ದಿಲ್ಲಿ ವಿಶ್ವವಿದ್ಯಾಲಯದ ಇತಿಹಾಸದ ಆನರ್ಸ್ ವಿದ್ಯಾರ್ಥಿಗಳಿಗೆ ಶಿಫಾರಸು ಮಾಡಲಾಗಿರುವ ಪಠ್ಯಗಳಲ್ಲಿ ಎ.ಕೆ.ರಾಮಾನುಜನ್ ಬರೆದಿರುವ `ತ್ರೀ ಹಂಡ್ರೆಡ್ ರಾಮಾಯಣಾಸ್-ಫೈವ್ ಎಗ್ಸಾಂಪಲ್ಸ್ ಅಂಡ್ ತ್ರೀ ಥಾಟ್ಸ್ ಆನ್ ಟ್ರಾನ್‌ಸ್ಲೇಷನ್' ಎಂಬ ಪ್ರಬಂಧವೂ ಒಂದು. ಇದು ಇತಿಹಾಸ ಪಠ್ಯದಲ್ಲಿ ಇರಕೂಡದು ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ವಿಶ್ವವಿದ್ಯಾಲಯದಲ್ಲಿ ಗದ್ದಲವೆಬ್ಬಿಸಿದರು. ವಿಭಾಗ ಮುಖ್ಯಸ್ಥರನ್ನು ಎಳೆದಾಡಿದರು. ಪುಸ್ತಕವನ್ನು ಹರಿದು ಹಾಕಿದರು. ಇದಕ್ಕೆ ಕನ್ನಡ ಸಾಹಿತ್ಯಿಕ ಲೋಕದಿಂದ ಬಂದ ಪ್ರತಿಕ್ರಿಯೆ ಬಹುತೇಕ ಶೂನ್ಯ. ರಾಮಾನುಜನ್ ನಮ್ಮವರು, ಕನ್ನಡದವರು ಎಂಬ ಕಾರಣಕ್ಕಾದರೂ ಅವರ ಪುಸ್ತಕವನ್ನು ಹರಿದುದಕ್ಕೆ ಕನ್ನಡಾಭಿಮಾನಿಗಳಿಗೆ ಸಿಟ್ಟು ಬರಬೇಕಿತ್ತು. ಅದೂ ಸಂಭವಿಸಲಿಲ್ಲ. ಇದೇಕೆ ಹೀಗಾಯಿತು? ಬಹುಶಃ ನಾವು ಇಂಥ ವರ್ತನೆಗಳಿಗೆ ಒಪ್ಪಿಗೆ ಕೊಡಲು ಆರಂಭಿಸಿದ್ದೇವೆ ಅನ್ನಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಥದ್ದು ತುಂಬಾ ನಡೆಯುತ್ತಿದೆ. ರಾಜಶೇಖರ್, ಫಣಿರಾಜ್, ಪಟ್ಟಾಭಿಯಂಥ ಕೆಲವರು ಇಂಥದ್ದನ್ನು ವಿರೋಧಿಸುತ್ತಿದ್ದಾರೆ. ಮತ್ತು ಕೆಲವೇ ಕೆಲವು ಸಂಘಟನೆಗಳು ಇದನ್ನು ಬೆಂಬಲಿಸುತ್ತಿವೆ. ಈ ಬಗೆಯ ಹೋರಾಟಗಳೆಲ್ಲಾ ಹಾಸ್ಯಾಸ್ಪದವಾಗಿ ಕಾಣಿಸುವಂಥ ಒಂದು ಕಾಲವೂ ಹತ್ತಿರದಲ್ಲೇ ಇರಬಹುದೇನೋ ಎಂಬ ಭಯ ನನ್ನನ್ನು ಆವರಿಸುತ್ತಿದೆ. ಕಾಫ್ಕಾನ ಬರೆಹದಲ್ಲಿ ಒಬ್ಬ ಹಂಗರ್ ಆರ್ಟಿಸ್ಟ್ ಇದ್ದಾನೆ. ಊರಿಗೆ ಬಂದವರೆಲ್ಲಾ ಅವನನ್ನು ಹೋಗಿ ನೋಡಿ ಬರುತ್ತಿರುತ್ತಾರೆ. ಅಂದರೆ ಅವನೊಬ್ಬ ಪ್ರೇಕ್ಷಣೀಯ ವ್ಯಕ್ತಿ ಆಗಿಬಿಟ್ಟಿರುತ್ತಾನೆ. ನಮ್ಮ ಹೋರಾಟಗಳಿಗೆ, ಹೋರಾಟಗಾರರಿಗೆ ಈ `ಪ್ರೇಕ್ಷಣೀಯ ಸ್ಥಿತಿ' ಬರಬಾರದು ಎಂಬುದು ಲಂಕೇಶ್ ಹುಟ್ಟಿದ ದಿನ ನಾವು ಆಡಲೇಬೇಕಾದ ಮಾತು. ಇದನ್ನೇ ಹಿನ್ನೆಲೆಯಾಗಿಟ್ಟುಕೊಂಡು ರಾಜಕೀಯಕ್ಕೆ ಸಂಬಂಧಿಸಿದ ಕೆಲವು ಟಿಪ್ಪಣಿಗಳನ್ನು ಮುಂದಿಡುತ್ತಿದ್ದೇನೆ.. read more »


