ಅಡಿಗರು ಕಾಣಿಸುತ್ತಲೇ ಇರುವ 'ಇಂದು ನಮ್ಮೀ ನಾಡು'

ಬದುಕಿದ್ದರೆ ಅಡಿಗರಿಗೆ ಇಂದಿಗೆ ತೊಂಬತ್ತು ವರ್ಷವಾಗಿರುತ್ತ ಇತ್ತು. ಯಾವತ್ತೋ ಅವರು ಬರೆದ `ಇಂದು ನಮ್ಮೀ ನಾಡು' ಎನ್ನುವ ಮೂರು ಪದ್ಯಗಳು ಇವೆ. ಆ ಮೂರು ಪದ್ಯಗಳೂ ಇವತ್ತಿಗೂ ಪ್ರಸ್ತುತವೆಂದರೆ ಅವರ ಕಾವ್ಯದ ಹಿರಿಮೆಯನ್ನು ಹೇಳಿದಂತಾಗಬಾರದು; ಬದಲಾಗಿ, ಆ ಪದ್ಯಗಳು ಪ್ರಸ್ತುತವಾಗುವಂತೆ ನಾವಿನ್ನೂ ಬದುಕುತ್ತ ಇದ್ದೀವಿ ಅಲ್ಲವೆ ಎಂದು ನಾಚಿಕೆಯಾಗಬೇಕು.

ಮೊದಲನೆಯ ಪದ್ಯದಲ್ಲಿ ಇಂದು ನಮ್ಮೀ ನಾಡು ಜಾತ್ರೆ ಗಜಿಬಿಜಿ ಕಳೆದು ಪಡಖಾನೆಯಲಿ ಪಟ್ಟ ಜನರ ಪಾಡು ಆಗಿದೆ. ತೇರ ಹಿಡಿದೆಳೆದ ಕೈ, ಬಾಗಿ ಪೊಡಮಟ್ಟ  ಮೈ, ಭಕ್ತಿ ತುಳುಕಾಡಿದ್ದ ಅಂತರಂಗ ಈಗ ನರಕಕ್ಕೆ ಕೈಮರ. ಉತ್ಸವದ ಮೂರ್ತಿ ರಥವಿಳಿದು ದೇವಾಲಯದ ಮೂಲೆ ಕತ್ತಲಿನಲ್ಲಿ ಮುಗ್ಗುತಿಹುದು. ಇನ್ನು ಮೂಲ ವಿಗ್ರಹವೋ? ಅದು ಅಚಲವಾದ  ಕಲ್ಲು. ಅದರ ಘೋರ ನೈರಾಶ್ಯವನ್ನು ಹಲ್ಲಿ ಲೊಚಗುಟ್ಟಿ ಧ್ವನಿಸುತ್ತದೆ. ಜಾತ್ರೆ ಹೀಗೆ ಬರುತ್ತದೆ; ಹೋಗುತ್ತದೆ; ತೇರು ಅರಳುತ್ತದೆ; ಬೋಳಾಗುತ್ತದೆ. ಕವಿಗೆ ಇನ್ನೂ ಆಶಯಗಳು ಇವೆ. ಮೂಲವಿಗ್ರಹವೆ ಉತ್ಸವಮೂರ್ತಿಯಾದೀತೆ? ದಿನದಿನವು ಜಾತ್ರೆಯ ಉತ್ಸಾಹ ಹೊಮ್ಮೀತೆ?

ಎರಡನೆಯ ಪದ್ಯದಲ್ಲಿ ಇಂದು ನಮ್ಮೀ ನಾಡು ಹೊಸ ಹೊಸ ಸರಕುಗಳನ್ನು ಮಾರುತ್ತಲಿದೆ. ಇತ್ತೀಚಿನ ನೊಯಿಡಾ ಘಟನೆಯನ್ನು ನೆನಪು ಮಾಡುವಂತೆ ಮಾರುವುದು ಏನನ್ನು? `ಕೂಸುಗಳ ಕಂಕಾಲ, ಕಣ್ಣುಗುಡ್ಡೆಗಳ ಗಾಜು, ಹೃತ್ಪಿಂಡ ಚೆಂಡು, ಬೆನ್ನೆಲುಬಿನ ದಾಂಡು.'

ಮೂರನೆಯ ಪದ್ಯದಲ್ಲಿ ನಾವೀಗ ನಮ್ಮ ಭವ್ಯ ಸಮಾಜೋತ್ಸವಗಳಲ್ಲಿ, ರಾಜಕಾರಣಿಗಳು ನಡೆಸುವ ಯಜ್ಞಯಾಗಾದಿಗಳಲ್ಲಿ, ಮಠಾಧಿಪತಿಗಳು ಒಟ್ಟಾಗಿ ಕೊಡುವ ದಿವ್ಯ ಸಂದೇಶಗಳಲ್ಲಿ ಆಗುತ್ತ ಇರುವುದನ್ನೇ ವರ್ಣಿಸುತ್ತಾರೆ. `ಏ ಮಗು ಬೇರು ಸತ್ತೀ ಮರವ ಎತ್ತಿ ನಿಲ್ಲಿಸು. ಕೊಂಬೆರೆಂಬೆಗಳು ಅವೇ ಇರಲಿ. ಒಣಗಿದೆಲೆಯ ತಂದು ಕಾಫಿಕಾಯಿಸಿ ಕುಡಿದು ನಿನ್ನ ಕಂಠಕಳಲ ಬೇಗೆಯನ್ನು ನೀಗಿಕೊ. 

ಎತ್ತಿನಿಲ್ಲಿಸಿದ ಈ ಬೇರು ಸತ್ತ ಮರದ ಸುತ್ತ ಒಂದು ಕಟ್ಟೆಯನ್ನು ಕಟ್ಟು. ಅದರಲ್ಲಿ ನೀರನ್ನು ಹಾಕು. ಕೊಂಚ ವಿಷಾದವೆ? ಒಂದಿಷ್ಟು ಕಣ್ಣೀರನ್ನೂ ಹಾಕು. ಮರ ಚಿಗುರಲಿಲ್ಲವೆ? ಬಲ್ಬುಗಳನ್ನು ತಂದು ಜೋಡಿಸು. ಕಾಗದದ ಹೂ ಕುಚ್ಚುಗಳನ್ನು ತಂದು ಹಚ್ಚು.

ಈ ಮರದ ಬುಡದಲ್ಲಿ ನೆರಳಿಲ್ಲ; ಕೊಂಬೆ ಬರಿ ಪೊಳ್ಳು ಎಂದುಕೊಳ್ಳ ಬೇಡ. ಹೊನ್ನಿನ ಹೊದಿಕೆಯನ್ನು ಅದಕ್ಕೆ ಹಾಕು. ಅದರ ಮಿರುಗಿಗಿಂತ ಹೆಚ್ಚಿನ ನೆರಳು ಯಾಕೆ ಬೇಕು? ನೆನಪಿಡು. ಇದು ಸನಾತನ ವೃಕ್ಷ. ನೇಣು ಹಾಕಿಕೊಳ್ಳಲು ಈ ಸನಾತನ ವೃಕ್ಷದ ಕೊಂಬಿಗಿಂತ ಬೇರೆ ಆಧಾರ ಯಾಕೆ ಬೇಕು ನಿನಗೆ? ಈ ಮಹಾನ್‌ ಭವ್ಯ ಸನಾತನ ಸಂಸ್ಕೃತಿಯ ಈ ನಮ್ಮ ದಿವ್ಯ ತರು ನೆಲದ ಕೊಳೆ ನೀರನ್ನು ಒಲ್ಲದು; ಅದು ಕುಡಿದು ಬೆಳೆಯುವುದು ಸ್ವಪ್ನ ಲೋಕದ ಅಮೃತವನ್ನೆ. ನಮ್ಮ ವಿರಾಟ್‌ ಸಮ್ಮೇಳನಗಳಲ್ಲಿ ನಮ್ಮ ಮಠಾಧೀಶರೆಲ್ಲರೂ ಈ ಅಮೃತವನ್ನು ಸತತವಾಗಿ ಹರಿಸುತ್ತ ಇಲ್ಲವೆ?

ಇಲ್ಲಿಗೊಂದೂ ಹಕ್ಕಿ ಬರುವುದಿಲ್ಲವೆಂದು ಬೇಸರವೆ? ಬೇರುಸತ್ತ ಮರಕ್ಕೆ ಬರುವುದಿಲ್ಲವೆಂಬ ಹಠದ ಕೋಗಿಲೆಯನ್ನು ಕೊಲ್ಲು. ಅದರ ಒಳಗೆ ಹುಲ್ಲು ತುರುಕಿ ಕೊಂಬೆ ಮೇಲೆ ಸಾಲಾಗಿ ಇಡು. ಅಪರಂಜಿ ತಗಡನ್ನು ಮರದ ಹುಳುಕು ತೊಗಡೆಗೆ ಹೊದೆಸು. ಇದರ ಮೇಲೆ ಈ ಮರದ ಅಪೂರ್ವ ಕಥೆಯನ್ನು ಕೆತ್ತಿಸು. (ಇನ್ನು ಮುಂದೆ ನನ್ನ ಅಧಿಕಪ್ರಸಂಗವನ್ನು ಬೆರೆಸದೆ ಅಡಿಗರ ಸಾಲುಗಳನ್ನೆ ಹಾಗೆ ಬರೆಸಬೇಕೆಂಬ ಆಸೆಯುಳ್ಳ ಈ ಕಾಲದ ಭಾಗ್ಯಶಾಲೀ ಶೂರರಿಗೂ, ಅವರನ್ನು ಅನುಯಾಯಿಗಳಾಗಿ ಪಡೆದ ಮಠಾಧೀಶರಿಗೂ, ಯಜ್ಞಯಾಗಾದಿಗಳನ್ನು ಮಾಡಿಸಬಲ್ಲ ತಾಂತ್ರಿಕರಿಗೂ ಅನುಕೂಲವಾಗಲಿ ಎಂದು ಉದ್ಧರಿಸುತ್ತೇನೆ):

ಇಲ್ಲಿ ನೆರಳಿತ್ತ್ತು, ಹಸುರೆಲೆತಳಿರು ಹೂ ಹಣ್ಣು,
ಕೋಗಿಲೆಯ ಸರವಿತ್ತು, ಗಿಳಿಯನಿಲಯ!

ಇಲ್ಲಿ ಮಿಡಿದಿತ್ತು ಕೋದಂಡ, ಮೊಳಗಿತ್ತಿಲ್ಲಿ
ಪಾಂಚಜನ್ಯವು, ಚಕ್ರ ತಿರುಗುತಿತ್ತು;
ದಂಡವೊ, ಕಮಂಡಲವೊ, ದರ್ಭಾಸನವೊ, ಪರ್ಣ-
ಶಾಲೆಯೋ ಈ ಇಲ್ಲಿ ಸೊಗಸುತಿತ್ತು

ಮುಂದೆ ಅಡಿಗರು ಹೇಳುವುದನ್ನು ನನ್ನ ಮಾತು ಬೆರೆಸಿ ಹೇಳುತ್ತೇನೆ. `ಯುವಜನ ನಾಯಕ ಮಹಾಶಯರೇ, ಭಾರತ ಸಂಸ್ಕೃತಿಯ ಮುಕುಟಮಣಿಗಳೇ, ಮೋದಿ ಪ್ರಿಯರೇ, `ಇತ್ತು'ಗಳ ಧ್ವಜವನ್ನೆ ಹಿಡಿದು ಎತ್ತಿ ನಿಲ್ಲಿಸಿ.. ಅವು ಇನ್ನೂ ಇದೆಯೆ ಎಂದು ಕೇಳುವ ಸಂಕಟ ನಿಮಗೆ ಬೇಡ.'

ಮರ ಉಂಟು.
ಮರಕ್ಕೆ ಬಂಗಾರವೂ ಉಂಟು.
ಅಲ್ಲದೆಯೆ ಕಟ್ಟೆಯೂ ಉಂಟಲ್ಲವೆ?
ನೀರಿಕ್ಕು ಅದಕೆ.

***

 ದೇಶದ ಎಲ್ಲೆಲ್ಲೂ ಕಮ್ಯುನಿಸ್ಟರು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಸಹಮತದಿಂದಲೂ ಇವರೂ ಅವರೂ ಎಲ್ಲರೂ  ನಿರ್ಮಿಸಲಿರುವ ಸ್ಪೆಶಲ್‌ ಎಕನಾಮಿಕ್‌ zoneಗಳ ಕೇಂದ್ರಗಳಲ್ಲಿ ಭಾರತದ ಉದ್ದಗಲಕ್ಕೂ ಇಂತಹ ಮರಗಳನ್ನು ನೆಡಬಹುದು ಅಲ್ಲವೆ?

***

ಏನಾದರೂ ಮಾಡುತ್ತಿರುವ ಗೊಂದಲಪುರದ ಶೂರರ ಬಗ್ಗೆ (ಸಮೂಹಸನ್ನಿಯ ಒಟ್ಟಾರೆ ಶೂರರ ಬಗ್ಗೆ) ಮೇಲಿನ ಮಾತುಗಳಾದರೆ ಏನನ್ನೂ ಮಾಡದೆ ಸುಮ್ಮನಿರುವ ನಮ್ಮಂತಹ ಹಲವರ ಬಗ್ಗೆ ಅಡಿಗರ ಕೆಲವು ಸಾಲುಗಳನ್ನು ಉದ್ಧರಿಸುತ್ತೇನೆ:
`ಇಲ್ಲ ಇಲ್ಲಮಾಡಲಿಲ್ಲ ಇವನು'
ಇವನು ಒಂದು ಕೊರಡಿನ ಹಾಗೆ ಬಿದ್ದಿರುತ್ತಾನೆ. ತನ್ನ ಪಾಡಿಗೆ ತಾನು. ಇದ್ದಕ್ಕಿದ್ದಂತೆ ಎಲ್ಲಿಂದಲೋ ಒಂದು ಕೆಂಡದ ಮಳೆ ಹುಯ್ಯುತ್ತದೆ. ಆಗ `ಕೊರಡಿನ ತುದಿ ಹೊತ್ತಿತು/ ಬೆಳಕಿನಗುಡಿ ಎತ್ತಿತು'. ಆದರೆ ಇದು ಒಂದೆ ನಿಮಿಷ- ಅಷ್ಟೆ! ಬೆಂಕಿ ಕೂಡ ತಿನ್ನದಂಥ ಬರಡು ಕೊರಡು ಅದು. `ಉರಿ ಹತ್ತಿಯು ಉರಿಯಲಿಲ್ಲ/ ಬೆಳಕು ಬಂದೂ ಬೆಳಗಲಿಲ್ಲ/ ಇಲ್ಲ ಇಲ್ಲ ಏನೊಂದನೂ ಮಾಡಲಿಲ್ಲ ಇವನು.'

 

ಕಗ್ಗವಿಯಲಿ ಕುಳಿತು ರವಿಯ
ಕನಸು ಕಾಣುತಿದ್ದನು;
ಬಾಳಬೇರು ಅಲುಗುತಿರಲು
ಹೂವನರಸುತಿದ್ದನು;
ಲಗ್ಗೆ ಹತ್ತಿ ಉರಿಯುತಿರಲು
ಮಗ್ಗಿ ಹೇಳುತಿದ್ದನು

ಹುಟ್ಟಿದುದಕೆ ಹುಟ್ಟಿಸಿದನು; ಹೊಟ್ಟೆಗಷ್ಟು ಗಿಟ್ಟಿಸಿದನು; ಹಣಕೆ ಕುಣಿಯ ತೋಡಿ ಅಲ್ಲಿ ತನ್ನ ತನವ ಮುಟ್ಟಿಸಿದನು.

`ಇಲ್ಲ ಇಲ್ಲ ಏನೊಂದನೂ ಮಾಡಲಿಲ್ಲ ಇವನು'

***

ಈ ಬಗೆಯ ದುರವಸ್ಥೆಯ ಆತಂಕಕಾರಿಯಾದ ನಮ್ಮ ಕಾಲ ಬದಲಾಗಬೇಕು ಎಂಬ ಆರ್ತತೆಯ ಕವಿ ಅಡಿಗರು. ಆದರೆ ನಾವು ಹಾಗೇ ಇದ್ದೇವೆ ಎಂಬ ದುಃಖವನ್ನಾದರೂ ನಮಗೆ ಇಂದಿಗೂ ಮುಟ್ಟಿಸುವ ತೀವ್ರ ಸಂವೇದನೆಯ ಮನಸ್ಸಿನ ನಮ್ಮ ಪೂರ್ವ ಸೂರಿಗಳಲ್ಲಿ ಒಬ್ಬರಾದ ಗೋಪಾಲಕೃಷ್ಣ ಅಡಿಗರಿಗೆ ನಮಸ್ಕಾರ.

ಮತ್ತೆ ಅತಿಶಯದಲ್ಲಿ ಮಂಡಿಸುವುದಾದರೆ, ಬೇರು ಸತ್ತ ಮರವನ್ನೆತ್ತಿ ಹಿಡಿದು ಬಲ್ಬುಗಳನ್ನು ಜೋಡಿಸುವ ಈ ಪ್ರಕ್ರಿಯೆ ಈಗ ತನ್ನ ಮುಂದಣ ಸ್ಥಿತಿಯನ್ನು ಮುಟ್ಟಿದೆಯೆನ್ನಿಸುತ್ತದೆ. ಒಂದು ಕಡೆಯಿಂದ ಬೇರುಸತ್ತ ಮರಗಳನ್ನು ಹಿಡಿದೆತ್ತಿ ನಿಲ್ಲಿಸಲು ಅನುವಾಗಿರುವ ಪಡೆಯಿದೆ, ಕುದುರೆಗೆ ಜೀನು ಹಾಕಿದ ಹಾಗೆ ತನ್ನ ಕೆಲಸವನ್ನು ಮುಂದುವರೆಸುತ್ತಿದ್ದಾನೆ. ಮತ್ತೊಂದು ಕಡೆಯಿಂದ ಜೀವಂತ ಮರವಾಗಲಿ, ಸತ್ತ ಮರವಾಗಲಿ ತಮಗೆ ಅನುಕೂಲವೆಂದಾದರೆ ಬಲ್ಬುಗಳನ್ನು ಜೋಡಿಸಿಯೇ ತೀರುತ್ತೇವೆ, ಮಾರುತ್ತೇವೆ ಎನ್ನುವ ನಿಶ್ಚಯವಿರುವ ಪಡೆ ಮುಂದುವರೆದಿದೆ. ಈ ಬಲ್ಬಿನ ಪ್ರಖರತೆಯಲ್ಲಿ ಜೀವಂತವಿರುವ ಮರಗಳೂ ಬೇಗನೆ ಸಾಯುತ್ತಿವೆ. ಇವೆರಡರ ಮಿಲನಕ್ರಿಯೆಯಲ್ಲಿ ಹುಟ್ಟುವ ಮನುಷ್ಯ ಇವೆರಡನ್ನು ಹುಟ್ಟುಕುರುಡಿನ, ಕುರುಡಿನ ಅರಿವಿರದ ತೀವ್ರತೆಯಲ್ಲಿ ಮುಂದುವರೆಸುತ್ತಿದ್ದಾನೆ. ಮತ್ತೊಂದು ಕಡೆಯಲ್ಲಿ ಜನರಿಗೆ ಬಲ್ಬುಗಳ ಸಹಾಯವಿಲ್ಲದೆ ಯಾವ ಮರವನ್ನೂ ಅನುಭವಿಸುವುದು ಸಾಧ್ಯವಾಗುವುತ್ತಿಲ್ಲ. ಮರದ ನೆರಳಿನ ತಂಪಿನಲ್ಲಿ ವಿಶ್ರಮಿಸಬಹುದು, ನೆಮ್ಮದಿಯ ನಿದ್ರೆ ಅನುಭವಿಸಬಹುದು ಎನ್ನುವುದು ಮರೆತಿದ್ದಾನೆ. ಸುಂದರವಾದ ಬಲ್ಬಿನ ಕೆಳಗೆ ವಿಷಪೂರಿತ ಹಣ್ಣಿದ್ದರ್ರೂ ತಿನ್ನುತ್ತಿದ್ದಾನೆ. ಬಲ್ಬಿನ ಸಹಾಯವಿಲ್ಲದೆ ಪುಷ್ಟಿಕರ, ರುಚಿಕರ ಹಣ್ಣನ್ನು ಕಾಣದ ಕುರುಡಿದೆ. ಒಟ್ಟು ಪ್ರಕ್ರಿಯೆ ಆದಷ್ಟೂ ಮರಗಳನ್ನು ಸಾಯಿಸಿ, ಆದಷ್ಟೂ ಬಲ್ಬುಗಳನ್ನು ಉತ್ಪಾದಿಸಿ, ಜನರು ಆದಷ್ಟೂ ಜೀವಂತ ಮರಗಳನ್ನು ತಮ್ಮ ಸ್ಮೃತಿಯಿಂದಲೇ ಕಳೆದುಕೊಳ್ಳುವ ಹಾಗೆ ಮಾಡುವ ದಾರಿಯಲ್ಲಿ ನಾಗಾಲೋಟದಿಂದ ಮುನ್ನಡೆದಿದೆ.

ಇಂತಿ ಶಿವು

Post new comment

The content of this field is kept private and will not be shown publicly.