ನಾಗರಿಕತೆ ಎಂಬ 'ಗುಡ್ ಐಡಿಯಾ'

ನೋಯಿಡಾ ಘಟನೆಯನ್ನು ಇಡೀ ದೇಶ ಚರ್ಚಿಸುತ್ತಿದೆ. ಬಡ ಮಕ್ಕಳ ಸರಣಿ ಕೊಲೆಯ ಬಗ್ಗೆ ಕೇಳಿದೊಡನೆ ನಾವು ಪಟ್ಟ ಒಂದು ಘಳಿಗೆಯ ತಲ್ಲಣ ಈಗ ಕುತೂಹಲವಾಗಿ ಪರಿಣಮಿಸುತ್ತಿದೆ. ಮಾನವನ ಪಾಡೇ ಇದಿರಬಹುದು. ಹೆಚ್ಚು ಕಾಲ ಸತ್ಯ ದರ್ಶನದ ತಲ್ಲಣವನ್ನು ನಾವು ಸಹಿಸಲಾರೆವು. ಈಗ ನಮ್ಮ ಕುತೂಹಲ ಮಕ್ಕಳನ್ನು ಕೊಂದು ಅವರು ತಿಂದಿರಬಹುದೆ? ಅಂಗಾಂಗಗಳನ್ನು ಮಾರಿಕೊಂಡಿರಬಹುದೆ? ಇದೊಂದು ಅವರ ಮನೋವಿಕಾರವಿರಬಹುದೆ? ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆಯಾಗುತ್ತದೆಯೆ? ಇತ್ಯಾದಿ. ಹೀಗೆನ್ನಿಸುವುದೆಲ್ಲ ಸಹಜವೇ; ಆದರೆ ಕೊಂಚ ಸುಮ್ಮನಿದ್ದು ನೋಡಿಕೊಂಡರೆ ನಮಗೇ ನಮ್ಮ ಬಗ್ಗೆ ಅಸಹ್ಯವಾಗುತ್ತದೆ.

ಹೇಗೆ ಈ ಬಗ್ಗೆ ಮಾತಾಡಬೇಕು ಎಂಬುದು ತಿಳಿಯದಿರುವ ಮೌನದಲ್ಲಿ ನಾವಿದನ್ನು ಎದುರಾಗಬೇಕು.ಆದರೆ ಅದು ಹೇಳಿದಷ್ಟು ಸುಲಭವಲ್ಲ. ಮಕ್ಕಳನ್ನು ಕಳೆದುಕೊಂಡ ಬಡಪಾಯಿಗಳ ಆಕ್ರೋಶ ಇನ್ನೂ ಕ್ರೂರವಾಗಿರಬಹುದಿತ್ತು. ಆಗಿಲ್ಲ. ಅದು ಆಶ್ಚರ್ಯ. ದುಡಿಯುವ ಜನ ತಮ್ಮ ಎಂದಿನ ದುಡಿಮೆಗೆ ಮರಳುತ್ತಾರೆ. ಅಸ್ಸಾಮ್‌ನಲ್ಲಿ ಉಗ್ರರು ಬಿಹಾರಿಗಳನ್ನು ಕೊಂದರು. ಮಾರನೇ ದಿನ ಮತ್ತೆ ಬಿಹಾರಿ ಬಡವರು ತಮ್ಮ ಇಟ್ಟಿಗೆ ಕೆಲಸ ಮುಂದುವರಿಸಿದರು. ಜಗತ್ತಿನಲ್ಲಿ ಎಲ್ಲೆಲ್ಲೂ ಬಡವರು ಬದುಕುವುದು ಹೀಗೇ.
ಈ ಬಗ್ಗೆ ಬರೆಯುವುದು ಕಷ್ಟ.

ಹದಿನೆಂಟನೇ ಶತಮಾನದಲ್ಲಿ ಐರ್ಲೆಂಡಿನ ಪಾಡಿಗೆ ಮರುಗುತ್ತಿದ್ದ ಬ್ರಿಟಿಷರ ಸಾಮ್ರಾಜ್ಯದ ದುರಹಂಕಾರದಿಂದಲೂ ನಿರ್ಲಕ್ಷ್ಯದಿಂದಲೂ ಕ್ರುದ್ಧನಾಗಿದ್ದ ಜೊನಾಥನ್‌ ಸ್ವಿಫ್ಟ್‌ ಎಂಬ ಬರಹಗಾರ (ಗಲಿವರನ ಕಥೆ ಬರೆದವನು) A Modest Proposal ಎಂಬ ದೀರ್ಘವಾದ ಪ್ರಬಂಧವನ್ನು ಬರೆದ. ಇಷ್ಟು ಕ್ರೂರವಾದ ವ್ಯಂಗ್ಯದ ಬರವಣಿಗೆ ಜಗತ್ತಿನ ಯಾವ ಭಾಷೆಯಲ್ಲೂ ಇಲ್ಲವೋ ಏನೋ? ತಣ್ಣಗೆ ಅವನು ನಿರ್ವಿಕಾರವಾಗಿ ನಿಶ್ಚಲನಾಗಿ ಹೇಳುತ್ತ ಹೋಗುತ್ತಾನೆ. ಈ ಐರಿಷ್‌ ಬಡ ಹೆಂಗಸರು ಮಕ್ಕಳನ್ನು ಕಟ್ಟಿಕೊಂಡು ಬೀದಿಗಳಲ್ಲಿ ಭಿಕ್ಷೆಯೆತ್ತುವುದನ್ನು ನಾವು ಸಹಿಸಲು ಸಾಧ್ಯವಿಲ್ಲ; ದೇಶವೂ ಬಡವಾಗಿರುವುದರಿಂದ ಅವರ ಸ್ಥಿತಿಯನ್ನು ಸುಧಾರಿಸುವಂತೆ ನಾವು ಏನೂ ಮಾಡಲಾರೆವು. ಆದ್ದರಿಂದ ವಿನಯಪೂರ್ವಕವಾಗಿ ಅವನು ಒಂದು ಪ್ರೊಪೋಸಲ್‌ ಮಾಡುತ್ತಾನೆ. ಈ ಪ್ರೊಪೋಸಲ್‌ ಅಂತಹ ಪ್ರೊಪೋ ಸಲ್‌ಗಳ ತರಹದಲ್ಲೇ ತಣ್ಣನೆಯ ವ್ಯಾಕರಣ ಶುದ್ಧವಾದ ಕಾನೂನು ಬದ್ಧವಾದ ಲೀಗಲ್‌ ಭಾಷೆಯಲ್ಲೇ ಇದೆ. ಹೀಗೆ ತಾನು ಹೇಳುವುದು ಅಧಿಕ ಪ್ರಸಂಗವಲ್ಲ, ನೀವೆಲ್ಲರೂ ಯೋಚಿಸಿದ್ದೇ ಇರಬಹುದು ಎಂಬ ಗೃಹೀತದ ಧಾಟಿ ಈ ಲೇಖನಕ್ಕಿದೆ.

ಅವನ ಪ್ರೊಪೋಸಲ್‌ ಏನೆಂದರೆ ಈ ಮಕ್ಕಳನ್ನು ಹಣವಂತರು ತಿನ್ನಲು ಶುರುಮಾಡಬೇಕು. ಹೆಂಗಸರು ಮಾಂಸದ ಉತ್ಪಾದಕರಾಗಬೇಕು. ಆರ್ಥಿಕವಾಗಿ ಇದು ಬಡವರ ಹಿತ ದೃಷ್ಟಿಯಿಂದ ಸಮಂಜಸವೂ ಆಗಿರುತ್ತದೆ. ಒಂದು ವರ್ಷಗಳ ಕಾಲ ಹೇಗೂ ಸರ್ಕಾರದ ಖರ್ಚಿಲ್ಲದೆ ತಾಯಿಯ ಮೊಲೆಹಾಲಿನಿಂದ ಅವು ಬೆಳೆಯುತ್ತವೆ. ಈ ನಮ್ಮ ಕಾಲದ ಚಿಕನ್‌ ವ್ಯವಸಾಯದ ಎಲ್ಲ ಗುಣಗಳನ್ನೂ ಈ ಮಕ್ಕಳ ಮಾಂಸದ ವ್ಯವಸಾಯಕ್ಕೆ ಅನ್ವಯವಾಗುವಂತೆ ಸ್ವಿಫ್ಟ್‌ ಬರೆಯುತ್ತಾನೆ.

ಸ್ವಿಫ್ಟ್‌ ಬರವಣಿಗೆಯ ತಣ್ಣನೆಯ ಮಾತಿನ ಕ್ರೌರ್ಯವನ್ನು ಸಹಿಸುವುದು ಯಾತನೆಯ ವಿಷಯ. ಆದರೆ ನಾವು ಏನೇನನ್ನು ನಿಜದಲ್ಲಿ ಸಹಿಸುತ್ತೇವೆಂದು ಯೋಚಿಸಿದಾಗ ಸ್ವಿಫ್ಟ್‌ ನ ಬರವಣಿಗೆಯ ಸಮಾಧಾನದ ಶೈಲಿಯ ಕ್ರೌರ್ಯದಿಂದ ನಾವು ಹೇಸುತ್ತೇವೆಂಬುದೂ ಅಥವಾ ಅಂತಹ ಬರವಣಿಗೆಯನ್ನು ಸಾಹಿತ್ಯವೆಂದು ಮೆಚ್ಚುತ್ತೇವೆ ಎಂಬುದೂ ಆಘಾತ ಹುಟ್ಟಿಸುವ ನೈತಿಕ ಪ್ರಶ್ನೆಯಾಗುತ್ತದೆ.

ಮನುಷ್ಯನಿಗೆ- ಅಂದರೆ ನಮ್ಮೆಲ್ಲರಿಗೂ- ಸಾಧ್ಯವಾಗುವ ಕ್ರೌರ್ಯವನ್ನು ವಿಶ್ಲೇಷಣೆ ಮಾಡುತ್ತ ಅದಕ್ಕೆ ಕಾರಣಗಳನ್ನು ಹುಡುಕುತ್ತ ಹೋಗುವುದೇ ತಾರ್ಕಿಕ ವಿಲಾಸವಾಗಿ ಅನೈತಿಕವಾಗುತ್ತದೆ. ನಾವು ಕೂಡಲೇ ಹೇಳಬಹುದಾದ್ದು ಇದೆ- ಅದನ್ನು ಸ್ಪಷ್ಟವಾಗಿ ಹೇಳಬೇಕು. ಬಡ ಹೆಂಗಸರು, ಶ್ರೀಮಂತರ ಮನೆಗಳಲ್ಲಿ ಮುಸುರೆ ಕೆಲಸ ಮಾಡುವ ಹೆಂಗಸರು, ತಮ್ಮ ಮಕ್ಕಳು ಕಾಣೆಯಾದದ್ದೇ ಪೊಲೀಸರಿಗೆ ದೂರಿತ್ತರೂ ಪೊಲೀಸರು ಅದನ್ನು ದಾಖಲೆ ಮಾಡಿಕೊಂಡಿಲ್ಲ. ಚುನಾವಣೆಗೆ ತಯಾರಾಗುತ್ತಿರುವ ಉತ್ತರ ಪ್ರದೇಶದ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ಕ್ರೈಮ್‌ ಕಡಿಮೆಯಾಯಿತು ಎನ್ನುವ ಅಂಕಿ ಅಂಶಗಳಲ್ಲಿ ಈ ಮಕ್ಕಳು ದುಷ್ಟರ ಆಹಾರವಾದದ್ದು ಇನ್ನಷ್ಟು ಸಂಖ್ಯೆಗಳಾಗಿ ಸೇರಿಕೊಂಡು ಚುನಾವಣೆಯಲ್ಲಿ ಸಮಸ್ಯೆಯಾಗುವುದು ಸಮಾಜವಾದಿ ಪಕ್ಷಕ್ಕೆ ಬೇಕಿರಲಿಲ್ಲ. ಭ್ರಷ್ಟಾಚಾರದಿಂದಲೂ, ರಾಜಕಾರಣಿಗಳ ಶಿಫಾರಸಿನಿಂದಲೂ ತಮ್ಮ ಪೊಲೀಸ್‌ ಕೆಲಸವನ್ನು ಪಡೆದವರು ಈ ರಾಜಕಾರಣಿಗಳಿಗೆ ತೊಂದರೆಯಾಗುವಂತೆ ನಿಜವಾದ ಕ್ರೈಮಿನ ಅಂಕಿ ಅಂಶಗಳನ್ನು ಹೊರಗೆಡವುವಂತಿಲ್ಲ. ಶ್ರೀಮಂತರ ಕೇಸಾದರೆ ಆ ವಿಷಯ ಬೇರೆ. ಅದರಲ್ಲಿ ಆದಾಯವಿದೆ.
ಇದನ್ನು ವಿರೋಧಿಸುವವರು ಯಾರು? ಬೇರೆ ರಾಜಕೀಯ ಪಕ್ಷಗಳೂ ಅಧಿಕಾರದಲ್ಲಿದ್ದಾಗ ಮಾಡಿದ್ದು ಇದನ್ನೇ.

ನಾಚಿಕೆ ಕೆಟ್ಟವರು ಒಬ್ಬರನ್ನೊಬ್ಬರು ನಿಂದಿಸಿಕೊಳ್ಳುವ ನಾಟಕ ಇಂದಿನ ರಾಜಕಾರಣ ವಾಗಿದೆ. ಇದು ಆಗದ ಹಾಗೆ ಮಾಡಲು ಏನೇನು ಕಾನೂನಿನ ಬದಲಾವಣೆಗಳಾಗಬೇಕು ಎಂದು ನ್ಯಾಯಪರರಾದ ನಮ್ಮಂತಹ ಸಜ್ಜನರು ಚರ್ಚಿಸಲು ತೊಡಗುತ್ತೇವೆ. ಆದರೆ ಒಂದು ಸತ್ಯವನ್ನು ಮರೆಯುತ್ತೇವೆ. ಕಾನೂನು ವ್ಯವಸ್ಥೆ ಈಗಿರುವಂತೆಯೇ ಈ ಕ್ರೌರ್ಯಕ್ಕೆ ಅವಕಾಶವಿಲ್ಲ. ಇದಾಗದಂತೆ ತಡೆಯಬಹುದಿತ್ತು. ಆದರೆ ಯಾರೂ ಏನೂ ಮಾಡಲಿಲ್ಲ. ನಮ್ಮ ಪಾಡಿಗೆ ನಾವು ಇದ್ದೆವು.

ಇದು ನೈತಿಕ ಅಧಃಪತನದ ಕಾಲ. ಸ್ವಾತಂತ್ರ್ಯದ ನೆವದಲ್ಲಿ ಪೆಟ್ರೋಲಿಗಾಗಿ ಬುಷ್‌ ಇರಾಕ್‌ನ್ನು ನಾಶ ಮಾಡುತ್ತಾನೆ. ಕ್ರೂರ ಸರ್ವಾಧಿಕಾರಿಯಾಗಿದ್ದ ಸದ್ದಾಂನನ್ನು ನೇಣುಗಂಬದ ಕೆಳಗೆ ನಿಲ್ಲಿಸಿ ಅಣಕಿಸಿ ಗೇಲಿ ಮಾಡಿ, ಅವನ ರಾಷ್ಟ್ರನಿರ್ಮಾಣದ ಕ್ರೌರ್ಯಕ್ಕಿಂತ ಹೆಚ್ಚು ಹೇಸಿಗೆ ಹುಟ್ಟಿಸುವ ಕ್ರೌರ್ಯದಲ್ಲಿ ಕೊಲ್ಲುತ್ತಾರೆ. ಸದ್ದಾಂ ಮಾಡಿದ್ದು ನೆಪೋಲಿಯನ್‌, ಸ್ಟಾಲಿನ್‌ ಮಾಡಿದ್ದಕ್ಕಿಂತ ಭಿನ್ನವಾದ ಅಪರಾಧವಲ್ಲ. ಕೌಟಿಲ್ಯ, ಮೆಕಾವಲ್ಲಿಯಂಥವರು ಒಪ್ಪುವ ಉಪಾಯಗಳೇ ಅವನವು. ಪ್ರೀತಿಯಿಂದ ಆಳುವುದು ಅಸಾಧ್ಯವಾದಾಗ ಭೀತಿ ಹುಟ್ಟಿಸಿ ಆಳು ಎನ್ನುವುದು ರಾಷ್ಟ್ರ ನಿರ್ಮಾಣದ ಸನಾತನ ಸೂತ್ರ.

ಸಮಾಜವಾದದ ಬಗ್ಗೆಯೂ ಲೋಹಿಯಾ ಬಗ್ಗೆಯೂ ಮಾತಾಡುವ ಮುಖ್ಯಮಂತ್ರಿಯೊಬ್ಬ ನೊಯಿಡಾಕ್ಕೆ ಹೋದರೆ ತನ್ನ ಪದವಿ ಕಳೆದುಕೊಳ್ಳಬಹುದೆಂಬ ಮೂಢನಂಬಿಕೆಯಲ್ಲಿ ಸರಣಿ ಕೊಲೆಯಲ್ಲಿ ಮುಗ್ಧ ಮಕ್ಕಳು ಸತ್ತಿರುವುದನ್ನು ಲೆಕ್ಕಿಸದೆ ಜಾಣ ವಿವರಣೆಗಳನ್ನು ಕೊಡುತ್ತಾನೆ. ಬಂಗಾಳದಲ್ಲಿ ಮಾರ್ಕ್ಸ್‌ವಾದೀ ಸರ್ಕಾರದವರು ರೈತರ ಅನುಮತಿಯಿಲ್ಲದೆ ಅವರ ಫಲದಾಯಕವಾದ ಭೂಮಿಯನ್ನು ಕೈಗಾರೀಕರಣಕ್ಕೆ ಹಂಚುತ್ತಾರೆ. ಒಬ್ಬ ಹಿಂದೂ ಅಪರಾಧಿಯಾದರೆ ಎಲ್ಲ ಹಿಂದೂಗಳೂ ಸೈತಾನ ಸಂತತಿಯವರೆಂದು ಕಾಣುವಂತೆ ಇಸ್ಲಾಮಿಸ್ಟರು ತಮ್ಮ ಪೂಜ್ಯ ಗ್ರಂಥವನ್ನು ಅಪಾರ್ಥಕ್ಕೆ ತಿರುಚುತ್ತಾರೆ. ಒಬ್ಬ ಮುಸ್ಲಿಂ ಅಪರಾಧಿಯಾದರೆ ಎಲ್ಲ ಮುಸ್ಲಿಮರನ್ನೂ ಶಂಕಿಸುವಂತೆ ಹಿಂದುತ್ವವನ್ನು ಬಳಸುತ್ತೇವೆ. ಈ ಎಲ್ಲದರ ನಡುವೆ ನಮ್ಮ ದೇಶ ಜಗತ್ತಿನ ಮಹಾರಾಷ್ಟ್ರಗಳ ಸಾಲಿಗೆ ಸದ್ಯದಲ್ಲೇ ಸೇರಲಿದೆ ಎಂಬ ಕನಸನ್ನು ಜಾಗತೀಕರಣದ ಅಧ್ವರ್ಯುಗಳು ಮಧ್ಯವರ್ಗದವರಿಗೆ ಮಾರುತ್ತಾರೆ.

ಎಲ್ಲ ರಾಜಕೀಯ ಸಿದ್ಧಾಂತಗಳೂ ಹುರುಳಿಲ್ಲದಂತೆ ಸುಳ್ಳೆನ್ನಿಸುವಂತೆ ಕಾಣುತ್ತಿರುವ ಈ ಕಾಲ ದುಷ್ಟ ಕಾಲ. ಅಲ್ಲಿ ಇಲ್ಲಿ ಗಾಳಿಗೊಡ್ಡಿದ ಸಣ್ಣ ಬತ್ತಿಯ ಮೇಲೆ ಬಳುಕುತ್ತ ಉರಿಯುವ ದೀಪಗಳು ಇವೆ. ಈ ಸಣ್ಣ ಸಣ್ಣ ಸಮುದಾಯಗಳಲ್ಲಿ ಉರಿಯುವ ದೀಪಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನುಗಾರರನ್ನು ನಾಶಮಾಡುವ ಉಷ್ಣಸ್ಥಾವರ ಬೇಡವೆಂದು ದನಿಯೆತ್ತುತ್ತವೆ; ಮತೀಯ ಗಲಭೆಗಳು ಆಗದಂತೆ ಸುಳ್ಳುಗಳು ಹರಡದಂತೆ ಸತ್ಯವನ್ನು ಎಲ್ಲರಿಗೆ ಕೇಳಿಸುವಂತೆ ಪೇಚಾಡುವ ಕೆಲವು ಜನರು ಇನ್ನೂ ಇದ್ದಾರೆ. ಇವು ಯಾವುವೂ ಸಂಘಟಿತವಾದ ಶಕ್ತಿಗಳಲ್ಲ. ಆದರೆ ಅವು ಇಲ್ಲವೆಂದು ತಿಳಿದು ಸಿನಿಕರಂತೆ ಮಾತಾಡುವುದೂ ಲಂಪಟತನವಾಗುತ್ತದೆ. ಸ್ವಿಫ್ಟ್‌ ನಂತೆ ಮಾತಾಡುವುದೂ ದುಃಖದ ಸಂದರ್ಭದಲ್ಲಿ ಲಂಪಟತನವೇ.

ಗಾಂಧೀಜಿಯನ್ನು ಇಂಗ್ಲೆಂಡಿನಲ್ಲಿ ಪತ್ರಕರ್ತನೊಬ್ಬ ಕೇಳುತ್ತಾನೆ. ಅದು ಪಾಶ್ಚಿಮಾತ್ಯ ನಾಗರೀಕತೆ ಅತ್ಯುತ್ತಮವೆಂದು ಹಲವರು ತಿಳಿದಿದ್ದ ಕಾಲ. `ಪಾಶ್ಚಿಮಾತ್ಯ ನಾಗರೀಕತೆ ಬಗ್ಗೆ ಏನೆನ್ನುತ್ತೀರಾ?' ಅದಕ್ಕೆ ಗಾಂಧಿ ಕೊಟ್ಟ ಉತ್ತರ: `ಅದೊಂದು ಗುಡ್‌ ಐಡಿಯಾ'. ಈಗ ಗಾಂಧೀಜಿಯನ್ನು ಯಾರಾದರೂ `ಭಾರತೀಯ ನಾಗರೀಕತೆ ಬಗ್ಗೆ ಏನೆನ್ನುತ್ತೀರಾ?' ಎಂದು ಕೇಳಿದ್ದರೆ ಅವರು ಏನೆನ್ನಬಹುದಿತ್ತು? ಶಿವ ವಿಶ್ವನಾಥನ್‌ ಊಹಿಸುವಂತೆ ಗಾಂಧಿ ಹೇಳುತ್ತ ಇದ್ದರು, ಪ್ರಾಯಶಃ ಹೀಗೆ: `ಅದೊಂದು ಗುಡ್‌ ಐಡಿಯಾ'.
ಆಶಾವಾದದ ಸಮಾಧಾನವನ್ನೂ ಅಪೇಕ್ಷಿಸದಂತೆ, ನಿರಾಶಾವಾದದ ಲಂಪಟತನವೂ ಇಲ್ಲದಂತೆ ನಾವು ಪ್ರಸ್ತುತದಲ್ಲಿ ಬಾಳಬೇಕಾಗಿದೆ.

ಈ ಲೇಖನದ ಕಳಕಳಿಯನ್ನು ಹಂಚಿಕೊಳ್ಳುತ್ತಲೇ ನನಗೆ ಕಂಡ ಕೆಲ ಸ್ವಾರಸ್ಯಕರ ಅಂಶಗಳನ್ನು ದಾಖಲಿಸಬೆಕೆನ್ನಿಸುತ್ತಿದೆ. ಅಪ್ವರ್ಡ್ ಕುರಿತ ಲೇಖನಮಾಲೆ, ಚರಿತ್ರೆ ಕುರಿತ ಲೇಖನ ಮತ್ತು ನೋಯಿಡಾ ಕುರಿತ ಈ ಲೇಖನ ಪರಸ್ಪರ ಸಂಬಂಧ ಹೊಂದಿರುವ ಲೇಖನಸರಣಿಯಂತಿದೆ. ತಮ್ಮ ಲೇಖನದ ಕೆಳಗಿನ ಸಾಲುಗಳು ಈ ಸಂಬಂಧ ಕಲ್ಪಿಸುತ್ತವೆ.

೧. ಸ್ವಿಫ್ಟ್ನ ಬರವಣಿಗೆಯ ತಣ್ಣನೆಯ ಮಾತಿನ ಕ್ರೌರ್ಯದಿಂದ ನಾವು ಹೇಸುವುದು ಮತ್ತು ಅದನ್ನು ನಾನು ಸಾಹಿತ್ಯಕವಾಗಿ ಮೆಚ್ಚುತ್ತೇವೆ ಎನ್ನುವದರಿಂದ ಉಂಟಾಗುವ ನೈತಿಕತೆಯ ಪ್ರಶ್ನೆ.

೨. ನಮ್ಮ ಪರಿಸ್ಥಿತಿಯನ್ನು ಕುರಿತು ಸಿನಿಕರಂತೆ ಮಾತನಾಡುವುದೂ ಲಂಪಟತನ ಮತ್ತು, ಸ್ವಿಫ್ಟ್ನಂತೆ ಮಾತನಾಡುವುದೂ ದುಃಖದ ಸಂದರ್ಭದಲ್ಲಿ ಲಂಪಟತನ.

ಹೀಗಿರುವ ಪಕ್ಷದಲ್ಲಿ ಚರಿತ್ರೆಯ ಕುರಿತು ಬೇಂದ್ರೆ, ಅಡಿಗ, ಬೆಂಜಾಮಿನ್ನರ ಗಮನ/ಗ್ರಹಿಕೆಗಳನ್ನು ನಾವು ಯಾವ ರೀತಿ ಎದುರಿಸುವುದು ಎನ್ನುವುದು ಒಂದು ಪ್ರಶ್ನೆಯಾಗುತ್ತದೆ. ತಮ್ಮ ಚರಿತ್ರೆ ಲೇಖನಕ್ಕೆ ಶ್ರೀ ಸುದರ್ಶನರ ಪ್ರತಿಕ್ರಿಯೆ ಕೂಡಾ ಈ ದೃಷ್ಟಿಯಿಂದ ಗಮನಾರ್ಹವಾಗಿದೆ.

ನೋಯಿಡಾ ಘಟನೆಗಳನ್ನು ಪ್ರತ್ಯೇಕವಾಗಿ ಗಮನಿಸದೇ ನಮ್ಮ ಕಾಲದ ಪ್ರಕ್ರಿಯೆಗಳ ಒಂದು ವಿಷದ ಬೈಪ್ರಾಡಕ್ಟಾಗಿ ಕಾಣುವುದಕ್ಕೆ ನಮಗೆ ಧೈರ್ಯ ಸಾಲುತ್ತಿಲ್ಲ. ಅದರಿಂದ ಏಳಬಹುದಾದ ಪ್ರಶ್ನೆಗಳನ್ನು ಎದುರಿಸುವುದಕ್ಕೆ ನಾವು ಸಿದ್ಧರಿಲ್ಲ. ನಮ್ಮ ಕಾಲದ ಜೀವನ ರೀತಿಯ ಯಾವ ಅಂಶಗಳು ಇಂತಹ ವಿಷಯಗಳು ನಮ್ಮೆದುರಿನಲ್ಲೇ ನಡೆಯುತ್ತಿದ್ದರೂ ಕಾಣದ ಹಾಗಾಗಿದೆ ಎನ್ನುವ ಪ್ರಶ್ನೆಯನ್ನು ನಾವು ಎದುರಿಸುತ್ತಿಲ್ಲ.

ಕ್ರೈಂ ವಿಷಯದಲ್ಲಿ ನಾವೆಷ್ಟೇ ನಮ್ಮೊಳಗೇ ಶೋಧಿಸಿಕೊಂಡು ಅದೆಷ್ಟೇ ಅರ್ಥಮಾಡಿಕೊಂಡಿದ್ದೇವೆ ಎನ್ನುವ ಗರ್ವದಲ್ಲಿದ್ದರೂ, ನೋಯಿಡಾವನ್ನು ಅರಗಿಸಿಕೊಳ್ಳುವುದು ಕಷ್ಟವೆಂದೆನ್ನಿಸುತ್ತಿದೆ.

ಇಂತಿ ಶಿವು

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
Image CAPTCHA
Copy the characters (respecting upper/lower case) from the image.