. ಅವಳು ಮೊದಲಗಿತ್ತಿಯಂತೆ ದಿವ್ಯ ನಿರ್ಲಕ್ಷ್ಯದಲ್ಲಿ  ಮೆರೆಯುತ್ತಿದ್ದಾಳೆ. ಇವಳು ಒದಗಿಸುವ ಅವಕಾಶದಲಿ ್ಲಅಲ್ಪ ಮಾನವನ ದುರಂತದ ಮೇಲಿನ ದುರಂತದ  ಚರಿತ್ರೆ ಜರುಗುತ್ತಿದೆ. ಆದರೆ ಅವೆಲ್ಲವನ್ನೂ ಒಂದು ಮಕ್ಕಳಾಟದ ಹಾಗೆ ಈ ಮೊದಲಗಿತ್ತಿ ನೋಡುತ್ತಿದ್ದಾಳೆ. ಅವಳಿಗೆ ದಣಿ ವಾಗುವುದೇ ಇಲ್ಲ. ಪುಂಡರು ಹಿಂಡಾಗಿ ಅಂಡಲೆದರೆ ಅವರ ನೆತ್ತರನ್ನು ಒರೆ ಹಚ್ಚಿ ನೋಡಿದ್ದಾಳೆ ಇವಳು.

ಬೇಂದ್ರೆಯ ಈ ಪದ್ಯದ ಒಂದು ಸಾಲು ಹೀಗಿದೆ: `ಪಾತಾಳ ಕಂಡರು ಕೆಲವು ತಾಯಿಗ್ಗಂಡರು/ ಅವರನ್ನು ಮಡಿಲಾಗ ಮಲಗಿಸಿಹೆ'. ಇಲ್ಲಿರುವ ತಾಯಿಗಂಡ ಎನ್ನುವ ಶಬ್ದ ನಾವು ಬೈಗುಳದಲ್ಲಿ ಬಳಸುವ ಪದ. ಹಾಗೆಯೇ ಇದು `ಭೂಪತಿ' ಎಂಬುದಕ್ಕೆ ಭಾಷಾಂ ತರವೂ ಹೌದು. `ಭೂಪತಿ'ಗಳು `ತಾಯಿಗಂಡರು'- ಇದು ಬೇಂದ್ರೆಯ ಅದ್ಭುತವಾದ ಒಳನೋಟ.

ಎಷ್ಟೋ ರಾಜರು ಬಂದರು ಹೋದರು. ಆದರೆ ಈ ಭೂಮಿ ತಲೆ ಎತ್ತಿಯೇ ನಿಂತಿದ್ದಾಳೆ. ತಾಯಿ ಮಕ್ಕಳ ಆಟವನ್ನು ನೋಡುವ ಹಾಗೆ ಈ ಭೂಮಿ ಎನ್ನುವ ತಾಯಿ ರಾಜರ ಯಶಸ್ಸಿನ ಆಟವನ್ನು ನೋಡುತ್ತಾಳೆ. `ಅವಳ ತೇಜದ ಮುಂದೆ ರಾಜ ತೇಜವು ಕೂಸು'. ಈ ಪದ್ಯದ ಮತ್ತೊಂದು ಸಾಲು ಹೇಳುತ್ತದೆ... `ಕೊಡಲಿ ರಾಮನು ಎರೆದ ಕೆನ್ನೀರ ಜಳಕಕ್ಕೆ ಕೂದಲೂ ನೆನೆಯಲಿಲ್ಲ ಎನ್ನುತಿಹೆ'- ಪರಶುರಾಮ ನಡೆಸಿದ ರಾಜ ಸಂಹಾರದ ರಕ್ತಪಾತಕ್ಕೆ ಅವಳ ಕೂದಲೂ ನೆನೆಯಲಿಲ್ಲ. ಹಾಗಾಗಿ ಅವಳು ಇನ್ನಷ್ಟು ರಕ್ತಪಾತವನ್ನೂ ಇದೊಂದು ತಮ್ಮನ್ನು ಭೂಪತಿಗಳು ಎಂದು ಭ್ರಮಿಸುವ ತನ್ನ ಮಕ್ಕಳ ಆಟವೆಂಬಂತೆ ಸಹಿಸುತ್ತಾಳೆ. ಮೊದಲಗಿತ್ತಿಯಂತೆ ಮೆರೆಯುತ್ತಳೇ ಇರುತ್ತಾಳೆ.

ಈ ಪದ್ಯ ಕೊನೆಯಾಗುವುದು ಮಾತ್ರ ಆರ್ತತೆಯಲ್ಲಿ. ಬೆಂಜಮಿನ್‌ಗೆ ಇರುವಂಥದೇ ಒಂದು ಆರ್ತತೆ ಬೇಂದ್ರೆಗೂ ಇದೆ ಎಂಬುದು ಪದ್ಯದ ಅಂತ್ಯದಲ್ಲಿ ತಿಳಿಯುತ್ತದೆ. ಬೇಂದ್ರೆ ಚರಿತ್ರೆಯನ್ನು ಆತಂಕಿತ ಏಂಜಲ್‌ ಆಗಿ ಮಾಡಿ ನೋಡಿ ಹತಾಶರಾಗುವುದಿಲ್ಲ: `ಹಾಲಿನ ಹೃದಯಕ್ಕೆ ಕುಬ್ಬುಸವನು ತೊಡಿಸಿ/ ಹೂ ಮುಡಿಸಿ ಕೊಂಡೆಂದು ನೀ ನಲಿವೆ?'

ಬೆಂಜಮಿನ್‌ ಒಬ್ಬ ಐರೋಪ್ಯನಾಗಿ ಮನುಷ್ಯ ಕೇಂದ್ರಿತ ಚರಿತ್ರೆಯನ್ನು ಏಂಜೆಲ್‌ ಆಗಿ ಮಾಡಿ ನೋಡುವುದಕ್ಕೂ ಭಾರತೀಯರಾದ ಬೇಂದ್ರೆ ಎಲ್ಲದಕ್ಕೂ ಮೂಲವಾಗಿರುವ ಭೂಮಿಯನ್ನೇ (ಪ್ರಕೃತಿಯನ್ನೇ) ಇಲ್ಲಿ ಮುಖ್ಯವಾಗಿಸುವುದಕ್ಕೂ ಇರುವ ವ್ಯತ್ಯಾಸವನ್ನು ನಾವು ಗಮನಿಸಬೇಕು. ಪದ್ಯದ ಕೊನೆಯ ಭಾಗದಲ್ಲಿ ಕವಿ ಭೂಮಿ ತಾಯಿಯನ್ನು ಕೇಳುತ್ತಾನೆ.:. `ಎಂದು ಮಂಗಲ ನಿನ್ನ ದೇವಗರ್ಭಕೆ?- ಇನ್ನೂ/ ಮೊದಲಗಿತ್ತಿಯಂತೆ ಮೆರೆಯುತಿಹೆ?'

ಈ ಪದ್ಯದಲ್ಲಿ ಮನುಷ್ಯ ಮಾತ್ರನಾಗಿ ನೋಡಲಾರ ದ್ದೊಂದನ್ನು ಕವಿ ಏನನ್ನಾದರೂ ಕಾಣಬಲ್ಲ ಬೆರಗಿನಲ್ಲಿ ಕಂಡಿದ್ದಾರೆ. ಯಾಕೆಂದರೆ, ಮನುಷ್ಯ ಮಾತ್ರರಾಗಿ ನೋಡಿದರೆ ನಾವು ಈ ಘೋರ ಕ್ರೂರ ಚರಿತ್ರೆಯಿಂದ ಬೆಂಜಮಿನ್ನನಂತೆ ವಿಚಲಿತರಾಗಬೇಕು, ಚಂಚಲಿತರಾಗ ಬೇಕು- ಹತಾಶೆಯ ಅಂಚಿಗೆ ಹೋಗಬೇಕು. ಬೇಂದ್ರೆ ಯವರಲ್ಲಿ ಹತಾಶೆಯ ಬದಲು ಒಂದು ಅಚ್ಚರಿ ಇದೆ. ಭೂಮಿ ತಾಯಿಯ ಸತತ ಚೊಚ್ಚಲಿನ ಮೊದಲಗಿತ್ತಿಯ ಸಂಭ್ರಮದ ಬಗ್ಗೆ ಒಂದು ಆರಾಧಕವೆನ್ನಿಸುವ  ಬೆರಗಿದೆ. ಮನುಷ್ಯನ ಕ್ರಿಯಾಶೀಲತೆಯಲ್ಲಿರುವ ಕ್ರೌರ್ಯ, ಪ್ರೇಮ ಇವುಗಳೆಲ್ಲವನ್ನೂ ಮೀರಿದ ಒಂದು ಮನುಷ್ಯಾತೀತವಾದ ಪ್ರಕೃತಿಯ ಶಕ್ತಿಯನ್ನು ಇಲ್ಲಿ ಬೇಂದ್ರೆ ಭೂಮಿಗೆ ಆರೋಪಿಸಿ ಮನುಷ್ಯ ಚರಿತ್ರೆಯ ಅಟ್ಟ ಹಾಸದ ಎಲ್ಲ ಗರ್ವವನ್ನೂ ಕಳೆಯುವ ಹಾಗೆ ಮಾಡು ತ್ತಾರೆ. ಎಷ್ಟು ಯುದ್ಧಗಳನ್ನು ಬೇಕಾದರೂ ಮಾಡು. ಎಷ್ಟೇ ಕೊಲೆಗಳನ್ನು ಮಾಡು. ಆದರೆ ನಾನು ಮೊದಲಗಿತ್ತಿಯ ಹಾಗೆ ಇರುತ್ತೇನೆ ಎಂದು ಭೂಮಿ ಹೇಳುತ್ತಿದೆ.

ಬೆಂಜಮಿನ್‌ನ ಚರಿತ್ರೆಯ ಬಗ್ಗೆ ಇರುವ ನೋಟಕ್ಕೂ ಬೇಂದ್ರೆಯ ಕವನದಲ್ಲಿ ಇರುವ ನೋಟಕ್ಕೂ ಇರುವ ವ್ಯತ್ಯಾಸಗಳನ್ನು ಇಲ್ಲಿ ಚರ್ಚಿಸುತ್ತಿರುವ ಕಾರಣ ಒಂದು ಮೇಲು ಮತ್ತೊಂದು ಕೀಳು ಎಂಬುದನ್ನು ನಿರ್ಧರಿಸುವು ದಕ್ಕಲ್ಲ. ಒಟ್ಟು ನಮ್ಮ ಪಾಡನ್ನು ಅರ್ಥ ಮಾಡಿಕೊಳ್ಳಲು ಈ ಎರಡೂ ನೋಟಗಳೂ ಒಟ್ಟಾಗಿ ದಕ್ಕಬೇಕೆಂದು ಈ ಟಿಪ್ಪಣಿಯನ್ನು ಮಾಡಿದ್ದೇನೆ. ಬೇಂದ್ರೆಯ ಬಗ್ಗೆ ಬರೆಯುತ್ತಿದ್ದಂತೆಯೇ ಕುವೆಂಪುರವರು ಕಾಲಪುರುಷನನ್ನು ತರುವ ಸ್ಮಶಾನಕುರುಕ್ಷೇತ್ರವನ್ನೂ ನೆನಪು ಮಾಡಿಕೊಳ್ಳುತ್ತ ಇದ್ದೇನೆ.

***

ಮನುಷ್ಯ ಮಾತ್ರರಾದ ನಮ್ಮಂಥವರಿಗೆ ಬೆಂಜಮಿನ್‌ ನಂತೆ ಅನ್ನಿಸುವುದೇ ಹೆಚ್ಚು ಸ್ವಾಭಾವಿಕ. ಆದರೆ ಕವಿಗೆ ಒಂದು ದಾರ್ಶನಿಕ ನೋಟದಲ್ಲಿ ಭೂಮಿ ತಾಯಿಯ ದೃಷ್ಟಿಯಿಂದ ಈ ಎಲ್ಲವೂ ಒಂದು ಆಟವೆಂಬಂತೆ ಕಾಣುವುದು ಸಾಧ್ಯವಾಗಿದೆ. ಲೀಲೆ ಎನ್ನುವ ಭಾರತೀಯ ತತ್ವಶಾಸ್ತ್ರದ ಪದಕ್ಕೆ ಇಷ್ಟು ಗಾಢವಾದ ಅರ್ಥವನ್ನು ಕೊಡುವ ಇನ್ನೊಂದು ಪದ್ಯ ನನಗೆ ಕಾಣಿಸುತ್ತಿಲ್ಲ. ಈ ಎರಡರ ಜತೆಗೆ ಅಡಿಗರ ಭೂತ ಪದ್ಯ ಚರಿತ್ರೆಯನ್ನು ನೋಡುವ ಕ್ರಮವನ್ನು ಈಗ ಮುಂದಿಡುತ್ತೇನೆ.

ಅಡಿಗರು ಭೂತ ಕಾಲವನ್ನು ಭ್ರೂಣ ಗೂಡುಗಳು ಎನ್ನುತ್ತಾರೆ. ಅವು ನಮ್ಮನ್ನು ವರ್ತಮಾನಕ್ಕೂ ಬಂದು ಕಾಡುತ್ತಿವೆ. ಯಾಕೆಂದರೆ ನಾವು ಅವುಗಳಿಗೆ ಮಾಡ ಬೇಕಾದ ಶ್ರಾದ್ಧವನ್ನು ಮಾಡಿಲ್ಲ-ಒಂದರ್ಥದಲ್ಲಿ ನಮ್ಮ ಪಿತೃಗಳಿಗೆ ನಾವು ಮಾಡಬೇಕಾದ ಶ್ರಾದ್ಧವನ್ನು ಮಾಡಿಲ್ಲ. ಬೆಂಜಮಿನ್‌ ಕೂಡಾ ತಿಪ್ಪೆಯ ಹಾಗೆ ಬಿದ್ದ ಭೂತದ ಕಾಲ ವನ್ನು ಮಾರ್ಪಡಿಸುವ ಬಗ್ಗೆ ಯೋಚಿಸುತ್ತಾನೆ. ಆದರೆ ಅಡಿಗರು ಬಹುಮುಖ್ಯವಾಗಿ ವೈದಿಕ ಪರಂಪರೆಯ ವಿಚಾರಗಳನ್ನಿಟ್ಟೇ ಇವನ್ನು ನೋಡುತ್ತಾರೆ. ಶ್ರಾದ್ಧ ಮಾಡದಿದ್ದರೆ ಪಿತೃಗಳಾಗಬೇಕಾದವರು ಪ್ರೇತಗಳಾಗುತ್ತಾರೆ. ನೀರು ನೆಲೆಯಿಲ್ಲದೆ ಅಲೆಯುತ್ತಾರೆ. ಅವರದು ತಿರುಗು ಮುರುಗು ಪಾದದ ಪರಿಶೆ. ಭೂತಗಳು ನಡೆಯುವಾಗ ಹೆಜ್ಜೆ ತಿರುಗುಮುರುಗಾಗಿರುತ್ತದಂತೆ. ಹೆಜ್ಜೆಯನ್ನು ಹಿಂಬಾಲಿಸುತ್ತಾ ಹೋದರೆ ಮುಂದಿರುವಂತೆ ತೋರುವುದು ಹೊರಟಲ್ಲಿಗೇ ಹಿಂದಿರುಗುವಂತೆ ಮಾಡುತ್ತವೆ. 

ವರ್ತಮಾನದಲ್ಲಿ ನಮ್ಮನ್ನು ಕಾಡುವ ಭೂತ ದಿಂದಪಾರಾಗುವ ವಿಧಾನವನ್ನೂ ಅಡಿಗರು ಯೋಚಿಸುತ್ತಾರೆ. `ತಕ್ಕ ಶ್ರಾದ್ಧವನ್ನು ಮಾಡುವುದು' ಎಂದರೆ ಭೂತವನ್ನು ಮತ್ತೆ ಅಗೆದು ನೋಡುವುದು. ಈ ಅಗೆತದಲ್ಲಿ ಮೊದಲು ಅದಿರು ಸಿಗುತ್ತದೆ. ಆಮೇಲೆ ಅದರಲ್ಲಿ ಬಂಗಾರ ಸಿಗುತ್ತದೆ. ಆಮೇಲೆ ಬಂಗಾರದಿಂದ ನಮ್ಮ  ಇಷ್ಟ ದೇವತೆಯ, ಅಂದರೆ ನಮ್ಮ ವೈಯಕ್ತಿಕ ಅಗತ್ಯಗಳಿಗೆ ಬೇಕಾದ ವಿಗ್ರಹವನ್ನು ಮಾಡಿಕೊಳ್ಳಬೇಕಾಗುತ್ತದೆ.  ಅಡಿಗರ ಯೋಚನೆ ಇಲ್ಲಿಗೆ ನಿಲ್ಲುವುದಿಲ್ಲ. ಭೂತವನ್ನು ಅಗೆಯುವ ಕ್ರಿಯೆಯ ಜೊತೆಯಲ್ಲೇ  ಭೂಮಿ ಹಸನಾಗುತ್ತಿದ್ದಂತೆ ಆಕಾಶದಲ್ಲಿ ಮೋಡ ಸಂಚಾರವಾಗುತ್ತದೆ. ಅದರಿಂದ ಮಳೆ ಬೀಳುತ್ತದೆ. ಇದು ಭೂಮಿಗೂ ಆಕಾಶಕ್ಕೂ ನಡುವೆ ಕಾಮದ ಸಂಬಂಧಂತೆ (ವರಣ) ಕಾಣಿಸಿಕೊಂಡು `ಅಗೆದುತ್ತ ಗದ್ದೆಗಳಲ್ಲಿ ಭತ್ತ ಗೋದುವೆಗಳು' ಬೆಳೆದು, ಉತ್ಪನ್ನದ ಸಮೃದ್ಧಿಯಲ್ಲಿ  ಇಡೀ ಸಮುದಾಯಕ್ಕೆ ದೈವವಾಗುವ ಗುಡಿಗೋಪುರಗಳ ಬಂಗಾರ ಶಿಖರವಾಗುತ್ತದೆ.

ಬೆಂಜಮಿನ್‌ ಈ ಬಗೆಯಲ್ಲಿ ತನ್ನ ಭೂತದ ಪಾಠವನ್ನು ಓದಲಾರ, ಅರಿಯಲಾರ, ದಾಟಲಾರ. ಅಡಿಗರು ದಾಟುತ್ತಾರೆಂದರೆ ಬೆಂಜಮಿನ್‌ಗಿಂತ ಅಡಿಗರು ಹೆಚ್ಚು ಅರ್ಥಪೂರ್ಣ ಎಂದೇನೂ ನಾನು ಭಾವಿಸುವುದಿಲ್ಲ. ಯಾಕೆಂದರೆ ಅಡಿಗರ ಪದ್ಯ ನೀಡುವ ಪರಿಹಾರಕ್ಕೆ ಒಂದು ರೀತಿಯ ಪರಂಪರೆಯಲ್ಲಿ ಅಡಗಿರುವ ಶ್ರದ್ಧೆಯ ಅಗತ್ಯವಿದೆ. ಆ ಶ್ರದ್ಧೆಯ ಅಗತ್ಯವಿಲ್ಲದಂತೆ ಬೆಂಜಮಿನ್‌ ಯೋಚಿಸುತ್ತಾನೆ ಅಥವಾ ಅಂಥ ಶ್ರದ್ಧೆಯಿದ್ದೂ ಪ್ರಯೋಜನವಿಲ್ಲವೆಂದು ಅವನಿಗೆ ಗೊತ್ತು. ಯಾಕೆಂದರೆ ದುಃಖ ದುಃಖವೇ. ಆಗಿರುವ ಅನ್ಯಾಯ ಅನ್ಯಾಯವೇ. ಸತ್ತವರು ಸತ್ತಿದ್ದಾರೆ. ಅವರಿನ್ನು ಬದುಕಲು ಸಾಧ್ಯವಿಲ್ಲ. ಚರಿತ್ರೆಯುದ್ದಕ್ಕೂ ತಪ್ಪುಗಳಾಗುತ್ತಿವೆ ಮತ್ತು ಆ ತಪ್ಪುಗಳು ತನ್ನ ಕಾಲದಲ್ಲಿ ಮತ್ತೆ ಆಗುತ್ತಿರುವುದನ್ನೂ ಬೆಂಜಮಿನ್‌ ಕಂಡಿದ್ದಾನೆ. ಘೋರಪಾತಕದ ಯುದ್ಧದಲ್ಲಿ ಪಾಲುದಾರರಾದ ಸ್ಟಾಲಿನ್ನನೂ ಪ್ರಗತಿಯಲ್ಲಿ ನಂಬಿದ ವನೇ, ಹಿಟ್ಲರನೂ ನಂಬಿದವನೇ, ಚರ್ಚಿಲ್ಲನೂ ನಂಬಿದ ವನೇ, ರೂಸ್ವೆಲ್ಟನೂ ನಂಬಿದವನೇ. ಈ ಸತತ ಪ್ರಗತಿಯ ಫಲಮಾತ್ರ ಕಣ್ಣೆದುರು ಅಸಹ್ಯವಾಗಿ ಬೆಳೆಯುತ್ತಲೇ ಹೋಗುವ ತಿಪ್ಪೆ. ಸದ್ಯದಲ್ಲಿ ಕ್ಷಣ ನಿಂತು ಗ್ರಹಿಸಲು ಸಾಧ್ಯವಾಗದಂತೆ ಮುಂದಕ್ಕೆ ಭವಿಷ್ಯಕ್ಕೆ ಇನ್ನಷ್ಟು ಪ್ರಗತಿಗೆ ತಳ್ಳುತ್ತಿರುವ ಪ್ರಗತಿ.

ಅಡಿಗರ ಭೂತದ ಹಿಂದೆ ತಾತ್ವಿಕ ಆಲೋಚನೆ ಇದೆ. ಆದರೆ ಬೆಂಜಮಿನ್‌ನ ಸಂಕಟ ಅದರಲ್ಲಿ ಇಲ್ಲ. ಬೇಂದ್ರೆಯಲ್ಲೂ ಆ ಸಂಕಟವಿಲ್ಲ. ಶಾಶ್ವತಿಯಾದ ಪ್ರಕೃತಿಯ ದೃಷ್ಟಿಯಿಂದಲೇ ಅದನ್ನು ನೋಡುತ್ತಾರೆ. ಈ ಮೂರು ಬಗೆಯ ನೋಟಗಳ ಬಗ್ಗೆಯೂ ಗಾಢವಾದ ಚರ್ಚೆ ಸಾಧ್ಯವಾಗಲೆಂದು ಈ ಟಿಪ್ಪಣಿಯನ್ನು ಮಾಡಿದ್ದೇನೆ- ನಮ್ಮ ಕಾಲದ ಸಂಕಟಗಳ ಎದುರಿನಲ್ಲಿ.

ಅಡಿಗರು ಅಗೆಯ ಬಯಸಿದ್ದ ಪರಂಪರೆಯಡಿಯಲ್ಲಿನ `ಭೂತ'ಕ್ಕೂ, ಹಿಂದೂ ಫ್ಯಾಸಿಸ್ಟ್‌ ಶಕ್ತಿಗಳು ಅಗೆಯಬುಸುವ `ಭೂತ'ಕ್ಕೂ ವ್ಯತ್ಯಾಸ ಸ್ಪಷ್ಟವಿದೆ. ಅಡಿಗರದು `ಬಂಗಾರದ ವಿಗ್ರಹ'ವಾದರೆ, ಫ್ಯಾಸಿಸ್ಟ್‌ರದ್ದು ಒಂದು ಬಗೆಯ `ಪ್ರೇತ'ವೆನ್ನಬಹುದೇನೋ. ಅಡಿಗರ ಇನ್ನೊಂದು ಪದ್ಯದಲ್ಲಂತೂ (`ಅಜ್ಜ ನೆಟ್ಟಾಲ') ಪರಂಪರೆ ಅನ್ನೋದು `ಸಾವಿರ ಕಂಬದ ಬಸದಿ'. ಹೀಗೆ ಅವರು ಬಳಸುವ ಆಧ್ಯಾತ್ಮಿಕ ಧಾರ್ಮಿಕ ಪ್ರತಿಮೆಗಳು ಫ್ಯಾಸಿಸಮ್‌-ನ ವಿರೋಧಿಗಳೇ. ಈ ಹಿನ್ನೆಲೆುಲ್ಲಿ ಜನಸಂಘದ ಸದಸ್ಯರಾಗಿದ್ದ ಅಡಿಗರು ಇವೊತ್ತಿನ ಸಂಘದ `ಒಳ ವಿಮರ್ಶಕ'ರಾಗಿರುತ್ತಿದ್ದರೆ ಅಥವಾ ಇವೊತ್ತಿನ ಸಂಘದ ಉಗ್ರತೆಗೆ ಅವರೂ ರೋಸಿ ಹೊರಗಿನವರಾಗಿರುತ್ತಿದ್ದರೆ? ಎಂಬ ಅನುಮಾನಗಳು ಹುಟ್ಟುವುದು ಸಹಜ.

ವಾಲ್ಟರ್‌ ಬೆಂಜಾಮಿನ್‌ ಕೂಡಾ ಫ್ಯಾಸಿಸಮ್‌ನ ಬೆಳವಣಿಗೆು ಹಿಂದಿನ ಕಾರಣಗಳನ್ನು ಶೋಧಿಸುತ್ತಿದ್ದನಾದ್ದರಿಂದ, ಮತ್ತು ಮಾರ್ಕ್ಸ್‌-ನ `ಚರಿತ್ರೆ' ಮತ್ತು `ಪ್ರಗತಿ'ಯ ಕುರಿತ ಗ್ರಹಿಕೆಗಳನ್ನು ಅನುಮಾನಿಸಲು ಆತ ಕೂಡಾ ಧಾರ್ಮಿಕ ಪ್ರತಿಮೆ (ಏಂಜೆಲ್‌ನ ಚಿತ್ರ) ಬಳಸುವುದರಿಂದ ಅಡಿಗರ ಜೊತೆ ಇಲ್ಲಿ ಸ್ವಲ್ಪ ಸಾಮ್ಯವನ್ನು ಕಾಣಬಹುದು. ನೀವು ಸೂಚಿಸುವಂತೆ ಇಬ್ಬರ ಗ್ರಹಿಕೆಗಳಲ್ಲಿ ವ್ಯತ್ಯಾಸವೂ ಇದೆ.

ನಿಮ್ಮ ಇನ್ನೊಂದು ಕಥೆ `ಅಕ್ಕಯ್ಯ' ಕೂಡಾ ನೆನಪಾಗುತ್ತದೆ. `ಚರಿತ್ರೆ' ಮತ್ತು `ಪ್ರಗತಿ'ಯ ಕುರಿತ ಮಾರ್ಕ್ಸ್‌ವಾದೀ `ನಂಬಿಕೆ'ಗಳನ್ನು ಬೆನ್ನಟ್ಟಿ `ಯಶಸ್ವಿ'ಯಾದ ಪ್ರೋ. ಶ್ರೀನಿವಾಸರ ಡ್ರಾಯಿಂಗ್‌ ರೂಮಿನಲ್ಲಿ ಆತನೇ ಬಿಡಿಸಿದ `ಹಾರುವ ಏಂಜೆಲ್‌'ನ ರೂಪದ `ಅಕ್ಕಯ್ಯ'ಳ ಚಿತ್ರವಿದೆ. ಇಲ್ಲಿ ಕೂಡಾ ಅನಾಧುನಿಕ `ಅಕ್ಕಯ್ಯ' ಲೇಖಕ ಮತ್ತು ಓದುಗರ ಕಣ್ಣಲ್ಲಿ ಪ್ರೊ.ಶ್ರೀನಿವಾಸರ (ತನ್ಮೂಲಕ ಮಾರ್ಕ್ಸ್‌ ಗ್ರಹಿಕೆಯ `ಚರಿತ್ರೆ' ಮತ್ತು 'ಪ್ರಗತಿ'ಯ) ವಿಮರ್ಶಕಿಯಾಗಿ ಮೂಡಿ ಬರುತ್ತಾಳೆ. ಹಿಂಸೆ, ಭಯೋತ್ಪಾದನೆಗಳು ತುಂಬಿರುವ ಚರಿತ್ರೆ ಮತ್ತು ಪ್ರಸ್ತುತತೆಯಲ್ಲಿ `ಬೇಂದ್ರೆ'ಯ 'ಮೊದಲಗಿತ್ತಿ' ಮಾತ್ರ ನಮ್ಮಂಥ ಸಾಮಾನ್ಯರ ಪಾಲಿಗೆ ಅತಿ ರಮ್ಯವೂ, ಅಲೌಕಿಕವೂ ಆಯಿತೇನೋ ಅನ್ನಿಸುವುದು ಸುಳ್ಳಲ್ಲ.

-ಸುದರ್ಶನ

ಚರಿತ್ರೆಯನ್ನು ಬಗೆವ ಈ ಬಗೆಗಳನ್ನು ನನ್ನ ಮನಸ್ಸಿನಲ್ಲಿ ಮೂಡುತ್ತಿರುವ ಕೆಲ ಪಾತ್ರಗಳ ಮೂಲಕ ಪ್ರತಿಫಲಿಸಿಕೊಂಡು ನನ್ನ ಅಭಿಪ್ರಾಯಗಳನ್ನು ಮಂಡಿಸಲು ಬಯಸುತ್ತೇನೆ.

ಒಬ್ಬ ತಾಯಿ ಒಬ್ಬ ಮಗ. ತಾಯಿ ಪರಂಪರೆಯ ಸೃಜನಶೀಲತೆಯ ಉತ್ತಮ ಪ್ರತಿನಿಧಿ. ದೇವರಲ್ಲಿ ಶರಣಾಗತಿ, ಕಾಲದ ನಿರಂತರತೆ, ಗಾಢವಾದ ಭಕ್ತಿ-ಶ್ರದ್ಧೆಗಳಲ್ಲಿ ಎಲ್ಲವನ್ನೂ ಮೀರುವುದು - ಆಕೆಗೆ ಸಹಜ. ಇತಿಹಾಸ ಗೊತ್ತಿಲ್ಲ, ಪುರಾಣ ಗೊತ್ತು. ಇತಿಹಾಸ ಅವಳಲ್ಲೇನೂ ಬಿಟ್ಟಿಲ್ಲ. ಆದರೆ, ಆಕೆಗೆ ಆ ಆಕ್ರಮಣದ ಅರಿವಿಲ್ಲ. ಅಥವಾ ಅದೊಂದು ನಾಟಕ. ಆಕೆ ಕೇಡಿಗೆ, ಕೊಳಕಿಗೆ ಮುಖ ತಿರುಗಿಸಿಲ್ಲ. ಆಕೆಯ ಸಂಬಂಧಿಕರನೇಕರು ಅವಳಷ್ಟು ಅದೃಷ್ಟವಂತರಲ್ಲ. ಅಪಾರವಾದ ಸಂಕಷ್ಟವನ್ನನುಭವಿಸುತ್ತಿರುವವರು. ಅವರ ಕಷ್ಟಗಳಿಗೆ ಸಂಬಂಧದ ಕಾರಣವಾಗಿಯೂ, ಮಾನವೀಯವಾಗಿಯೂ ಈಕೆ ಮಿಡಿಯುತ್ತಾಳೆ. ತನ್ನವರೆದುರಿಸುತ್ತಿರುವ ದುರ್ಭರ ನೋವು, ರೌರವ ನರಕಗಳ್ಯಾವುವೂ ಈಕೆಯ ಸೃಜನಶೀಲತೆಯನ್ನು ಕಡಿಮೆಯಾಗಿಸಿಲ್ಲ. ಶರಣಾಗತಿ, ಭಕ್ತಿಗಳೇ ಅದಕ್ಕೆ ಕಾರಣ. ಕ್ರೂರಿಗಳಲ್ಲದಿದ್ದರೂ ಪುರುಷಪ್ರಧಾನ ಸಮಾಜವನ್ನು ಮೀರುವ ಪ್ರತಿಭೆಯಿಲ್ಲದ ತನ್ನ ಗಂಡ, ಮಕ್ಕಳಿಂದಾಗುವ ಪರೋಕ್ಷ್ಯ ಅನ್ಯಾಯಗಳನ್ನೂ ಸಹ ಈಕೆ ಅದೇ ರೀತಿಯಲ್ಲಿ ಮೀರುತ್ತಾಳೆ. ಮಾನಸಿಕವಾಗಿ ಅಸ್ವಸ್ಥರಾಗಿರುವ ತಮ್ಮ ಸಂಬಂಧಿಕರನ್ನೂ ಜೀವಂತವಾಗಿ ಕಾಣಬಲ್ಲ, ಅವರ ಜೊತೆ ಮನುಷ್ಯರಂತೆ ವರ್ತಿಸಬಲ್ಲ, ಆ ಕಾರಣಕ್ಕಾಗೇ ಅವರಲ್ಲಿ ಜೀವ ಚಿಮ್ಮಿಸಬಲ್ಲ, ಕ್ಷಣಕ್ಕಾದರೂ ಅವರಿಗೆ ಸಾಂತ್ವನ ತರಬಲ್ಲ ಶಕ್ತಿಯಿದೆ. ದುಃಖವಾದಾಗ ತೀವ್ರವಾಗಿ ಅತ್ತು, ಮರು ಕ್ಷಣದಲ್ಲಿ ಒಂದೆರಡು ದೇವರನಾಮಗಳನ್ನು, ಪದಗಳನ್ನೂ ಹೇಳಿಕೊಂಡು, ಇನ್ನೂ ಕಷ್ಟವಾಯಿತೆಂದರೆ ದೇವರಿಗೆ ದೀಪ ಹಚ್ಚಿ, ಒಂದಿಷ್ಟು ಧ್ಯಾನ ಮಾಡಿ ಅದನ್ನು ಮೀರಬಲ್ಲಳು. ಪಕ್ಕದ ಮನೆಯ ಮುಸ್ಲಿಮನರನ್ನು ಗಣಪತಿ ಪೂಜೆಗೆ ಆಹ್ವಾನಿಸಬಲ್ಲಳು. ಆದರೆ ಅವರ ರಮ್ಜಾನಿಗೆ ಹೋಗುವುದಿಲ್ಲ. ಅರಬ್ ಮುಸ್ಲಿಮರಿಂದ ಬಂದ ಕಾಫಿ ಈಕೆಗೆ ಉಪವಾಸದ ದಿವಸದ ಮಡಿ ಆಹಾರ. ಆದರೆ ಇದು ಅರಬ್ ಮುಸ್ಲಿಮರಿಂದ ಬಂತು ಎನ್ನುವುದನ್ನು ಎಂದಿಗೂ ಒಪ್ಪುವುದಿಲ್ಲ. ಇವಳೊಂದಿಗೆ ವಾದ ಸಾಧ್ಯವಿಲ್ಲ. ಕೋಪಬಂತೆಂದರೆ ಅಪಾರವಾದ ಕೊಂಕುಗಳಿಂದ ಎದುರಿರುವರ ಮನಸ್ಥೈರ್ಯವನ್ನು ನಾಶ ಮಾಡಿ, ಅವರನ್ನು ರಾಕ್ಷತ್ವಕ್ಕೆ ತಳ್ಳಬಲ್ಲಳು. ತಾನು ಮಾತ್ರ ರಾಕ್ಷಸಿಯಾಗುವುದಿಲ್ಲ. ಮರುಕ್ಷಣ ಅದನ್ನು ಮರೆತು, ಮೊದಲಿನಂತಾಗಬಲ್ಲಳು. ಪ್ರೀತಿಸಬಲ್ಲಳು. ತನ್ನ ಪ್ರೀತಿಯಲ್ಲಿ ಮಿಕ್ಕವರನ್ನು ಉಸಿರುಗಟ್ಟಿಸುವ, ತಾನೇ ನಡೆಸುವ ಆಕ್ರಮಣಗಳು ಇವಳ ಅರಿವಿಗೆ ಇನ್ನೂ ಬಂದಿಲ್ಲ. ದಶಕಗಳಾದರೂ ಇವಳಿಗೆ ಅದು ಅರ್ಥವಾಗಿಲ್ಲ. ವೈಚಾರಿಕವಾಗಿ ಯಾವುದನ್ನೂ ಗ್ರಹಿಸಲಾರಳು. ಅವಳಲ್ಲಿ ತನ್ನ ತಪ್ಪಿಗೆ ಅಪರಾಧಿ ಭಾವ ಸುಳಿವುದೇ ಇಲ್ಲ. ಪಶ್ಚಾತ್ತಾಪದಲ್ಲಿ ಅದನ್ನು ಸುಟ್ಟು ಮುನ್ನಡೆಯುವವಳು. ತನ್ನ ಪರಂಪರೆಯ ಪ್ರತೀಕಗಳ ಮೂಲಕವೇ ಇವಳ ವ್ಯವಹಾರ. ಈ ತಾಯಿ ಪ್ರಾಯಶಃ ಭೂಮಿ. ಬೇಂದ್ರೆ ಪರಂಪರೆಯ ಪೂರ್ವಜಳೂ ಸಹ. ಏಕೆಂದರೆ ಇವಳು ಆಧುನಿಕತೆಯನ್ನು ಅರಗಿಸಿಕೊಂಡವಳಲ್ಲ ಪ್ರಯತ್ನಿಸಿದವಳಲ್ಲ.

ಈಕೆಯೆ ಮಗ. ಬಾಲ್ಯದಲ್ಲಿ ತಾಯಿಯ ಪ್ರಪಂಚವನ್ನು ಅನುಭವಿಸಿ ವಿಹರಿಸಿ, ವ್ಯಕ್ತಿತ್ವವನ್ನು ಬೆಳೆಸಿಕೊಂಡವನಾದರೂ, ಅದೇ ಪ್ರಪಂಚದ ನರಕವನ್ನು, ತನ್ನ ತಾಯಿಯ ಉಸಿರುಗಟ್ಟಿಸುವ ಪ್ರೀತಿಯನ್ನು ಕಂಡು ಬಂಡೆದ್ದವನು, ವೈಚಾರಿಕನಾದವನು. ತನ್ನ ವೈಚಾರಿಕತೆಯಿಂದ ತನ್ನ ಸೃಜನಶೀಲತೆಗೆ ಕ್ರಮೇಣ ದೂರವಾಗುತ್ತಾ, ಆಧುನಿಕ ಪ್ರಪಂಚದಲ್ಲಿ alienation-ಗೆ ಒಳಗಾದವನು. ತಾಯಿಯಿಂದ ಒಂದಿಷ್ಟು ದೂರ ಗಳಿಸಿಕೊಂಡ ನಂತರ ತಾಯಿಯ ಸೃಜನಶೀಲತೆಯನ್ನು ಗ್ರಹಿಸಿದವನು. ವೈಚಾರಿಕತೆಯ ಹಾದಿಯಲ್ಲಿ ದೊಡ್ಡ ದೊಡ್ಡ ಗೋಡೆಗಳನ್ನು ಕಂಡವನು. ಆ ಗೋಡೆಗಳ ಮಧ್ಯೆ ರೌರವ ನರಕಗಳಲ್ಲಿ ಬದುಕುತ್ತಿರುವ ಮನುಷ್ಯರನ್ನು ಕಂಡವನು. ತಾಯಿಯ ಸೃಜನಶೀಲತೆ ಜ್ಞಾಪಕಕ್ಕೆ ತಂದುಕೊಳ್ಳುವವನು. ಆದರೆ, ಅದನ್ನು ತನ್ನಲ್ಲೇ access ಮಾಡುವುದಕ್ಕೆ ಸಾಧ್ಯವಾಗದೇ ತೊಳಲಾಡುತ್ತಿರುವವನು. ಅವಳ ಭಂಗಿ, ಭಂಗಿಗಳಲ್ಲೂ, ಮಾತುಗಳಲ್ಲೂ ಜೀವಂತಿಕೆಯನ್ನು ಹಿಂದೆಂದೂ ಕಾಣದಷ್ಟು ಈಗ ಕಾಣುತ್ತಿರುವವನು. ಅನೇಕ ಬಗೆಯ ಬಿರುಕುಗಳನ್ನು ಅನುಭವಿಸುತ್ತಿರುವವನು. ಆಧುನಿಕ ವೈಚಾರಿಕ ಹಾದಿಯಲ್ಲಿ ಕಂಡ ಮನುಷ್ಯನ ಅಧಃಪತನಕ್ಕೆ ದಿಗ್ಭ್ರಾಂತನಾಗಿ ನಿಂತವನು. ತನ್ನ ಕೈಯಲ್ಲೇನೂ ಸಾಧ್ಯವಾಗದ ಅಸಹಾಯಕತೆಯಿಂದ ಕೀಳರಿಮೆ ಬೆಳೆಸಿಕೊಂಡವನು. ಈತನಿಗೆ ಎಲ್ಲವೂ ಅರ್ಥವಾಗುತ್ತದೆ, ಆದರೆ ಏನೂ ಮಾಡಲಾರ. ಸದಾ ಅಪರಾಧೀ ಭವದಲ್ಲಿ ತೊಳಲಾಡುವವನು. ತಾನು ಕಂಡ ಸತ್ಯಗಳಿಂದ ಇವನ ಜೀವಂತಿಕೆಗೆ ಅದೆಷ್ಟು ಪೆಟ್ಟು ಬಿದ್ದಿದೆಯೆಂದರೆ ಇವನಿಗೆ ಪಶ್ಚಾತ್ತಾಪವೂ ಸಾಧ್ಯವಿಲ್ಲ. ಈತ ವಾಲ್ಟರ್ ಬೆಂಜಾಮಿನ್-ನಂಥವನು.

ಈ ತಾಯಿಯನ್ನು ಒಳಗೊಂಡು, ಆಧುನಿಕತೆಯನ್ನೂ ಅರಗಿಸಿಕೊಳ್ಳುವ ಪ್ರಕ್ರಿಯೆಗೆ ತಮ್ಮನ್ನು ಒಡ್ಡಿಕೊಂಡಿದ್ದ ಬೇಂದ್ರೆಗೆ 'ಮೊದಲಗಿತ್ತಿ' ಪದ್ಯ ಸಾಧ್ಯವಾಗುತ್ತದೆ. ಈಕೆಯ ಮಗ ವೈಚಾರಿಕತೆ ಮತ್ತು ಪರಂಪರೆಯನ್ನು ನಿರ್ವಹಿಸುವ ತನ್ನ ಪ್ರಯತ್ನಗಳಲ್ಲಿ ಮತ್ತು ಅವನ ಜೀವನದ ಅನುಭವಗಳು ಅದೆಷ್ಟು ತೀವ್ರವಾಗಿರುತ್ತವೆ ಎನ್ನುವದರ ಮೇಲೆ ಅವನು ಅಡಿಗರ ಪರಂಪರೆಗೆ ಸಲ್ಲುತ್ತಾನೋ, ವಾಲ್ಟರ್ ಬೆಂಜಾಮಿನ್ ಪರಂಪರೆಗೆ ಸಲ್ಲುತ್ತಾನೋ ಎನ್ನುವುದು ಪ್ರಾಯಶಃ ನಿರ್ಧಾರವಾಗುತ್ತದೆ.

ಇದಿಷ್ಟು ನನ್ನ ಗ್ರಹಿಕೆ. ಆದರೆ, ನನ್ನೀ ಪಾತ್ರಗಳು ಇನ್ನೊಂದಿಷ್ಟು ಮುಂದುವರೆಯುವುದಕ್ಕೆ ಪ್ರಯತ್ನಿಸುತ್ತಿವೆ. ತಾಯಿ ಅದೆಷ್ಟು ಕೌಟುಂಬಿಕ ಮತ್ತು ಸಾಮಾಜಿಕ ಒತ್ತಡಗಳನ್ನು ತನ್ನ ಅಭಿಜಾತ ಪ್ರತಿಭೆಯಿಂದಲೇ ಎದುರಿಸಬಲ್ಲಳು ಎನ್ನುವುದನ್ನು ಹೇಳಲಾಗುವುದಿಲ್ಲ. ಅವಳಷ್ಟೆಯೇ ಪ್ರತಿಭಾನ್ವಿತರಾದ ಅವಳ ಸಂಬಂಧಿಕರನೇಕ ಸ್ತ್ರೀಯರ ಜೀವನ ನಿರ್ನಾಮವಾಗಿ ಹೋಗಿದೆ. ತಾಯಿಯ ಓರಗೆಯ ಯಾರ ಮನೆಯಲ್ಲೂ ಈ ಮಗನ ಹಾಗೆ ವೈಚಾರಿಕರಿಲ್ಲ. ಬೆಂಜಾಮಿನ್ನನನ್ನು ಸದಾ ಅನುಭವಿಸುವ ಈತ ತನ್ನ ಆವರಣದಲ್ಲಿ ಬೇಂದ್ರೆ, ಅಡಿಗರನ್ನು ಕಂಡರೆ ಗುರುತಿಸಬಲ್ಲವನು. ಅವಳೆದುರಿಸುತ್ತಿರುವ ಈ ಎಲ್ಲ ಒತ್ತಡಗಳನ್ನೂ, ಸ್ವತಃ ತನ್ನಿಂದಲೇ ನಡೆಯುವ ದೌರ್ಜನ್ಯಗಳನ್ನೂ ತಾಯಿಗಿಂತ ಹೆಚ್ಚಾಗಿ ಶೋಧಿಸಿಕೊಂಡು ಅರಿತಿರುವವನು ಈ ಮಗ. ಆ ಕಾರಣಕ್ಕಾಗೇ ತನ್ನ ಸುತ್ತಲಣ ಆವರಣದಲ್ಲಿ ಒಂದು ವಿಶಿಷ್ಟ ಪರಿಸರಕ್ಕೆ ಕಾರಣನಾದವನು. ಆದ್ದರಿಂದ ತಾಯಿಯ ಪಾರಂಪರಿಕ ಸೃಜನಶೀಲತೆ ಮಗನ ವೈಚಾರಿಕತೆಯಿಂದಲೇ ಸಂರಕ್ಷಣೆಗೊಂಡು, ಪೋಷಣೆಗೆ ಒಳಪಡುತ್ತಿರುವುದು ಸಾಧ್ಯವಿದೆ.

ಈ ಸಂಕೀರ್ಣ ಪ್ರಕ್ರಿಯೆಯ ಒಂದು ಅತಿರೇಕದ ಹಂತದಲ್ಲಾಗಬಹುದಾದ ವಾಲ್ಟರ್ ಬೆಂಜಾಮಿನ್ನನ ಆತ್ಮಹತ್ಯೆಯು ಮುಂದಣ ಬೇಂದ್ರೆ, ಅಡಿಗರನ್ನು ಸಂರಕ್ಷಿಸುವುದಕ್ಕೆ ಪೂರಕವಾದ ಕ್ರಿಯೆಯಾಗಿ, ಒಂದು ಪ್ರತಿಮೆಯಾಗಿ ನನಗೆ ಕಾಣುತ್ತಿದೆ. ಇದು ಮತ್ತೊಂದು ಬಗೆಯ ಕೆರೆಗೆ ಹಾರ.

ಮತ್ತೊಂದಿಷ್ಟು ಅತಿರೇಕದ ಅನಿಸಿಕೆಗಳು. ಬೆಂಜಾಮಿನ್ನನ್ನ ಉದಾಹರಣೆಗೆ ಬೇಂದ್ರೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು ಎನ್ನುವ ಕುತೂಹಲವೂ ಇದೆ ನನಗೆ. ಭೂಮಿತಾಯಿಯ ಮೂರು ಮಕ್ಕಳಾಗಿ ಬೇಂದ್ರೆ, ಬೆಂಜಾಮಿನ್ ಮತ್ತು ಅಡಿಗರನ್ನು ಪರಿಗಣಿಸಿ ನೋಡುವುದಾದರೆ ಬೇಂದ್ರೆಯವರು ಬರೆಯಬಹುದಾದ ಕವನ ಅಥವಾ ಅದೇ ಪ್ರತಿಭೆಯ ಕಥೆಗಾರ ಬರೆಯಬಹುದಾಗಿದ್ದ ಕಥೆ ಯಾವ ತರಹದ್ದು?

ನೀವು ಹೇಳುತ್ತಿರುವ - ಬೇಂದ್ರೆ, ಬೆಂಜಾಮಿನ್, ಅಡಿಗ ಮೂವರನ್ನೂ ಒಟ್ಟಿಗೇ ಪರಿಗಣಿಸಬೇಕಾಗಿರುವುದರ ಸದ್ಯದ ಅವಶ್ಯಕತೆ - ಈ ರೀತಿಯಾಗಿ ಗ್ರಹಿಸುವುದಕ್ಕೆ ಪ್ರಯತ್ನ ಪಟ್ಟಿದ್ದೇನೆ.

ಇಂತಿ ಶಿವು

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
Image CAPTCHA
Copy the characters (respecting upper/lower case) from the image.