ಅಪ್ವರ್ಡ್ ಲೇಖನಮಾಲೆಗೊಂದು ಪ್ರತಿಕ್ರಿಯೆ

ಹಿರಿಯರಾದ ಡಾ|| ಅನಂತಮೂರ್ತಿಗಳಿಗೆ ನಮಸ್ಕಾರಗಳು,

ನಾನು ಇತಿಹಾಸದ ವಿದ್ಯಾರ್ಥಿಯಲ್ಲ. ಹಾಗಾಗುವ ಅವಕಾಶ ಕೈಬಿಟ್ಟವನು. ಆದರೆ ಆಸಕ್ತಿ ಕಡಿಮೆಯಾಗದವನು, ಆ ಹಸಿವನ್ನು ನೀಗಿಕೊಳ್ಳಲು ಪ್ರಯತ್ನಿಸುತ್ತಿರುವವನು. ಹಾಗಾಗಿ ಎಡಪಂಥೀಯ ವಿಚಾರಧಾರೆ, ಕಮ್ಯುನಿಸಂ ಮತ್ತು ಕಮ್ಯುನಿಸ್ಟರ ಕುರಿತಾದ ಲೇಖನಗಳನ್ನು, ಬಿಡಿ-ಬಿಡಿಯಾಗಿ ಓದಿಕೊಂಡವನು. ಅಖಂಡವಾದ ಓದು ಸಾಧ್ಯವಾಗಿಲ್ಲ. ಆದ್ದರಿಂದಲೇ, ತಮ್ಮ ಲೇಖನಮಾಲೆಗೆ ನನ್ನ ಪ್ರತಿಕ್ರಿಯೆಯನ್ನು - ನನಗೆ ನಾನೇ ಕೇಳಿಕೊಳ್ಳುತ್ತಿರುವ ಪ್ರಶ್ನೆಗಳ ಮೂಲಕ ಲೇಖನಮಾಲೆಯನ್ನು ಗ್ರಹಿಸಲು ಪ್ರಯತ್ನಿಸುತ್ತಾ - ರೂಪಿಸಿಕೊಂಡಿದ್ದೇನೆ. ಅಲ್ಲದೇ, ತಮ್ಮ ಇತರ ಪ್ರಬಂಧಗಳು ಈ ಚಿಂತನೆಗಳಿಗೆ ಪೂರಕವೆನ್ನಿಸಿದ್ದರಿಂದ, ಆ ಪ್ರಬಂಧಗಳಲ್ಲಿನ ತಮ್ಮದೇ ಆದ ಕೆಲ ಪರಿಕಲ್ಪನೆಗಳ ಮೂಲಕವೂ (ಆಧ್ಯಾತ್ಮಿಕ ಹಸಿವು, ಸಮಾನತೆಯ ಹಸಿವು) ಇದನ್ನು ಗ್ರಹಿಸಲು ಪ್ರಯತ್ನಿಸಿದ್ದೇನೆ. ತಮ್ಮ ಲೇಖನದ ಅನೇಕ ಉದಾಹರಣೆಗಳನ್ನು ಪ್ರತೀಕಗಳನ್ನಾಗಿ ಗ್ರಹಿಸಲು ಪ್ರಯತ್ನಿಸಿರುವುದರಿಂದ, ನನ್ನ ಪ್ರತಿಕ್ರಿಯೆಯಲ್ಲಿ ಕೆಲವು ಅತಿರೇಕಗಳಿರುವುದಕ್ಕೆ ಸಾಧ್ಯವಿದೆ, ಅದಕ್ಕೆ ನಾನೇ ಹೊಣೆಗಾರ.

==============

1. ಎರಡು ಬಗೆಯ ಅಮಾನುಷತೆಗಳಲ್ಲಿ ಒಂದನ್ನಾಯುವಂತಹ ಅನಿವಾರ್ಯತೆ ಯೂರೋಪಿಗೇನಿತ್ತು? 'ರಾವಿನಲ್ಲಿ, ರಾಷ್ಟ್ರೀಯತೆಯ ನೆವದಲ್ಲಿ, ಪ್ರಗತಿಯ ಹುಂಬ ಉತ್ಸಾಹದಲ್ಲಿ, ಮತೀಯತೆಯ ಹುರುಪಿನಲ್ಲಿ. ಈ ನಾಲ್ಕೂ ಬೇರೆ ಬೇರೆ ಇರಲಾರದು' ಎಂದಿದ್ದೀರಿ. ಲೇಖನಮಾಲೆಯ ಅತಿಮುಖ್ಯ ವಾಕ್ಯವಿದು ಎಂದುಕೊಂಡಿದ್ದೇನೆ. ಇದಕ್ಕೆ ಸ್ಫೂರ್ತಿ೦ಾಗಿ ಟ್ಯಾಗೋರ್‌ ಮತ್ತು ಗಾಂಧಿಯಿದ್ದಾರೆ ಎಂದುಕೊಂಡಿದ್ದೇನೆ. ಇದನ್ನು ನಾನು ಅರ್ಥ ಮಾಡಿಕೊಂದಿರುವ ಬಗೆ - ಯಂತ್ರಗಳ ಸಾಧ್ಯತೆಯನ್ನು ಎಡವಿಬಿಟ್ಟ ಯೂರೋಪು, ಆ ಕಾರಣಕ್ಕೇ ಬಂಡವಾಳಶಾಹಿಯ ಹಿಡಿತದಲ್ಲಿ ಅಕಸ್ಮಾತ್ತಾಗಿ ಕೈಗಾರಿಕೀಕರಣಕ್ಕೊಳಗಾಗಿ, ನಂತರ ಅದನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆಯಿಂದ ಬೃಹತ್‌ ಆರ್ಥಿಕ ವ್ಯವಸ್ಥೆಗಳು ಅನಿವಾರ್ಯವಾಗಿ, ಆದ್ದರಿಂದಲೇ ರಾಷ್ಟ್ರೀಯತೆಯನ್ನು ಆವಾಹಿಸಿಕೊಂಡು, ರಾಷ್ಟ್ರಿಯತೆ ಸಾಧಿಸಲು ಒಂದೋ ಪ್ರಗತಿ ಇಲ್ಲವೋ ಮತೀಯತೆಯಯನ್ನು ನವಮೌಲ್ಯಗಳನ್ನಾಗಿ ರೂಪಿಸಲು ಪ್ರಯತ್ನಿಸಿತೇ? ಅಂದರೆ ಯಂತ್ರಗಳ ಆವಿಷ್ಕಾರದ ನಂತರ ಆಯ್ಕೆಗಗಳು ಸೀಮಿತವಾದ್ದರಿಂದಲೇ ಹೀಗಾಯಿತೇ?

2. ಫ್ಯಾಸಿಸಂ ಬೆಳೆಯುತ್ತಿದ್ದ ಕಾಲದಲ್ಲಿ ಅದನ್ನೆದುರಿಸುವ ಏಕಮಾತ್ರ ಆಯ್ಕೆ ಕಮ್ಯುನಿಸಂ ಆಗಿತ್ತೇ? ಕಮ್ಯುನಿಸಂ ಎನ್ನುವುದು ಫ್ಯಾಸಿಸಂ ಬಲಗೊಂಡ ಕಾಲದಲ್ಲೇ ಹೆಚ್ಚು ಬಲಗೊಂಡಿತು ಎನ್ನುವುದಾದರೆ (ಇದು ನಿಜವೋ ಅಲ್ಲವೋ ನನಗೆ ಅಷ್ಟಾಗಿ ಗೊತ್ತಿಲ್ಲ) ವಿರೋಧವೇ ಮುಖ್ಯವಾದಾಗ ವಿರೋಧಿಯ ಎಲ್ಲ ಗುಣಗಳೂ ನಮ್ಮಲ್ಲೇ ಆವಾಹನೆ೦ಾಗುತ್ತವೆ ಎನ್ನುವ ಥಿಯರಿಗೆ ಹಿಟ್ಲರ್‌-ಸ್ಟ್ಯಾಲಿನ್‌ ಉದಾಹರಣೆಯೇ?

3. ಇಷರ್ವುಡ್‌, ಸ್ಪೆಂಡರ್‌, ಆಡೆನ್‌ ಮಹನೀಯರುಗಳು ಬೆಳೆದ ರೀತಿಗಳು ನೋಡಿದರೆ ಒಂದು ಹಂತದಲ್ಲಿ ಕಮ್ಯುನಿಸಂ ಅನಿವಾರ್ಯವಾಗಿತ್ತಾದರೂ, ಮನುಷ್ಯನ ಆಧ್ಯಾತ್ಮಿಕ ಹಸಿವನ್ನು ಇಂಗಿಸಲಾರದ್ದರಿಂದ ಇವರುಗಳು ಬೆಳೆಯುವುದಕ್ಕೆ ಬೇರೆ೦ೆುೀ ಹಾದಿ ಹಿಡಿದರು. ಮುಖ್ಯವೆಂದರೆ ಅವರು ಆ ಹಾದಿಯಲ್ಲಿ ನಡೆದು ಕಮ್ಯುನಿಸಂ-ಅನ್ನು ಅರಗಿಸಿಕೊಂಡು ಮುನ್ನಡೆದರು. ಕಮ್ಯುನಿಸಂ-ಅನ್ನು ಮೀರಬೇಕಾದ ನೆಲೆಗಳ ಬಗ್ಗೆಯೂ ಇದು ದಾರಿತೋರಿಸುತ್ತದೆ. ಆದರೆ ಇಷರ್ವುಡ್‌, ಆಡೆನ್‌ ಮುಂತಾದವರು ಕಮ್ಯುನಿಸಮ್ಮನ್ನೇ ಆ ಆಧ್ಯಾತ್ಮಿಕ ಹಸಿವಿನ ದಾರಿಯಲ್ಲಿ ಏಕೆ ಬೆಳೆಸದಾದರು? ಸ್ಪೆಂಡರ್‌- ತಮ್ಮ ವಿರೋಧದಲ್ಲೂ ಕಮ್ಯುನಿಸಮ್ಮಿನ ಒಳಗಿನವರಾಗಿ ಆ ದಿಕ್ಕಿನಲ್ಲಿ ಪ್ರಯತ್ನಿಸಲಿಲ್ಲವೇ?

4. ಅಪ್ವರ್ಡರು ಮಾತ್ರ ಕಮ್ಯುನಿಸಂ ಒಳಗಡೆಯೇ ಇರಬಹುದಾದ ಅತ್ಯುತ್ತಮ ಸಾಧ್ಯತೆಯಂತಿದ್ದಾರೆ ಎಂದರೆ ನಮಗೆ ಕಮ್ಯುನಿಸಂ-ನ ಸಾಧ್ಯತೆ-ಮಿತಿಗಳು ಅರ್ಥವಾಗುತ್ತವೆ. ಹೀಗಿದ್ದರೂ ಕಮ್ಯುನಿಸಂ ಮೇಲಣ ಅಪ್ವರ್ಡ್‌-ರ ಗಟ್ಟಿ ನಂಬಿಕೆಗೆ ಕಾರಣಗಳಾದರೂ ಏನು? ಸಮಾನತೆಯ ಹಸಿವೇ? ಬೇರಿನ್ನಾವ ಸಿದ್ಧಾಂತವೂ ಸಮಾನತೆಯನ್ನು ಈ ಬಗೆಯಲ್ಲಿ ಚರ್ಚಿಸಲಾರದ್ದರಿಂದಲೇ? ಆದರೆ ಅಪ್ವರ್ಡರ ಸಾಧ್ಯತೆ ಇಷರ್ವುಡ್‌-ಗೆ ಗೊತ್ತಿತ್ತು ಎನ್ನುವುದು ಒಂದು ಮುಖ್ಯ ಒಳನೋಟವಾಗಿ ಕಂಡಿದೆ. ಅಪ್ವರ್ಡ್‌-ರ ಹೆಚ್ಚು ಕಮ್ಯುನಿಸ್ಟರಾದ ಮಿತ್ರರಿಗೆ ಆ ಸಾಧ್ಯತೆ ಕಂಡಿತ್ತೇ? ಆಧ್ಯಾತ್ಮಿಕ ಹಸಿವಿಗೇ ಈ ಮುಖ್ಯವಾದ ಒಳನೋಟವಿರುತ್ತದೆಯೇ?

5. ಜಾರ್ಜ್‌ ಥಾಂಸನ್‌-ರಂಥವರೂ ಮಾವೋ-ಸ್ಟ್ಯಾಲಿನ್‌-ರನ್ನು ಮೆಚ್ಚುತ್ತಲೇ ಹೋದ ಅಂಶ ಕಮ್ಯುನಿಸ್ಟ್‌ ಸಿದ್ಧಾಂತದಲ್ಲೇ ಕಲ್ಟಿಸಂ-ನನ್ನು ಗುರುತಿಸಲಾಗದ ಅಂಧತೆ ತಂದೊಡ್ಡುವುದನ್ನು ಸೂಚಿಸುತ್ತಿದೆಯೇ? ಕಮ್ಯುನಿಸಮ್ಮಿನಲ್ಲಿರುವ ಆ ಅಂಶ ಯಾವುದು, ಅಥವಾ ಯಾವ ಅಂಶದ ಗೈರುಹಾಜರಿಯಿಂದ ಹೀಗಾಗಿದೆ?

6. ಮಿಕ್ಕ ಕಮ್ಯುನಿಸ್ಟರು ಒಂದೋ ಆರ್ಥಿಕತೆಗೆ, ಸಾಮಾಜಿಕತೆಗೆ ಮಿತಿಗೊಂಡ ಸಮಾನತೆಯ ರೊಮ್ಯಾಂಟಿಕ್‌ ಆಕರ್ಷಣೆ ಮಾತ್ರ ಮೀರಲಾರದವರು ಅಥವಾ ಕಮ್ಯುನಿಸಂ-ನೊಳಗಡೆಯೇ ಇರುವ ಬಿರುಕಿನಲ್ಲಿ ತಮ್ಮ ವೈಯಕ್ತಿಕ ತೀಟೆಗಳನ್ನು ತೀರಿಸಿಕೊಳ್ಳುವ ಅವಕಾಶ ಕಂಡುಕೊಂಡವರು. ಇದಕ್ಕೂ ಮಿಗಿಲಾದ ಕಮ್ಯುನಿಸಂ ಸಿದ್ಧಾಂತವನ್ನಿನ್ನೂ ಅಪ್ಪಿರುವ ಕಮ್ಯುನಿಸ್ಟರಿದ್ದಾರೆಯೇ, ಅದನ್ನು ಗ್ರಹಿಸುವ ಬಗೆ ಹೇಗೆ?

7. ಲೋಹಿಯಾರ ಪ್ರಸ್ತಾಪ ಚಿಕ್ಕದಾಗಿ ಆಗಿರುವುದು ನಿರಾಸೆಗೊಳಿಸುತ್ತದೆ. ಈ ಲೇಖನ ಮಾಲೆಗೆ ಅನೇಕ ಆಯಾಮಗಳಿರುವುದರಿಂದ, ಲೇಖನದ ಕಡೆಯ ಭಾಗವನ್ನು ಯಾವ ರೀತಿಯಲ್ಲಿ ಗಾಂಧಿ, ನೆಹರೂ, ಲೋಹಯಾ ಈ ಐರೋಪ್ಯ ಅಪಾಯಗಳಿಂದ ನಮ್ಮನ್ನು ಮುಕ್ತರನ್ನಾಗಿಸುವ ಪ್ರಕ್ರಿಯೆಗೆ ಕಾಣಿಕೆಯನ್ನಿತ್ತಿದ್ದಾರೆ ಎನ್ನುವುದನ್ನು ಈಗಾಗಲೇ ಬಹಳ ಕಡೆ ಚರ್ಚಿಸಲಾಗಿದೆ. ಆದರೆ ಆ ಚರ್ಚೆ ಇಲ್ಲಿ ಸಮಯೋಚಿತವಾಗಿತ್ತು ಎನ್ನುವುದು ನನ್ನ ಅಭಿಪ್ರಾಯ. ಭಾರತದಲ್ಲಿ ಈ ಪ್ರಕ್ರಿಯೆಯನ್ನು ನಿರ್ವಹಿಸುವ ಪ್ರಥಮ ಘಟ್ಟದಲ್ಲಿ ಬಹುಮುಖೀಯತೆಯಿತ್ತೇ, ಇಲ್ಲವೇ ಎನ್ನುವ ಒಂದು ಚರ್ಚೆಗೆ ಅದು ದಾರಿಮಾಡಿಕೊಡಬಹುದೆನ್ನಿಸುತ್ತದೆ.

8. ಮತ್ತೊಂದು ಸ್ವತಂತ್ರ ಚರ್ಚೆಯನ್ನು ಕೇಳುವ ಪ್ರಶ್ನೆಯೆಂದರೆ - ಆಧ್ಯಾತ್ಮಿಕ ಹಸಿವು ಮಿಗಿಲಾದ ಏಟ್ಸ್‌, ಎಲಿಯಟ್‌, ಎಜ್ರಾ ಪೌಂಡ್, ಹಿಟ್ಲರ್‌, ಮುಸ್ಸೋಲಿನಿಯರ ಮೇಲೆ ಭರವಸೆಯಿಟ್ಟದ್ದು ಸಮಾನತೆಯ ಹಸಿವಿನ ಅಭಾವವೇ?

9. ಸ್ವಲ್ಪ ಥಿಯರೈಸ್‌ ಮಾಡುವುದಾದರೆ, ಆಧ್ಯಾತ್ಮಿಕ ಹಸಿವು ಸಮಾನತೆಯ ಹಸಿವಿನ ಅಭಾವದಿಂದ ಬಲಪಂಥೀಯತೆಯಲ್ಲಿ ಪರ್ಯವಸಾನವಾಗಿ ಭ್ರಮನಿರಸನಕ್ಕೆ ಕಾರಣವಾಯಿತೇ? ಬಲಪಂಥೀಯತೆಯ ವಿರೋಧ ಕೇವಲ ಎಡಪಂಥೀಯವಾಗಿ, ಆಧ್ಯಾತ್ಮಿಕ ಹಸಿವಿನ ಅಭಾವದಿಂದ ಮತ್ತೊಂದು ರೀತಿಯ ಭ್ರಮನಿರಸನಕ್ಕೆ ಕಾರಣವಾಯಿತೇ?

1೦. ಒಬ್ಬನನ್ನು ವ್ಯಕ್ತಿ೦ಾಗಿ ನೋಡಿದಾಗ ದೊಡ್ಡದಾಗಿ ಕಾಣುವುದು ಸಿದ್ಧಾಂತದಲ್ಲಿ ನೋಡಿದಾಗ ಚಿಕ್ಕದಾಗಿ ಕಂಡು, ಅದಕ್ಕೆ ನಾವು ಕುರುಡರಾಗುತ್ತೇವೆ೦ೆುೀ? ಟೀಪು ವಿಷಯದಲ್ಲಿ ನಮ್ಮ ಎಡಪಂಥೀಯರಿಗಾಗಿರುವುದು ಇದೇನೇ? ಕೃಷ್ಣದೇವರಾಯನಲ್ಲಿ ನಮ್ಮ ಬಲಪಂಥೀಯರಿಗಾಗಿರುವುದು ಇದೇನೇ? ಕಷ್ಟಕಾಲದಲ್ಲಿ ಆಪದ್ಬಾಂಧವನಾದವನ ವೈಯಕ್ತಿಕ ತೀಟೆಗಳು ನಮಗೆ ಕಾಣುವುದಿಲ್ಲವಲ್ಲವೇ?

11. 'ಉತ್ತಮ ಪ್ರಭುತ್ವ ಲೊಳಲೊಟ್ಟೆ'-ಯೆನ್ನುವುದು ಆಧ್ಯಾತ್ಮಿಕ ಹಸಿವಿನ ವ್ಯಕ್ತಿಗಳಿಗೆ ದಾರ್ಶನಿಕ ಒಳನೋಟ. ಮಾನವ ವ್ಯವಸ್ಥೆಗಳನ್ನು ನಿರ್ಮಿಸುವ ಆಕಾಂಕ್ಷೆಯಿರುವ ಕಮ್ಯುನಿಸಂ ಮತ್ತು ಬಂಡವಾಳಶಾಹಿಗಳೆರಡೂ ಪ್ರಭುತ್ವದಲ್ಲಿ ನಂಬಿಕೆಯಿಟ್ಟಂಥವು. ಅಂದರೆ ವ್ಯವಸ್ಥೆಯೊಂದನ್ನು ನಂಬುವ ಯಾರಿಗಾದರೂ ಈ ಲೊಳಲೊಟ್ಟೆ ಕಾಣ್ಕೆ ಸಾಧ್ಯವಿಲ್ಲವೇ? ಅಥವಾ ಬ್ಯಾಂಕ್‌ ಅಕೌಂಟ್‌ ಮಾತ್ರ ಬೇಕಾದ್ದಕ್ಕೆ ನಾವು ಬೃಹತ್‌ ವ್ಯವಸ್ಥೆಗಳನ್ನು ನಿರ್ಮಿಸಹೋಗಿ ಮೂಲೋದ್ದೇಶವನ್ನೇ ಮರೆಯುವುದೇ?

12. ಸಮಾನತೆಯ ಹಸಿವಿನಲ್ಲಿ ಬೃಹತ್‌ ವ್ಯವಸ್ಥೆಗಳತ್ತ ಗಮನ ಹರಿಸಿರುವ ಕಮ್ಯುನಿಸಂ ಒಳಗಿನಿಂದಲೇ ನಮ್ಮನ್ನು ಗುರುತಿಸಿಕೊಳ್ಳುವ ಕ್ರಮಗಳನ್ನು ಇಲ್ಲವಾಗಿಸಿದೆ೦ೆುೀ? ಕಡೆಗೆ ಸಮಾನತೆಯನ್ನೂ ಸಾಧಿಸಲಾರದೇ ಕೇವಲ ರಾಷ್ಟ್ರೀಯತೆಯನ್ನಷ್ಟೇ ಸಾಧಿಸಿ, ಬಂಡವಾಳಶಾಹಿಯ ಉದ್ದೇಶವನ್ನೇ ಈಡೇರಿಸಿತೇ?

13. ಕಡೆಯದಾಗಿ, 19ನೇ, 2೦ನೇ ಶತಮಾನಗಳ ಪ್ರಕ್ರಿ೦ೆುಗಳು ಮನುಷ್ಯನನ್ನು ತನ್ನ ನೆಲೆಯಿಂದ ಉಚ್ಚಾಟಿಸಿಬಿಟ್ಟವು. ಬೌದ್ಧಿಕವಾಗಿ, ಮಾನಸಿಕವಾಗಿ, ಕೆಲವೊಮ್ಮೆ ಭೌತಿಕವಾಗಿಯೂ ಕೂಡ. ಈ ಉಚ್ಚಾಟನೆಗೆ ಪ್ರತಿಕ್ರಿಯೆಯಾಗಿ ಚಿಂತಕರು ತಮ್ಮದೇ ಆದ ಜಿಗಿತಗಳ ಮೂಲಕ ಹಲವು ವಿಕಲ್ಪಗಳನ್ನು ಕಾಣುತ್ತಾ ಮತ್ತೆಲ್ಲಿಯೋ ನೆಲೆಗಳನ್ನು ಸ್ಥಾಪಿಸಿಕೊಳ್ಳಬೇಕಾಯಿತು. ಯಶಸ್ಸು, ಸೋಲು ಎನ್ನುವ ಪರಿಕಲ್ಪನೆಗಳಿಂದ ಇದನ್ನು ಗ್ರಹಿಸಲಾಗುವುದಿಲ್ಲ. ಆದರೆ, ಅಪ್ವರ್ಡ್‌ ಈ ಜಿಗಿತದಲ್ಲಿ ತಮ್ಮತನಕ್ಕೆ ಎರವಾದರು. ಇದು ಪ್ರಕ್ರಿಯೋಗಳ ತೀವ್ರತೆಗೆ ನಿದರ್ಶನ.

14. ತಮ್ಮ ಲೇಖನಮಾಲೆ ಯಾವ ವೈವಿಧ್ಯತೆಯಲ್ಲಿ ಎಡಪಂಥೀಯತೆಯನ್ನು ಹಿಡಿದಿಡಲು ಪ್ರಯತ್ನಿಸುತ್ತದೆ೦ೋ, ಅದೇ ಸಾಂದ್ರದಲ್ಲಿ ಬಂಡವಾಳಶಾಹಿಯನ್ನು ಗ್ರಹಿಸುವುದಕ್ಕೆ ಸಾಧ್ಯವಿಲ್ಲವಾಗಿದೆಯಲ್ಲ! ಅದನ್ನು ಏಕರೂಪಿಯಾಗಿಯೇ ಇಂದಿಗೂ ಗ್ರಹಿಸುತ್ತೇವೆ. ಬಂಡವಾಳಶಾಹಿಯ ಸಾಧ್ಯತೆಯನ್ನು ಸಮಾನತೆ ಸಾಧಿಸುವ ಕ್ರಮವಾಗಿ, ಸಮೃದ್ಧಿಯನ್ನು, ಸಾಮರಸ್ಯವನ್ನೂ ಸಾಧಿಸುವ ಸಾಧನವಾಗಿ (ಮುಗ್ಧವಾಗಿ) ನಂಬಿರುವ, ಮತ್ತನೇಕ ಬಗೆಗಳಲ್ಲಿ ಆಳವಾಗಿ ಆಲೋಚಿಸಬಲ್ಲ ಜನರೂ ಇದ್ದಾರೆ. ತಮ್ಮತನಕ್ಕೇ ಎರವಾದವರೂ ಇದ್ದಾರೆ. ಅಂಥವರ ಮೂಲಕ ಬಂಡವಾಳಶಾಹಿಯಯನ್ನು ಗ್ರಹಿಸಲು ನಮಗಿನ್ನೂ ಸಾಧ್ಯವಾಗಿಲ್ಲ.

-ಜೀವಿಶಿವು

Post new comment

The content of this field is kept private and will not be shown publicly.