ಜನ ಸಮೂಹದ ಒಟ್ಟಾರೆ ಶೂರರು!

 

ಜೋಸ್ ಾರ್ಟೆಗಾ

 

ನಾನು ಮಹಾರಾಜಾ ಕಾಲೇಜಿನಲ್ಲಿ ಎಂ. ಎ. ಓದುತ್ತ ಇದ್ದಾಗ ಪ್ರತಿ ನಿತ್ಯ ಸಂಜೆ ದಾಸ್‌ ಪ್ರಕಾಶ್‌ ಹೋಟೆಲಿನ ವೃತ್ತದಲ್ಲಿ ಇದ್ದ ಕಾಫಿ ಹೌಸ್‌ನಲ್ಲಿ ಹರಟಲು ಸೇರುತ್ತ ಇದ್ದೆವು. ಮೇಲಿಂದ ಮೇಲೆ ಒನ್‌ ಬೈ ಟು ಕಾಫಿಯನ್ನು ಆರ್ಡರ್‌ ಮಾಡಿ ಬೆತ್ತದ ಕುರ್ಚಿಗಳ ಮೇಲೆ ಕೂತು ಕಾಫಿ ಸವಿಯುತ್ತ ನಾವು ಓದಿದ್ದನ್ನೆಲ್ಲ ಎಷ್ಟು ಉತ್ಕಟವಾಗಿ ಚರ್ಚಿಸುತ್ತಾ ಇದ್ದೆವು ಎಂದು ಈಗ ಆಶ್ಚರ್ಯವಾಗುತ್ತದೆ. ನಮ್ಮ ಜೊತೆ ಅಡಿಗರೂ ಇರುತ್ತಿದ್ದರು. ಅವರು ಏನೇ ಹೊಸದನ್ನು ಓದಲಿ, ಅದನ್ನು ನಮಗೆ ಓದಿಸುತ್ತಿದ್ದರು. ಹಾಗೆಯೇ ನಾವು ಓದಿದ್ದನ್ನು ಅವರಿಗೆ ಓದಿಸುತ್ತಿದ್ದೆವು. ನನಗೆ ಇಷ್ಟವಾದ ಲೋಹಿಯಾರ ಪ್ರಬಂಧಗಳನ್ನು ಲಾರೆನ್ಸ್‌ನ ಪ್ರಬಂಧಗಳನ್ನು ಅಡಿಗರಿಗೆ ಓದಿಸಿದ್ದೆ- ರಾಜಾಜಿಯ ಕನ್ಸರ್ವೆಟಿವ್‌ ನಿಲುವುಗಳನ್ನು ಮೆಚ್ಚುತ್ತಿದ್ದ ಅಡಿಗರಿಗೆ ಈ ಲೇಖಕ ಚಿಂತಕರೂ ಬೇಕಾದವರಾದರು. ಅಡಿಗರ ಮುಖೇನ ನನ್ನ ಅರಿವಿಗೆ ಬಂದವರಲ್ಲಿ ಮುಖ್ಯವಾಗಿ ಇಬ್ಬರು: ಸ್ಪ್ಯಾನಿಷ್‌ ಚಿಂತಕ ಆರ್ಟೆಗಾ ಗ್ಯಾಸೆ (José Ortega y Gasset) ಮತ್ತು ಜಗತ್ತಿನ ನಾಗರೀಕತೆಗಳ ಬಗ್ಗೆ ಬರೆದ ತಾತ್ವಿಕ ಇತಿಹಾಸಕಾರ ಆರ್ನಾಲ್ಡ್‌ ಟಾಯನ್‌ ಬೀ. ನಮ್ಮ ನಮ್ಮ ವಿಶಿಷ್ಟ ಅಂತರ್ಮುಖಿ ಅಗತ್ಯಗಳಲ್ಲಿ ಈ ಚಿಂತಕರು ನಮ್ಮ ಒಳಗಿನ ಲೋಕವನ್ನು ಬೆಳೆಸಿದರು. ಲೇಖಕರಾದ ನಮ್ಮ ಬರೆವಣಿಗೆಯ ಮುಖ್ಯ ರೂಪಕಗಳನ್ನು ಸೃಷ್ಟಿಸಲು ಕಾರಣರಾದರು. ಅಂದರೆ ತಾರ್ಕಿಕ ವಿರೋಧಗಳಲ್ಲಿ ಅವರ ವಿಚಾರಗಳು ನಮ್ಮ ಒಳಗೆ ಬರದೆ, ರೂಪಕಗಳ ಸಂಕಿರಣಗಳಾಗಿ ನಮಗೆ ಇವರು ಒದಗಿದರು. ಅಡಿಗರ ಕಾವ್ಯದಲ್ಲಂತೂ ಈ ಚಿಂತಕರು ಭಾರತೀಯ ಪುರಾಣಲೋಕದಲ್ಲಿ ಬೆರೆತು ಮರುಹುಟ್ಟು ಪಡೆದರು.

ಪ್ರಜಾತಂತ್ರಕ್ಕೆ ಬದ್ಧರಾದ ನಮ್ಮ ಮನಸ್ಸುಗಳಿಗೆ ಪ್ರಜಾತಂತ್ರವನ್ನು ವಿಮರ್ಶಾತ್ಮಕವಾಗಿ ನೋಡಲು ಸಹಕರಿಸಿದ ಚಿಂತಕನೆಂದರೆ ಆರ್ಟೆಗಾ. ಅವನ ಬಗ್ಗೆ ಕೆಲವು ಮಾತುಗಳನ್ನು ಬರೆಯುವೆ. ಅವನ ಚಿಂತನೆಗಳನ್ನು ಕೊಂಚ ಸರಳಗೊಳಿಸದೆ ವಿಧಿಯಿಲ್ಲ- ಈ ಲೇಖನದ ವ್ಯಾಪ್ತಿಯಲ್ಲಿ. ಆ ಬಗ್ಗೆ ನನಗೆ ಪಶ್ಚಾತ್ತಾಪವೂ ಇಲ್ಲ. ಯಾಕೆಂದರೆ ಈ ದಿನಗಳಲ್ಲಿ ಪ್ರಜಾತಂತ್ರದ ಸವಲತ್ತುಗಳನ್ನು ಬಳಸಿಕೊಂಡೇ ಪ್ರಜಾತಂತ್ರವನ್ನು ನಾಶಮಾಡುವ ವಿಷಮ ಸನ್ನಿ ರೋಗದ ಲಕ್ಷಣಗಳನ್ನು ಗುರುತಿಸಲು ಅಗತ್ಯವಾದಷ್ಟು ಆರ್ಟೆಗಾನನ್ನು ಬಳಸಿಕೊಳ್ಳುವ ಜರೂರು ನನಗೂ, ನನ್ನಂತೆ ಭಾವಿಸುವ ಎಲ್ಲರಿಗೂ ಎದುರಾಗಿದೆ.

ಆರ್ಟೆಗಾನ ಪ್ರಕಾರ ಯೂರೋಪಿನಲ್ಲಿ 20ನೇ ಶತಮಾನದಲ್ಲಿ ಜನ ಸಮೂಹ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಸಮೂಹ ಸನ್ನಿಗೆ ಒಳಗಾದವರು ಎಂತಹ ಭಯದ ಉತ್ಪಾದಕರೂ ಅವಿಚಾರಿಗಳೂ ಆಗುತ್ತಾರೆಂದು ಹಿಟ್ಲರನ ಕಾಲದಲ್ಲಿ ಜರ್ಮನಿಯಲ್ಲೂ, ಮುಸೋಲಿನಿಯ ಇಟಲಿಯಲ್ಲೂ, ಫ್ರಾಂಕೋನ ಸ್ಪೇನಿನಲ್ಲೂ (ಅಂದರೆ ತನ್ನ ದೇಶದಲ್ಲೂ) ಗಮನಿಸಿದ ಆರ್ಟೆಗಾನ ವಿಚಾರಗಳು ನಮಗೀಗ ಪ್ರಸ್ತುತವಾಗಿವೆ. ಈಚೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಯಾವ ವಿಚಾರಕ್ಕೂ, ಪಕ್ಷಗಳ ಪ್ರಣಾಳಿಕೆಗಳಿಗೂ ಆಸ್ಪದವೇ ಇಲ್ಲದಂತೆ ಚುನಾವಣೆ ನಡೆಯಿತೆಂದು ಕೇಳಿದ ನನಗೆ ಕೆಲವು ದಶಕಗಳ ಹಿಂದೆ ಶಾಂತವೇರಿ ಗೋಪಾಲಗೌಡರು, ತದನಂತರ ಹೆಗಡೆಯವರು, ಪಟೇಲರು, ದೇವರಾಜ ಅರಸರು, ಬೊಮ್ಮಾಯಿಯವರು, ಬಸವಲಿಂಗಪ್ಪನವರು ಎಂತಹ ಬೃಹತ್‌ ಸಭೆಯಾದರೂ ಜನರನ್ನು ಗೆಲ್ಲಲು ಬಳಸುತ್ತಿದ್ದ ವೈಚಾರಿಕತೆ ನೆನಪಾಯಿತು. ಈಗ ಅವೆಲ್ಲವೂ ಕ್ರಮೇಣ ಕಾಣೆಯಾಗುತ್ತಾ ಇವೆ. ಕೋಟಿಗಟ್ಟಲೆ ಹಣವಿಲ್ಲದೆ ಯಾರೂ ರಾಜಕಾರಣ ಮಾಡುವುದು ಸಾಧ್ಯವಿಲ್ಲ ಎಂಬ ನಿಲುವಿಗೆ ನಮ್ಮ ಘನವಂತರಾದ ರಾಜಕಾರಿಣಿಗಳೂ ಬಂದಿದ್ದಾರೆ. ಅವರು ವ್ಯಥೆ ಪಡುತ್ತಾರೆ; ಜೊತೆಗೇ ತಮಗೆ ಸಾಧ್ಯವಾದಷ್ಟು ಹಣವನ್ನೂ ಬಳಸುತ್ತಾರೆ-ಇದು ಶಾಶ್ವತವಾಗಿ ಉಳಿಯಲಾರದು ಎಂಬ ಭರವಸೆಯಲ್ಲೂ. ಆದರೆ ನಮ್ಮ ಜನಸಮೂಹವೂ ಯಾೆ ಭ್ರಷ್ಟಗೊಳ್ಳುತ್ತ ಇದೆ ಎಂದು ತಿಳಿಯುವುದಕ್ಕಾಗಿಯೂ ಆರ್ಟೆಗಾ ಬಾರಿಸುವ ಎಚ್ಚರಿಕೆಯ ಗಂಟೆಯನ್ನು ಕೇಳಿಸಿಕೊಳ್ಳುವಂತೆ ಅದಕ್ಕೆ ವ್ಯವಧಾನವಿರುವ ಓದುಗರನ್ನ್ನು ಕೋರುತ್ತೇನೆ.

***

ಆರ್ಟೆಗಾ ತನ್ನ ಹೊಸಕಾಲವನ್ನು ಹೀಗೆ ವಿವರಿಸುತ್ತಾನೆ. ನಮಗೇನು ಆಗುತ್ತಿದೆ ಎಂಬುದು ನಮಗೆ ಗೊತ್ತಿಲ್ಲ. ನಮಗೇನು ಆಗುತ್ತಿದೆ ಎಂಬುದು ನಮಗೆ ಹೀಗೆ ಗೊತ್ತಿಲ್ಲದೇ ಇರುವುದೇ ನಮಗೀಗ ಆಗುತ್ತಿರುವುದು. ಇವತ್ತಿನ ಮನುಷ್ಯ ತನ್ನ ಆಂತರ್ಯದಲ್ಲಿ ಏನಾಗುತ್ತ ಇದೆ ಎಂಬುದನ್ನೇ ತಿಳಿಯಲಾರದವನಾಗಿದ್ದಾನೆ. ಭೂತ ಹೊಕ್ಕವನಂತೆ ಅವನು ವರ್ತಿಸುತ್ತಾನೆ.

ಈ ಬಗೆಯ ಜನಸಮೂಹವೇ ಬೇರೆ. ವಿಶಿಷ್ಟನಾಗಿದ್ದೂ ವ್ಯಷ್ಟಿಯಲ್ಲಿ ತಮ್ಮನ್ನ್ನು ಗುರುತಿಸಿಕೊಳ್ಳವ ಜನಸಮುದಾಯವೇ ಬೇರೆ. ವ್ಯಕ್ತಿಯ ವಿಶಿಷ್ಟತೆಗೆ ಅವಕಾಶವಿಲ್ಲದೆ ಅಗತ್ಯವೂ ಇಲ್ಲದೆ ಹೋದಾಗ ಅದೊಂದು ಚಹರೆ ಚರ್ಯೆಗಳಿಲ್ಲದ ಸಮೂಹವಾಗುತ್ತದೆ. ಒಬ್ಬ ವ್ಯಕ್ತಿಯನ್ನು ನಾವು ವ್ಯಕ್ತಿಯಾಗಿಯೇ ನೋಡಿದಾಗ ಅವನು ಸಮೂಹದವನೋ ಅಲ್ಲವೋ ಎನ್ನುವುದನ್ನು ಕೇಳುವುದು ಸಾಧ್ಯ. ಆದರೆ ಸಮೂಹದಲ್ಲೇ ಪಾಲುಗೊಳ್ಳವಾಗ ಪ್ರತಿಯೊಬ್ಬನೂ ಇತರರಿಗಿಂತ ಅನ್ಯನಾಗಿ ಉಳಿಯುವುದಿಲ್ಲ. ಎಲ್ಲರಂತೆ ತಾನೂ ಎಂದು ತಿಳಿದಿರುತ್ತಾನೆ. ಹೀಗೆ ತಿಳಿಯುವುದರಲ್ಲಿ ಅವನಿಗೆ ಗೊಂದಲವಿಲ್ಲ. ಸಮಸ್ಯೆಯಿಲ್ಲ. ಬದಲಾಗಿ ಸುಖವಿದೆ. ತಾನು ಪ್ರಶ್ನಾತೀತ, ಸಮೂಹದಲ್ಲಿ ರಕ್ಷಿತ ಎನ್ನುವುದರಿಂದ ಹುಟ್ಟುವ ಅಬಾಧಿತ ಮನಸ್ಸಿನ ಸುಖ ಇದು.

ಈ ಕಾಲದ ಮುಖ್ಯ ಲಕ್ಷಣವೆಂದರೆ ಇದು; ಸರ್ವೇ ಸಾಮಾನ್ಯವಾದ ಮನಸ್ಸಿಗೆ ತಾನು ಸರ್ವೇ ಸಾಮಾನ್ಯವಾದದ್ದು ಎಂಬುದು ಗೊತ್ತಿರುತ್ತದೋ ಇಲ್ಲವೋ ಎಂಬುದು ಮುಖ್ಯವಲ್ಲ; ತನ್ನ ಇಚ್ಛೆಯನ್ನು- ಅಂದರೆ ಸಮೂಹದ ಸಂಕಲ್ಪವನ್ನು-ಎಲ್ಲರ ಮೇಲೂ ಹೇರಬಹುದೆಂದು ಅದು ತಿಳಿದಿರುತ್ತದೆ.

ಅಮೆರಿಕದಲ್ಲಿ ಒಂದು ಭಾವನೆ ಇದೆ. ಅನ್ಯವಾಗಿರುವುದು, ವಿಶಿಷ್ಟ ವ್ಯಕ್ತಿಯಾಗಿ ಚಿಂತಿಸುವುದು ಅಶ್ಲೀಲ. ಜನ ಸಮೂಹ ಹೀಗೆ ಅನ್ಯವಾದದ್ದು ಎಷ್ಟೇ ಉತ್ಕೃಷ್ಟವಿರಲಿ ಎಲ್ಲರಂತೆ ಈ ಅನ್ಯ ಚಿಂತಿಸುವುದಿಲ್ಲವಲ್ಲ್ಲ, ಬದುಕುವುದಿಲ್ಲವಲ್ಲ್ಲ ಎಂಬ ಕಾರಣಕ್ಕಾಗಿಯೇ ವಿಶಿಷ್ಟವಾದ ಅನ್ಯವನ್ನು ತುಳಿಯುತ್ತದೆ. ಹೀಯಾಳಿಸುತ್ತದೆ.

ಸಮೂಹದ ಮನುಷ್ಯ `ಒಟ್ಟಾರೆ ಮನುಷ್ಯ'ನಾಗುತ್ತಾನೆ. ಈ ನನ್ನ `ಒಟ್ಟಾರೆ ಮನುಷ್ಯ' ಎನ್ನುವ ನುಡಿಯನ್ನು ಕೊಂಚ ವಿವರಿಸುತ್ತೇನೆ. ಏನನ್ನಾದರೂ ಒಟ್ಟಾರೆಯಾಗಿ ನೋಡಿ ಇದು ಹೀಗೆ ಎಂಬ ನಿರ್ಣಯಕ್ಕೆ ಬರುವುದು ಈ ಒಟ್ಟಾರೆ ಶೂರರ ಲಕ್ಷಣ. `ಮುಸ್ಲಿಮರೇ ಹೀಗೆ; ಬ್ರಾಹ್ಮಣರೇ ಹೀಗೆ; ಗೌಡರೇ ಹೀಗೆ; ಲಿಂಗಾಯತರೇ ಹೀಗೆ; ತಮಿಳರೇ ಹೀಗೆ' ಎಂಬ ಒಟ್ಟಾರೆಯಾಗಿ ಎಲ್ಲವನ್ನೂ ನೋಡುವ ನಿರ್ಣಯಕ್ಕೆ ಈ `ಒಟ್ಟಾರೆ ಮನುಷ್ಯರು' ಸುಲಭವಾಗಿ ತಲುಪಿರುತ್ತಾರೆ. ಯಾರೂ ತಮ್ಮಂತೆ ಮನುಷ್ಯರು ಎಂದು ಈ ಒಟ್ಟಾರೆ ದರ್ಪದ ಚಿಂತನೆಯ ಜನ ತಿಳಿಯುವುದಿಲ್ಲ. ಇವರಲ್ಲಿ ಅಂತರ್ಮುಖವಾದ ಯಾವ ಅನುಮಾನಕ್ಕೂ ಇತರರ ಜೊತೆ ನಡೆಯಬಹುದಾದ ಅನುಸಂಧಾನಕ್ಕೂ, ಸಂವಾದಕ್ಕೂ ಜಾಗವೇ ಇರುವುದಿಲ್ಲ.

ಜನಸಮೂಹದಲ್ಲಿ ಗುರುತಿಸಿಕೊಳ್ಳುವ ಈ ಒಟ್ಟಾರೆ ಮನುಷ್ಯರು ನಮ್ಮ ನಾಗರಿಕತೆಯನ್ನು ಮುಂದುವರಿಸಬಲ್ಲವರಂತು ಖಂಡಿತ ಅಲ್ಲ ಎಂದು ಹೇಳಲೇ ಬೇಕಾಗಿಲ್ಲ. ಆದರೆ ಹೇಳಬೇಕಾದ ಒಂದು ಮಾತಿದೆ. ನಾಗರಿಕತೆಯ ಸವಲತ್ತುಗಳನ್ನೆಲ್ಲಾ ಬಳಸಿಕೊಂಡು, ಅದೇ ನಾಗರಿಕತೆಯ ಮೂಲದಲ್ಲಿ ಇರುವ ಯಾವ ಸದ್ಭಾವಕ್ಕೂ ಮಿಡಿಯದೆ, ತನ್ನ ಮೂರ್ಖತನದಲ್ಲಿ ಸುಮ್ಮಗೂ ತನ್ನ ಪಾಡಿಗೆ ತಾನಿರದೆ ಈ ಜನಸಮೂಹದ ಒಟ್ಟಾರೆ ಮನುಷ್ಯ ಸತತವಾಗಿ ಕಾರ್ಯೋನ್ಮುಖನಾಗಿರುತ್ತಾನೆ.

***

ಆರ್ಟೆಗಾನ ಪ್ರಕಾರ ಯೂರೋಪ್‌ ಮತ್ತು ಅಮೆರಿಕಾದಲ್ಲಿ ಬಹಳ ಕಾಲದವರೆಗೆ ಈ ಒಟ್ಟಾರೆ ಮನುಷ್ಯ ತಾನೂ ಒಬ್ಬ ವೈಚಾರಿಕ ಎಂದು ಭ್ರಮಿಸಿರಲಿಲ್ಲ. ಸಮುದಾಯದ ಸಾಮಾನ್ಯನಾಗಿ ಅವನಿಗೆ ನಂಬಿಕೆಗಳಿದ್ದವು. ಸಂಪ್ರದಾಯಗಳಿದ್ದವು. ಅನುಭವವಿತ್ತು, ಗಾದೆಗಳಿದ್ದವು. ಆದರೆ ತಾತ್ವಿಕವಾಗಿ ಯಾವುದು ಹೇಗಿರಬೇಕೆಂದು ನಿರ್ಣಯಿಸುವ ಶಕ್ತಿಯೂ ತನಗಿದೆಯೆಂದು ಅವನು ತಿಳಿದಿರಲಿಲ್ಲ. ಆದರೆ ಇವತ್ತು ಪ್ರಪಂಚ ಹೇಗಿರಬೇಕೆಂದು ನಿರ್ಧರಿಸಬೇಕಾದವನು ತಾನೇ ಎಂದು ಅವನು ತಿಳಿದಿದ್ದಾನೆ. ಅವನಿಗೆ ಕಿವಿಗಳೇ ಇಲ್ಲ. ಎಲ್ಲವೂ ತನಗೆ ಗೊತ್ತಿರುವಾಗ ಏನನ್ನು ತಾನು ಕೇಳಿಸಿಕೊಳ್ಳಬೇಕು ಎಂಬ ಗರ್ವ (ಗ್ರೀಕರು ತಿಳಿದಂತೆ ಹ್ಯೂಬ್ರಿಸ್‌) ಅವನದ್ದು. ತೀರ್ಮಾನಿಸುವುದು, ತೀರ್ಪು ಕೊಡುವುದು-ಇಷ್ಟೇ ಅವನ ಕೆಲಸ.

ಸಾರ್ವಜನಿಕ ಜೀವನದಲ್ಲಿ ಕುರುಡನೂ ಕಿವುಡನೂ ಆದ ಈ ಒಟ್ಟಾರೆ ಮನುಷ್ಯ ಪ್ರವೇಶಿಸಲು ಹಿಂಜರಿಯುವ ಜಾಗವೇ ಇಲ್ಲ. ಹೀಗೆ ಸರ್ವೇ ಸಾಮಾನ್ಯವಾದ ಜನ ಸಮೂಹದ ಒಟ್ಟಾರೆ ಮನುಷ್ಯನಿಗೂ ವೈಚಾರಿಕ ಶಕ್ತಿ ಇರುವುದು ಪ್ರಗತಿಯ ಲಕ್ಷಣವಲ್ಲವೇ ಎಂದು ಕೇಳಬಹುದು- ಆರ್ಟೆಗಾ ಇದನ್ನು ನಿರಾಕರಿಸುತ್ತಾನೆ. ಒಬ್ಬ ವೈಚಾರಿಕನಿಗೆ ಇರಬೇಕಾದ ಮೊಟ್ಟ ಮೊದಲನೆಯ ಗುಣ ಅವನು ಸತ್ಯವನ್ನು ಬಯಸಬೇಕು ಮತ್ತು ಈ ಸತ್ಯವನ್ನು ಅರಿಯುವ ಕ್ರಮಗಳಿಗೇ ತನ್ನನ್ನು ಅಧೀನಗೊಳಿಸಿಕೊಳ್ಳುವ ವಿನಯ ಅವನಿಗೆ ಇರಬೇಕು ಎಂಬುದು. ಅವನು ಕಂಡ ಸತ್ಯ ಒಂದು ಚರ್ಚೆಗಾಗಲೀ ಸಂವಾದಕ್ಕಾಗಲೀ ನಿಲುಕುವುದು ಯಾವಾಗ ಎಂದರೆ ಸತ್ಯಾಕಾಂಕ್ಷಿ ಅದಕ್ಕೆ ಅಗತ್ಯವಾದ ಸತ್ಯಾನ್ವೇಷಣೆಯ ನಿಯಮಗಳನ್ನು ಗೌರವಿಸಿದಾಗ. ಎಲ್ಲಿ ತಾನು ನ್ಯಾಯ ಸಮ್ಮತವಾಗಿರಬೇಕು ಎಂಬ ಅಪೇಕ್ಷೆ ಇಲ್ಲವೋ, ಎಲ್ಲಿ ನಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಬಲ್ಲ ನಮ್ಮ ವೈಯಕ್ತಿಕ ತೀಟೆ ತೆವಲುಗಳನ್ನು ಮೀರಿದ ನಮಗಿಂತ ಮೇಲಿನ ತಾಣವೊಂದು ಇದೆಯೆಂಬ ಭಾವನೆಯೇ ಇಲ್ಲವೋ, ಎಲ್ಲಿ ಜನರ ಹಿತಾಸಕ್ತಿಗಳಿಗೂ ಆರ್ಥಿಕ ಸಂಬಂಧಗಳಿಗೂ ನಡುವೆ ಹೊಂದಾಣಿಕೆ ಇರಬೇಕೆಂಬ ಕಾಳಜಿಯೇ ಇಲ್ಲವೋ ಅಂತಲ್ಲಿ ಸಂಸ್ಕೃತಿ ಎಂಬುದು ಇರುವುದಿಲ್ಲ. ಒಂಟಿಯಾಗಿದ್ದಾಗ ಮುಖಹೀನರಾದವರು ಗುಂಪಿನಲ್ಲಿ ವ್ಯಾಘ್ರಮುಖಿಗಳಾಗುತ್ತಾರೆ.

ಸಂಸ್ಕೃತಿಯ ಬದಲಾಗಿ ಅಲ್ಲಿರುವುದು ಬರ್ಬರತೆ. ನೆಲೆಗಳ ಕಲ್ಪನೆ ಇದ್ದಲ್ಲಿ, ತಾರತಮ್ಯ ವಿವೇಚನೆಯ ವಿನಯವಿದ್ದಲ್ಲಿ ಸಂಸ್ಕೃತಿ ಇರುತ್ತದೆ. ನೆಲೆಗಳ ಕಲ್ಪನೆ ಇಲ್ಲದಿರುವುದೇ ಬರ್ಬರತೆ. ಯೂರೋಪಿನಲ್ಲಿ ಫ್ಯಾಸಿಸ್ಟ್‌ ಆಡಳಿತ ಚಾಲ್ತಿಯಲ್ಲಿದ್ದಾಗ ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಒಂದು ವಾಗ್ವಾದದಲ್ಲಿ ನಿರ್ಧರಿಸಬೇಕೆಂಬ ಕಲ್ಪನೆಯೇ ಇರಲಿಲ್ಲ-ಬಲಾ ಚ ಪೃಥಿವೀ-ಈ ಭೂಮಿ ಬಲಿಷ್ಠರಿಗೆ ಸೇರಿದ್ದು- ಅಷ್ಟೇ ಆ ಕಾಲದಲ್ಲಿ ಆಳುವ ಜನಸಮೂಹಕ್ಕೆ ಸಾಕೆನ್ನಿಸಿತು. ಅದೇ ನಿಯಮಾತೀತವಾದ ಮೆಜಾರಿಟಿಯ ಆಡಳಿತ. ಮೆಜಾರಿಟಿಯ ಆಳ್ವಿಕೆಯೇ ಪ್ರಜಾತಂತ್ರವೆಂದು ತಿಳಿದಾಗ ಈ ಮೆಜಾರಿಟಿ ಪ್ರಶ್ನಾತೀತವೆಂದು ತಿಳಿಯುವುದು ಸಾಧ್ಯವೆ? ಅದೇ ನಮ್ಮ ಮುಂದಿರುವ ಸಮಸ್ಯೆ.

ಈ ಒಟ್ಟಾರೆ ಮನುಷ್ಯ ಏನನ್ನು ವಿಚಾರವೆಂದು ತಿಳಿಯುತ್ತಾನೋ ಅದು ವಿಚಾರವಲ್ಲ. ಅವನ ಹೊಟ್ಟೆಯೊಳಗಿನ ರಾವು ಹೊಮ್ಮಿಸುವ ಮಾತುಗಳು ಅಷ್ಟೇ.

ವಿಚಾರ ಎಂಬ ಒಂದು ಸಂಗತಿ ನಿಜವಾಗಬೇಕಾದರೆ ಅಂತಹ ವಿಚಾರವನ್ನು ಮಾಡುವವರಿಗೆ ಆ ವಿಚಾರವನ್ನು ಹುಟ್ಟಿಸುವ ಕಾರಣಗಳು ಇವೆ ಎಂಬ ಕಲ್ಪನೆ ಇರಬೇಕು. ಈ ಕಾರಣಗಳು ಪರಸ್ಪರ ವಿನಿಮಯ ಮಾಡಿಕೊಳ್ಳಬಲ್ಲ ಕಾರಣಗಳಾಗಿರಬೇಕು. ಈ ವಿಚಾರದ ಆಧಾರದ ಮೇಲೆ ನಾನೊಂದು ಅಭಿಪ್ರಾಯವನ್ನು ರೂಪಿಸಬೇಕೆಂದಿದ್ದರೆ ಹೀಗೆ ಸರ್ವಸಮ್ಮತವಾದ ಅಧಿಕಾರದ ಜಾಗದಲ್ಲಿ ಸಕಾರಣವಾಗಿ ಈ ವಿಚಾರ ಮಂಡಿತವಾಗಬೇಕು. ಅಂದರೆ ನಮ್ಮ ವಿಚಾರಗಳನ್ನು ನಾವು ಚರ್ಚಿಸುವಾಗ ಅವುಗಳನ್ನು ಹುಟ್ಟಿಸಿದ ಕಾರಣಗಳನ್ನೂ ನಾವು ಚರ್ಚಿಸುತ್ತೇವೆ ಎಂದರ್ಥ. ಆದರೆ ಈ ಒಟ್ಟಾರೆ ಮನುಷ್ಯ ತನ್ನ ಹೊರಗೆ ಯಾವ ಅಧಿಕಾರವನ್ನೂ ಗೌರವಿಸದವನಾದ್ದರಿಂದ ಈ ಚರ್ಚೆಯ ಗೊಡವೆಗೇ ಹೋಗುವುದಿಲ್ಲ. ಆದ್ದರಿಂದ ಜನಸಮೂಹಸನ್ನಿಯ ಬರ್ಬರತೆಯಲ್ಲಿ ಸಮುದಾಯದ ಮನುಷ್ಯನ ಕೊಡುಕೊಳ್ಳುವಿಕೆ ನಾಶವಾಗುತ್ತದೆ.

***

ಸಿಮೋನ್‌ ವೇಲ್‌ ಹೇಳಿದ್ದನ್ನು ಇಲ್ಲಿ ನೆನೆಯಬೇಕು. ದೇವರು ಒಂದು ಪ್ರಾಣಿಯಲ್ಲಿ, ಒಂದು ಮೃಗದಲ್ಲಿ, ಒಬ್ಬ ವ್ಯಕ್ತಿಯಲ್ಲಿ ಇರಬಹುದು. ಆದರೆ ಎಂದೆಂದೂ ಅವನು ಸಮೂಹವೊಂದರಲ್ಲಿ ಇರುವುದು ಸಾಧ್ಯವಿಲ್ಲ. ಜನಸಾಮಾನ್ಯರ ಬಗ್ಗೆ ಪ್ರೀತಿ ಗೌರವಗಳೂ ಇದ್ದು, ಈ ಸಾಮಾನ್ಯರೇ ಸಮೂಹಗೊಂಡಾಗ ಏನಾಗಬಹುದೆಂದು ತಿಳಿದವರು, ಭಯಗ್ರಸ್ತರಾದವರು ಮಾತ್ರ ಹೇಳಬಲ್ಲ ಮಾತು ಇದು.

ಈ ಲೇಖನಕ್ಕೆ ಪ್ರತಿಕ್ರಿಯೆಯ ಮೂಲಕ ನನಗೆ ಪ್ರಿಯವಾದ ಕೆಲ ವಿಚಾರಗಳನ್ನು ಶೋಧಿಸಲು ಬಯಸುತ್ತೇನೆ. ಪ್ರಜಾತಂತ್ರದ ಸವಲತ್ತುಗಳನ್ನೇ ಬಳಸಿಕೊಂಡು ಪ್ರಜಾತಂತ್ರವನ್ನೇ ನಾಶಮಾಡುವ ನಮ್ಮ ಪ್ರವೃತ್ತಿಯ ಕುರಿತಾದ ಆತಂಕತೊಡನೆಯೇ, ಇದು ಹೀಗೇಕಾಗುತ್ತದೆ ಎನ್ನುವುದರ ಶೋಧ ಮುಖ್ಯವಾಗುತ್ತದೆ. ಯಾವ ವ್ಯವಸ್ಥೆಯಾಗಲಿ ಮನುಷ್ಯರೆಲ್ಲರ ಸೃಜನಶೀಲತೆಯನ್ನು ಆದಷ್ಟೂ ಪೋಷಿಸಿ, ಎಲ್ಲರ ಸ್ವಾತಂತ್ರ್ಯವನ್ನು ಆದಷ್ಟೂ ನಾಶಮಾಡದೆ ಇರುವುದಾದರೆ ಅದೊಂದು ಒಳ್ಳೆಯ ವ್ಯವಸ್ಥೆ. ಪ್ರಜಾಪ್ರಭುತ್ವ ಇದಕ್ಕೆ ಹೇಗೆ ಪೂರಕವಾಗಿದೆ ಮತ್ತು ಪ್ರಜಾಪ್ರಭುತ್ವದ ಮೂಲಕ ನಾವಿದನ್ನು ಹೇಗೆ ಸಾಧಿಸಬಯಸುತ್ತೇವೆ ಎನ್ನುವ ಪರಿಕಲ್ಪನೆಯನ್ನು ಬೆಳೆಸಿಕೊಳ್ಳುವುದು ಅಗತ್ಯ. ಈ ದಾರಿಯಲ್ಲಿ ಎಚ್ಚರಿಕೆಯಿಂದ ಸಾಗುವುದಕ್ಕೆ ಅತ್ಯಗತ್ಯವಾಗಿ ಬೇಕಾದ ಮತ್ತೊಂದು ಅರಿವೆಂದರೆ ನಮ್ಮ ಸೃಜನಶೀಲ ಅಭಿವ್ಯಕ್ತಿಯಲ್ಲೇ ಅದರ ಸೆಲೆಯನ್ನೂ ಬತ್ತಿಸುವ ಸಾಧ್ಯತೆ ಇದೆ ಎನ್ನುವುದು. ಒಬ್ಬನ ಸೃಜನಶೀಲ ಅಭಿವ್ಯಕ್ತಿ ಮತ್ತೊಬ್ಬನ ಸ್ವಾತಂತ್ರ್ಯವನ್ನು ನಾಶಮಾಡಬಹುದು ಎನ್ನುವುದನ್ನು ಅರಿಯುವುದು ಮುಖ್ಯ. ಈ ಅರಿವು ನಾವು ಮೇಲ್ನೋಟದ ಪ್ರಜಾಪ್ರಭುತ್ವ ರೀತ್ಯಾ ಸಮಾಜವನ್ನು ಅಧೋಗತಿಯಲ್ಲಿ ನಡೆಸಿಕೊಂಡು ಹೋಗದೇ, ಸಮತೋಲನದಲ್ಲಿ ಸಾಗಿಸುವ ರೀತಿಯನ್ನು ಶೋಧಿಸಿದೇವು. ಈ ಎಚ್ಚರ ನಮ್ಮನ್ನು ಸ್ವಾತಂತ್ರ್ಯದ ಜೊತೆ ಸಾಮರಸ್ಯ ಮತ್ತು ಸಮಾನತೆ ಪರಿಕಲ್ಪನೆಗಳ ಪ್ರಾಮುಖ್ಯತೆಯನ್ನು ಮನಗಾಣಿಸೀತು. ಗಾಂಧೀಜಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಒಟ್ಟಿಗೇ ನಮ್ಮ ನಾಯಕರನ್ನಾಗಿಸೀತು. ಸ್ವಾತಂತ್ರ್ಯದ ಪರಿಕಲ್ಪನೆ ಪ್ರಜಾಪ್ರಭುತ್ವದಿಂದ ಮೇಲ್ನೋಟಕ್ಕೇ ದಕ್ಕುವುದಾದರೂ, ಸಮಾನತೆ/ಸಾಮರಸ್ಯ ಪರಿಕಲ್ಪನೆಗಳ ಪ್ರಾಮುಖ್ಯತೆ ಸುಲಭಕ್ಕೆ ಸಿಗದೇಹೋಗುವುದು ದುರದೃಷ್ಟಕರ . ಆದರೆ ಸಮಾನತೆ/ಸಾಮರಸ್ಯಗಳ ಆಳವಾದ ಅರಿವಿಲ್ಲದೆ ಪ್ರಜಾಪ್ರಭುತ್ವ ಸುಸ್ಥಿರವಾಗಿರಲಾರದು. ಪ್ರಜಾಪ್ರಭುತ್ವದಿಂದ ನಮಗೆ ಲಭ್ಯವಾಗುವ ದಾರಿಗಳಲ್ಲಿ ನಮ್ಮ ಆಯ್ಕೆ ಪ್ರಜಾಪ್ರಭುತ್ವದ ಧಾರಣಶಕ್ತಿಯನ್ನು ಹೆಚ್ಚಿಸಲಾಗದಿದ್ದರೂ ಕೊಲ್ಲಬಾರದು. ಪ್ರಜಾಪ್ರಭುತ್ವ ಒಂದು ವ್ಯವಸ್ಥೆಯಾದರೆ ಮನುಷ್ಯನ ಸ್ವಾತಂತ್ರ, ಸೃಜನಶೀಲ ಅಭಿವ್ಯಕ್ತಿಯ ಸಾಧ್ಯತೆ ಇವೆಲ್ಲವೂ ಪ್ರಜಾಪ್ರಭುತ್ವಕ್ಕಿಂತ ಹೆಚ್ಚು ಮೂಲಭೂತವಾದ ವಿಷಯಗಳು ಮತ್ತು ಮೌಲ್ಯಗಳು ಎನ್ನುವ ಅರಿವು ಮುಖ್ಯವಾಗುತ್ತದೆ. ಆದ್ದರಿಂದ ನಾವು ಸದಾ ಪ್ರಜಾಪ್ರಭುತ್ವದ ಕುರಿತಾದ ನಮ್ಮ ಬದ್ಧತೆ ಯಾವ ಕಾರಣಕ್ಕೆ ಮತ್ತು ಪ್ರಜಾಪ್ರಭುತ್ವದ ಮೇಲಣ ವಿಮರ್ಶೆ ಯಾವ ಕಾರಣಕ್ಕೆ ಎನ್ನುವುದನ್ನು ಸದಾ ಶೋಧಿಸುತ್ತಲೇ ಇರಬೇಕಾಗುತ್ತದೆ.

ನನ್ನ ಗ್ರಹಿಕೆಯಲ್ಲಿ ಈ ಆಧುನಿಕ ಒಟ್ಟಾರೆ ಮನುಷ್ಯ ಪ್ರಜಾಪ್ರಭುತ್ವದ ಹಾದಿಯಲ್ಲಿ ಹೀಗೆ ದಾರಿತಪ್ಪಿದ ಮನುಷ್ಯ.

ಇದನ್ನು ಕಾಲಾತೀತವಾಗಿ ಗ್ರಹಿಸಲು ಸಾಧ್ಯವೇ ಎಂದು ಆಲೋಚಿಸುತ್ತಿದ್ದೇನೆ. ಪ್ರಾಯಶಃ, ಯಾವುದೇ ಕಾಲದ ಯಾವುದೇ ಸೃಜನಶೀಲ ಪರಿಕಲ್ಪನೆಯ, ಸಾಧ್ಯತೆಯ ಹುಟ್ಟಿಗೆ ಪೋಷಕ ಮತ್ತ್ತು ಮಾರಕ ಕಾರಣಗಳಿರುತ್ತವೆ. ಅಮೃತದ ಶೋಧನೆಗೆ ದೇವ-ದಾನವರು ಒಟ್ಟಾಗಿಯೇ ತೊಡಗಿದರು. ಅಮೃತ ಸೃಷ್ಟಿಯ ನಂತರ ಅದನ್ನು ದಕ್ಕಿಸಿಕೊಳ್ಳುವುದು ದೇವತೆಗಳೋ, ದಾನವರೂ ಎನ್ನುವುದರ ಭವಿಷ್ಯ ನಿಂತಿದೆ. ಮನುಷ್ಯನ ಸಾರ್ವಕಾಲಿಕ ಪ್ರವೃತ್ತಿಯಾದ ಸಾಮರ್ಥ್ಯದ ಹುಡುಕಾಟ, ಮತ್ತು ಅದರ ಇವತ್ತಿನ ರೂಪಗಳಾದ ತಾಂತ್ರಿಕತೆ ಮತ್ತು ಅತಿರಾಷ್ಟ್ರೀಯತೆಗಳ ಹಿನ್ನೆಲೆಯಲ್ಲಿ ಆಧುನಿಕ ಒಟ್ಟಾರೆ ಮನುಷ್ಯನ ಹುಟ್ಟಿನ ಸಾಧ್ಯತೆ ಸಹಜವಾಗೇ ಇದೆ. ನಮ್ಮ ಹಿರಿಯರು ಇಂಥದ್ದನ್ನು ಮನಗಂಡಿದ್ದರೆಂದು ಕಾಣುತ್ತದೆ.

ಇಂತಿ ಶಿವು

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.
Image CAPTCHA
Copy the characters (respecting upper/lower case) from the image.