ಓಟಿಗೋ? ಒಗ್ಗಟ್ಟಿಗೋ?

ನ್ನಡಿಗರಾದ ನನ್ನ ಹಿಂದೂ ಬಾಂಧವರಲ್ಲೂ ನನ್ನ ಮುಸ್ಲಿಂ ಗೆಳೆಯರಲ್ಲೂ ಒಟ್ಟಾಗಿ ಕೆಲವು ವಿಚಾರಗಳನ್ನೂ ಭಾವನೆಗಳನ್ನೂ ನಿವೇದಿಸಿಕೊಳ್ಳಲು  ಪ್ರಯತ್ನಿಸುತ್ತೇನೆ. ನಾನು ಹುಟ್ಟಿದ್ದು ಬ್ರಾಹ್ಮಣನಾಗಿ. ನನ್ನ ಬಾಲ್ಯದಲ್ಲಿ ನಾನೊಬ್ಬ ಹಿಂದೂ ಎಂದು ತಿಳಿದೇ ಇರಲಿಲ್ಲ. ಮಠದ ಆವರಣದಲ್ಲಿ ಹಳ್ಳಿಯೊಂದರಲ್ಲಿ ಬೆಳೆದ ನಾನು ಬಹಳ ಕಾಲ ಮಾಧ್ವ ಮತದ ವಿಚಾರಗಳನ್ನು ಶ್ರದ್ಧೆಯಿಂದ ನಂಬುತ್ತ ಇದ್ದೆ. ಈ ಜಗತ್ತು ಸತ್ಯ, ಶಂಕರಾಚಾರ್ಯರು ತಿಳಿದಂತೆ ಮಿಥ್ಯೆಯಲ್ಲ; ದೇವರು ಒಬ್ಬನೇ, ಅವನೇ ವಿಷ್ಣು, ಶಿವ, ಜೀವೋತ್ತಮನೇ ಹೊರತು ದೇವರು ಅಲ್ಲ, ದೇವರ ಸೃಷ್ಟಿಯಲ್ಲಿ ಅಂತರಗಳು ಇವೆ, ತಾರತಮ್ಯಗಳು ಇವೆತೀರ್ಥಹಳ್ಳಿಯ ಹೈಸ್ಕೂಲಿನಲ್ಲಿ ಓದುತ್ತ ಇದ್ದ ನಾನು ಹಳ್ಳಿಯಿಂದ ಸ್ಕೂಲಿಗೆ ಹೋಗುವ ದಾರಿಯಲ್ಲಿ ನನ್ನ ಅದ್ವೈತಿ ಮಿತ್ರರೊಂದಿಗೆ ಪ್ರಾಯಶಃ ಬಾಲಿಶವಾಗಿ ದ್ವೈತಾದ್ವೈತದ ಪಾರಮಾರ್ಥಿಕ ಚರ್ಚೆಯಲ್ಲಿ ಕಾಲ ಕಳೆದವನು. ಹೀಗೆ ನನ್ನ ಜೊತೆ ಅದ್ವೈತದ ಪರ ಚರ್ಚಿಸುತ್ತ ಇದ್ದ ಮಿತ್ರನೊಬ್ಬ ಕೆಲವು ತಿಂಗಳುಗಳ ಹಿಂದೆ ಮೃತನಾದ.

ಮುಂದಿನ ನನ್ನ ಬೆಳವಣಿಗೆಯನ್ನು ಹೇಳುವೆ. ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಹಾತ್ಮ ಗಾಂಧೀಜಿಯವರ ವಿಚಾರಗಳನ್ನು ಸ್ಕೂಲಿನಲ್ಲಿ ಅರಿಯುತ್ತ  ಹೋದಂತೆ, ಜೊತೆಗೇ, ಹರಿಜನ ಪತ್ರಿಕೆಯನ್ನು ತಂದು ಓದುವ, ಒಂದು ಮಾಧ್ವ ಮಠದ ಏಜೆಂಟರಾಗಿದ್ದ ನನ್ನ ತಂದೆಯವರ ವೈಯಕ್ತಿಕ ವಿಚಾರಗಳಿಗೆ ಮಿಡಿಯುತ್ತ ಹೋದಂತೆ, ಎಲ್ಲ ಜಾತಿಗಳ ಜನರೂ ನಮ್ಮಂತೆ ಮನುಷ್ಯರು, ನಮಗೆ ಪಾರಮಾರ್ಥಿಕವಾಗಿ ಸಮಾನರು, ಲೌಕಿಕವಾಗಿಯೂ ಸಮಾನರಾಗಬೇಕಾದವರು, ಅಸ್ಪೃಷ್ಯತೆಯನ್ನು ಆಚರಿಸುವುದು ಅನೈತಿಕಮಾತ್ರವಲ್ಲ ಸೃಷ್ಟಿಕರ್ತನ ದೃಷ್ಟಿಯಿಂದ ಅದೊಂದು ಪಾಪದ ಆಚರಣೆ ಇತ್ಯಾದಿಯಾಗಿ ನಾನು, ಕಾರಂತರನ್ನೂ ಕುವೆಂಪುರವರನ್ನೂ ಓದಿದ್ದರಿಂದ ಹಿಂಜರಿಯುವ ನನ್ನ ತಂದೆಯನ್ನೂ ಮೀರಿ, ಬೆಳೆಯುತ್ತ ಹೋದೆ. ಆ ದಿನಗಳಲ್ಲಿ ನಾನೊಬ್ಬ ಹಿಂದೂ ಎಂದು ತಿಳಿದು ವರ್ತಿಸುವುದು ಕ್ರಾಂತಿಕಾರಕವಾಗಿ ಕಂಡಿತ್ತು. ಆದರೆ, ನಾನು ಬ್ರಾಹ್ಮಣನೆಂದು ಗೊತ್ತಿರುವವರ ನಡುವೆ ಹೀಗೆ ಉದ್ದೇಶಪೂರ್ವಕವಾಗಿ ಹೇಳಿಕೊಳ್ಳುವುದು ಕೃತಕವಾಗಿ ಕಾಣುತ್ತ ಇತ್ತು. ಈಗಲೂ ಇದು ನಿಜ. ಹೆಸರಿನಿಂದಲೇ ಜಾತಿ ಊಹಿಸುವ ನಾವು, ಯಾರಾದರೂ ತಾವು ಹಿಂದೂ ಎಂದರೆ, ಅವರ ಜಾತಿಯಾವುದೆಂದು ತಿಳಿಯಲು ಅವರ ಅಪ್ಪ ಅಜ್ಜರ ಹೆಸರುಗಳನ್ನು ಕೇಳುತ್ತೇವೆ.

ಎಲ್ಲರನ್ನೂ ವಾತ್ಸಲ್ಯದಿಂದ ಕಾಣುತ್ತ ಇದ್ದ ನನ್ನ ತಾಯಿ ಮಾತ್ರ ಮಡಿಮೈಲಿಗೆ ಬಿಟ್ಟವರಲ್ಲ. ತನ್ನ ಜಾತಿಯ ಬಗ್ಗೆ (ಉಪಜಾತಿ ಎನ್ನುವುದೇ ಹೆಚ್ಚಿನ ಸತ್ಯ)  ನಾಚಿಕೊಂಡ ಆಧುನಿಕರಲ್ಲ. ಅವರಿಗೆ ಶಾಕ್‌ ಆದದ್ದು ಪೇಜಾವರ ಸ್ವಾಮಿಗಳು ಹರಿಜನ ಕೇರಿಗೆ ಹೋದರೆಂದು ಗೊತ್ತಾದಾಗ. ಯಾಕೆ ಹೋದರೋ, ಹೋದಮೇಲೆ ಅವರು ಪಂಚಗವ್ಯ ಶುದ್ಧಿ ಮಾಡಿಕೊಳ್ಳದೇ ಇರುತ್ತಾರೆಯೆ? ಎಂದೇ, ಯಾರನ್ನೂ ನಿಕೃಷ್ಟವಾಗಿ ಕಾಣದ, ಆದರೆ ಜಾತಿ ಬಿಡದ ನನ್ನ ತಾಯಿ ಭಾವಿಸಿದ್ದರು. ಮುಸ್ಲಿಮರ ದೇವರಿಗೆ ಹರಕೆ ಹೊತ್ತರೆ, ಅಂದರೆ ಯಾವುದೋ ದರ್ಗಕ್ಕೆ ಇರಬೇಕು, ಮಕ್ಕಳ ಕೆಲವು ಕಾಯಿಲೆಗಳು ಗುಣವಾಗುತ್ತವೆ ಎಂದೂ ಈ ನನ್ನ ತಾಯಿ ತಿಳಿದಿದ್ದರು. ತನ್ನ ಸಾವು ಸನ್ನಿಹಿತವಾದ ಕಾಲದಲ್ಲಿ ಶನಿಮಹಾತ್ಮೆ ಓದುತ್ತ ಇದ್ದರು. ರಸ್ತೆಬದಿ ಪುಸ್ತಕದಂಗಡಿಗಳಲ್ಲಿ ಸಿಗುವ, ಹಳತಾಗಿ ಹಳದಿ ಬಣ್ಣಕ್ಕೆ ತಿರುಗಿದ, ಅಲ್ಲಿಲ್ಲಿ ಹರಿದ ಹಾಳೆಗಳ, ಚೂಪಾದ ಕಣ್ಣು ಮೂಗಿನ ಶನಿಯ ಚಿತ್ರದ ಮಾಸಿದ ಹೊದಿಕೆಯ ಪುಸ್ತಕವನ್ನು ದಪ್ಪ ಗಾಜಿನ ಕನ್ನಡಕ ತೊಟ್ಟು ವಯಸ್ಸಾಗಿ ಹಣ್ಣಾದ ಮೇಲೆ ಬೆನ್ನು ಮುರಿದುಕೊಂಡವರು ಓದುತ್ತ, ಓದಿದ್ದನ್ನು ತನಗೇ ಅಂದುಕೊಳ್ಳುವಂತೆ ತುಟಿಯಾಡಿಸುತ್ತ, ತನ್ನ ಪಾಡಿಗೆ ತಾನು ತುಳಸಿ ಕಟ್ಟೆಯ ಬಳಿ ಗಾಲಿ ಕುರ್ಚಿಯ ಮೇಲೆ ಕೂತು, ತನ್ನ ಸಾವನ್ನು ಶನಿಕೃಪೆಯಲ್ಲಿ  ಮುಂದೂಡುತ್ತ ಇದ್ದದ್ದು ನೆನಪಾಗುತ್ತದೆ.

ಜಾತಿಯ ಕಟ್ಟುಪಾಡುಗಳನ್ನು ಮದುವೆಯಲ್ಲೇ ಮೀರಿದ ನನ್ನನ್ನು ನೋವಿನಲ್ಲೂ ಒಪ್ಪಿ ಸಹಿಸಿಕೊಂಡದ್ದು ನೆನಪಾಗುತ್ತದೆ.  ಎಲ್ಲ ದೇವರೂ, ನನ್ನ ಹೆಂಡತಿಯ ಧರ್ಮದ ದೇವರೂ,  ದೇವರೇ ಅವರ ಪಾಲಿಗೆ. ಅಂದರೆ ತನ್ನನ್ನು ಹಿಂದೂ ಎಂದು ಗುರುತಿಸಿಕೊಳ್ಳದ ಈ ನನ್ನ ತಾಯಿಯೇ ನಿಜವಾದ ಹಿಂದೂ ಎನ್ನಬಹುದೇನೊ? ನಮ್ಮ ದೇಶದ ಕೋಟ್ಯಾಂತರ ಜನರು, ನಾವು ಈಗ ಹಿಂದೂ ಎಂದು ಗುರುತಿಸುವವರು ಹಿಂದೂಗಳಾಗಿರುವುದು ಈ ಬಗೆಯ ವಿರೋಧಾಭಾಸದಲ್ಲೇ.

ಸೆಮಿಟಿಕ್‌ ಧರ್ಮದವರಾದ ಕ್ರಿಶ್ಚಿಯನ್ನರಿಗೆ, ಮುಸ್ಲಿಮರಿಗೆ, ಯಹೂದ್ಯರಿಗೆ ಸೈದ್ಧಾಂತಿಕವಾಗಿ ಇದು ಸಾಧ್ಯವಾಗದು. ಆದರೆ ನಿಜ ಜೀವನದ ಸತ್ಯಗಳೇ ಬೇರೆ;  ಸೈದ್ಧಾಂತಿಕವಾಗಿ ಸಲ್ಲದ ಎಷ್ಟೋ ಸಂಗತಿಗಳು ಬದುಕಿನ ಅತಾರ್ಕಿಕ ಸಂಭ್ರಮದ, ಬೆರಗಿನ ಸತ್ಯಗಳಾಗಿ ಇರುತ್ತವೆ. ದೇವರ ಮೇಲಿನ ಪ್ರೀತಿಯ ಹುಚ್ಚು ಹಿಡಿದವರಂತೂ ಎಲ್ಲ ಮತಧರ್ಮಗಳಲ್ಲೂ ಅವಧೂತರಾಗಿ ಪರಮಾರ್ಥಕ್ಕೆ ಒಳದಾರಿಗಳನ್ನು ಹುಡುಕಿದವರಾಗಿರತ್ತಾರೆ.

ಈ ಯಾವ ವಿಶೇಷ ಅವಸ್ಥೆಗಳ ಗೊಡವೆಗೂ ಹೋಗದ ನನ್ನ ತಾಯಿಯಂಥವರು ಅಪ್ಪಟ ನೈಜ ಜೀವಿಗಳು; ಆದರೆ ನಿಜ ಯಾವುದೆಂದು ತಲೆಕೆಡಿಸಿಕೊಂಡವರಲ್ಲ. ಅವರು ಇರುವ ಸಂದರ್ಭಕ್ಕೂ, ಅವರ ಇರುವಿಕೆಗೂ ನಡುವೆ ಬಿರುಕುಗಳಿಲ್ಲ. ನಮ್ಮ ಇರುವಿಕೆಯ ಸಂದರ್ಭದಿಂದ ಬೇರೆಯಾಗಲು, ಅನ್ಯವಾಗಲು ಯತ್ನಿಸುವ ನಮ್ಮಂಥವರು, ನಿಜದ ಹುಡುಕಾಟದಲ್ಲಿ ನಮ್ಮ ಸಂದರ್ಭದ ನೈಜತೆಯನ್ನ್ನೂ ಮರೆಮಾಚದೆ ಇರಬೇಕೆಂಬ ಆಸೆಯುಳ್ಳವರೂ ಆದವರಾದರೆ ಏನೇನೋ ನಮಗೇ ಅಂದುಕೊಳ್ಳುತ್ತೀವಿ; ಹೊರಗೆ ಏನೇನೋ ಆಗಿ ತೋರಿಕೊಳ್ಳುತ್ತೀವಿ. ಜಾತಿಯನ್ನು ಮೀರಬೇಕೆಂದು ಹಿಂದೂ ಎಂದು ಕೊಳ್ಳುತ್ತೀವಿ. ಹಿಂದೊಂದು ಕಾಲದಲ್ಲಿ ವಿವೇಕಾನಂದರಿಂದಲೋ, ಗಾಂಧಿ ಯಿಂದಲೋ ಪ್ರೇರಿತರಾಗಿ, ಒಗ್ಗಟ್ಟಿನಲ್ಲಿ ಬಲವಿದೆ ಎಂದು ತೀಳಿದು ಹೀಗೆ ಜಾತಿಭಾವನೆ ಮೀರುವಂತೆ ನಾವು ಹುರುಪುಗೊಂಡದ್ದು ಇದೆ. ಆದರೆ ಬ್ರಿಟಿಷರ ಆಡಳಿತದಿಂದ ಬಿಡುಗಡೆಯಾಗಲು ಈ ಹಿಂದುತ್ವದ ಒಗ್ಗಟ್ಟಿನ ಭಾವನೆ ಸಾಲದಾಗಿ ನಾವೆಲ್ಲರೂ ಭಾರತೀಯರು ಎನ್ನುವ ಕಲ್ಪನೆಯನ್ನು - ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಪರ್ಶಿಯನ್ನರು ಒಳಗೊಳ್ಳುವಂತೆ- ಬೆಳೆಸಿಕೊಳ್ಳಬೇಕಾಯಿತು. ನಮ್ಮ ಸ್ವಾತಂತ್ರ್ಯಹೋರಾಟದ ನಾಯಕರೆಲ್ಲರೂ ಇದರ ಫಲವಾಗಿ ಬೆಳೆದವರು. ಇದರಿಂದ ಗಡಿನಾಡಿನ ಗಾಂಧಿಯೆಂದೇ ಖ್ಯಾತರಾದ ಖಾನ್‌ ಅಬ್ದುಲ್‌ ಗಫಾರ್‌ ಖಾನರು ಹೋರಾಟಕ್ಕೆ ದಕ್ಕಿದರು. ಇಸ್ಲಾಂ ಧರ್ಮದ ಟೀಕಾಚಾರ್ಯರೆಂದೇ ಕರೆಯಬಹುದಾದ ಮೌಲಾನಾ ಅಝಾದರು ನಮ್ಮ ಮೊದಲ ಸಾಲಿನ ನಾಯಕರಾದರು.

ಈಗ ಎಲ್ಲವೂ ಬದಲಾಗಿದೆ. ವಿರಾಟ್‌ ಹಿಂದೂ ಜಾಗೃತಿಯ ಸಮ್ಮೇಳನಗಳು ಒಗ್ಗಟ್ಟಿಗಾಗಿಯೋ ಓಟಿಗಾಗಿಯೋ ಎಂಬುದು ಸಾಮಾನ್ಯರಿಗೆ ತಿಳಿಯಲಾಗದಂತೆ ಕಾವಿ ಧರಿಸಿದವರೂ, ರಾಜಕಾರಣಿಗಳೂ ಅದರಲ್ಲಿರುತ್ತಾರೆ. ಈ ಸಮ್ಮೇಳನಗಳು ಒಗ್ಗಟ್ಟಿಗಾದರೆ, ಇಸ್ಲಾಂ ಅನ್ನು ತಮ್ಮ ಜೀವದ ರಕ್ಷಣೆಗಾಗಿ ನಂಬುವವರೂ ಆದ (ಇನ್ನೊಂದು ಧರ್ಮದ ನನ್ನ ತಾಯಿಯಂತೆಯೇ) ನೈಜರೂ ಮುಗ್ಧರೂ ಆದ ಸಾಮಾನ್ಯ ಬಡಪಾಯಿ ಮುಸ್ಲಿಮರನ್ನು ಭಯಗ್ರಸ್ತರನ್ನಾಗಿ ಮಾಡುವ ಉಪಾಯವಾಗಿ ಪರಿಣಮಿಸುತ್ತದೆ. ಇದನ್ನು ಮುಸ್ಲಿಮರು ವಿರೋಧಿಸಬೇಕೆಂಬ ಕಾಲು ಕೆರೆದು ಜಗಳಕ್ಕೆ ಆಹ್ವಾನಿಸುವ ಗೂಳಿಯ ಗುಪ್ತ ಆಶಯವೂ ಅಡಗಿರುತ್ತದೆ. ಬದಲಾಗಿ ಇದು ಓಟಿಗಾಗಿ ಮಾತ್ರ ಆದರೆ (ಹಾಗಿರುವುದೇ ಈ ಕಾಲದಲ್ಲಿ ಹೆಚ್ಚು) ಬಿಜೆಪಿ ವಿರುದ್ಧದ ಕಾಂಗ್ರೆಸ್‌ ರಾಜಕಾರಣವಾಗಿ ಮುಸ್ಲಿಮರು ಸಂಘಟಿತರಾಗುತ್ತಾರೆ. ಮುಸ್ಲಿಮನೊಬ್ಬ ಸತ್ತರೆ ಕಾಂಗ್ರೆಸ್ಸಿಗೆ ಲಾಭ. ಹಿಂದೂ ಸತ್ತರೆ ಬಿಜೆಪಿಗೆ ಲಾಭ. ಇದು ಓಟಿನ ರಾಜಕಾರಣ. ನಾವೆಲ್ಲರೂ ಬೇರೆ ಪರ್ಯಾಯ ಕಾಣದೆ ಬೆಂಬಲಿಸುವ ಪ್ರಜಾತಂತ್ರದ ಹೊಟ್ಟೆಯಲ್ಲೇ ಹುಟ್ಟುವ ಆಮಶಂಕೆಯಂತಹ ಕಾಯಿಲೆ ಇದು. ಎಲ್ಲ ಪಕ್ಷಗಳೂ ಹುಟ್ಟುಹಾಕುವ ಕಾಯಿಲೆ. ಪ್ರಜಾತಂತ್ರದ ಅಗತ್ಯವಾದ ಚುನಾವಣೆಯ ರಾಜಕಾರಣವನ್ನು ಮನಸಾರೆ ಒಪ್ಪಿಕೊಳ್ಳುವದೂ ಸಾಧ್ಯವಾಗದ, ನಿರಾಕರಿಸಲೂ ಸಾಧ್ಯವಾಗದ ಬಿಕ್ಕಟ್ಟಿನಲ್ಲಿ ನಾವು ಕಂಗೆಡುತ್ತೇವೆ.

ಇರಾಕಿನ ಸರ್ವಾಧಿಕಾರಿಯಾಗಿದ್ದ ಆಳೆತ್ತರದ ಸದ್ದಾಂನನ್ನು ಗಲ್ಲಿಗೇರಿಸುವಾಗ ಅವನ ಸಾಯಲಿರುವ ಮಾನವ ಜೀವದ ದೇಹಕ್ಕೆ ಯಾವ ಮರ್ಯಾದೆಯನ್ನೂ ಕೊಡದಂತೆ ಹೀಯಾಳಿಸಿ ಕೊಂದ ದೃಶ್ಯವನ್ನು ಕಂಡು ನನ್ನ ಹೊಟ್ಟೆ ತೊಳೆಯಿಸಿದಂತೆ ಅಸಹ್ಯವೆನ್ನಿಸಿತು. ಹೀಯಾಳಿಸಿದವರು ಶಿಯಾಗಳು. ಸದ್ದಾಂ ಸೆಕ್ಯುಲರ್‌ ಪ್ರಭುತ್ವ ನಡೆಸಿದವನು. ಭಾರತಕ್ಕೆ ಸ್ನೇಹಿತನಾಗಿ ಇದ್ದವನು. ಆದರೆ ಶಿಯಾ ಇರಾನ್‌ ವಿರುದ್ಧ ಅಮೆರಿಕನ್‌ ಸಹಾಯ ಪಡೆದು ಯುದ್ಧ ಮಾಡಿದವನು. ಮುಸ್ಲಿಮರೇ ಆದ ಇನ್ನೊಂದು ಜನಾಂಗವನ್ನು ವಿಷವಾಯು ಬಳಸಿ ನಿರ್ನಾಮ ಮಾಡಲು ಅಂಜದವನು. ಶಿಯಾ-ಸುನ್ನಿ ಜಗಳ ನನಗಂತೂ ನಮ್ಮ ಶೈವ-ವೈಷ್ಣವ ಪ್ರಾಚೀನ ಕಾದಾಟದಂತೆಯೇ ಅರ್ಥಹೀನವೆನ್ನಿಸುತ್ತದೆ. ಎಲ್ಲ ರಾಷ್ಟ್ರಕಟ್ಟುವವರಂತೆ- ಹಿಟ್ಲರ್‌ನಂತೆ, ನೆಪೋಲಿಯನ್‌ನಂತೆ, ಸ್ಟಾಲಿನ್‌ನಂತೆ, ಮಾವೋನಂತೆ- ನಿರ್ದಯವಾಗಿ ವರ್ತಿಸಿದವನು ಈ ಸೆಕ್ಯಲರ್‌ ಪ್ರಭುತ್ವದ ಸದ್ದಾಂ. (ಇಪ್ಪತ್ತನೇ ಶತಮಾನದಲ್ಲಿ ಹೆಚ್ಚು ಹಿಂಸೆ ನಡೆಸಿದವರು ಸೆಕ್ಯುಲರಿಸ್ಟರೇ) ಇವನನ್ನು ಅಮೆರಿಕಾ ಮತ್ತು ಇಂಗ್ಲೆಂಡು ನಿರ್ನಾಮ ಮಾಡಿದ್ದು ಪ್ರಜಾತಂತ್ರಕ್ಕಾಗಿ ಅಲ್ಲ;  ಇರಾಕಿನ ಪೆಟ್ರೋಲ್‌ಗಾಗಿ. ಶಿಯಾ ದ್ವೇಷವನ್ನು ಬಳಸಿಕೊಂಡಿದ್ದು ಅಮೆರಿಕಾದ ಪ್ರಭುತ್ವ. ನಮ್ಮಲ್ಲಿ ಹಿಂದೂಗಳನ್ನೂ ಮುಸ್ಲಿಮರನ್ನೂ ಒಡದು ಆಳಿದ ಬ್ರಿಟಿಷ್‌ ರಾಜಕಾರಣದ ಮುಂದುವರಿಕೆ ಇದು.

ಏನನ್ನು ಹೇಳಲು ಮೇಲಿನದನ್ನೆಲ್ಲ ಬರೆದೆ ಎಂಬುದನ್ನು ಸ್ಪಷ್ಟಗೊಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಸದ್ದಾಂ ಪರವಾಗಿ ಬೆಂಗಳೂರಿನಲ್ಲಿ ಮುಸ್ಲಿಮರನ್ನು ಸಂಘಟಿಸುವುದು ಅನವಶ್ಯಕವಾಗಿತ್ತು. ಅಮೆರಿಕಾದ ಒಡೆದಾಳುವ, ಇಡೀ ಜಗತ್ತನ್ನು ತನ್ನ ಮಾರುಕಟ್ಟೆ  ಮಾಡುವ ಉಪಾಯಗಳನ್ನು ವಿರೋಧಿಸಲು ಇರಾಕ್‌ ಆಕ್ರಮಣವನ್ನು ನಾವು ವಿರೋಧಿಸಬೇಕಿತ್ತು. ಮುಸ್ಲಿಮರು ಮಾತ್ರವಲ್ಲ ಹಿಂದೂಗಳಿಗೂ ಇದು ಅಗತ್ಯವಾದ ಆಂದೋಳನವಾಗಬೇಕಿತ್ತು. ಹೀಗೆ ಮುಸ್ಲಿಮರನ್ನು ಒಟ್ಟುಮಾಡಲು ಯಾರೋ ಪ್ರಯತ್ನಿಸಿದಾಗ ಹಿಂದೂ ವಿರಾಟ್‌ ಸಮ್ಮೇಳನಗಳು ಅದಕ್ಕೆ ವಿರೋಧವಾಗಿ ಹುಟ್ಟಬಾರದಿತ್ತು.

ಈಗ ನಡೆಯುವುದೆಲ್ಲವೂ ಮಾರುಕಟ್ಟೆ ವಿಸ್ತರಣದ ರಾಜಕಾರಣ. ಗುಜರಾತಿನಲ್ಲಿ ಸದ್ದಾಂನಷ್ಟು ಏಕಾಧಿಪತ್ಯದ ಅವಕಾಶವಿದ್ದಲ್ಲಿ ಅವನನ್ನೇ ನಾಚಿಸಬಹುದಾಗಿದ್ದ ಮಾರಣಹೋಮವನ್ನು  ತಡೆಯದಂತೆ ಆಗಲು ಬಿಟ್ಟ ಮುಖ್ಯಮಂತ್ರಿ ಮೋದಿ ಈಗ ಎಲ್ಲ ಉದ್ಯಮಿಗಳ ವಿಕಾಸವಾದೀ ಹೀರೋ. ರಿಲಯನ್ಸ್‌ ನವರು, ಟಾಟಾದವರು, ಇನ್‌ ಫೋಸಿಸ್‌ನವರು ಮೋದಿಯನ್ನು ಅಪ್ಪಿಕೊಳ್ಳುತ್ತಾರೆ. ಮೋದಿ ಮುಂದಿನ ಹಿಂದುತ್ವದ ರೂವಾರಿ. ಜಿನ್ನಾರನ್ನು ಹೊಗಳಿದ ಅದ್ವಾನಿಯವರೂ ಅಲ್ಲ; ಲಾಹೋರಿಗೆ ಬಸ್ಸಿನಲ್ಲಿ ಹೋಗಿ ನಮ್ಮ ಮೆಚ್ಚುಗೆ ಗಳಿಸಿದ ವಾಜಪೇಯಿಯವರೂ ಅಲ್ಲ. ಬುಷ್‌ನಂತೆಯೇ  ಗುಜರಾತಿನ ಮೋದಿ ಕೂಡಾ ಪರಮ ಲೌಕಿಕ; ಜಾಗತಿಕ ಮಾರುಕಟ್ಟೆಗೆ ಸಲ್ಲುವ ಹಿಂದುತ್ವದ ಎನ್‌ ಆರ್‌ ಐಗಳ ಅಪ್ಪಟ ಸಿದ್ಧಾಂತಿ. ಈಗ ನಾವೇನು ಮಾಡಬೇಕು? ಹಿಂದೂಗಳಿಗೆ ಹೇಳಬೇಕು: ನಮ್ಮ ಸಂಸ್ಕೃತಿಯದೇ ಆದ ಜೀವನ ಕ್ರಮವನ್ನು ನಾಶ ಮಾಡುವವರು ಮುಸ್ಲಿಮರಲ್ಲ; ಅಮೇರಿಕಾದ ಪ್ರಭುತ್ವ. ಮುಸ್ಲಿಮರು ಅರಿಯಬೇಕು. ಅವರ ಸಂಸ್ಕೃತಿಯ ನಾಶವಾಗುವುದು ಬಡಪಾಯಿಗಳಾದ ಹಿಂದೂಗಳಿಂದ ಅಲ್ಲ; ಅಮೇರಿಕಾದಿಂದ. ನಮ್ಮ ಮತಧರ್ಮಗಳ ಅಲೌಕಿಕ ಒಳನೋಟಗಳು ಆಧುನಿಕ ಪ್ರಭುತ್ವ ರಾಜಕಾರಣದ ಸದ್ಯದಲ್ಲಿ ಆಕರ್ಷಕವೆನ್ನಿಸುವ ವಿಕಾರಗಳಿಂದ ನಮ್ಮನ್ನು ಪಾರುಮಾಡುವ ಪ್ರೇರಣೆಗಳಾಗಬೇಕು; ಬದಲಾಗಿ ಪರಸ್ಪರ ಹಿಂಸೆಗೆ ಅವು ಕಾರಣಗಳಾಗಿವೆ. ಗೋಡ್ಸೆ ಗಾಂಧಿಯನ್ನು ಕೊಂದದ್ದು ಧಾರ್ಮಿಕ ಕಾರಣಕ್ಕಾಗಿ ಅಲ್ಲ; ಲೌಕಿಕ ಖದೀಮತೆಯಲ್ಲೂ ಉಪಾಯಗಳಲ್ಲೂ ಬೆಳೆಸಬೇಕಾದ ಬಲಿಷ್ಠಗೊಳಿಸಬೇಕಾದ ರಾಷ್ಟ್ರ ರಾಜಕಾರಣದಲ್ಲಿ ಅವರು ಹಿಂದೂ ಧರ್ಮದ ಆಳದಲ್ಲಿರುವ ಪಾರಮಾರ್ಥಿಕ ನೈತಿಕತೆಯನ್ನು ತಂದರು ಎಂಬುದು ಗಾಂಧೀ ಕೊಲೆಗೆ ಕಾರಣವಾಯಿತು. ಇಲ್ಲಿ ಕೊಂದವನು ಲೌಕಿಕ ರಾಷ್ಟ್ರೀಯವಾದಿ; ಸತ್ತವನು ಪಾರಮಾರ್ಥಿಕ ಮೌಲ್ಯಗಳನ್ನು ಅಕ್ಷರಶಃ ಆಚರಿಸಲು ಯತ್ನಿಸಿದ ಸಂತ.

***

ಮಹಾರಾಷ್ಟ್ರದಲ್ಲಿ ಮುಸ್ಲಿಮರ ಮೂರ್ಖ ಮತೀಯತೆಯನ್ನೂ ಹಿಂದೂಗಳ ಪ್ರತಿರೋಧದ ಮತೀಯತೆಯನ್ನೂ ಟೀಕಿಸುತ್ತ ಇದ್ದ ದಿಟ್ಟ ನಿಲುವಿನ ಸೋಷಲಿಸ್ಟ್‌ ಧೋರಣೆಯ ಕ್ರಿಯಾಶೀಲರಾದ ಲೇಖಕರೊಬ್ಬರು ಇದ್ದರು. ಇವರ ಹೆಸರು ಹಮೀದ್‌ ದಲ್ವಾಯಿ. ಪಾಕೀಸ್ಥಾನದ ಬೇಡಿಕೆಯಿಂದ ಪ್ರಾರಂಭವಾದ ಮುಸ್ಲಿಮ್‌ ಮತೀಯ ರಾಜಕಾರಣವನ್ನು ಇವರು ನಿರ್ದಯವಾಗಿ ಖಂಡಿಸುತ್ತ ಇದ್ದರು. ಹಾಗೆಯೇ ಮುಸ್ಲಿಮರು ಹೆಚ್ಚು ಹೆಚ್ಚು  ಮತೀಯರಾಗಲು ಕಾರಣ ಹಿಂದೂ ಮತೀಯತೆಯೆಂದೂ ಗುರುತಿಸಿದ್ದರು. ಮುಸ್ಲಿಮರಲ್ಲಿ ಧೀಮಂತರಾದವರು ತಮ್ಮ ಜನರ ಮತೀಯ ರಾಜಕಾರಣವನ್ನು ಟೀಕಿಸಬೇಕೆಂದೂ, ಹಿಂದೂಗಳು ತಮ್ಮ ಜನಗಳ ಮತೀಯ ರಾಜಕಾರಣವನ್ನು ತಿರಸ್ಕರಿಸಬೇಕೆಂದೂ ಅವರು ಹೋರಾಡಿದ್ದರು. ಅವರನ್ನು ಹಿಂದೂ ಧೀಮಂತರೇ ಹೆಚ್ಚು ಮೆಚ್ಚುತ್ತ ಇದ್ದುದರಿಂದ ಮುಸ್ಲಿಮರು ಅವರನ್ನು ಅನುಮಾನಿಸುವಂತೆ ಆದದ್ದು ಒಂದು ದುರಂತ. ಇದು ಎಲ್ಲ ಧೀಮಂತ ಮುಸ್ಲಿಮ್‌ ನಾಯಕರ ದುರಂತ. ನ್ಮ್ಮ ಕಾಲದ ದುರಂತವೂ ಹೌದು.

ಹಿಂದೂ ವಿರಾಟ್‌ ಸಮ್ಮೇಳನಗಳ ರಾಜಕಾರಣವನ್ನೂ, ಮುಸ್ಲಿಮ್‌ ಮತೀಯತೆಯ ರಾಜಕಾರಣವನ್ನೂ ವಿರೋಧಿಸುವ, ಅವು ಹುಟ್ಟಿಸುವ ಕ್ರೌರ್ಯದಿಂದ ಹೇಸುವ ನಮ್ಮಂಥವರು ಏನು ಮಾಡಬಹುದು? ಸದ್ಯ ಯಾವ ಮತೀಯ ವಿರಾಟ್‌ ಸಮ್ಮೇಳನಗಳಿಗೂ ಸರ್ಕಾರ ಸಾರ್ವಜನಿಕ ಕ್ಷೇಮದ ದೃಷ್ಟಿಯಿಂದ ಅನುಮತಿ ಕೊಡದಂತೆ ಒತ್ತಾಯಿಸಬೇಕು. ಸಾಮಾನ್ಯ ಜನರ ದೈವ ಶ್ರದ್ಧೆಗೂ ಮತೀಯ ರಾಜಕಾರಣಕ್ಕೂ  ಸಂಬಂಧವಿಲ್ಲ  ಎಂಬುದನ್ನು ಗುರುತಿಸಬೇಕು. ಮತೀಯ ರಾಜಕಾರಣದ ಅಧ್ವರ್ಯುಗಳಾದ ಸಾವರ್ಕರರೂ ದೈವಶ್ರದ್ಧೆ ಇದ್ದವರಲ್ಲ. ಜಿನ್ನಾರಿಗೂ ದೈವ ಶ್ರದ್ಧೆಯಿರಲಿಲ್ಲ. ಸಾಮಾನ್ಯರು ಅವರಿಂದ ಮೋಸಹೋದರು. ಹಿಂದೆ ನಾವು ಚರಿತ್ರೆಯಲ್ಲಿ ಮುಸ್ಲಿಮರು ನಮ್ಮನ್ನು ಆಳಿದರೆಂದು ಹೇಳುತ್ತ ಇರಲಿಲ್ಲ. ಮೊಗಲರು, ತುರುಕರು ಇತ್ಯಾದಿ ನಮ್ಮನ್ನು ಆಳಿದರು ಎಂದುಕೊಂಡಿದ್ದೆವು. ನಮ್ಮ ಚರಿತ್ರೆಯುದ್ದಕ್ಕೂ ಇಸ್ಲಾಂ ನಂಬಿದವರೇ ತಮ್ಮಂತೆ ನಂಬಿದವರಿಗೆ ವಿರೋಧಿಗಳಾಗಿ ಹೋರಾಡಿದ್ದರು. ಹಿಂದೂಗಳು ಹಿಂದೂಗಳ ವಿರುದ್ಧ ಹೋರಾಡಿದ್ದರು.  ಹಿಂದೂ ಪ್ರಭುತ್ವದ ಪರವಾಗಿ ಮುಸ್ಲಿಮ್‌ ಸೈನಿಕರು, ಮುಸ್ಲಿಂ ಪ್ರಭುತ್ವದ ಪರವಾಗಿ ಹಿಂದೂ ಸೈನಿಕರು ಕಾದಾಡಿದ್ದರು. ನಾವು ಬ್ರಿಟಿಷ್‌ ಆಳ್ವಿಕೆಯನ್ನು ಎಂದೂ ಕ್ರಿಶ್ಚಿಯನ್‌ ಆಳ್ವಿಕೆಯೆಂದು ಕರೆದಿರಲಿಲ್ಲ.

ಎಲ್ಲ ಕಾಲದಲ್ಲೂ ರಾಜ ರಾಜನೇ; ಪ್ರಜೆಗಳು ಪ್ರಜೆಗಳೇ. ಬದುಕಿನ ಸಂದರ್ಭದ ನೈಜತೆಯನ್ನು ಒಪ್ಪಿಕೊಂಡು ಬದುಕುವವರೆಲ್ಲರೂ ಅಹನ್ಯಹನಿ ತಮ್ಮ ಬಾಳನ್ನು ಬದುಕಿ ಸಾಯುತ್ತಾರೆ. ಆದರೆ ನಿಜವೇನೆಂದು ಪಾರಮಾರ್ಥಿಕವಾದ ಹುಡುಕಾಟದಲ್ಲಿ ಇರುವವರಿಗೆ ಒಮ್ಮೊಮ್ಮೆ ಎಲ್ಲ ಮತಧರ್ಮಗಳೂ  ಅಪೂರ್ಣವೆನ್ನಿಸಿಬಿಡುತ್ತದೆ. ಆಗ ಜಾತಿಯನ್ನು ಮೀರಬೇಕಾಗುತ್ತದೆ; ಮತಗಳನ್ನು ಮೀರಬೇಕಾಗುತ್ತದೆ. ಅಂದರೆ ಅವುಗಳಲ್ಲಿ ಇರುವ ಸತ್ಯಗಳನ್ನು ಗ್ರಹಿಸಿ ವಿನಯದಲ್ಲಿ ಮೀರಬೇಕಾಗುತ್ತದೆ. ತಮ್ಮ ನಿಲುವನ್ನು ಸತತವಾದ ಶೋಧನೆಗೆ ಒಳಪಡಿಸಿಕೊಂಡು ಮುಂದುವರಿಯಬೇಕಾಗುತ್ತದೆ. ವೇದವ್ಯಾಸ, ಟಾಲ್‌ಸ್ಟಾಯ್‌ ಶೇಕ್ಸಪಿಯರ್‌, ನಮ್ಮ ಬೇಂದ್ರೆ ಕುವೆಂಪು ಕಾರಂತರಂಥವರು ಎಡವಲು ಹೆದರದೆ ನಡೆದಂಥವರು. ಖೊರಾನ್‌, ಬೈಬಲ್‌, ವೇದೋಪನಿಷತ್ತುಗಳು, ಶರಣರ ವಚನಗಳು ತೆರೆಯುವ ಪ್ರಪಂಚದಲ್ಲಿ ಈ ಸೃಜನಶೀಲ ಲೇಖಕರಿಗೂ, ಸತ್ಯಾನ್ವೇಷಿಗಳಾದ ವಿಜ್ಞಾನಿಗಳಿಗೂ ಇಣುಕಲು, ತಮ್ಮ ಅನುಭವದ ಮಾತುಗಳನ್ನು ಸ್ವತಂತ್ರ ಸಾಕ್ಷಿತ್ವದಲ್ಲಿ ಹೇಳಲು ಅವಕಾಶವಿದ್ದಲ್ಲಿ ನಮ್ಮ ಪಾರಮಾರ್ಥಿಕ ನಿಜದ ಹುಡುಕಾಟ ಮುಂದುವರೆಯುತ್ತ ಹೋಗುತ್ತದೆ. ಇಲ್ಲವಾದರೆ ಈ ವಿರಾಟ್‌ ಸಮ್ಮೇಳನಗಳಲ್ಲಿ, ಬಲ ಪ್ರದರ್ಶನದ ಮಾರ್ಚುಗಳಲ್ಲಿ ಗುಜರಾತ್‌ ಬಗೆಯ ಕ್ರೌರ್ಯ, ಪಾರ್ಟಿಶನ್‌ ಕಾಲದ ಕ್ರೌರ್ಯ ಬಲಿಷ್ಠ ಹಿಂದೂಗಳನ್ನೂ ಬಲಿಷ್ಠ ಮುಸ್ಲಿಮರನ್ನೂ ರಾಕ್ಷಸರನ್ನಾಗಿ ಮಾಡುತ್ತದೆ; ಬಡಪಾಯಿ ಹಿಂದೂಗಳನ್ನೂ, ಮುಸ್ಲಿಮರನ್ನೂ ಬಲಿಪಶುಗಳಾಗುವಂತೆ ಮಾಡುತ್ತದೆ.

ಬ್ರಾಹ್ಮಣನಾಗಿ ಹುಟ್ಟಿ ಬ್ರಾಹ್ಮಣನಾಗಿ ಮಾತ್ರ ಉಳಿಯಬಯಸದೆ, ಮತದಿಂದ ಹೊರಗೆ ಮದುವೆಯಾಗಿ ಮತಾಂತರವಾಗಲು ಬಯಸದೆ, ನಾನು ಬೆಳೆದ ಬ್ರಾಹ್ಮಣ ಸಂದರ್ಭದ ನೆನಪುಗಳನ್ನು ಕಳೆದು ಕೊಳ್ಳದವನಾಗದೆ, ಈ ಕಾಲದ ಹಿಂದುತ್ವವನ್ನು ಒಪ್ಪಿಕೊಳ್ಳಲಾರದೆ ಇರುವ ನನ್ನ ವಿಚಾರಗಳನ್ನು ಬರೆದುಕೊಂಡಿದ್ದೇನೆ. ಯಾವ ಮತಧರ್ಮದಲ್ಲೂ ಪೂರ್ಣಸತ್ಯವನ್ನು ಕಾಣಲಾರದೆ, ಆದರೆ ಪರಮಾರ್ಥದ ಹುಡುಕಾಟವನ್ನು ಬಿಟ್ಟುಕೊಡಲಾರದೆ ಬದುಕುತ್ತ ಇರುವ ನನ್ನಂಥವರು, ನನಗಿಂತ ಉತ್ತಮರು ಆಗಿಹೋಗಿದ್ದಾರೆ. ಆದರೆ ಇನ್ನು ಮುಂದೆ ಹುಟ್ಟುವವರೂ ಇದ್ದಾರೆಂಬ ವಿನಯದ ಆಶಯ, ಈ ಆಶಯಗಳನ್ನು ಮತೀಯ ಕ್ರೌರ್ಯ ನಾಶಗೊಳಿಸಿಬಿಡಬಹುದೆಂಬ ತಲ್ಲಣ  ಈ ಬರಹದ ಹಿಂದಿನ ಆತಂಕಗಳಲ್ಲಿ ಅಡಗಿದೆ.

Dear Dr.Murthy,

When I had called up my father at Maravanthe last week end, was discussing about a recent issue: Shilpa shetty being targeted of racial or bullying in a TV show at UK. I had watched this TV show and seen how the society of UK reacted to this issue.

The discussion with my father was about the responsiveness and sensible British society. More than what happened on the TV show, what took my attention was the responsibility the English people hold, the way they react to an issue and seriousness about a slightest concerning issue. Everyone here condemned the way Shilpa was being treated by her fellow English artists. This reflected in the House of Commons and the Prime Minister had to comment on this. Though the TV channel used this issue to the best extent for the publicity(the way Indian businessman use anything and everything for growing the business-'market expansion politics'), the concern of the British society was genuine. During the freedom fight in India, British could have easily killed Gandhi or avoided at some point with their sheer power/cleverness. I attribute it to the respect that British carried internally for a supreme leader of the India and guilt of invading India. At the end of chat, my father told me that the irony is that finally Indians killed Gandhi not British or any other invaders. I am not any supporter of British but surprised and happy to see the way they react to an issue and the way a responsive, voiced, fair society is built.
On the day of 2006 X-mas, BBC broadcasted a documentary in UK, questioning the foundation of Chirst it self. To be progressive as an individual or a country an open thinking, uncontaminated vision, respecting other's opinions and freedom are very important. I can not even imagine a TV programme debating any of our God or religion or belief and being broadcasted on any day in India. Most of our time, energy being wasted for insignificant issues diverting us from the immediate and long term goals of India.

All these thoughts invoked after reading 'otigo oggattigo', a touching wonderful article of yours. Please continue to put your thoughts to the readers. I am sure it is raising awareness or helping to form opinion for many. For today's India only such articles and people who take birth out of such articles and thoughts are the hopes and future.

I can not communicate in English as effectively as in Kannada. I am still learning to use 'Nudi' Software, once I master it I may write to you in Kannada.

Regards,
ymaravanthe

ಲೇಖನದ ಓದಿನ ನಂತರ ಈ ಕೆಲ ವಿಚಾರಗಳು ಮನಸ್ಸಿನಲ್ಲಿ ಮೂಡುತ್ತಿದೆ - ಹಿಂದೂ ಮತ್ತು ಭಾರತೀಯ ಐಡೆಂಟಿಟಿಗಳ ಉದಯಕ್ಕೆ ಐತಿಹಾಸಿಕ ಅವಕಾಶ ರೂಪುಗೊಂಡದ್ದು, ಸಮಾಜ ಆ ಅವಕಾಶವನ್ನು ಮನಗಂಡದ್ದು ಅವಶ್ಯಕತೆಯಾಗಿ ಗ್ರಹಿಸಿದ್ದು ಮತ್ತು ಈ ಪ್ರಕ್ರಿಯೆಯನ್ನು ಒಪ್ಪುವವರು, ಒಪ್ಪಲಾರದವರೂ, ತಟಸ್ಥರೂ ಎಲ್ಲರೂ ಇದರ ವಾಸ್ತವತೆಯನ್ನು ಗುರುತಿಸಿ ನಿಭಾಯಿಸಬೇಕಾದ ಅನಿವಾರ್ಯತೆ. ಈ ಎರಡೂ ಐಡೆಂಟಿಟಿಗಳ ಕಲ್ಪಿತವಾದ ಇತ್ಯಾತ್ಮಕ ಸಾಧ್ಯತೆಗಳನ್ನು ಇನ್ನೂ ವಾಸ್ತವಗೊಳಿಸಲಾಗಿಲ್ಲವಾದ್ದರಿಂದ ಮತ್ತು ಆ ಸಾಧ್ಯತೆಗಳಿನ್ನೂ ಉಳಿದಿವೆಯಾದ್ದರಿಂದ - ಅವುಗಳಿನ್ನೂ ವಿಸರ್ಜನೆಗೊಳ್ಳದೇ ಅಸ್ತಿತ್ವದಲ್ಲಿವೆ. ಆ ಕಾರಣಕ್ಕೇ ಈ ಐಡೆಂಟಿಟಿಗಳು ಉಂಟುಮಾಡುವ ಅಪಾಯಗಳು ಅಷ್ಟು ಸುಲಭವಾಗಿ ಅರಿವಿಗೆ ಬರುವುದಿಲ್ಲ. ಈ ನೇತ್ಯಾತ್ಮಕ ಸಾಧ್ಯತೆಗಳನ್ನು ಬಳಸಿಕೊಳ್ಳುವವರಿಗೂ ಕೊನೆಯಿರುವುದಿಲ್ಲ. ಭಾರತೀಯ ಐಡೆಂಟಿಟಿ ಯಾವ ರೀತಿಯಲ್ಲಿ ಪ್ರಾದೇಶಿಕ ಐಡೆಂಟಿಟಿಗಳಿಗೆ ಅಪಾಯ ತಂದೊಡ್ಡಿದೆ ಎನ್ನುವುದನ್ನು ನಾವು ಅರಿತಷ್ಟು ಸರಿಯಾಗಿ ಹಿಂದೂ ಐಡೆಂಟಿಟಿಯಿಂದ ಉಂಟಾಗುವ ಅಪಾಯಗಳನ್ನು ಅರಿತಿಲ್ಲ. ಇದು ಸಮುದ್ರ ಮಥನದಂತೆ. ಅಮೃತಕ್ಕಾಗಿ ಮಥಿಸಿದರೂ ಮೊದಲು ವಿಷವೇ ಹುಟ್ಟುವುದು. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ವಿಷ ನುಂಗಬಲ್ಲ ವಿಷಕಂಠರಿದ್ದರು. ಇಂದು ಪರಿಸ್ಥಿತಿ ಹಾಗಿಲ್ಲ.

ಹಿಂದೂ ಐಡೆಂಟಿಟಿಯ ಬಗ್ಗೆ ತಲೆಕೆಡೆಸಿಕೊಳ್ಳದಿರುವವರಿಗಿಂತ ಸುಮ್ಮನಿರುವವರಲ್ಲೇ ನಾವು ಹಿಂದೂ ಐಡೆಂಟಿಟಿಯ ಇತ್ಯಾತ್ಮಕ ಸಾಧ್ಯತೆಗಳನ್ನು ಹುಡುಕಬೇಕಿರುವುದನ್ನು ನಿಮ್ಮ ಲೇಖನ ಸರಿಯಾಗಿ ಧ್ವನಿಸುತ್ತದೆ. ಹಿಂದೂ ಐಡೆಂಟಿಟಿಯನ್ನು ನಿರಾಕರಿಸುವುದು ಅತ್ಯಂತ ಅಪಾಯಕಾರಿಯಾದ ನಿಲುವಾಗುತ್ತದೆ. ಇದರಿಂದ ಹಿಂದೂ ಮೂಲಭೂತವಾದಿಗಳಿಗೆ ಬಲಬರುತ್ತದೆ. ಅದನ್ನು ಒಪ್ಪಿಕೊಳ್ಳುವುದೆಂದರೆ ಅಲ್ಪಸಂಖ್ಯಾತರಿಗಾಗುವ ಸಹಜವಾದ ಅಸ್ಥಿರಭಾವವನ್ನು ಎದುರಾಗಬೇಕಾಗುತ್ತದೆ. ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲಿ ನಮ್ಮ ಹಿರಿಯರು ಇದನ್ನು ಚೆನ್ನಾಗಿ ನಿಭಾಯಿಸಿದ್ದರೇನೋ. ಈಗ ನಾವು ಹದಗೆಟ್ಟ ಪರಿಸ್ಥಿತಿಯಲ್ಲಿ ಇದನ್ನು ನಿಭಾಯಿಸಬೇಕಿದೆ. ಈ ಇಕ್ಕಟ್ಟು ತಮ್ಮ ಲೇಖನದಲ್ಲಿ ಸರಿಯಾಗಿ ಮೂಡಿ ಬಂದಿದೆ. ಅಭಿಮಾನ, ಅವಶ್ಯಕತೆ, ಅಸ್ಥಿರಭಾವಗಳಲ್ಲಿ ಯಾವುದು ನಮ್ಮನ್ನು ಆವರಿಸುತ್ತದೆ ಎನ್ನುವುದು, ಯಾವುದನ್ನು ನಾವು ಆಯುತ್ತೇವೆ ಎನ್ನುವುದು ಎಲ್ಲವನ್ನೂ ನಿರ್ಧರಿಸುತ್ತದೆ.

ಮತ್ತೊಂದು ಮುಖ್ಯ ವಿಷಯವೆಂದರೆ ತಲೆಕೆಡಿಸಿಕೊಳ್ಳದಿರುವವರನ್ನು ಹಿಂದೂ ಐಡೆಂಟಿಟಿ ಬಿಟ್ಟಿಲ್ಲ. ಆದರೆ ಅವರು ತಮ್ಮ ಮೌನದಲ್ಲಿ ಅರಿವಿಲ್ಲದಂತೆ ಅದರ ಇತ್ಯಾತ್ಮಕ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದಾರೆ.

ಮತ್ತಷ್ಟು ಹಿಗ್ಗಿಸಿ ಗ್ರಹಿಸುವುದಾಡರೆ ಹಿಂದೂ ಐಡೆಂಟಿಟಿಯನ್ನು ಅತಿಯಾಗಿ ಮೈಮೇಲೆ ಆರೋಪಿಸಿಕೊಳ್ಳುವವರನ್ನು ಮಾತ್ರ ಗಮನಿಸಿ ತಲ್ಲಣಿಸುವವರು ವಾಲ್ಟರ್ ಬೆಂಜಾಮಿನ್ನನ ಪರಂಪರೆಗೆ ಸೇರಬಹುದು. ಮೌನವಾಗಿರುವವರನ್ನು ಗಮನಿಸುವವರು ಸ್ವಲ್ಪ ಹೆಚ್ಚು-ಕಡಿಮೆ ವ್ಯತ್ಯಾಸದಲ್ಲಿ ಬೇಂದ್ರೆ/ಅಡಿಗ ಪರಂಪರೆಗೆ ಸೇರಬಹುದು.

ಒಟ್ಟು, ಅಮೃತದ ಗಳಿಕೆಗಾಗಿ ಅದೆಷ್ಟು ವಿಷವನ್ನು ನಾವು ತಯಾರಿಸಿ ಅನುಭವಿಸಬೇಕಾಗಿದೆಯೋ. ಈ ಅಮೃತದ ಸ್ವರೂಪ-ಸಾಧ್ಯತೆಗಳನ್ನು ಸಹ ನಾವು ಸ್ಪಷ್ಟವಾಗಿ ದೃಷ್ಟಿಸಿಕೊಳ್ಳಲಾಗಿಲ್ಲ, ಅದು ಬದಲಾಗುತ್ತಲೇ ಇದೆ ಎನ್ನುವುದೂ ಸಹ ನಮಗೆ ಆತಂಕವನ್ನುಂಟುಮಾಡಬಹುದು.

ಇಂತಿ ಶಿವು

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
4 + 0 =
Solve this simple math problem and enter the result. E.g. for 1+3, enter 4.