ಅಡಿಗರ ಪ್ರೇರಣೆಯಿಂದಾಗಿ, ಜೊತೆಗೆ ಲೋಹಿಯಾರಿಂದಾಗಿ ನಾನು ಓದಲುತೊಡಗಿದ ಇತಿಹಾಸಕಾರ ಆರ್ನಾಲ್ಡ್ ಜೆ ಟಾಯ್ನ್‌ಬಿ ಕೂಡಾ ಆರ್ಟೆಗಾ ಗ್ಯಾಸೆಯಂತೆಯೇ ನನ್ನ ಬರೆವಣಿಗೆಯ ಮೇಲೆ ಪರಿಣಾಮವನ್ನು ಬೀರಿದವನು. (A study of History 1961)ನಾನೇನೂ ಟಾಯ್ನ್‌ಬಿಯನ್ನು ಆಳವಾಗಿ ಅರ್ಥ ಮಾಡಿಕೊಂಡಿದ್ದೆ ಎಂದು ಹೇಳುತ್ತಿಲ್ಲ. ಬರೆಹಗಾರನಾದವನೊಬ್ಬ ಅಪಾರ್ಥ ಮಾಡಿಕೊಂಡಾಗಲೂ ಇರುವ ವಿಚಾರ ನಮಗೆ ಅಗತ್ಯವಾದ ಇನ್ನೇನೋ ಆಗಿ ರೂಪಾಂತರಗೊಂಡು ಇನ್ನೊಂದು ಆಯಾಮವನ್ನೇ ಪಡೆದು ಉಪಯುಕ್ತವಾಗುವುದು ಇದೆ.
ಟಾಯ್ನ್‌ಬಿ ಬರೆಯುವ ಚರಿತ್ರೆ ದೇಶಗಳ ಮತ್ತು ರಾಷ್ಟ್ರಗಳ ಚರಿತ್ರೆಯಲ್ಲ; ನಾಗರಿಕತೆಗಳ ಚರಿತ್ರೆ. ಪ್ರತೀ ನಾಗರಿಕತೆಯೂ ಕೆಲವು ಸವಾಲುಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ನಿರ್ವಹಣೆಗೆ ಅಸಾಧ್ಯವಾದ ಸವಾಲಾದರೆ ನಾಗರಿಕತೆಗಳು ಸಾಯುತ್ತವೆ. ಯಾರೋ ಕೊಂದಿದ್ದರಿಂದ ನಾಗರಿಕತೆಗಳು ಸಾಯುವುದಲ್ಲ; ಆತ್ಮಹತ್ಯೆಯಿಂದ ನಾಗರಿಕತೆಗಳು ಸಾಯುವುದು ಎಂದು ಟಾಯ್ನ್‌ಬಿ ತಿಳಿಯುತ್ತಾನೆ. ಗರ್ವದ ಅತಿರೇಕಕ್ಕೆ ಏರಿದ ರೋಮನ್ ನಾಗರಿಕತೆ ನಾಶವಾದದ್ದು ಹೀಗೆ, ತನ್ನ ಅತಿರೇಕದಿಂದಾಗಿಯೇ. ಇಡೀ ಜಗತ್ತನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂಬ ಮಾರುಕಟ್ಟೆ ದುರಾಸೆಯ ಇಂದಿನ ಅಮೆರಿಕ ಕೂಡ ಆತ್ಮಹತ್ಯೆಯ ದಾರಿಯಲ್ಲಿಯೇ ಇರಬಹುದು. ಅಥವಾ ಜಾಗತಿಕ ತಾಪಮಾನ ಹೆಚ್ಚು ಮಾಡಿಸುವ ಅಮೆರಿಕಾದ ಜೀವನಕ್ರಮವನ್ನು ಮಾರುಕಟ್ಟೆಯ ರಾಜಕೀಯ ಇಡೀ ಜಗತ್ತಿನಜೀವನಕ್ರಮವಾಗಿ ಮಾಡಲು ಹೋಗಿ ಈ ಪ್ರಪಂಚವನ್ನು ನಾವೆಲ್ಲರೂ ಕೂಡಿ ನಾಶಮಾಡಬಹುದು.
ಚರಿತ್ರೆಯಲ್ಲಿ ಕಾಣಸಿಗುವ 22 ನಾಗರಿಕತೆಗಳಲ್ಲಿ 19 ನಾಗರಿಕತೆಗಳು ಅಮೆರಿಕಾದಷ್ಟು ಅನೀತಿವಂತವಾದಾಗ ನಾಶಗೊಂಡವು ಎನ್ನುತ್ತಾನೆ ಟಾಯ್ನ್‌ಬಿ. ತಮಾಷೆಯಾಗಿ ಹೀಗೂ ಹೇಳುತ್ತಾನೆ. ಒಂದು ಪುಟ್ಟ ಕೋಣೆಯಲ್ಲಿ ಬೃಹತ್ ಗಾತ್ರದ ನಾಯಿಯೊಂದಿದೆ. ಅದು ತನ್ನ ಸ್ನೇಹಸೂಚಕವಾಗಿ ಬಾಲವನ್ನು ಆಡಿಸುತ್ತ ಇದೆ. ಹೀಗೆ ಬಾಲವಾಡಿಸಿ ಪುಟ್ಟ ಕೋಣೆಯಲ್ಲಿ ಇರುವ ಕುರ್ಚಿಗಳನ್ನೆಲ್ಲಾ ಬೀಳಿಸುತ್ತ ಇದೆ. ಇಂತಹ ನಾಯಿ ಅಮೆರಿಕಾ.
ಅನೇಕ ನಾಗರಿಕತೆಗಳು ನಾಶದ ಅಂಚಿನಲ್ಲಿದ್ದಾಗ ಆ ನಾಗರಿಕತೆಗಳ ಒಳಗೆ ಒಂದು ಇಂಟರ್ನಲ್ ಪ್ರೊಲಿಟರಿಯೇಟ್ (ಅಂದರೆ ತುಳಿಯಲ್ಪಟ್ಟ ಒಂದು ಸೃಜನಶೀಲ ಗುಂಪು) ಇರಬಹುದೆಂದೂ ಅವನು ತಿಳಿಯುತ್ತಾನೆ. ಉದಾಹರಣೆಗೆ ರೋಮನ್‌ಚಕ್ರಾದಿಪತ್ಯದ ಅವನತಿಯ ಕಾಲದಲ್ಲಿಯೇಸು ಕ್ರಿಸ್ತ ಮತ್ತು ಅವನಸಂಗಡಿಗರು ಹೀಗೊಂದು ಇಂಟರ್ನಲ್ ಪ್ರೊಲಿಟರಿಯೇಟ್ ಆಗಿದ್ದರು. ಅಂದರೆ ಆ ಕಾಲದ ಆ ನಾಗರೀಕತೆಯ ಸೃಜನಶೀಲ ದಲಿತರು ಇವರು. ಎಲ್ಲೆಲ್ಲೂ ಇದು ನಿಜ, ತಮ್ಮ ಮೂಲಮಾತೃಕೆಯಂತೆ ಇದ್ದ ಪರಬ್ರಹ್ಮನ ಕಲ್ಪನೆಯನ್ನೇ ಯಜ್ಞಯಾಗಾದಿಗಳಲ್ಲಿ ಮತ್ತು ರಾಜ್ಯವೈಭವದಲ್ಲಿ ಭಾರತ ಮೆರೆಯುತ್ತಿದ್ದ ಕಾಲದಲ್ಲಿಸುಮಾರು 2500 ವರ್ಷಗಳಹಿಂದೆ ಗೌತಮ ಬುದ್ಧ ಮತ್ತು ಅವನ ಸಂಗಡಿಗರು ಇಡೀ ನಾಗರಿಕತೆಯನ್ನು ಪುನಶ್ಚೇತನಗೊಳಿಸಬಲ್ಲ ದಾರ್ಶನಿಕರಾದರು. ಭಾರತದ ಆಗಿನಅಧಿಕಾರ ಶಾಹಿಯ ಹೊರಗಿನವರಾದ ಸೃಜನಶೀಲ ಅಲ್ಪಸಂಖ್ಯಾತರು ಇವರು.
ನಮ್ಮ ಕರ್ನಾಟಕವನ್ನೇ ನೋಡಿ, ಬಸವ, ಅಲ್ಲಮ, ಅಕ್ಕ, ಇಂಥವರು ನಮ್ಮ ಕರ್ನಾಟಕದ ನಾಗರಿಕತೆಯ ಒಳಗೆ ಬದುಕಿದ ಸೃಜನಶೀಲ ಅಲ್ಪಸಂಖ್ಯಾತರೇ ಬಿಜ್ಜಳನ ಕಾಲದಲ್ಲಿ.
ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯಒಳಗೆ ಇದ್ದ ಇಂಥದೇ ಒಂದು ಸೃಜನಶೀಲಶಕ್ತಿ ಎಂದರೆ ಗಾಂಧಿಯದು. ದಕ್ಷಿಣ ಆಪ್ರಿಕಾದಲ್ಲಿ ಮೊದಲನೇ ದರ್ಜೆಯ ರೈಲಿನಿಂದ ಹೊರ ನೂಕಲ್ಪಟ್ಟ ಗಾಂಧಿಯ ಮನಸ್ಸಿನಲ್ಲಿತನ್ನನ್ನು ನೂಕಿದವರ ಮೇಲೆ ಮಾತ್ರ ಸಿಟ್ಟು ಹುಟ್ಟಿದ್ದಲ್ಲ; ನಮ್ಮ ದೇಶದಲ್ಲೂನಾವು ಅಸ್ಪಶ್ಯರನ್ನು ನಾವೇ ಅವಹೇಳನ ಮಾಡುತ್ತೇವೆಂಬ ಭಾವನೆಯೂ ಹುಟ್ಟಿದಾಗ, ಕೋಪ ಮತ್ತು ಕರುಣಾ ಕೂಡಿಕೊಂಡು ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅದರ ಒಳಗೇ ಹುಟ್ಟಿ ಬೆಳೆದ ಸವಾಲಾಯಿತು.
ಈ ಸವಾಲನ್ನು ಎದುರಿಸಿ ನಾಗರಿಕತೆಯನ್ನು ಉಳಿಸಬಲ್ಲ ಒಳಗಿನಶಕ್ತಿಗಳಿಗೆ ಅಗತ್ಯವಾದದ್ದು ನಿರಂತರ ಕ್ರಿಯಾಶೀಲತೆ ಮಾತ್ರವಲ್ಲ; ಸಮಾಧಾನದ ತಪಸ್ಸೂ ಈ ಶಕ್ತಿಯನ್ನು ಕಾಪಾಡಿ ಬೆಳಸುತ್ತದೆ. ಆದ್ದರಿಂದ ನಾಗರಿಕತೆಯನ್ನು ರಕ್ಷಿಸಲು ಒಳಪ್ರವೇಶ ಮಾಡುವ ಶಕ್ತಿಗಳು ಕೆಲವು ಕಾಲ ನಾಗರಿಕತೆಗೆ ಹೊರಗಿನವರಾಗಿದ್ದು, ಅಂತ್ಯಜರಂತೆ ಇದ್ದು, ಎಲ್ಲಕಷ್ಟಗಳನ್ನೂ ಮೂದಲಿಕೆಯನ್ನೂ ಸಹಿಸಿಕೊಂಡಿರುವುದನ್ನು ಕಲಿತಿರುತ್ತವೆ..
ಟಾಯ್ನ್‌ಬಿ ಇದನ್ನು ವಿತ್‌ಡ್ರಾಯಲ್ ಅಂಡ್ ರಿಟರ್ನ್ ಎಂದು ಕರೆಯುತ್ತಾನೆ. ಯೇಸು ಕ್ರಿಸ್ತ ಕ್ರಿಯಾಶೀಲಾಗುವುದಕ್ಕಿಂತ ಮುಂಚೆ ಕೆಲವು ಕಾಲಅಜ್ಞಾತನಾಗಿದ್ದ. ಗೌತಮ ಬುದ್ಧ ಅರಮನೆಬಿಟ್ಟು ನಡೆದವನು ಕೆಲವು ಕಾಲ ಅಜ್ಞಾತನಾಗಿದ್ದ. ಪಾಂಡವರು ಅಜ್ಞಾತವಾಸ ಮಾಡಿದರೆಂದು ಮಹಾಭಾರತ ಹೇಳುತ್ತದೆ. ಪೈಗಂಬರನೂ ಅಜ್ಞಾತನಾಗಿ ದೇವರ ಕರೆಗೆ ಕಾದು ಇದ್ದ. ಗಾಂಧಿ ದೂರದ ಆಫ್ರಿಕಾದಲ್ಲಿ ಭಾರತಕ್ಕೆ ಅಜ್ಞಾತನಾಗಿ ಇದ್ದ.
ಅಡಿಗರು ತಮ್ಮ ರಾಮನವಮಿಯ ದಿವಸದಲ್ಲಿ ಹೀಗೆ ಬರೆಯುತ್ತಾರೆ ವಾಲ್ಮೀಕಿಯ ಬಗ್ಗೆ: ಅವನು ರಾಮಾಯಣವನ್ನು ಸೃಷ್ಟಿಸುವುದಕ್ಕಿಂತ ಮುನ್ನ ತನ್ನ ಸುತ್ತ ಹುತ್ತ ಕಟ್ಟುವಷ್ಟು ಅಜ್ಞಾತನಾಗಿ, ಮೌನವಾಗಿ ಇದ್ದನೆಂಬುದು ಈ ಸಾಲುಗಳಲ್ಲಿ ವರ್ಣಿತವಾಗಿದೆ:
ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು
ಪುರುಷೋತ್ತಮನ ಆ ಅಂಥ ರೂಪು ರೇಖೆ?
ಈ ಸೃಜನಶೀಲ ಅಲ್ಪಸಂಖ್ಯಾತರು ಯಶಸ್ಸನ್ನು ಪಡೆದು ಎಲ್ಲರ ಮೇಲೆ ಅಧಿಕಾರ ಚಲಾಯಿಸುವ ಮದಿಸಿದ ಅಲ್ಪಸಂಖ್ಯಾತರೂ ಆಗುವುದುಂಟು. ತಮ್ಮ ಪೂರ್ವಕಾಲದ ಸಾಧನೆಯನ್ನೇ ಜಪಿಸುತ್ತ, ತಮ್ಮ ಸಾಧನೆಯ ಬಗ್ಗೆ ತಾವೇ ಹೆಮ್ಮೆಪಡುವ ಇವರನ್ನು ತಾವು ಮೇಲಿನವರು ಎಂದುಕೊಳ್ಳುವವರಲ್ಲಿ ನಾವು ಕಾಣುತ್ತೇವೆ ಅಲ್ಲವೇ? ಇದೊಂದು ಅವನತಿಯ ಸೂಚನೆ. ವಿಪ್ರಾಃ ಪಶ್ಚಿಮ ಬುದ್ಧಯಃ ಎನ್ನುವುದು ಈ ಕಾರಣಕ್ಕೇ ಇರಬಹುದು. ಪುರೋಹಿತರ ನಂಬಿ ಪಶ್ಚಿಮ ಬುದ್ಧಿಯಾದೆವೋ ಎನ್ನುತ್ತಾರೆ ಅಡಿಗರು. (ಹಿಂದೆ ಹಿಂದೆ ನೋಡುತ್ತ ನಡೆಯುವಸತತ ಪಶ್ಚಾತ್ತಾಪದ ಬುದ್ಧಿ+ಪಶ್ಚಿಮದ ಕಡೆ ಮುಖಮಾಡಿಕೊಂಡ ದಾಸ್ಯಬುದ್ಧಿ) ಇವರಿಗೆ ಎದುರಾಗಿ ಇನ್ನೊಂದು ಕಾಯಕಲ್ಪಕ್ಕಾಗಿ ಸೃಜನಶೀಲ ಅಲ್ಪಸಂಖ್ಯಾತರು ಇದೇ ನಾಗರಿಕತೆಯ ಅಂತಃಸತ್ವದ ಮಂಥನದಿಂದ ಹುಟ್ಟಿಕೊಳ್ಳಬಹುದು.
ಸವಾಲುಗಳನ್ನು ನಾವು ಎದುರಿಸುವಾಗ ನಮಗೆ ನಮ್ಮ ಪೂರ್ವಿಕರ ವಿವೇಕವೂ ಪರಂಪರೆಯ ಒಳಗಿನ ಅಂತಹ ನೆನಪುಗಳೂ ಅಗತ್ಯವಾಗುತ್ತವೆ. ಮೊನ್ನೆ ಬೆಂಗಳೂರಿನಲ್ಲಿ ಚೀನೀ ವಿದ್ವಾಂಸನೊಬ್ಬ (ಪ್ರೊಫೆಸರ್ ವಾಂಗ್ ಹುಯಿ) ತನ್ನ ದೇಶ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದ. ಅವನು ಕೊಟ್ಟ ಒಂದು ಉದಾಹರಣೆ ನನಗೆ ಒಂದು ಗಮನಾರ್ಹ ರೂಪಕ ಎನ್ನಿಸಿತು. ಚೀನಾ ವರ್ಲ್ಲ್ಡ ಟ್ರೇಡ್ ಆರ್ಗನೈಸೇಶನ್ ಗೆ ಸಹಿ ಮಾಡಿದ ನಂತರ ಪ್ರಪಂಚದ ಕಣ್ಣಿನಲ್ಲಿ ಶ್ರೀಮಂತ ರಾಷ್ಟ್ರವಾಗಿದೆ. ಆದರೆ ಈ ಜಾಗತೀಕರಣದಲ್ಲಿ ಶ್ರೀಮಂತಗೊಂಡ ಚೀನಾದಲ್ಲಿ ರೈತರು ಕಡು ಬಡವರಾಗಿದ್ದಾರೆ. ಉಚಿತವಾಗಿ ಸಿಗುತ್ತಿದ್ದ ವೈದ್ಯಕೀಯ ಸಹಾಯ ನಿಂತು ಹೋಗಿ ಅದು ಖಾಸಗೀಕರಣಗೊಂಡು ಶ್ರೀಮಂತರಿಗೆ ಮಾತ್ರ ಲಭ್ಯವಾಗುವಂತಾಗಿದೆ.
ರೈತಾಪಿ ಜೀವನದಲ್ಲಿ ಹೊಟ್ಟೆಹೊರೆಯುತ್ತಿದ್ದವರು ಗ್ರಾಮಗಳನ್ನು ತೊರೆದು ಈಗ ಹೊಟ್ಟಪಾಡಿಗಾಗಿ ಸಿಟಿಗಳಲ್ಲಿತುಂಬ ಕಡಿಮೆ ಸಂಬಳ ಪಡೆಯುವ ಚೀಪ್ ಕೂಲಿಗಳಾಗಿದ್ದಾರೆ. ಆದ್ದರಿಂದ ಚೀನಾ ಮಾರುಕಟ್ಟೆಯಲ್ಲಿ ತಾವು ತಯಾರಿಸುವ ಸಾಮಾನಗಳನ್ನು ಬೇರೆ ದೇಶಗಳಿಗಿಂತ ಕಡಿಮೆ ಬೆಲೆಗೆ ಮಾರುವುದು ಸಾಧ್ಯವಾಗಿದೆ. ವಿದ್ಯಾಭ್ಯಾಸವೂ ಖಾಸಗೀಕರಣಗೊಂಡಿದೆ. ವಿದ್ಯೆ ಮತ್ತು ಆರೋಗ್ಯ ಸರಕಾರದ ಹಿಡಿತದಿಂದ ತಪ್ಪಿ ಹೋದಾಗ ಆಗಬಹುದಾದ ಎಲ್ಲಾ ಅನಿಷ್ಟಗಳೂ ಚೀನಾವನ್ನು ಕಾಡುತ್ತಿವೆ.
ಸಾರ್ಸ್ ಎಂಬ ವೈರಸ್ ರೋಗ ಕಾಣಿಸಿಕೊಂಡಿದ್ದೇ ಚೀನಾ ಸರಕಾರ ಎದೆಗುಂದಿತು. ಪಾಶ್ಚಾತ್ಯ ಮಾದರಿಯ ಅಲೋಪಥಿಕ್ ವೈದ್ಯ ಲಭ್ಯವಿರುವುದು ಹೆಚ್ಚಾಗಿ ದೊಡ್ಡ ಪಟ್ಟಣಗಳಲ್ಲಿ ಮಾತ್ರ. ಗ್ರಾಮಾಂತರ ಪ್ರದೇಶಗಳಿಗೆ ಸಾರ್ಸ್ ಹರಡಿದ್ದೇ ಆದರೆ ಏನು ಮಾಡಬೇಕು ಯಾರಿಗೂ ತಿಳಿಯದು. ಇದರ ಬಗ್ಗೆ ಚೀನೀ ವಿದ್ವಾಂಸ ಹೂಯಿ ತಾನೇ ಕರೆದ ಒಂದು ಸಮಾಲೋಚನೆಯ ಸಭೆಯಲ್ಲಿನಡೆದ ಒಂದು ಘಟನೆಯನ್ನು ಮೊನ್ನೆ ಬೆಂಗಳೂರಿನಲ್ಲಿ ವಿವರಿಸಿದ. ಎಲ್ಲ ವೈದ್ಯರ ಒಂದು ಸಭೆಯನ್ನು ಕರೆಯಲಾಯಿತು. ಈ ಅಲೋಪತಿಯವರ ನಡುವೆ ಚೀನಾದ ಸ್ವದೇಶೀ ವೈದ್ಯಪಂಡಿತನೊಬ್ಬನೂ ಆಮಂತ್ರಿತನಾಗಿದ್ದನು.
ಅವನು ವಿನಯಪೂರ್ವಕವಾಗಿ ಎಲ್ಲರನ್ನು ಉದ್ದೇಶಿಸಿ ಹೀಗೆ ಹೇಳಿದನಂತೆ: ಅಲೋಪತಿಯ ನಿಮಗೆ ಈ ವೈರಸ್ ಯಾವುದೆಂದು ಗೊತ್ತಿಲ್ಲ. ಇದಕ್ಕೆ ಯಾವ ಮದ್ದನ್ನು ಕೊಡಬೇಕೆಂಬುದೂ ನಿಮಗೆ ಗೊತ್ತಿಲ್ಲ. ನಮ್ಮ ವೈದ್ಯಪದ್ಧತಿಯಲ್ಲಂತೂ ನಮಗೆ ಯಾವ ವೈರಸ್‌ಗಳಜ್ಞಾನವೂ ಇಲ್ಲ. ಆದ್ದರಿಂದ ಯಾವ ಮದ್ದನ್ನು ಯಾವ ಕಾಯಿಲೆಗೆ ಕೊಡ ಬೇಕೆಂಬುದೂ ಆಂಟಿ ಬಯಾಟಿಕ್ ಉಪಯೋಗಿಸುವ ನಿಮ್ಮ ಹಾಗೆ ನಮಗೆ ಗೊತ್ತಿಲ್ಲ. ನಮ್ಮ ಪುರಾತನ ವೈದ್ಯಶಾಸ್ತ್ರವೇ ಬೇರೆ ಬಗೆಯದು. ನಮ್ಮ ದೇಹವೇ ತನಗೆ ಬಂದ ಆಪತ್ತನ್ನು ಹೇಗೆ ಎದುರಿಸಬೇಕೆಂಬ ಜ್ಞಾನವನ್ನು ನಮಗೆ ಗೊತ್ತಿಲ್ಲದಂತೆ ಪಡೆದಿರುತ್ತದೆ. ದೇಹಕ್ಕಿರುವ ಈ ವಿಶೇಷ ಶಕ್ತಿಯನ್ನು ಇನ್ನಷ್ಟು ಗಟ್ಟಿ ಮಾಡುವ ಉಪಾಯಗಳು ನಮಗೆ ಗೊತ್ತು . ಅಲ್ಲದೆ ಈ ಸ್ವದೇಶೀ ಉಪಾಯಗಳು ನಿಮ್ಮ ಮದ್ದಿನಂತೆ ದುಬಾರಿ ಕೂಡಾ ಅಲ್ಲ. ಆದ್ದರಿಂದ ಸಾರ್ಸ್ ವಿರುದ್ಧದ ಹೋರಾಟದಲ್ಲಿ ಪ್ರಾಯಶಃ ನಮ್ಮ ವೈದ್ಯಶಾಸ್ತ್ರವೇ ನಿಮ್ಮದಕ್ಕಿಂತ ಉತ್ತಮವಾಗಿರಬಹುದು? ಅಲ್ಲವೆ?
ಪ್ರತೀ ನಾಗರೀಕತೆಯೂ ಸ್ವಾನುಭವದಲ್ಲಿ ಕಲಿಯುತ್ತಲೇ ಇರುವ ಸ್ವದೇಶಿಯಾದ ಬದುಕಿನ ವಿವೇಕವನ್ನು ಕಳೆದುಕೊಂಡಾಗ, ಅಥವಾ ನಿರಂತರ ಪ್ರಗತಿಯ ಗರ್ವದಲ್ಲಿ ಮರೆತು ಬಿಟ್ಟಾಗ, ನಾಗರಿಕತೆ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತದೆ. ಈಗಿನ ಭಾರತವೂ ಆಧುನಿಕತೆಯ ಬೆನ್ನೆಟ್ಟಿ ಅಮೆರಿಕದಂತೆ ಆಗಲು ಸಿದ್ಧವಾಗಿ ನಿಂತಿರುವಾಗ ನಮಗೆ ಟಾಯ್ನ್‌ಬಿ ಆಲೋಚಿಸುತ್ತಿದ್ದ ಕ್ರಮ ಮುಖ್ಯವೆನಿಸುತ್ತದೆ.
ಪಾಶ್ಚಿಮಾತ್ಯನಾಗರಿಕತೆಯ ಬಹು ನಿಷ್ಠುರ ವಿಮರ್ಶಕರೆಂದರೆ ಟಾಯ್ನ್‌ಬಿ, ಸ್ಪೆಂಗ್ಲರ್ (Decline of the West ಬರೆದಾತ) ಲಾರೆನ್ಸ್, ಯೇಟ್ಸ್, ಎಲಿಯಟ್ ರಂತಹವರು. ಇಪ್ಪತ್ತನೇ ಶತಮಾನವನ್ನು ಎಲಿಯಟ್ ಕಾಣುವ ಬಗೆ ಅದೊಂದು ಮರುಭೂಮಿಯೆಂದು. ಅವನ ಪ್ರಖ್ಯಾತ ಪದ್ಯದ ಹೆಸರು, The Waste Land.
ಈ ಪದ್ಯದ ಕೊನೆಯಲ್ಲಿ ಗಂಗೆ ಬತ್ತಿದೆ; ಹಿಮವಂತನ ಮೇಲೆ ಮೋಡಗಳು ದಟ್ಟವಾಗಿ ಕವಿದಿವೆ. ಧಧಧ ಎಂಬ ಗುಡುಗು ಕೇಳುತ್ತದೆ. ಗುಡುಗಿನ ಧಧಧ ನಾದವನ್ನು ಅವರವರ ಸ್ವಭಾವಕ್ಕೆ ತಕ್ಕಂತೆಯೂ, ಅಗತ್ಯಕ್ಕೆ ತಕ್ಕಂತೆಯೂ ದೇವ ದಾನವ ಮಾನವರು ಅರ್ಥೈಸಿಕೊಳ್ಳುತ್ತಾರೆ. ದತ್ತ(ಕೊಡು) ದಯಧ್ವಂ(ದಯೆತೋರು). ದಮ್ಯತ(ನಿಗ್ರಹಿಸು). ಆಸೆಬುರುಕ ಮನುಷ್ಯರಿಗೆ ಕೊಡು ಎಂದು ಈ ಗುಡುಗು ಅರ್ಥವಾದರೆ, ಕ್ರೂರಿಗಳಾದ ರಾಕ್ಷಸರಿಗೆ ದಯೆ ತೋರು ಎಂದು ಅರ್ಥವಾಗುತ್ತದೆ, ಲಂಪಟರಾದ ದೇವತೆಗಳಿಗೆ ನಿಗ್ರಹಿಸು ಎಂದು ಅರ್ಥವಾಗುತ್ತದೆ. ನಮ್ಮ ಶತಮಾನದಲ್ಲಿ ಮಾನವ ಏಕಕಾಲಕ್ಕೆ ಆಸೆಬುರುಕನೂ, ಕ್ರೂರಿಯೂ, ಲಂಪಟನೂ ಆದ್ದರಿಂದ ದತ್ತ ದಯಧ್ವಂ ದಮ್ಯತ ಮನುಷ್ಯನಿಗೇ ಅನ್ವಯವಾಗುತ್ತದೆ.
ಭೂತದ ಆರಾಧನೆಯಾಗಲೀ ಹಳಹಳಿಕೆಯಾಗಲೀ ಆಗದ, ಭವಿಷ್ಯದ ಲಂಪಟ ಕನಸುಗಾರಿಕೆಯೂ ಆಗದ, ವರ್ತಮಾನದಲ್ಲಿ ಕಾಲದ ಸವಾಲಿಗೆ ಜವಾಬಾಗುವ ಶ್ರೇಷ್ಠ ಚಿಂತನೆ ಈ ಕಾಲದಲ್ಲಿ ಆಳುವ ವರ್ಗಗಳಿಗೆ ಬೇಡವಾಗಿದೆ. ಏನನ್ನಾದರೂ ಇವತ್ತಲ್ಲ ನಾಳೆ ನಮ್ಮ ಟೆಕ್ನಾಲಜಿ ಮತ್ತು ನಮ್ಮ ವಿಜ್ಞಾನ ಬಗೆಹರಿಸಬಲ್ಲುದು ಎಂಬ ನಂಬಿಕೆ ಅಮರ್ತ್ಯರಾಗಲು ಬಯಸುತ್ತ ಇರುವ ಮರ್ತ್ಯರಿಗೆ ಇದೆ. ಆದರೆ ಸರ್ವನಾಶದ ಪ್ರಳಯವನ್ನು ಕಾಣುವ ಯೇಟ್ಸ್‌ನಿಗೂ ಯೂರೋಪು ಜನ್ಮವಿತ್ತಿದೆ. ಉತ್ತಮರಲ್ಲಿಮನೋ ನಿಶ್ಚಯವಿಲ್ಲ; ಅಧಮರಲ್ಲಿ ಭಾವೋನ್ಮಾದವಿದೆ. ಸರ್ವಗ್ರಾಹಿಯಾದ ಕೇಂದ್ರ ಶಕ್ತಿ ಕಾಣೆಯಾಗಿದೆ; ಎಲ್ಲವೂ ಉದುರಿ ಬೀಳುತ್ತಿದೆ. ಕೇಳುವವರಿಲ್ಲ; ಹೇಳುವವರಿಲ್ಲ. ಎಲ್ಲೆಲ್ಲೂ ಅರಾಜಕತೆ ಮೆರೆದಿದೆ. ಇಪ್ಪತ್ತು ಶತಮಾನಗಳನಿದ್ದೆ ದುಸ್ವಪ್ನವಾಗಿದೆ. ಸಿಂಹದ ಘನ ಘೋರ ಉನ್ಮತ್ತ ದೇಹದ, ಲೆಕ್ಕಾಚಾರದ ಮನುಷ್ಯನತಲೆಯ, ಕರುಣೆಯಿಲ್ಲದ, ಏನನ್ನೂ ಕಾಣದಂತೆ ನಿರ್ದಯವಾಗಿ ದಿಟ್ಟಿಸುವ ನೋಟದ ಮೃಗವೊಂದು ಮರಳು ಗಾಡಿನಲ್ಲಿ ತೊಡೆಯೆತ್ತಿ ತೆವಳುತ್ತ ನಮ್ಮಡೆ ಬರುತ್ತ ಇದೆ. ಇದು ದುಷ್ಟಶಿಕ್ಷಣ-ಶಿಷ್ಟ ರಕ್ಷಣದ ನರಸಿಂಹನಲ್ಲ: ಶಿಷ್ಟನಾಶದ ಸಿಂಹನರ.
ಕ್ರಿಸ್ತನ ನಂತರದ ಎರಡನೇ ಅವತಾರವನ್ನು (Second Coming) ಹಿಟ್ಲರನ ಕಾಲದಲ್ಲಿ ಯೇಟ್ಸ್ ಕಂಡದ್ದು ಹೀಗೆ. ಆದರೆ ಜಗತ್ತಿನಾದ್ಯಂತ ನೆಲ ಮತ್ತು ಆಕಾಶಗಳ ಪಿಸುಮಾತನ್ನು ಕೇಳಿಸಿಕೊಳ್ಳಬಲ್ಲ ಸೃಜನಶೀಲರ ಸಣ್ಣ ಪಡೆಯೊಂದು ತಾನಾಡಬೇಕಾದ್ದನ್ನು ಆಡುತ್ತಲೂ ಇದೆ.



ಇದು ನಮಗೆ ಅಗತ್ಯವಾಗಿ ಇರಬೇಕಾದ ಆಶಾವದವೇ ಸರಿ. ಬೇಂದ್ರೆಯವರ ಮೊದಲಗಿತ್ತಿ ಕವನದ ಆಶಯದ ಜೊತೆ ಹೊಂದಿಕೊಳ್ಳುವಂಥದ್ದು. ಗಾಂಧೀಜಿಯ ಉದಾಹರಣೆಯನ್ನು ನೀವಿಲ್ಲ ತರುತ್ತಿರುವ ರೀತಿ ಮುಖ್ಯವಾಗಿದೆ. ಈ ತೆರನಾದ ಸೃಜನಶೀಲ ಗುಂಪು ತನ್ನ ಮೇಲಾಗುವ ಆಕ್ರಮಣವನ್ನು, ಆಕ್ರಮಣಕಾರರನ್ನು ಸರಿಯಾದ ಕ್ರಮದಲ್ಲಿ ಗುರುತಿಸಲು ಸಾಧ್ಯವಾಗುವುದು ತನ್ನ ಆಂತರ್ಯದಲ್ಲೇ ಇರುವ ಸೃಜನಶೀಲವಾದ ಸ್ವದೇಶೀ ಬದುಕಿನ ವಿವೇಕದ ಜೊತೆಗೇ ಅಲ್ಲಿರುವ ಆಕ್ರಮಣಶೀಲ ಸಾಧ್ಯತೆಯನ್ನು ಸರಿಯಾಗಿ ಗುರುತಿಸಿದಾಗ. ಅವನತಿ ನಂತರದ ಮರುಹುಟ್ಟಿನ ಸಾಧ್ಯತೆ ಮಾತ್ರ ದೇಶೀಯವಾದ್ದು, ಪ್ರಾಂತೀಯವಾದ್ದು ಮತ್ತು ಮರುಹುಟ್ಟು ಸಹಜವೇ ಎನ್ನುವುದು ಕನ್ನಡದಂತಹ ಭಾಷೆಯ ಭವಿಷ್ಯದ ಕುರಿತಾಗಿಯೂ ಹೇಳಿದ ಆಶಾವಾದವಿರಬಹುದೇ ಎನ್ನುವುದು ನನ್ನ ಆಶಾವಾದ. ಜೊತೆಗೆ ಎಚ್ಚರಿಕೆಯೂ ಸಹ. ಸ್ವದೇಶೀ ಬದುಕಿನ ವಿವೇಕ ಬೇಡವಾಗಿರುವ ಇವತ್ತಿನ ನಮ್ಮ ಇಂಗ್ಲೀಷಿನ ಸ್ಥಿತಿ ಮತ್ತು ಜೀವಂತವಾಗಬೇಕಾದರೆ ಬೇಕಾಗುವ ಕನ್ನಡದಂತಹ ಭಾಷೆಯ ಸಂಬಂಧಗಳ ಕುರಿತೂ ಸಹ ಈ ಪರಿಕಲ್ಪನೆಗಳನ್ನು ಒಗ್ಗಿಸಬಹುದಾಗಿದೆ. ಜೊತೆಗೆ, ನಿಮ್ಮ ಸಾಂಸ್ಕೃತಿಕ ದಣಿವು ಪರಿಕಲ್ಪನೆಯೂ ಸಹ ಅವನತಿ ಮತ್ತು ಮರುಹುಟ್ಟು ಪರಿಕಲ್ಪನೆಗಳ ಸಂಧಿ-ಬಿಂದುವೆಂದೆನ್ನಿಸುತ್ತದೆ.
ಚೀನದ ಉದಾಹರಣೆ ಓದುವಾಗ ಮತ್ತೆ ನಿಮ್ಮ ಓರ್ಟೆಗಾನ ಕುರಿತಾದ ಲೇಖನ ನೆನಪಿಗೆ ಬಂತು. ಖಾಸಗೀಕರಣ/ಜಾಗತೀಕರಣದ ಅನೇಕ ನಡೆಗಳು ಆಯ್ಕೆಯ ಸ್ವಾತಂತ್ರ್ಯವನ್ನು ಸಮರ್ಥಿಸುತ್ತಾ ನಡೆಯುತ್ತಿದ್ದು ಹಿನ್ನೆಲೆಯಲ್ಲಿ ಸ್ವಾತಂತ್ರ್ಯದ ಧಾರಣಶಕ್ತಿಯನ್ನೇ ಕೊಲ್ಲುವಂತಹ ನಡೆಗಳಾಗಿವೆಯೇ ಎನ್ನುವ ಕುರಿತು ನಾವು ಒಂದು ದೇಶವಾಗಿ ಆಳದಲ್ಲಿ ಆಲೋಚಿಸಿಲ್ಲವೆಂದೆನ್ನಿಸುತ್ತದೆ. ಕಣ್ಣಿಗೆ ಕಾಣುವ ಪ್ರಗತಿ ಸಂವೇದನಾಶೀಲ ಮನಸ್ಸು ಮಾತ್ರವೇ ಗ್ರಹಿಸಬಹುದಾದ ಆಂತರಿಕ ಸ್ವಾತಂತ್ರ್ಯವನ್ನು ನಿರ್ಲಕ್ಷಿಸುವಂತೆ ಮಾಡಬಹುದಾದ ಸಾಧ್ಯತೆಯನ್ನು ಚರ್ಚೆಯ ಮುನ್ನೆಲೆಗೆ ನಾವಿನ್ನೂ ತರಲಾಗಿಲ್ಲ.
ನಿಜದಲ್ಲಿ ಸಾಂಸ್ಕೃತಿಕ ದಣಿವಿನ ಸಾಧ್ಯತೆಯನ್ನು ನಂಬಿ ಕಾಣಲು, ತಮ್ಮ ಪಿಸುಮಾತುಗಳಲ್ಲಿ ಜನರು ಬದುಕುತ್ತಿರುವರೆನ್ನುವುದನ್ನು ನಂಬಲು ಒಂದು ಬಗೆಯ ಆತ್ಮವಿಶ್ವಾಸದ, ಧೈರ್ಯದ ಅಗತ್ಯವಿದೆಯೆಂದು ನನ್ನ ನಂಬಿಕೆ. ನನ್ನಂಥವರು ಬೌದ್ಧಿಕವಾಗಿ ಗ್ರಹಿಸುವ ಈ ಸಾಧ್ಯತೆ ಆಂತರ್ಯದ ಸಂವೇದನೆಯಾಗಬೇಕಾದರೆ ಈ ಆತ್ಮವಿಶ್ವಾಸ ಅದೆಷ್ಟು ಮುಖ್ಯ ಎಂದು ನೆನೆದಾಗ ಅಳುಕುಂಟಾಗುವುದೂ ಇದೆ.
Post new comment