ನಾನು ಈಗಾಗಲೇ ಹೇಳಿರುವಂತೆ, ಪತ್ರಿಕೆಗಳು ತಮ್ಮ ಭಾಷಣವನ್ನು ಸಾಕಷ್ಟು ತಪ್ಪಾಗಿ ಧ್ವನಿಸಿವೆ. ಪ್ರಜಾವಾಣಿ ಪರವಾಗಿಲ್ಲ ಎನ್ನುವ ರೀತಿ ಪ್ರಕಟಿಸಿದ್ದರೆ, ವಿಜಯಕಾರ್ನಾಟಕದ ಅಪಾಯಕಾರೀ ಧೋರಣೆ ಮೇಲ್ನೋಟಕ್ಕೇ ಗೊತ್ತಾಗುತ್ತದೆ. ನಿಮ್ಮ ಭಾಷಣವನ್ನು ಕೇಳಿ ನನಗೆ ಅದೆಷ್ಟೋ ನೆಮ್ಮದಿಯಾದರೂ, ನನ್ನೀ ಬರಹ ನನ್ನ ಭಿನ್ನಾಭಿಪ್ರಾಯ ಮತ್ತು ವಿಷಾದಗಳನ್ನೇ ಹೆಚ್ಚು ಅರುಹುತ್ತಿವೆ. ಯಾವ ವಿಷಯದಲ್ಲಿ ನನಗೆ ನಿಮ್ಮೊಡನೆ ಸಹಮತವಿದೆ ಎನ್ನುವುದನ್ನು ನಮ್ಮ ಹಿಂದಣ ಚರ್ಚೆಗಳಲ್ಲಿ ಈಗಾಗಲೇ ಬಂದಿರುವುದರಿಂದ ಅದನ್ನು ಮತ್ತೆ ರಿಪೀಟ್ ಮಾಡಲು ಹೋಗಿಲ್ಲ.
ಭೈರಪ್ಪ, ಆವರಣ ಕುರಿತಾಗಿ
ಆವರಣ ಕಾದಂಬರಿ ಮತ್ತು ಭೈರಪ್ಪನವರ ಇನ್ನಿತರ ಕಾದಂಬರಿಗಳಿಗೆ ಕೃತಿನಿಷ್ಠ ವಿಮರ್ಶೆ ಆಗುತ್ತಿಲ್ಲ. ಭೈರಪ್ಪನವರ ಕಾದಂಬರಿಗಳನ್ನು ಅವರ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಮತ್ತು ಅವರ ಸಾರ್ವಜನಿಕ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಓದುವುದೇ ಅಭ್ಯಾಸವಾಗಿರುವ ಒಂದು ಸಂಪ್ರದಾಯ ಕನ್ನಡದಲ್ಲಿ ಬೆಳೆದಿದೆ. ಹೀಗಾಗಬಾರದು ಎಂದಲ್ಲ. ಆವರಣದ ಮುನ್ನುಡಿಯೂ, ಕಾರ್ನಾಡರಿಗೆ ಅವರು ಬರೆದ ಪತ್ರವೂ ಸೇರಿದಂತೆ ಭೈರಪ್ಪನವರೇ ತಮ್ಮ ಕೃತಿಗಳಿಗೆ ಅವರ ವ್ಯಕ್ತಿತ್ವದಿಂದ ಪ್ರವೇಶ ದೊರಕಿಸುವ ಮಾರ್ಗ ಕಲ್ಪಿಸಿದ್ದಾರೆ. ಇವತ್ತಿನ ರಾಜಕೀಯ ಮತ್ತು ಸಾಂಸ್ಕೃತಿಕ ಮತ್ತು ರಾಜಕೀಯ ವಾತಾವರಣದ ಹಿನ್ನೆಲೆಯಲ್ಲಿಯೂ, ಕೃತಿಗಳನ್ನು ರೂಪಿಸಿರಬಹುದಾದ ಭೈರಪ್ಪನವರ ಆಲೋಚನಾ ಕ್ರಮಗಳ ಹಿನ್ನೆಲೆಯಲ್ಲಿಯೂ ಅವರ ಕೃತಿಗಳನ್ನು ವಿಮರ್ಶಿಸುವುದು ತಪ್ಪು ಎಂದು ನಾನು ಹೇಳಲಾರೆ. ಆದರೆ ಕೃತಿನಿಷ್ಠ ವಿಮರ್ಶೆಯಲ್ಲಿ ದಕ್ಕುವುದೇನು ಎನ್ನುವುದನ್ನು ಅರಿಯುವ ಪ್ರಯತ್ನವೇ ಮಾಡದಿರುವುದು ಎಂದರೆ ಅದು ಸಾಹಿತ್ಯಕವಾಗಿಯಲ್ಲದೇ, ಸಾಂಸ್ಕೃತಿಕವಾಗಿಯೂ ಒಳ್ಳೆಯ ಸ್ಥಿತಿ ಅಲ್ಲ. ನನಗೆ ಕೆಲವೊಮ್ಮೆ ಅನ್ನಿಸುವುದು-ಭೈರಪ್ಪನವರು ತಮ್ಮ ಅಭಿಪ್ರಾಯಗಳನ್ನು ಮೀರುವಂತೆ ಬರೆಯುವುದಿಲ್ಲವೋ ಅಥವಾ ಭೈರಪ್ಪನವರ ವ್ಯಕ್ತಿತ್ವ-ಅಭಿಪ್ರಾಯಗಳನ್ನು ಬಲ್ಲ ಜನರು ಅವರ ವ್ಯಕ್ತಿತ್ವ-ಅಭಿಪ್ರಾಯಗಳನ್ನು ಮೀರಿ ಅವರ ಕಾದಂಬರಿಗಳನ್ನು ಓದುವುದಿಲ್ಲವೋ ಎಂದು. ಇದನ್ನು ಮೀರಬೇಕಿದೆ. ಭೈರಪ್ಪನವರನ್ನು ಒಪ್ಪದವರದ್ದು ಈ ತೆರವಾದರೆ, ಅವರನ್ನು ಒಪ್ಪುವವರದ್ದು ಇದಕ್ಕೆ ತದ್ವಿರುದ್ಧವಾದ ಆರಾಧಕ ಮನೋಭಾವವಾವಿದೆ. ನಷ್ಟವಾಗುತ್ತಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ.
ಇವತ್ತಿಗೆ ಬರುವುದಾದರೆ, ತಾವೇ ತಮ್ಮ ಭಾಷಣದ ಮೊದಲಲ್ಲಿ ಹೇಳಿರುವಂತೆ 'ಆವರಣ'-ದ ಕುರಿತು ಒಂದು ಸಾರ್ವಜನಿಕ ಸಭೆ ನಡೆಯುವುದು ಅನಗತ್ಯವಾಗಿತ್ತು. 'ಆವರಣ ಅನಾವರಣ' ಪುಸ್ತಕವಂತೂ ಅವಸರದ್ದು. ಏಕಪಕ್ಷೀಯವಾದುದು ಮತ್ತು ಪೂರ್ವಾಗ್ರಹದಿಂದ ಕೂಡಿದುದು. ಅಂತಹ ಸಭೆಯೊಂದು ನಡೆದದ್ದೇ ಆದರೆ ತಮ್ಮ ಭಾಷಣವಾದರೂ 'ಆವರಣ' ಕಾದಂಬರಿಗೆ ಸೀಮಿತವಾಗಿದ್ದರೆ ಚೆನ್ನಿತ್ತು. ಏಕೆಂದರೆ, ಕಾದಂಬರಿಯ ಆಕೃತಿಯಲ್ಲೇ ಟೀಕಿಸುವುದಕ್ಕೆ ಬೇಕಾದಷ್ಟು ಅವಕಾಶವಿದೆ. ಅದರೊಂದಿಗೆ ಕೃತಿಕಾರನ ವಿಷಯ, ಕೃತಿಕಾರನ ಟೀಕೆ, ಯಾವುದೇ ವೈಯಕ್ತಿಕ ವಿಷಯ, ಆವತ್ತಿನ ಭಾಷಣದಲ್ಲಿ ಅವಶ್ಯವಿರಲಿಲ್ಲ ಎನ್ನುವುದು ನನ್ನ ಅನುಭವದ ಮಿತಿಯಲ್ಲಿನ ತಿಳುವಳಿಕೆ. ಕೃತಿನಿಷ್ಠವಾದ, ಅಕ್ಯಾಡಮಿಕ್-ಆದ ಟೀಕೆ ಮಾತ್ರ ಆವರಣದ ಅಪಾಯವನ್ನು ಮೀರುವ ದಾರಿ. ಮಿಕ್ಕ ಎಲ್ಲ ರೀತಿಯ ಟೀಕೆಗಳು ಸಾರ್ವಜನಿಕವಾಗಿ ಅಪಾರ್ಥಕ್ಕೀಡಾಗುವಂಥದ್ದೇ. ಒಬ್ಬ ಮ್ಯಾನೇಜರನಾದ ನನ್ನ ಸಂವೇದನೆಯಲ್ಲೇ ಈ ಅಪಾಯವನ್ನು ಗುರುತಿಸುವ ಕ್ರಮ ಸದಾ ಜಾಗ್ರತವಾಗಿರುತ್ತದೆ.
ಭೈರಪ್ಪನವರು ಮಹತ್ವದ ಕಾದಂಬರಿಕಾರರಲ್ಲ ಎಂದು ಹೇಳುವುದಕ್ಕೆ ನಿಮಗೆ ಅಭಿಪ್ರಾಯ ಸ್ವಾತಂತ್ರ್ಯವಿದೆ (ಅದು ನನಗೆ ಒಪ್ಪಿಗೆಲ್ಲದಿದ್ದರೂ). ಆದರೆ, ಅವರು ಜನರ ಮೆಚ್ಚುಗೆಗೆ ಬರುವ ಹಾಗೇ ಕಾದಂಬರಿಗಳನ್ನು ಬರೆಯುವುದು ಎನ್ನುವ ಮಾತು ಸಾರ್ವಜನಿಕವಾಗಿ ಮಾತನಾಡಬಾರದ ವಿಷಯ. ಇದು ಕೇವಲ ಭೈರಪ್ಪನವರ ಅಂತರಾತ್ಮಕ್ಕೆ ಗೊತ್ತಿರಬಹುದಾದ್ದು. ಒಬ್ಬ ಸೃಜನಶೀಲ, ಸಂವೇದನಾಶೀಲ ಸಾಹಿತಿಯಾಗಿ ಮತ್ತು ಹಿಂದೆ ಒಡನಾಟವಿದ್ದವರಾಗಿ ನಿಮಗೆ ಈ ಅಭಿಪ್ರಾಯ ಮೂಡಿರುವುದಕ್ಕೆ ಸಾಧ್ಯವಿದೆ. ಆದರೆ ಅದು ಸಾರ್ವಜನಿಕ ಸಭೆಯಲ್ಲಿ ಹೇಳುವಂತಹ ವಿಷಯವೇ? ಇದು ಚರ್ಚೆಯನ್ನು ವಿಚಾರದಿಂದ ವ್ಯಕ್ತಿಗಳ ಕಡೆಗೆ ಇಳಿಸಿಬಿಟ್ಟಿದೆ. ನಿಮಗೆ ಪೂರ್ವಾಗ್ರಹವಿಲ್ಲದಿದ್ದರೂ, ಸಾರ್ವಜನಿಕರಿಗೆ ಹಾಗೆ ಅನ್ನಿಸುವ ಹಾಗಾಗಿಬಿಟ್ಟಿದೆ.
ನನಗಂತೂ ಅವರ ಅನೇಕ ಕೃತಿಗಳಲ್ಲಿ ಬಹಳ ಮೆಚ್ಚಬಹುದಾದ್ದು ಕಂಡಿದೆ. ಮಹತ್ವದ್ದೂ ಎಂದೆನ್ನಿಸಿದೆ. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ ಕಾದಂಬರಿಗಳಲ್ಲಿ ನನಗೆ ಕಂಡಿರುವ ಆಕೃತಿಯೇ ಬೇರೆ. ಅವುಗಳಲ್ಲಿ, ಹಿಂದೂ ಸಂಸ್ಕೃತಿಯನ್ನು ಪ್ರಶ್ನಿಸಿದ್ದಾರೋ ಇಲ್ಲವೋ ಹೇಳಲಾರೆ. ಆದರೆ ಆಧುನಿಕತೆಯನ್ನು ಒಳಗೊಳ್ಳುತ್ತಾ ಪಯಣಿಸುತ್ತಿರುವ ಭಾರತದ ಒಂದು ವಿಶಿಷ್ಟ ಆಕೃತಿ ಈ ಕಾದಂಬರಿಗಳಲ್ಲಿ ಮೂಡುತ್ತದೆ (ಅವರ ವೈಯಕ್ತಿಕ ಅಭಿಪ್ರಾಯಗಳನ್ನು ಮೀರಿ). ಅವರೊಬ್ಬ ಡಿಬೇಟರ್ ಎಂದಿದ್ದೀರಿ. ಅವರಲ್ಲಿ ಕಾವ್ಯ ಎನ್ನುವುದು ಇಲ್ಲ ಎಂದಿದ್ದೀರಿ. ಅವರ ಶೈಲಿಯಲ್ಲಿ ಅವರು ಸಾಧನೆಯೇನು ಮತ್ತು ಕಾಣಿಕೆಯೇನು ಎನ್ನುವ ಪೂರ್ತಿ ವಿಮರ್ಶೆಲ್ಲದೇ ಈ ಮಾತನ್ನು ಅನುಮೋದಿಸುವುದು ಕಷ್ಟವೆನ್ನಿಸುತ್ತದೆ. ಅವರೊಬ್ಬ ಡಿಬೇಟರ್-ಆಗೇ ಇರಲಿ. ಆದರೆ ಆ ಮಾರ್ಗದ ಅವರ ಕಾದಂಬರಿಗಳ ಸಾಧನೆಗೆಳು ಮತ್ತು ಮಿತಿಗಳ ಬಗ್ಗೆ ವಿಸ್ತೃತವಾಗಿಯೇ ಚರ್ಚೆಯಾಗಬೇಕು ಅನ್ನಿಸುತ್ತದೆ. ಈಗೆನಾಗಿದೆಯೆಂದರೆ ಅಪ್ಪಟ ವಿಮರ್ಶಕರು ಭೈರಪ್ಪನವರ ಸಾಹಿತ್ಯವನ್ನು ಕಡೆಗಣಿಸಿರುವುದರಿಂದ, ಕಳಪೆ ವಿಮರ್ಶಕರು ಅವರ ಸಾಹಿತ್ಯವನ್ನು ಅಕಾರಣವಾಗಿ ಉಚ್ಚಮಟ್ಟದ್ದೆನ್ನುವಂತೆ ಬಿಂಬಿಸುತ್ತಿದ್ದಾರೆ. ಆದ್ದರಿಂದ ಇಲ್ಲಿ ಡಬ್ಬಲ್ ನಷ್ಟವಿದೆ. ವಂಶವೃಕ್ಷದ ಬಗ್ಗೆ ನನಗೆ ಅನ್ನಿಸಿದ್ದನ್ನು ನನ್ನ ಬ್ಲಾಗಿನಲ್ಲಿ ಒಂದಷ್ಟು ದಿನಗಳ ನಂತರ ಬರೆಯೋಣವೆಂದುಕೊಂಡಿದ್ದೇನೆ.
ನನ್ನ ಗ್ರಹಿಕೆಯಲ್ಲಿ, ಭೈರಪ್ಪನವರು ತೀವ್ರವಾದಿ ನಿಜ. ಕೋಮುವಾದಿ ಎನ್ನುವುದಕ್ಕೆ ನನಗೆ ಅರ್ಹತೆಲ್ಲ. ಆದರೆ ಅಸ್ಥಿರಭಾವ ಕಾಡಿರುವಂತಹ ಹಿಂದು ಎನ್ನುವುದು ನಿಜ. ಅವರಿಗೆ ಆಂಶಿಕ ಸತ್ಯಗಳು ಕಾಣುತ್ತಿವೆ. ಸೀಮಿತವಾದ ಒಳನೋಟದಿಂದ ಅವುಗಳ ಅಪಾಯಕಾರಿ ಹೆಣಿಗೆಯಲ್ಲಿ ತೊಡಗಿದ್ದಾರೆ. ಇದೊಂದು ದುರಂತ. ಕಮ್ಯುನಿಷ್ಟರ ತಪ್ಪು ಗ್ರಹಿಕೆಗಳನ್ನು, ನಮ್ಮ ಎಡಪಂಥೀಯರೆಂದೆನ್ನಿಸಿಕೊಂಡಿರುವವರ ವಕ್ರಗಳನ್ನು ತೀವ್ರವಾಗಿ ಪರಿಗಣಿಸಿಬಿಟ್ಟಿರುವವರು. ಇದೇ ಕಳಕಳಿಂದ ಕಾದಂಬರಿಗಳನ್ನು ಬರೆದಿರಲೂಬಹುದು. ಆದರೆ ಅವರ ಹಲವಾರು ಕೃತಿಗಳಾದರೂ ಇವುಗಳನ್ನು ಮೀರಿದ ಸಾಹಿತ್ಯಕೃತಿಗಳಾಗಿವೆ.
ನಿಮ್ಮ ಭಾಷಣದ ಕಡೆಯಲ್ಲಿ ನೀವು ಕಾದಂಬರಿಯಲ್ಲಿನ ಒಂದು ದೃಶ್ಯದಲ್ಲಿ ಹಾಸಿಗೆಯಲ್ಲಿ ನಡೆಯುವ ಸಂಭಾಷಣೆಯ ಕುರಿತು ಒಂದೆರಡು ಮಾತುಗಳನ್ನಾಡಿದ್ದೀರಿ. ಕಿರಿಯವನಾದ ನನ್ನನ್ನು ಮತ್ತೆ ಕ್ಷಮಿಸಬೇಕು. ಆ ಮಾತುಗಳು, ಮಾತುಗಳನ್ನಾಡುತ್ತಿರುವಾಗಿನ ನಿಮ್ಮ ಧ್ವನಿ ನನಗೆ ಅಷ್ಟಾಗಿ ರುಚಿಸಲಿಲ್ಲ. ಅದನ್ನು ಹೇಗಾದರೂ ಮಾಡಿ - ತಮ್ಮ ಟೀಕೆಯ ರೀತಿಯೇ ಸರಿ - ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಆದರೆ ಸಾಧ್ಯವಾಗುತ್ತಿಲ್ಲ, ಸರ್. ಅಲ್ಲಿ ನನಗೆ ಗೊತ್ತಿರುವ ಸಂವೇದನಾಶೀಲ ಡಾ|| ಅನಂತಮೂರ್ತಿಗಳನ್ನು ಕಾಣುವುದಕ್ಕೆ ಸಾಧ್ಯವಾಗುತ್ತಿಲ್ಲ. ಅದಲ್ಲದೆ, ನೀವು ಲಘುವಾಗಿ ಪರಿಗಣಿಸಿಬಿಟ್ಟಿರುವ ಆ ದೃಶ್ಯ ನನಗೆ ಮಹತ್ವದ ರೂಪಕವಾಗುವ ಸಾಧ್ಯತೆರುವಂತೆ ಕಾಣುತ್ತಿದೆ. ಆ ದೃಶ್ಯ ಏನನ್ನು ಹೇಳುತ್ತಿರಬಹುದು? ಹಿಂದೂ ಹೆಂಡತಿ ಮತ್ತು ಮುಸ್ಲಿಂ ಗಂಡ ಮದುವೆಯಾಗಿ ಹತ್ತಾರು ವರ್ಷ ಸಂಸಾರ ಮಾಡಿದರೂ ಕಡೆಗೆ ಅವರ ಹಾಸಿಗೆಯಲ್ಲೂ ಸಹ ಇತಿಹಾಸ, ಧರ್ಮಗಳು ನುಸುಳಿ ಸಂಬಂಧವನ್ನು ಕ್ಷುದ್ರಗೊಳಿಸಿಬಿಡಬಲ್ಲ, ನಾಶಮಾಡುವ ಸಾಧ್ಯತೆದೆ - ಎಂದು ಹೇಳುತ್ತಿದೆಯೇ? ಹಾಗಾಗುವತ್ತ ನಾವು ಸಾಗುತ್ತಿದ್ದೇವೆಯೇ? ಭೈರಪ್ಪನವರು ಇದನ್ನು ಅನುಮೋದಿಸುತ್ತಾರೋ ಇಲ್ಲವೋ ಅದು ಬೇರೆಯ ಮಾತು. ಆದರೆ ವಾತಾವರಣ ಹಾಗಾಗುತ್ತಿರಬಹುದು. ದೃಷ್ಯವೊಂದು ವಾಸ್ತವದ ಪ್ರತಿನಿಧಿಯಾಗಿರದೇ, ವಾಸ್ತವದ ಸಾಧ್ಯತೆಯಾಗಿದ್ದು ಮತ್ತೇನನ್ನೋ ಪ್ರತಿನಿಧಿಸುವುದಾದರೆ ಅದೊಂದು ಪರಿಗಣಿಸಬೇಕಾದ ರೂಪಕಸಾಧ್ಯತೆ ಎಂದು ನನ್ನ ತಿಳುವಳಿಕೆ.
ನಾರಾಯಣಮೂರ್ತಿ ಮತ್ತು ಭೈರಪ್ಪ ರೂಪಕ
ಭಾಷಣದಲ್ಲಿ ನಾರಾಯಣಮೂರ್ತಿಯವರನ್ನೂ ಹೆಸರಿಸಿದ್ದೀರಿ. ನಾರಾಯಣಮೂರ್ತಿಗಳು ಇವತ್ತು ಹೇಗೇ ಆಡುತ್ತಿರಲಿ. ಆದರೆ, ಭಾರತದ ಕೈಗಾರಿಕಾಪ್ರಪಂಚದಲ್ಲಿ ಕೆಲ ಒಳ್ಳೆಯ ಬದಲಾವಣೆಗಳು ಅವರಿಂದಲೇ ಆದದ್ದು (ಅದು ಕನ್ನಡ ಸಂಸ್ಕೃತಿಯ ಪ್ರಭಾವ ಎಂದೇ ನಾನು ಪರಿಗಣಿಸಿದ್ದೇನೆ). ಈವರೆಗೆ ನಾರಾಯಣಮೂರ್ತಿಗಳ ಬಗ್ಗೆ ತಾವು ಒಂದು ಮೆಚ್ಚುಗೆಯ ಮಾತನಾಡಿದ್ದು ಸಾರ್ವಜನಿಕವಾಗಿ ವರದಿಯಾದಂತೆ ಕಾಣೆ. ಹಾಗಿರುವಾಗ ಟೀಕೆ ಎಂದೆನ್ನಿಸುವಂತಹ ಉಲ್ಲೇಖಗಳು ಮಾತ್ರ ಬರತೊಡಗಿದರೆ ಅವರ ಅಭಿಮಾನಿಗಳಿಗೂ, ಸಾರ್ವಜನಿಕರಿಗೂ ಇದನ್ನು ಪಾಸಿಟಿವ್-ಆಗಿ ಸ್ವೀಕರಿಸುವುದು ಕಷ್ಟವಾಗುತ್ತದೆ. ಸಹಜವಾಗೇ ಕೆರಳುತ್ತಾರೆ. ಗುಜರಾತಿನ ಪ್ರಕ್ರಿಯೆ ಒಂದು ರೂಪಕ ನಿಜ. ಮಿಕ್ಕೆಡೆ ಅದರ ಸಾಧ್ಯತೆಯೂ ನಿಜ. ಆದರೆ ಕರ್ನಾಟಕದಲ್ಲಿ ಗುಜರಾತನ್ನು ಸ್ಟೃಸುವ ಪ್ರಯತ್ನ ಎನ್ನುವುದು ಒಂದು ಅತಿರೇಕದ ಗ್ರಹಿಕೆ ಎಂದು ವಿನಯದಿಂದ ಹೇಳಬಯಸುತ್ತೇನೆ. ಅದು ನಿಜವೋ ಸುಳ್ಳೊ ಹೇಳುವುದು ಕಷ್ಟ. ಕೈಗಾರಿಕೋದ್ಯಮಿಗಳಿಗೆ ದಕ್ಷತೆಯ ಬಗ್ಗೆ ಆಕರ್ಷಣೆರುತ್ತದೆ. ಮಿಕ್ಕೆಲ್ಲಕ್ಕೂ ಕುರುಡಾಗುವುದು ಸಾಧ್ಯವಿದೆ. ಆದರೆ ಅತಿರೇಕಗಳನ್ನು ಅನುಮೋದಿಸುತ್ತಾರೆ ಎನ್ನುವ ಅರ್ಥದ ಮಾತುಗಳು ಅಸಮಂಜಸ. ಅದರಲ್ಲೂ ನಾರಾಯಣಮೂರ್ತಿಗಳು ಏನನ್ನೂ ಹೇಳಿಯೇ ಇಲ್ಲದಿರುವ ಸಂದರ್ಭದಲ್ಲಿ ಅವರ ಹೆಸರೆತ್ತುವುದು ಒಂದು ಖಾಸಗಿ ಸಭೆಯಲ್ಲಿ ಸರಿ, ಸಾರ್ವಜನಿಕ ಸಭೆಯಲ್ಲಲ್ಲವೆಂದೆನ್ನಿಸುತ್ತದೆ. ರೂಪಕವೆನ್ನುವುದು ಸಾಮುದಾಕ ಸತ್ಯ. ಅದನ್ನು ನಿರ್ಮಿಸುವ ದೇಶ-ಕಾಲದ ವಾಸ್ತವದ ದ್ರವ್ಯಗಳ ವಿಷಯದಲ್ಲಿ ಅದು ಸಾಧ್ಯತೆ ಮಾತ್ರ. ಅದು ಸತ್ಯವೋ ಅರೆಸತ್ಯವೋ ಸುಳ್ಳೋ ಆಗಿರಬಹುದು. ಹೀಗಿದ್ದರೂ ರೂಪಕ ಮಾತ್ರ ಸತ್ಯವಾಗಿರಲೂಬಹುದು. ಹೀಗಿರುವಾಗ ನಾರಾಯಣಮೂರ್ತಿ-ಭೈರಪ್ಪ ರೂಪಕವು ಸಾಹಿತ್ಯಕವಾಗಿ ಮಾತ್ರ (ಮತ್ತಿನ್ಯಾವ ರೂಪದಲ್ಲಾದರೂ) ಬರುವುದು ಸರಿಯೇ. ಹಾಗಲ್ಲದೇ, ಸಾರ್ವಜನಿಕ ಸಭೆಯಲ್ಲಿ ಇಂತಹ ರೂಪಕದ ಉಲ್ಲೇಖವಾದರೆ, ರೂಪಕವನ್ನು ನಿರ್ಮಿಸುವ ವಾಸ್ತವದ ದ್ರವ್ಯಗಳಿಗೆ ಅನ್ಯಾಯ ಮಾಡಿದ ಹಾಗಾಗುವ ಸಾಧ್ಯತೆ ಇದೆ. ಅದರಲ್ಲೂ, ನಾರಾಯಣಾಮೂರ್ತಿಗಳ ನಿಜವಾದ ಅಭಿಪ್ರಾಯ ಸಾರ್ವಜನಿಕವಾಗಿ ಗೊತ್ತಿಲ್ಲದಿರುವಾಗ. ರೂಪಕವು ವಾಸ್ತವದ ಮೇಲೆ ಬೀರುವ ಪರಿಣಾಮದ ಹೊಣೆ ರೂಪಕವನ್ನು ಗ್ರಹಿಸುವ ಅಥವಾ ಸ್ಟೃಸುವವನ ಮೇಲಿದ್ದೇ ಇರುತ್ತದೆ. ನೀವು ಎಚ್ಚರ ತಪ್ಪಿದಿರಿ ಎಂದು ಕಿರಿಯನಾದ ನಾನು ನಮ್ರತೆಂದ ಹೇಳಬಯಸುತ್ತೇನೆ (ಈ ಮಾತನ್ನು ಹೇಳುವಾಗ ಗುರುಸಮಾನರಾದ ನಿಮಗೆ ಚಿಕ್ಕವನಾದ ನಾನು ಇದನ್ನು ಹೇಳಬಹುದಾದ ಭಾಷೆಗೆ ಸ್ವಲ್ಪ ತಡಕಾಡಿದೆ). ನೀವು ಹೇಳುತ್ತಿರುವುದು ನಿಜವೇ ಇದ್ದೀತು. ಆದರೆ ಅದಕ್ಕೆ ಪುರಾವೆ ಸಾಲದು, ಕನಿಷ್ಠ ಸಾರ್ವಜನಿಕರಿಗೆ ಅನ್ನಿಸಬಹುದಾದಷ್ಟು.
ತಾತ್ವಿಕವಾಗಿಯಲ್ಲದೇ, ತತ್ಕ್ಷಣದಲ್ಲಿ ಇದರಿಂದಾಗಿರುವ ವ್ಯತಿರಿಕ್ತ ಪರಿಣಾಮವೆಂದರೆ ನಾರಾಯಣಮೂರ್ತಿಗಳ ಅಭಿಮಾನಿಗಳು ಈಗ ಆವರಣವನ್ನು ಓದುತ್ತಾರೆ. ನಾರಾಯಣಮೂರ್ತಿಗಳು ಮೆಚ್ಚಿದ್ದಾರೆ ಎನ್ನುವ ಪುಕಾರನ್ನು ಕೇಳಿಯೇ ಅವರು ಇದನ್ನು ಮೂಕ್ಕಾಲು ಮೆಚ್ಚಿಬಿಟ್ಟಿರುತ್ತಾರೆ. ಅವರಲ್ಲಿ ಒಂದು ಕಾಲು ಭಾಗದ ಜನ ನಿಮಗೆ ಇನ್ನಷ್ಟು ಹೇಟ್ ಮೈಲ್ ಬರೆಯುವಷ್ಟರ ಮಟ್ಟಿಗೆ ಕೋಮುವಾದಿಗಳಾಗಿ ಬಿಡುತ್ತಾರೆ. ಭೈರಪ್ಪನವರಿಗೆ ಮತ್ತಷ್ಟು ಹಣ ಬರುತ್ತದೆ. ಇದರ ಒಂದಿಷ್ಟು ಹೊಣೆಗಾರಿಕೆ ತಮ್ಮ ಮೇಲೂ ಇರುತ್ತದೆ.
ಭಾರತೀಯ ಸಂಸ್ಕೃತಿ, ಕೋಮುವಾದ ಮತ್ತು ಜಾಗತೀಕರಣ
ಭಾರತೀಯ ಸಂಸ್ಕೃತಿಯ ಮತ್ತು ಸಂಘ ಪರಿವಾರದ ಕುರಿತಾದ ತಮ್ಮ ಮಾತುಗಳು ನನ್ನನ್ನು ಬೇರೆಯ ರೀತಿಯ ಆಲೋಚನೆಗೆ ಹಚ್ಚಿತು. ಭಾರತೀಯ ಸಂಸ್ಕೃತಿಯನ್ನು ನಾವು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಸಂಘ ಪರಿವಾರ ಅರ್ಥಮಾಡಿಕೊಳ್ಳುವುದಿಲ್ಲ. ಆದ್ದರಿಂದ ಅವರಿಗೆ ರಕ್ಷಿಸಬೇಕು ಎಂದೆನ್ನಿಸುವ ವಿಚಾರಗಳ ರಕ್ಷಣೆಯ ಭರದಲ್ಲಿ, ನಮಗೆ ಮುಖ್ಯವಾಗುವ ಭಾರತೀಯ ಸಂಸ್ಕೃತಿಯ ನಾಶದ ಬೀಜವಿದೆ. ಆದರೆ ಈ ಪ್ರಕ್ರಿಯೆಯನ್ನು ವಿವರಿಸಲು 'ಹುನ್ನಾರ' ಎನ್ನುವ ಪದಬಳಕೆಗೆ ನನ್ನ ಒಪ್ಪಿಗೆಲ್ಲ. ಆ ಪದಬಳಕೆ ಸತ್ಯವನ್ನು ಪ್ರತಿನಿಧಿಸುತ್ತದೆಯೋ ಇಲ್ಲವೋ ಒಂದೆಡೆಯಾದರೆ, ಅದು ಜನರಿಗೆ ಅರ್ಥವಾಗುವುದೇ ಇಲ್ಲ ಎನ್ನುವುದು ನನ್ನ ಹೆಚ್ಚಿನ ಕಳಕಳಿ. ತಮಗರಿವಿಲ್ಲದಂತೆ ಭಾರತೀಯ ಸಂಸ್ಕೃತಿಯನ್ನು ನಾಶಪಡಿಸುತ್ತಿದ್ದಾರೆ ಎಂದರೆ ಸ್ವಲ್ಪವಾದರೂ ಅರ್ಥವಾದೀತು. ಈ ರೀತಿಯ ಅಭಿಪ್ರಾಯ ಮಂಡನೆಗಳು ಕಂದಕವನ್ನು ಹೆಚ್ಚಿಸುತ್ತಿವೆ ಎನ್ನುವುದನ್ನು ನಾನು ನನ್ನ ಬ್ಲಾಗಿನಲ್ಲಿ ಅನೇಕ ವೇಳೆ ಬರೆದಿದ್ದೇನೆ. ಆದರೆ ಇದನ್ನು ನಾನು ಇಷ್ಟಪಡುವವರಿಗೆ ಮುಟ್ಟಿಸಲು ವಿಫಲನಾಗಿದ್ದೇನೆನ್ನಿಸುತ್ತದೆ. ಜಾಗತೀಕರಣಾವೆನ್ನುವುದು ನಮ್ಮ ದೇಶದಲ್ಲಿ ಆರಂಭವಾದುದಾದರೂ ಹೇಗೆ ಎನ್ನುವುದನ್ನು ನಾವಿನ್ನೂ ಪ್ರಶ್ನಿಸಿ ಉತ್ತರಿಸಿಲ್ಲ. ನಮ್ಮ ಸರಕಾರಗಳ ಯಾವ ವೈಫಲ್ಯದಿಂದ ಜಾಗತೀಕರಣ ಆರಂಭವಾಗುವುದು ಸಾಧ್ಯವಾತು ಎನ್ನುವ ಪ್ರಶ್ನೆ ಅದೇಕೋ ನಾವು ಕೇಳಿಕೊಳ್ಳುವುದೇ ಇಲ್ಲ. ಆದ್ದರಿಂದ 'ಹುನ್ನಾರ' ಪದಬಳಕೆ ಸರಿಯಲ್ಲವೆಂದೆನ್ನಿಸುತ್ತದೆ. ಒಂದು ಜಾಗತಿಕ ಪ್ರಕ್ರಿಯೆಯನ್ನು ಎದುರಿಸುವ ಪ್ರತಿಭೆ ನಮಗೆ ಸಾಲದೇ ಹೋತು ಎಂದೆನ್ನಬಹುದು.
ಅಲ್ಲದೇ ಕೈಗಾರೀಕರಣ, ಆಧುನಿಕತೆ, ರಾಷ್ಟ್ರೀಯತೆ ಮುಂತಾದ ಬೃಹತ್ ಪ್ರಕ್ರಿಯೆ, ಭಿತ್ತಿಗಳನ್ನೆದುರಿಸುತ್ತಿರುವ ನಮ್ಮ ದೇಶ ಮತ್ತು ಸಂಸ್ಕೃತಿ ಅನೇಕ ರೀತಿಗಳಲ್ಲಿ ಬದಲಾಗುತ್ತಿದೆ. ಜಾಗತೀಕರಣ, ಮತೀಯತೆಗಳು ಒಂದು ಬಗೆ ತೀವ್ರವಾದವೆಂದೆನ್ನಿಸಿದರೆ, ಅನೇಕ ವೇಳೆ ಸೆಕ್ಯುಲರಿಸಂ ಕೂಡಾ ಒಂದು ತೀವ್ರವಾದವೇ ಎಂದು ನನಗೆ ಅನೇಕ ವೇಳೆ ಅನ್ನಿಸಿದೆ. ನಮ್ಮ ದೇಶದಲ್ಲಿ ಸೆಕ್ಯುಲರಿಸಂ ಕೂಡಾ ಮತೀಯವಾದದ ಸ್ವರೂಪದಲ್ಲೇ, ತೀವ್ರತೆಯಲ್ಲೇ, ಅಸಹನೆಯಲ್ಲೇ ಮುನ್ನಡೆಸಿಕೊಂಡು ಬರಲಾಗಿದೆ ಅನ್ನಿಸುತ್ತದೆ. ಈಗ ಭೈರಪ್ಪನವರ ವಿಜಯಕರ್ನಾಟಕದ ಪತ್ರಕ್ಕೆ ಕಾರ್ನಾಡರು ಬರೆದ ಪತ್ರವನ್ನೇ ನೋಡಿ. ಅಥವಾ ಎನ್.ಎಸ್.ಶಂಕರರ ಆವರಣ ಅನಾವರಣ ಪುಸ್ತಕದ ಧ್ವನಿಯನ್ನೇ ನೋಡಿ. ಅವುಗಳ ಹಿಂದಿರುವ ಅಸಹನೆ ಮಾನವೀಯ ಕಳಕಳಿ ಎಂದು ನನಗನ್ನಿಸುತ್ತಿಲ್ಲ. ಬದಲಾಗಿ ಸೆಕ್ಯುಲರಿಸಂ ಎನ್ನುವ ಮತದ ಅಸಹನೆ ಎಂದೆನ್ನಿಸುತ್ತಿದೆ. ಸೆಕ್ಯುಲರಿಸಂ-ನಲ್ಲೂ ಒಂದು ಬಗೆಯ ಮೇಲ್ಮೆಯ ಅಹಂಕಾರವೇ ನನಗೆ ಕಾಣುತ್ತಿದೆ. ರಾಷ್ಟ್ರೀಯತೆ, ಕೈಗಾರೀಕರಣದ ಕಾರಣಗಳಿಗೋಸ್ಕರವಾಗಿ ನಮ್ಮ ದೇಶದಲ್ಲಿ ಉಂಟಾಗಿರುವ ಅಸಹಜ ವ್ಯವಸ್ಥೆಗಳಲ್ಲಿ ಸೆಕ್ಯುಲರಿಸಂ ಕೂಡಾ ಒಂದಾಗಿರಬಹುದಲ್ಲವೇ? ಯಾವುದನ್ನು ಸೆಕ್ಯುಲರಿಸಂ ವಿರೋಧಿಸುತ್ತದೆಯೂ ಅದರ ಗುಣ-ಸ್ವರೂಪಗಳನ್ನೂ ಅರಿಯದೇ ಆವಾಹಿಸಿಕೊಂಡುಬಿಟ್ಟಿದೆಯೇ? ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ತಾತ್ವಿಕತೆಗಳಿಂದ ದೂರವಿರುವ ಸಾಮಾಜಿಕ-ಸಾಂಸಾರಿಕನನ್ನು ನಮ್ಮ ಸೆಕ್ಯುಲರಿಸ್ಟರು ತಲುಪಲಾಗಿಲ್ಲವಲ್ಲ. ಸೆಕ್ಯುಲರಿಸ್ಟರ ಪರಿಭಾಷೆ 'ಕಮ್ಯುನಲ್'-ಆದವರನ್ನು ಸಂವಾದದಲ್ಲಿ ತೊಡಗಿಸುವುದೇ ಇಲ್ಲ ಕೇವಲ ಕೆರಳಿಸುತ್ತದೆ. 'ಆವರಣ' ತಲುಪಿದಷ್ಟು ಜನರನ್ನು ನಾವು ತಲುಪಲಾಗುತ್ತಿಲ್ಲವೆಂದರೆ ನಮ್ಮ ಸಂವಹನ ಕ್ರಮ ಮತ್ತು ಆಲೋಚಾನಾ ಕ್ರಮಗಳನ್ನು ನಾವು ಮರುವಿಮರ್ಶೆಪಡಿಸಿಕೊಳ್ಳಲೇಬೇಕಾಗಿದೆ. ಆ ಕಾರಣದಿಂದಲೇ ಒಂದೆಡೆ 'ಹಿಂದೂ ಧರ್ಮದ ಈ ಗುಣ ಭೈರಪ್ಪನವರಿಗೆ ತಿಳಿದಂತಿಲ್ಲ' ಎನ್ನುವ ತಮ್ಮ ಟೀಕೆ ಹೆಚ್ಚು ಆಸ್ಥೆಯಿಂದ ಕೂಡಿರುವುದಾಗ ನನಗೆ ಕಂಡು, ಸಂತೋಷವೂ ಆಗಿದೆ.
ನೀವು ಸೃಷ್ಟಿಸುವ ರೂಪಕಗಳ ಕುರಿತಾಗಿ ಮತ್ತೊಂದು ಮಾತನ್ನು ಹೇಳಬೇಕೆನ್ನಿಸುತ್ತಿದೆ, ಇಲ್ಲಿ ನೇರವಾಗಿ ಪ್ರಸ್ತುತವಲ್ಲದಿದ್ದರೂ. ಉತ್ತರಪ್ರದೇಶದ ರಾಜಕಾರಣ ಕೂಡಾ ಒಂದು ತಾತ್ವಿಕವಾದ್ದಲ್ಲದೇ ಅನುಕೂಲಸಿಂಧು ರಾಜಕಾರಣ ಎನ್ನುವುದು ನಿಮಗೆ ತಿಳಿದೇ ಇರುತ್ತದೆ. ಇದರಿಂದಲೂ ಒಮ್ದಷ್ಟು ಒಳ್ಳೆಯದಾಗುತ್ತದೆ ನಿಜ. ಆದರೆ ಸಾರ್ವಜನಿಕವಾಗಿ ಉಲ್ಲೇಖಿಸಬಹುದಾದ ರೂಪಕವಾಗುವ ಶಕ್ತಿಯನ್ನು ಧರಿಸುವಷ್ಟು ವಾಸ್ತವದಲ್ಲಿ ಈ ದಲಿತ-ಬ್ರಾಹ್ಮಣ ಪ್ರಕ್ರಿಯೆ ಗಟ್ಟಿಯೇ? ಎನ್ನುವುದರ ಬಗ್ಗೆ ನನಗೆ ಅನುಮಾನವಿದೆ.
ಜಿನ್ನಾ, ಆಡ್ವಾಣಿ, ಭೈರಪ್ಪ, ಸಾವರ್ಕರ್ ಇತ್ಯಾದಿ
ಜಿನ್ನಾ ಬಗ್ಗೆ, ಆಡ್ವಾಣಿಯವರ ಬಗ್ಗೆ ಬರೆದಿದ್ದೀರಿ. ಈಗ ಭಾರತವೇನಾದರೂ ಹಿಂದೂ ರಾಷ್ಟ್ರವಾಗಿಬಿಟ್ಟಿದ್ದು, ಅದನ್ನು ಸಾಧಿಸಿದ ನಂತರ ಸಾವರ್ಕರರೇನಾದರೂ ಜಿನ್ನಾ, ಅಡ್ವಾಣಿಯವರ ತರಹ ಮಾತನಾಡಿದ್ದರೆ ಅದೊಂದು ಮಹತ್ವದ ವಿಷಯ ಎಂದು ಪರಿಗಣಿಸುವುದು ಸಾಧ್ಯವೇ? ಅದೇ ರೀತಿ ಭೈರಪ್ಪನವರು ಆವರಣ ಕಾದಂಬರಿಯ ಮುನ್ನುಡಿಯಲ್ಲಿ ಬರೆದಿರುವುದನ್ನು ಕೆಲ ಉದಾರವಾದಿ ಮಾತುಗಳಿಂದ ನಾವು ಭಾವಪರವಶವಾಗುವುದು ಸಾಧ್ಯವೇ? ಒಬ್ಬ ವ್ಯಕ್ತಿಯಾಗಿ ಅವರನ್ನು ಅರ್ಥಮಾಡಿಕೊಳ್ಳಲು ಹೊರಟಾಗ ನಮಗೆ ಇಂತಹ ವಿವರಗಳು ಒಳನೋಟವೊದಗಿಸುತ್ತದೆ ಮತ್ತು ಅವರನ್ನು ಮನುಷ್ಯರನ್ನಾಗಿ ಕರುಣೆಂದ ಕಾಣಲು ಸಹಾಯವಾಗುತ್ತದೆ. ಆದರೆ ಇದು ಅಷ್ಟಕ್ಕೇ ಸೀಮಿತವಷ್ಟೆ. ಇದೆಲ್ಲವನ್ನೂ ನಾನು ಹೇಳುತ್ತಿರುವುದು - ಜಿನ್ನಾ, ಆಡ್ವಾಣಿಯವರ ಮಾತುಗಳ ಒಳ್ಳೆಯ ಸಾಧ್ಯತೆಯನ್ನು ಮೆಚ್ಚುವುದಾದರೆ, ಭೈರಪ್ಪನವರ ಮುನ್ನುಡಿಯಲ್ಲಿನ ಉದಾರವಾದೀ ಮಾತುಗಳನ್ನೂ ಮೆಚ್ಚಬೇಕಾಗುತ್ತದೆ. ಈ ಕನ್ಸಿಸ್ಟೆನ್ಸಿಯನ್ನು ನಾವು ನಿರ್ವಹಿಸಲೇಬೇಕಾಗಿರುವುದು ಇವತ್ತಿನ ಅವಶ್ಯಕತೆಯೂ ಆಗಿದೆ.
ನಾನೊಂದು ಪುಸ್ತಕವನ್ನು ಕೊಂಡುಕೊಂಡೆ. ಬಾಬು ಕೃಷ್ಣಮೂರ್ತಿ (ಕರ್ಮವೀರ ಪತ್ರಿಕೆಯ ಸಂಪಾದಕ) ಬರೆದಿರುವ ಪುಸ್ತಕ. ಆದರೆ ಈ ಪುಸ್ತಕ ಚಾರಿತ್ರಿಕವಾಗಿ ಮಹತ್ವದ್ದು. ೧೯೦೮-ರಲ್ಲಿ ಇದನ್ನು ಸಾವರ್ಕರ್ ಬರೆದದ್ದು. '೧೮೫೭-ರ ಭಾರತ ಸ್ವಾತಂತ್ರ್ಯ ಸಂಗ್ರಾಮ' ಎನ್ನುವ ಪುಸ್ತಕವಿದೆ. ತಮಾಷೆಯೆಂದರೆ ಇದನ್ನು ಬರೆಯುವಾಗ ಸಾವರ್ಕರ್ ಅಷ್ಟೊಂದು ತೀವ್ರವಾದಿಗಳಾಗಿರಲಿಲ್ಲವೆಂದೆನ್ನಿಸುತ್ತದೆ. ಏಕೆಂದರೆ ೧೮೫೭ ಹೋರಾಟಕ್ಕೆ ಮುಸಲ್ಮಾನ-ಮೊಘಲ್ ಕೊಡುಗೆಯನ್ನು ಮುಕ್ತವಾಗಿ ಉಲ್ಲೇಖಿಸಿದ್ದಾರಂತೆ. ಇದು ನಿಜವಾದರೆ ನಂತರದಲ್ಲಿ ಸಾವರ್ಕರ್ ತೀವ್ರವಾದಿಗಳಾಗಿಬಿಟ್ಟಿರಬೇಕು. ಆದ್ದರಿಂದ ನಾವು ಸಾವರ್ಕರ್ ಮತ್ತಿತರ ಕುರಿತಾಗಿ ಏನನ್ನು ಹೇಳುವುದಿದ್ದರೂ ಇಂತಹ ವಿವರಗಳನ್ನೊಳಗೊಂಡೇ ಇರಬೇಕಾಗುತ್ತದೆ. ಇಲ್ಲದಿದ್ದರೆ ಆಂಶಿಕ ಸತ್ಯವಾಗುತ್ತದೆ. ಆದರೆ ಇದರಿಂದ ಸಾವರ್ಕರ ಒಟ್ಟು ವ್ಯಕ್ತಿತ್ವವನ್ನು ಕಟ್ಟಲಾಗುವುದಿಲ್ಲ ಎನ್ನುವ ಕಠಿಣ ನಿಲುವನ್ನೂ ಅದೇ ಹೊತ್ತಿಗೆ ಮುಂದುವರೆಸಿಕೊಂಡಹೋಗಬೇಕಾದ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾವಿದ್ದೇವೆನ್ನಿಸುತ್ತದೆ. ಇದನ್ನು ಓದಿದ ನಂತರ ಇದರ ಕುರಿತು ನಿಮಗೆ ಬರೆಯುತ್ತೇನೆ.
ಮತ್ತೆ ಆವರಣದ ಕುರಿತು
ಆವರಣದ ನಿಜವಾದ ವಿಮರ್ಶೆಯೆಂದರೆ ಅದರಲ್ಲಿ ಲಕ್ಷ್ಮಿಯ ನಿಲುವುಗಳನ್ನು ಭೈರಪ್ಪನವರು ಅನುಮೋದಿಸುತ್ತಾರೆ ಎನ್ನುವ ಆಲೋಚನೆಯನ್ನು ಬದಿಗಿಟ್ಟು ವಿಮರ್ಶಿಸುವುದು. ಆದರೆ ಆವರಣದ ಕುರಿತು ಈವರೆಗಿನ ಅವಲೋಕನ ಹಾಗಿಲ್ಲದಿರುವುದು ಸಾಹಿತ್ಯವಿಮರ್ಶೆಯ ಘನತೆಗೆ ತಕ್ಕುದಲ್ಲವಾಗಿದೆ. ಇದನ್ನೂ ಮೀರಿದ ಒಂದು ಅಪಾಯವಿದೆ. ಆವರಣದ ಕುರಿತಾದ ಟೀಕೆಗಳು ಹೇಗಿವೆಯೆಂದರೆ ಆವರಣವನ್ನು ಮೆಚ್ಚುವ ಜನರು ಈ ಟೀಕೆಗಳನ್ನು ತಮ್ಮ ಮೇಲಿರುವ ಸಿಟ್ಟು ಅಸಹನೆ ಎಂದು ಪರಿಗಣಿಸುವಷ್ಟು. ಇದರಿಂದ ಸಮಾಜದಲ್ಲಿರುವ ಕಂದಕ ಮತ್ತಷ್ಟಾಗುತ್ತಿದೆ.
ಆದ್ದರಿಂದ, ಟೀಕೆಯ ರೀತಿ, ಅದರ ಭಾಷೆ ಹೊಸತಾಗಬೇಕಿದೆ. ಸ್ವಲ್ಪ ಮಟ್ಟಿಗಿನ ಕೃತಿನಿಷ್ಠ ವಿಮರ್ಶೆ ಎನ್ನುವುದನ್ನು ಇಲ್ಲಿ ಅಭ್ಯಾಸಕ್ಕೆ ತರಬೆಕಿದೆ. ಭೈರಪ್ಪನವರು ಅನುಮೋದಿಸುತ್ತಾರೋ ಇಲ್ಲವೋ ಮುಖ್ಯವಲ್ಲ. ಆದರೆ ವಿಮರ್ಶಕ ಹಾಗಂದುಕೊಳ್ಳಬೇಕಿಲ್ಲ. ಇದರಿಂದ ಎರಡು ಒಳ್ಳೆಯದು ಸಾಧ್ಯವಾಗಬಹುದು. ಕೃತಿಯಲ್ಲಿ ಕೃತಿಕಾರನ ಅಭಿಪ್ರಾಯವನ್ನು ಮೀರಿದ ಆಕೃತಿಗಳನ್ನು ಅನ್ವೇಸಬಹುದು. ಮತ್ತು ಕೃತಿಗಿರಬಹುದಾದ ನೆಗಟಿವ್ ಅಂಶಗಳಿಂದ ಕೃತಿಯನ್ನು ದೂರತರಬಹುದು. ಈ ಮಾರ್ಗದಲ್ಲೇ ನಾವು ಲಕ್ಷ್ಮಿಯ ಹಿಂದಿರುವ ಭೈರಪ್ಪನವರನ್ನೂ ಅನಾವರಣಗೊಳಿಸಬಹುದು. ಆ ಮೂಲಕ ನಾವು ಯಾವ ಅಪಾಯವನ್ನು ಪರಿಭಾವಿಸುತ್ತಿದ್ದೇವೋ ಆ ಅಪಾಯವನ್ನು ನಿವಾರಿಸಿಕೊಳ್ಳುವ ಕ್ರಮಗಳನ್ನೂ ಗಳಿಸುವುದು. ಇದರಿಂದ ಎಲ್ಲರನ್ನೂ ಒಳಗೊಳ್ಳಬಹುದಾದ ಸಂವಾದವೊಂದು ಸಾಧ್ಯವಾಗುತ್ತದೆ, ಕೋಮುವಾದಿಗಳನ್ನೂ ಸೇರಿಸಿ.
ಆದರೆ...
ಆದರೆ ತಮ್ಮ ಭಾಷಣವೂ ಸೇರಿದಂತೆ ಎಲ್ಲದರಿಂದ ಈಗ ಉಂಟಾಗಿರುವ ಸಂವಾದ ಈ ಕಂದಕವನ್ನು ಹೆಚ್ಚಿಸುವಂತದ್ದು. ನಿಮಗೆ ತಾತ್ವಿಕ ರಾಜಕೀಯದಲ್ಲಿ ಆಸಕ್ತಿದೆ. ರಾಜಕೀಯದಲ್ಲಿ ಜನರನ್ನು ತಲುಪಬೇಕಾಗಿರುವುದು ಬಹಳ ಮುಖ್ಯ. ಅಂದರೆ ಆ ಸಂವಹನಕ್ಕೆ ತಕ್ಕುದಾದಂತಹ ವಾಹಕಗಳನ್ನು ಸ್ಟೃಸಿಕೊಳ್ಳುವುದು ಅನಿವಾರ್ಯ. ನಾವೆಲ್ಲರೂ ಮೆಚ್ಚುವ ಗಾಂಧೀಜಿ ಇದರಲ್ಲಿ ಎತ್ತಿದ ಕೈ. ಆದರೆ ನಾವು ಗಾಂಧೀಜಿಯನ್ನು ತಾತ್ವಿಕವಾಗಿ ಮೆಚ್ಚುತ್ತೇವೇ ವಿನಃ ಸಂವಹನದ ಕುರಿತಾದ ಅವರ ಎಚ್ಚರಿಕೆ, ಅವರು ಕಂಡುಕೊಳ್ಳುತ್ತಿದ್ದ ಸಂವಹನ ಸಾಧನಗಳು ನಮ್ಮನ್ನು ಅಷ್ಟಾಗಿ ಪ್ರಭಾವಿಸಿದಂತಿಲ್ಲ. ರಾಜಕೀಯದಲ್ಲಿ ಆಸಕ್ತಿರುವವರೆಲ್ಲರೂ ಸಂವಹನ ಸಾಧ್ಯತೆ ಮತ್ತು ಕ್ರಿಯೆಯ ಪರಿಣಾಮದ ಕುರಿತು ಅತೀವ ಜಾಗ್ರತರಾಗಿರುವುದು ಅತ್ಯನಿವಾರ್ಯ. ತಾವು 'ನಾನೊಬ್ಬ ಸಾಹಿತಿ, ಆದ್ದರಿಂದ ನನ್ನ ರೂಪಕ ಭಾಷೆಯಲ್ಲಷ್ಟೇ ಮಾತನಾಡುತ್ತೇನೆ....' ಎಂದರೆ ಆಗ ನಾನು ವ್ಯಕ್ತಪಡಿಸುವುದಕ್ಕೆ ಭಿನ್ನಾಭಿಪ್ರಾಯಗಳು ಕಡಿಮೆಯಾಗುತ್ತವೆ. ಆದರೆ ವಿಷಾದ ಮತ್ತಷ್ಟು ತೀವ್ರವಾಗುತ್ತದೆ.
ನನ್ನ ಕಳಕಳಿ
ಈಗ ಇದೆಲ್ಲದರಿಂದ ಏನಾಗಿದೆಯೆಂದರೆ, ನಿಮ್ಮ ಆಶಯಕ್ಕೆ ಸಂಪೂರ್ಣವಾಗಿ ವ್ಯತಿರಿಕ್ತವಾದ ಪರಿಣಾಮವನ್ನು ಗಳಿಸಿದ್ದೀರಿ. ಮತ್ತೊಮ್ಮೆ ಕನ್ನಡ ಸಾಂಸ್ಕೃತಿಕಲೋಕ ಅವಕಾಶವೊಂದನ್ನು ಕಳೆದುಕೊಂಡಿದೆ. ಕಟ್ಟರ್ ಕೋಮುವಾದಿಗಳು ತಮ್ಮನ್ನು ಟೀಕಿಸುವುದು ಬೇರೆ. ಆದರೆ, ತಮ್ಮ ಸೀಮಿತ ಪರಿಧಿಯಲ್ಲಿ ಬದುಕುತ್ತಿರುವ ಜನರೂ ಸಹ ತಮ್ಮ ಕುರಿತು ಅಸಹನೆ ಮೂಡಿಸಿಕೊಳ್ಳುತ್ತಿದ್ದಾರೆ. ನನ್ನ ವೈಯಕ್ತಿಕ ವಾತಾವರಣದಲ್ಲೇ ಒಮ್ಮೊಮ್ಮೆ ಹಾಗಾಗುತ್ತದೆ. ನಾನೇನೋ ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತೇನೆ. ನಮ್ಮ-ನಮ್ಮ ಮನೆಗಳಲ್ಲಿ ನಿಮ್ಮ ಮತ್ತು ಕಾರ್ನಾಡರ ಸಾರ್ವಜನಿಕ ಹೇಳಿಕೆಗಳನ್ನು ವಿವರಿಸಿ ಹೇಳಬೇಕಾದ ಪರಿಸ್ಥಿತಿ ನನಗೆ ಆಗಾಗ್ಗೆ ಎದುರಾಗುತ್ತದೆ. ಅದು ನನಗೆ ಅಭ್ಯಾಸವಾಗಿಬಿಟ್ಟಿದೆ. 'ಏನು ನಿಮ್ಮ ಅನಂತಮೂರ್ತಿಗಳು ಹೀಗಂದಿದ್ದಾರಲ್ಲಾ', 'ನೋಡಿದೆಯಾ, ಹೇಗಾಗಿದೆ ಕಾರ್ನಾಡರ ಪರಿಸ್ಥಿತಿ' - ಮುಂತಾದ ಕಾಮೆಂಟುಗಳನ್ನು, ಅದನ್ನು ಹೇಳುವ ಧೈರ್ಯವಾಗದವರ ತೀಕ್ಷ್ಣ ನೋಟಗಳನ್ನು ನಾನು ಏಕಕಾಲದಲ್ಲಿ ತಮಾಷೆಯಾಗಿಯೂ, ವಿಷಾದದಿಂದಲೂ ನಿರ್ವಹಿಸುತ್ತೇನೆ.
ಒಂದು ಉದಾಹರಣೆ ಕೊಡುತ್ತೇನೆ. ನಮ್ಮ ಕಡೆ ಎಲ್ಲರಿಗೂ ಭೈರಪ್ಪನವರ ಕಾದಂಬರಿಗಳೆಂದರೆ ಇಷ್ಟ. ಅವರಿಗೆ ನಿಮ್ಮ ಅಭಿಪ್ರಯಗಳ ಬಗ್ಗೆ ಅಷ್ಟೊಂದು ಸಹಮತವಿಲ್ಲ. ನನ್ನ ಸುತ್ತಮುಲ್ಲರಿವ ನಾನು ಪ್ರೀತಿಸುವ ಬಹುತೇಕರು ಹೀಗೆಯೇ ಇದ್ದಾರೆ. ನಾನು ಅವರ ಅನುಮಾನಗಳಿಗೆಲ್ಲಾ ತಾಳ್ಮೆಂದಲೇ ಉತ್ತರಿಸುತ್ತೇನೆ. ನಿಮ್ಮ ಮಾತುಗಳ ಹಿಂದಿನ ಉದ್ದೇಶ, ಅದು ಪತ್ರಿಕೆಗಳಲ್ಲಿ ತಪ್ಪಾಗಿ ವರದಿಯಾಗುವ ರೀತಿ ಇತ್ಯಾದಿ. ನನ್ನ ವಾದದಿಂದ ಅವರುಗಳನ್ನು ಹಿಮ್ಮೆಟ್ಟಿಸುವುದಿಲ್ಲ. ಹಾಗಾದ ದಿನ ಅವರೆಲ್ಲ ತೀವ್ರವಾದಿಗಳಾಗುತ್ತಾರೆ. ತಮ್ಮ ತಮ್ಮ ನಿಲುವುಗಳ ಬಗ್ಗೆಯೇ ಅವರಿಗೆ ಅನುಮಾನ ಬರುವ ಪ್ರಶ್ನೆಗಳನ್ನು ಮುಂದಿಟ್ಟು ಸುಮ್ಮನಾಗುತ್ತೇನೆ. ಆವರಣ, ಭೈರಪ್ಪ ಕುರಿತಾದ ನಿಮ್ಮ ನಿಲುವುಗಳಿಗೆ ನನ್ನ ಭಿನ್ನಾಭಿಪ್ರಾಯಗಳನ್ನು ಬರೆದು ಪತ್ರ ಬರೆಯುತ್ತೇನೆ ಎಂದಾಗ ನನಗೆ ತೀರಾ ಹತ್ತಿರದವರೊಬ್ಬರು 'ನೋಡಪ್ಪ, ಹುಷಾರಾಗಿ ಬರಿ. ಅನಂತಮೂರ್ತಿಗಳಿಗೆ ನೋವಾಗದ ಹಾಗೆ ಬರಿ' ಎಂದರು. ನನಗೆ ಅತ್ಯಾಶ್ಚರ್ಯವಾತು. ಒಂದು ಕಡೆ ಸಂತೋಷವಾತು. ಅನಂತಮೂರ್ತಿಗಳ ಅಭಿಪ್ರಾಯವನ್ನು ಒಪ್ಪದಿರುವ ಬಹುತೇಕ ಸಾಂಸಾರಿಕರು ಅನಂತಮೂರ್ತಿಗಳನ್ನು ನೋಸಬಾರದು ಎನ್ನುವಷ್ಟು ಕಳಕಳಿ ಉಳಿಸಿಕೊಂಡಿದ್ದಾರೆ. ಮತ್ತೊಂದು ಕಡೆ ದುಃಖವಾತು. ನಾನು ಗೌರವಿಸುವ ಅನಂತಮೂರ್ತಿಗಳು ಇಂತಹ ಜನರನ್ನು ತಲುಪುವ ಭಾಷೆಯಲ್ಲಿ ತಮ್ಮ ಸಾಂಸ್ಕೃತಿಕವಾಗಿ ಮುಖ್ಯವಾದ ಅಭಿಪ್ರಾಯಗಳನ್ನು ಅಭಿವ್ಯಕ್ತಿಸುವುದಿಲ್ಲ ಎಂದು. ತಮ್ಮ ಭಾಷೆಯೇನಿದ್ದರೂ ನನ್ನಂತಹವನಿಗೆ ಮಾತ್ರ ಅರ್ಥವಾಗುತ್ತಿದೆ ಎಂದು.
ಆದ್ದರಿಂದ, ಹಿರಿಯರಾದ ತಮ್ಮಿಂದ ಈ ಸಂವಹನಕ್ಕೆ ಬೇಕಾದ ಹೊಸಭಾಷೆಯನ್ನು ಅಪೇಕ್ಷಿಸುವ ಸಾಂಸ್ಕೃತಿಕ ಹಕ್ಕು ನನಗಿದೆ ಎಂದೂ ತಿಳಿದಿದ್ದೇನೆ, ಆ ಹಕ್ಕನ್ನು ಪ್ರೀತಿಂದ ಪ್ರತಿಪಾದಿಸುತ್ತೇನೆ, ತಪ್ಪಿದ್ದರೆ ಕ್ಷಮಿಸಿ. ಆವರಣವನ್ನು ಟೀಕಿಸುವಾಗ ನಾವು ಈ ಹೊಸ ಭಾಷೆಯನ್ನು ಬಳಸಬೇಕಾಗಿರುವುದು ಇವತ್ತಿನ ಸಾಂಸ್ಕೃತಿಕ, ರಾಜಕೀಯ ತುರ್ತು ಅನ್ನಿಸುತ್ತಿದೆ.
-ಜೀವಿ ಶಿವು



ಭೈರಪ್ಪನವರ ಬಗ್ಗೆ ನಾನು ಎತ್ತಿರುವ ವಾಗ್ವಾದ ಅರ್ಥಪೂರ್ಣವಾಗುವ ದಿಸೆಯಲ್ಲಿ ಶ್ರೀ ಶಿವು ಮಾತಾಡಿದ್ದಾರೆ. ಅವರ ವಿಚಾರಗಳನ್ನು ನಾನು ಒಪ್ಪುವುದಿಲ್ಲ; ಆದರೆ ಈ ಬಗ್ಗೆ ಇನ್ನಷ್ಟು ಚರ್ಚೆ ನಡೆದಲ್ಲಿ ನನ್ನ ವಾದವನ್ನೂ ಮಂಡಿಸುವೆ. ಆ ದಿಕ್ಕಿನಲ್ಲಿ ಓದುಗರ ಪ್ರತಿಕ್ರಿಯೆಗಳನ್ನು ಸ್ವಾಗತಿಸುತ್ತೇನೆ. 'ವಿಜಯ ಕರ್ನಾಟಕ'ದವರು ನನ್ನ ವಿಚಾರಗಳನ್ನು ಅಸಂಗತಗೊಳಿಸುವಂತೆ ಪತ್ರಿಕಾ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಒಂದು ದೊಡ್ಡ ಪತ್ರಿಕೆ ಹೀಗೆ ವರ್ತಿಸುವುದು ಅಕ್ಷಮ್ಯವೆಂದು ನಾನು ತಿಳಿದಿದ್ದೇನೆ. ಆದ್ದರಿಂದ ಇಲ್ಲಾದರೂ ಮುಕ್ತ ಚರ್ಚೆ ನಡೆಯಲು ಶ್ರೀ ಶಿವು ಅವರ ಭಿನ್ನಮತ ಉಪಯೋಗವಾಗಲಿ ಎಂದು ಬಯಸುತ್ತೇನೆ. ನನ್ನ ಇಡೀ ಭಾಷಣದ ಸಾರಾಂಶ ಪ್ರಕಟಿಸಿದ ಇನ್ನೊಂದು ಪತ್ರಿಕೆ 'ಕನ್ನಡ ಪ್ರಭ'ವೂ ಚರ್ಚೆಯಿಂದ ಹಿಂದೆಗೆದಿದೆ. ಆದ್ದರಿಂದ ಇಲ್ಲಾದರೂ ಅದು ನಡೆಯಲಿ ಎಂದು ನಾನು ಬಯಸುತ್ತೇನೆ.
Post new comment